-->
ಅನುಕಂಪದ ಮುಖ ಅಮ್ಮ

ಅನುಕಂಪದ ಮುಖ ಅಮ್ಮ


                    ಅನುಕಂಪದ ಮುಖ ಅಮ್ಮ
           ಅಕ್ಷರ “ಅ” ಜೊತೆಗೆ ನಮ್ಮ ಸಂಬಂಧ ಅಪಾರ. “ಅ” ಎಂಬ ಸ್ವರಾಕ್ಷರದ ಉದ್ಗಾರವಿಲ್ಲದೇ ಮಾತೇ ಹುಟ್ಟುವುದಿಲ್ಲ. ಅಮ್ಮ, ಅಪ್ಪ, ಅಜ್ಜ, ಅಜ್ಜಿ, ಅಣ್ಣ, ಅಕ್ಕ, ಅನುಜ ಹೀಗೆ ನಮ್ಮ ರಕ್ತ ಸಂಬಂಧಗಳಿಗೂ ಮೊದಲ ಅಕ್ಷರ “ಅ”. ನಮ್ಮ ಮತ್ತು ಅಮ್ಮನ ಸಂಬಂಧವು ಕರುಳಿನ ಸಂಬಂಧ. ಅಮ್ಮನ ಕರುಳು ಮತ್ತು  ಕೊರಳುಗಳ ಆಸರೆಯಿರದೇ ಇದ್ದರೆ ನಮ್ಮನ್ನೇ ನಾವು ಕಲ್ಪಿಸಿಕೊಳ್ಳಲಾರೆವು. ಅಮ್ಮ ಎಂಬ ಎರಡಕ್ಷರದ ಪದವನ್ನು ಜೀವನದುದ್ದಕ್ಕೂ ನುಡಿಯುವ ಸೌಭಾಗ್ಯವೇ ಜೀವನದ ಪರಮ ಶ್ರೇಷ್ಠವಾದ ಸಂಪಾದನೆಯಾಗಿದೆ. ದಿನವೂ ಎಚ್ಚರಗೊಂಡೊಡನೆಯೇ ನಾವು ನೆನಪಿಸಲೇ ಬೇಕಾದ ನಮ್ಮ ಬದುಕಿನ ಜೈವಿಕ ಶಕ್ತಿ “ಅಮ್ಮ’’ . ಅವಳು ನಮಗೆ ಪ್ರಥಮ ಆರಾಧ್ಯ ದೇವರು. “ಅಮ್ಮನೆಂದರೆ ದೇವತೆ, ನಮ್ಮನ್ನು ಹೆರುವ, ಹೊರುವ, ಪೊರೆಯುವ ಕಾಪಾಡುವ ಕಣ್ಣು.” ಮಾತೆಗೆ ಮೊದಲ ಸ್ಥಾನವನ್ನು ನಮ್ಮ ಹಿರಿಯರಿಂದಲೇ ನೀಡಲಾಗುತ್ತಿದೆ ಎಂಬುದಕ್ಕೆ, “ಮಾತೃದೇವೋ ಭವ” ಎಂಬ ಮಾತೇ ಆಧಾರ. ಹುಟ್ಟಿದ ಕೂಡಲೇ ಮಗುವಿನ ಕಣ್ಣಿನ ಪರದೆಯ ಮೇಲೆ ಬೀಳುವ ಚಿತ್ರ ಅಮ್ಮನದೇ ಅಲ್ಲವೇ....? ಅಮ್ಮನ ಸೇವೆ ಮಾಡಿದರೆ ದೇವರಿಗೆ ಮಾಡುವ ಕೋಟಿ ಕೋಟಿ ಸೇವೆಗಳಿಂದ ಒದಗುವ ಪುಣ್ಯವೇ ಪ್ರಾಪ್ತಿಯಾಗುತ್ತದೆ ಎಂಬುದು ಎಲ್ಲ ದಾರ್ಶನಿಕರ ಅನುಭಾವದ ಮಾತು.
          ಕಾಡುವ ಮಕ್ಕಳಾದರೂ ಇರಬಹುದು. ಕಾಪಾಡದ ಅಮ್ಮ ಈ ತನಕ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಮಕ್ಕಳಿಂದ ತನಗೆ ನೋವೇ ಆದರೂ ಅವಳು ಮಕ್ಕಳನ್ನು ಹರಸುತ್ತಾಳೆ. ಅದಕ್ಕಾಗಿಯೇ ಭೂಮಿತಾಯಿಯಂತೆ ಅಮ್ಮನನ್ನೂ ಕ್ಷಮಾದೇವತೆ ಎಂದಿರುವುದು. ಕೆಲವೊಮ್ಮೆ ಅಮ್ಮನಿಗೆ ನಮ್ಮ ಮೇಲೇ ಸಿಟ್ಟು ಬರುತ್ತದೆ. ಆದು ನಮ್ಮನ್ನು ಒಳಿತಿನೆಡೆಗೆ ಸಾಗಿಸಲು ತೋರುವ ನಟನೆಯ ಸಿಟ್ಟೇ ವಿನಹ ಮನದೊಳಗಿನ ವೈರ ಭಾವನೆಯ ಪ್ರತೀಕವಲ್ಲ. ಅತ್ಯಂತ ಆತ್ಮೀಯರು ಸಿಟ್ಟು ತೋರುವಾಗಲೂ ಇದೇ ಮಾತನ್ನು ನಾವು ಹೇಳುತ್ತೇವೆ. ಆದರೆ ನಮ್ಮ ಬದುಕಿನ ಮೊದಲ ಆತ್ಮೀಯೆ ನಮ್ಮ ಅಮ್ಮ. ದೇಹ ಎರಡಿದ್ದರೂ ನಮ್ಮ ಅಮ್ಮ ಮತ್ತು ನಾವು ಒಂದೇ ಆತ್ಮವನ್ನು ಹೊಂದಿದ್ದೇವೆ. ನಾವು ಎಡವಿ ಬಿದ್ದಾಗ ಮೊದಲು ನೋವಾಗುವುದು ಅಮ್ಮನಿಗೆ, ಆ ಮೇಲೆ ನಮಗೆ. ನಮಗೆ ಅನುಕಂಪ ತೋರುವ ಮೊದಲ ಮುಖವೇ ಅಮ್ಮ. ಅಮ್ಮ ತಾಳ್ಮೆಯ ಪರ್ವತ. ಹಸುಳೆಯಾಗಿದ್ದಾಗ ನಾವು ಅಮ್ಮನ ಎದೆಗೆ ತುಳಿದಷ್ಟು ಯಾರ ಎದೆಗೂ ತುಳಿದಿಲ್ಲ. ನಮ್ಮ ಎಳವೆಯಲ್ಲಿ ನಮ್ಮಮ್ಮ ನಮಗೆ ಮಾಡಿದ ಚಾಕರಿ ಒಂದೇ ಎರಡೇ? ಅಸಂಖ್ಯ ಅಲ್ಲವೇ? ನಮ್ಮ ಅಮ್ಮನ ಮೇಲೆ ನಮಗೆ ತೀರಿಸಾಲಗದ ಋಣವಿದೆ. ನಮಗಾಗಿ ಅಮ್ಮ ಪಟ್ಟ ಪಾಡುಗಳಿಗೆ ನಾವು ಎಷ್ಟು ಕೃತಜ್ಞರಾದರೂ ಸಾಲದು.ಅಮ್ಮನ ಮೃದು ಮತ್ತು ಪ್ರೀತಿಯ ಅಂತಃಕರಣಗಳಿಗೆ ಘಾಸಿಯಾಗದಂತೆ ಎಚ್ಚರಿಕೆಯಿಂದ ಇರಲೇ ಬಾಕಾದುದು ಮಕ್ಕಳ ಕರ್ತವ್ಯವಾಗಿದೆ. ನಮ್ಮ ಅಮ್ಮ ಕಳೆದು ಹೋದರೆ ಮತ್ತೆ ಆ ಅಮ್ಮ, ಮತ್ತೆ ಆ ಅಮ್ಮನ ಅನುಕಂಪದ ಮುಖ  ಮತ್ತೆಂದೂ ದೊರೆಯದು. ಅಮ್ಮನ ಸಹನೆಗೆ ಅಮ್ಮನೇ ಸಾಟಿ. ಅಮ್ಮನ ಸಹನೆಯನ್ನು ನಾವು ಸಹನೆಯ ಮೂಲಕವೇ ಗೌರವಿಸಿದರೆ ಅದುವೇ ಜನ್ಮ ನೀಡಿದ ಅಮ್ಮನಿಗೆ ನಾವು  ಕೊಡುವ ದೇವರು ಮೆಚ್ಚುವ ಕೃತಜ್ಞತೆಯಾಗಿದೆ.
            “ಕೆಟ್ಟ ಮಕ್ಕಳು ಹುಟ್ಟ ಬಹುದು, ಆದರೆ ಕೆಟ್ಟ ಅಮ್ಮನನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ.” ಎಂಬ ದೃಷ್ಠಾರರ ಮಾತು ಸರ್ವಕಾಲಕ್ಕೂ ದಿಟ.
ಹೆತ್ತು, ಹೊತ್ತು, ತುತ್ತು ಮತ್ತು ಮುತ್ತುಗಳೊಂದಿಗೆ ಮಕ್ಕಳನ್ನು ಪೋಷಿಸುವ ಅಮ್ಮನ ನಡೆಗಳಲ್ಲಿ, ನುಡಿಗಳಲ್ಲಿ ಕಪಟದ ಕಲೆಗಳಿರುವುದಿಲ್ಲ. ಅಮ್ಮನ ನಗು ಪ್ರೀತಿಯ ಬಲೆಯೇ ಹೊರತು ಬೇಟೆಗಾರನ ಬಲೆಯಲ್ಲ, ಅದು ಅವಳ ಸಹಜ ಮುಗ್ಧತೆಯ ಸೆಲೆ.   ಮಕ್ಕಳೇ ಅಮ್ಮನನ್ನು ಪ್ರೀತಿಸೋಣ, ಕೀರ್ತಿವಂತರಾಗೋಣ. ನಮಸ್ಕಾರ
   ...............................ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************


Ads on article

Advertise in articles 1

advertising articles 2

Advertise under the article