-->
ಜೀವನ ಸಂಭ್ರಮ : ಸಂಚಿಕೆ - 25

ಜೀವನ ಸಂಭ್ರಮ : ಸಂಚಿಕೆ - 25

ಜೀವನ ಸಂಭ್ರಮ : ಸಂಚಿಕೆ - 25

                 ದುಃಖ ನಿವಾರಣೆಗಾಗಿ 
                    ಬುದ್ಧನ ಸಂದೇಶ
                ------------------------
        ನಮಗೆಲ್ಲ ಗೊತ್ತಿರುವಂತೆ , ಗೌತಮ ಬುದ್ಧನ ಹೆಸರು ಸಿದ್ದಾರ್ಥ. ಸಿದ್ಧಾರ್ಥ ಜ್ಞಾನೋದಯದ ನಂತರ ಬುದ್ಧನಾದದ್ದು. ನಾನು ಇಲ್ಲಿ ಆತ ಹೇಗೆ ಬುದ್ಧನಾದ ಎಂದು ಹೇಳುತ್ತಿಲ್ಲ , ಮನುಷ್ಯ ದುಃಖದಿಂದ ಪಾರಾಗಿ ಸಂಭ್ರಮದಿಂದ ಇರಲು ಆತ ಹೇಳಿದ್ದೇನು ಅನ್ನುವುದೇ ಈ ಲೇಖನದ ಉದ್ದೇಶ. ಗೌತಮ ಬುದ್ಧ ಲೋಕದ ದುಃಖ ಪರಿಹಾರವನ್ನು ಕಂಡುಹಿಡಿಯಲು ಮಧ್ಯರಾತ್ರಿ ಹೆಂಡತಿ ಮಗನನ್ನು ತೊರೆದು ಹೋಗುತ್ತಾನೆ. ಮೊದಲಿಗೆ ಗುರುಗಳ ಬಳಿ ಶಿಕ್ಷಣ ಪಡೆಯಲು ತೆರಳುತ್ತಾನೆ. ಆತನಿಗೆ ಅದರಲ್ಲಿ ದುಃಖದ ಪರಿಹಾರ ಸಿಗುವುದಿಲ್ಲ. ನಂತರ ದೇಹದ ದಂಡನೆ ಮಾಡುತ್ತಾನೆ. ಅಂದರೆ ದೇಹದಲ್ಲಿ ಮಾಂಸ ಕರಗಿ ಮೂಳೆ ಮಾತ್ರ ಗೋಚರಿಸುವಂತೆ. ಆಗ ಆತನಿಗೆ ಒಂದು ಸತ್ಯದ ಅರಿವಾಗುತ್ತದೆ. ನಾವು ನಿಸರ್ಗದ ವಿರುದ್ಧ ಹೋಗಬಾರದು. ದೇಹ , ಸಾಧನೆಗೆ ಅಡ್ಡಿಯಾಗಬಾರದು ಎನ್ನುವುದನ್ನು ತಿಳಿದುಕೊಳ್ಳುತ್ತಾನೆ. ದೇಹವೇ ಹೋದಮೇಲೆ ಏನು ಮಾಡಲು ಸಾಧ್ಯ.......?.  
          ನಂತರ ಧ್ಯಾನದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಒಂದು ವೈಶಾಖ ಪೂರ್ಣಿಮೆ ದಿನ ಬೋಧಿವೃಕ್ಷದ ಕೆಳಗೆ( ಅರಳಿ ಮರ ) ಕುಳಿತು ಆಳವಾದ ಧ್ಯಾನದಲ್ಲಿ ದುಃಖಕ್ಕೆ ಕಾರಣಗಳನ್ನು ವಿಚಾರ ಮಾಡುತ್ತಾ ಹೋಗುತ್ತಾನೆ. ಆ ಧ್ಯಾನದಲ್ಲಿ ವಿಚಾರಮಾಡುತ್ತಾ, ವಿಚಾರಮಾಡುತ್ತಾ ಒಂದು ಹಂತದಲ್ಲಿ ಮನಸ್ಸು ಖಾಲಿಯಾದಂತೆ ಭಾಸವಾಗುತ್ತದೆ. ನಿರುಮ್ಮಳವಾದ ಮನಸ್ಸು, ಯಾರ ಬಗ್ಗೆ ಕೋಪ ತಾಪ ಇಲ್ಲ. ಸಂಬಂಧಗಳ ಬಗ್ಗೆ ಪ್ರೀತಿ ಇಲ್ಲ. ಮನಸ್ಸು ನಿರುಮ್ಮಳವಾಗಿ ಶಾಂತಿಯಾಗುತ್ತದೆ....! ಬುದ್ಧ ಜ್ಞಾನೋದಯದ ಬಗ್ಗೆ ಏನೂ ಹೇಳಿಲ್ಲ. ಆದರೆ ಆಗ ಅವನಿಗೆ ದುಃಖದ ಪರಿಹಾರ ದೊರಕಿರುತ್ತದೆ.....!! ಆಗ ಆ ಸ್ಥಳದಿಂದ ತೆರಳಿ, ಸಾರನಾಥದಲ್ಲಿ ಪಂಚ ಶಿಷ್ಯರಿಗೆ ಧರ್ಮ ಬೋಧನೆ ಮಾಡುತ್ತಾನೆ. ಆ ಪಂಚ ಶಿಷ್ಯರಲ್ಲಿ ಪ್ರಮುಖರಾದವರು ವಾಷ್ಮ, ಕೌಂಡಿಣ್ಯ, ಮಹಾನಾಮ ಮತ್ತು ಭಧ್ರಿಕ. 
          ದುಃಖದಿಂದ ಪಾರಾಗುವ ಬಗ್ಗೆ ಮಾಡಿದ ಧರ್ಮ ಬೋಧನೆಯ ಸಾರಾಂಶ. ಇದನ್ನು ಬುದ್ಧ , ಜನರು ಮಾತನಾಡುತ್ತಿದ್ದ ಪಾಲಿ ಭಾಷೆಯಲ್ಲಿ ಹೇಳಿದ್ದನು. ದುಃಖದಿಂದ ಪಾರಾಗಲು ಪ್ರಮುಖವಾಗಿ ಮೂರು ವಿಭಾಗಗಳಾಗಿ ಹೇಳುತ್ತಾನೆ. ಅವುಗಳು : 
                 1. ನಾಲ್ಕು ಆರ್ಯ ಸತ್ಯಗಳು.
                  2. ಅಷ್ಟಾಂಗ ಮಾರ್ಗ
                  3. ಪಂಚಶೀಲಗಳು
           1. ನಾಲ್ಕು ಆರ್ಯ ಸತ್ಯಗಳು : ಲೋಕದಲ್ಲಿ ತುಂಬಿರುವ ದುಃಖಕ್ಕಾಗಿ ಈ ಕೆಳಕಂಡಂತೆ ವಿವರಿಸುತ್ತಾನೆ.  ಒಂದನೇ ಆರ್ಯಸತ್ಯ :-
ಅ) ಹುಟ್ಟಿದವರಿಗೆ ರೋಗ, ಮುಪ್ಪು ಮತ್ತು ಸಾವು ಇದ್ದದ್ದೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಇದು ದುಃಖ ತರುತ್ತದೆ.
ಆ) ನಮ್ಮ ಸ್ವಯಂಕೃತ ಅಪರಾಧದಿಂದಾಗಿ ದುಃಖ ಬರುತ್ತದೆ.
ಇ) ನಮ್ಮ ತಪ್ಪಿಲ್ಲದೆ ಬೇರೆಯವರ ಸ್ವಾರ್ಥ , ದ್ವೇಷ ಮತ್ತು ಅಸೂಯೆಯಿಂದ ದುಃಖ ಬರುತ್ತದೆ.
ಈ) ಬೇರೆಯವರ ಅಪರಾಧದಿಂದಲೂ ದುಃಖ ಬರುತ್ತದೆ. ಇವು ಮೊದಲನೇ ಆರ್ಯ ಸತ್ಯಕ್ಕೆ ವಿವರಣೆ.
ಎರಡನೇ ಆರ್ಯಸತ್ಯ :- ನಾವು ಹುಟ್ಟುವುದಕ್ಕೂ ಆಸೆಯೇ ಕಾರಣ. ಬದುಕಿನಲ್ಲಿ ಹಲವು ರೀತಿಯ ಆಸೆಗಳೇ ದುಃಖಕ್ಕೆ ಕಾರಣ. ಆಸೆಯೇ ದುಃಖಕ್ಕೆ ಕಾರಣ. ಎಲ್ಲಿಯವರೆಗೆ ಆಸೆ ಇದೆಯೋ, ಅಲ್ಲಿಯವರೆಗೂ ದುಃಖ ಇದೆ.
        ಮೂರನೆಯ ಆರ್ಯಸತ್ಯ :- ದುಃಖವನ್ನು ಕೊನೆಗಾಣಿಸಲು ಸಾಧ್ಯವಿದೆ. ಹುಟ್ಟಲು ಆಸೆಯೇ ಕಾರಣ. ಆಸೆಯೇ ಇಲ್ಲದಿದ್ದರೆ ಹುಟ್ಟೇ ಇಲ್ಲ . ಹುಟ್ಟದೆ ಇದ್ದರೆ ರೋಗ, ಮುಪ್ಪು ಮತ್ತು ಸಾವು ಇಲ್ಲ. ಅಂದರೆ ಆಸೆಗಳನ್ನು ಗೆದ್ದರೆ ಮಾತ್ರ ದುಃಖ ನಿವಾರಣೆಯಾಗುತ್ತದೆ.
       ನಾಲ್ಕನೆಯ ಆರ್ಯಸತ್ಯ :- ದುಃಖವನ್ನು ಕೊನೆಗಾಣಿಸಲು ದಾರಿಯಿದೆ. ಈ ನಾಲ್ಕನೆಯ ಆರ್ಯ ಸತ್ಯದ ವಿವರಣೆಗಾಗಿ ಅಷ್ಟಾಂಗ ಮಾರ್ಗ ಹೇಳಿದನು. ಯಾವ ಮಾರ್ಗದಲ್ಲಿ ಹೋದರೆ ಆಸೆ ನಿಗ್ರಹಿಸಬಹುದು. ಪೂರ್ತಿ ತ್ಯಾಗ ಮಾಡಿದರೆ ಸಂಬುದ್ಧಿ ಆಗುತ್ತಾರೆ. ನಿಗ್ರಹ ಮಾಡಿದರೆ ಸಂತೋಷವಾಗುತ್ತದೆ. ಹಾಗಾಗಿ ಅಷ್ಟಾಂಗ ಮಾರ್ಗ ಈ ರೀತಿ ಹೇಳುತ್ತದೆ.
      1. ಸಮ್ಯಕ್ ದೃಷ್ಟಿ :- ನಾಲ್ಕು ಆರ್ಯ ಸತ್ಯಗಳ ಬಗ್ಗೆ ಸ್ಪಷ್ಟ ಪರಿಕಲ್ಪನೆ , ದೃಢವಾದ ನಂಬಿಕೆ ಇರಬೇಕು. ಅನುಮಾನ ಇರಬಾರದು. ಯಾವ ಮಾತು ವಿಚಾರವನ್ನೇ ಆದರೂ ಸ್ವಯಂ ಪ್ರಮಾಣೀಕರಿಸಿ ನೋಡಬೇಕು. ಸ್ವಯಂ ಆಲೋಚನೆ ಮಾಡಬೇಕು. ಅಪಕಾರ ಮಾಡಿದವನಿಗೂ ಉಪಕಾರ ಮಾಡಬೇಕು. ನನ್ನ ದೃಷ್ಟಿ ಹೇಗಿರಬೇಕೆಂದರೆ, ನನಗೆ ಮೋಸ ಮಾಡುವವರು ಯಾರೂ ಇಲ್ಲ. ಬೇರೆಯವರು ಮೋಸ ಮಾಡಿದರು , ನನ್ನ ಸ್ವಭಾವ ನಾನು ಸಹಾಯ ಮಾಡಬೇಕು ಎನ್ನುವುದೇ ಸಮ್ಯಕ್ ದೃಷ್ಟಿ.
        2. ಸಮ್ಯಕ್ ಸಂಕಲ್ಪ :- ಸರಿಯಾದ ಸಂಕಲ್ಪ ಮಾಡಬೇಕು. ಸುಖಲೋಲುಪತೆಯನ್ನು ಬಿಟ್ಟು , ಆದಷ್ಟು ಮಟ್ಟಿಗೆ ರಾಗ, ದ್ವೇಷಗಳನ್ನು ಕಡಿಮೆಮಾಡಿ, ಲೋಕದ ಸಕಲ ಜೀವಿಗಳ ಕುಶಲ ಬಯಸುವ ಪ್ರತಿಜ್ಞೆ ಮಾಡಬೇಕು. ಆ ಪ್ರತಿಜ್ಞೆ ಸ್ವಾರ್ಥರಹಿತ ಸಂಕಲ್ಪ ವಾಗಿರಬೇಕು. ಯಾರಿಗೂ ದ್ರೋಹ ಮಾಡಬಾರದೆಂಬ ಸಂಕಲ್ಪ, ಅಹಿಂಸೆಯ ಸಂಕಲ್ಪ ವಾಗಿರಬೇಕು.
         3. ಸಮ್ಯಕ್ ವಚನ :- ಸುಳ್ಳು ಹೇಳಬಾರದು. ಪರನಿಂದೆ ಮಾಡಬಾರದು. ನಾವು ಬೇರೆಯವರ ಬಗ್ಗೆ ಹೆಚ್ಚು ಟೀಕೆ ಮಾಡುತ್ತೇವೆ. ಚಾಡಿ ಹೇಳಬಾರದು. ಕಟುಮಾತು ಆಡಬಾರದು. ಸತ್ಯವನ್ನು ನುಡಿಯಬೇಕು. ಸತ್ಯವನ್ನು ಕೂಡ ಎಷ್ಟು ಸಾಧ್ಯವೋ ಅಷ್ಟು ಮೃದುವಾಗಿ ಹೇಳಬೇಕು. ಸತ್ಯವನ್ನು ಮನಸ್ಸಿಗೆ ನೋವಾಗದಂತೆ , ಅಪ್ರಿಯವಾಗಿ ಹೇಳಬಾರದು .ಮಧುರವಾಗಿ ಹೇಳಬೇಕು.
       4. ಸಮ್ಯಕ್ ಕರ್ಮ :- ಪ್ರಾಣಿ ಹಿಂಸೆ ಮಾಡಬಾರದು. ಕಳ್ಳತನ ಮಾಡಬಾರದು. ಧರ್ಮಸಮ್ಮತವಲ್ಲದ ಯಾವುದೇ ಕೆಲಸವನ್ನು ಮಾಡಬಾರದು, ಅಂದರೆ ಬೇರೆಯವರಿಗೆ ನೋವುಂಟುಮಾಡುವ ಯಾವ ಕೆಲಸವನ್ನು ಮಾಡಬಾರದು.
      5. ಸಮ್ಯಕ್ ಜೀವಿಕೆ :- ಹೀನಾ ವೃತ್ತಿ ತ್ಯಜಿಸಿ , ಉತ್ತಮ ವೃತ್ತಿಗಳ ಮೂಲಕವೇ ಜೀವನೋಪಾಯ ಮಾಡಬೇಕು. ಜೀವನಕ್ಕೆ ಬೇರೆ ದಾರಿ ಇಲ್ಲ ಎಂದು ಕೆಟ್ಟ ಕೆಲಸ ಮಾಡಬಾರದು. ಹುಡುಕಿಕೊಂಡು ಆದಷ್ಟು ಒಳ್ಳೆಯ ಕೆಲಸ ಮಾಡಿ ಜೀವನ ಸಾಗಿಸಬೇಕು. ನನ್ನ ವೃತ್ತಿಯಿಂದ ಪರರ ಹಿಂಸೆಯಾಗಬಾರದು. ವಿಷ , ಮಾಂಸ ವ್ಯಾಪಾರ ಮಾಡುವುದು ಅದು ಹಿಂಸೆಯನ್ನು ಪ್ರಚೋದನೆ ಮಾಡುತ್ತದೆ. ಅವು ವರ್ಜ್ಯ. ಪರಹಿಂಸೆ , ಪ್ರಾಣಿ ವಧೆಯಿಂದ ಧನಿಕನಾಗುವವನು ಪಾಪಿ.
        6. ಸಮ್ಯಕ್ ವ್ಯಾಯಾಮ :- ಧ್ಯಾನ, ಯೋಗ ಮೊದಲಾದವುಗಳ ಸಹಾಯದಿಂದ ಸದಾ ಸದ್ವಿಚಾರಗಳನ್ನು ಮನಸ್ಸಿನಲ್ಲಿ ಸ್ಥಿರಗೊಳಿಸಿ ,ಆಸೆ ನಿರೋಧ ಮಾಡಬೇಕು. ಯಾವಾಗಲೂ ಮನಸ್ಸಿನಲ್ಲಿ ಸದ್ಭಾವನೆ ಇರಬೇಕು.
        7. ಸಮ್ಯಕ್ ಸ್ಮೃತಿ :- ಮನಸ್ಸಿನಲ್ಲಿ ದುಷ್ಟತನವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ಸದಾ ಒಳ್ಳೆಯದನ್ನೇ ಸ್ಮರಣೆ ಮಾಡಬೇಕು. ಮನಸ್ಸು ತಪ್ಪನ್ನು ಸುಲಭವಾಗಿ ಕಂಡುಹಿಡಿಯುತ್ತದೆ. ತಪ್ಪು ಹುಡುಕುವುದನ್ನು ಬಿಡಬೇಕು.
       8. ಸಮ್ಯಕ್ ಸಮಾಧಿ ;- ಮೇಲಿನ ಹಂತಗಳನ್ನು ಸರಿಯಾಗಿ ಪಾಲಿಸಿದರೆ ನಿಮ್ಮ ಹಿಂದಿನ ಜನ್ಮ ವೃತ್ತಾಂತ ತಿಳಿಯುತ್ತದೆ. ಬುದ್ಧನಿಗೆ ತನ್ನ 547 ಹಿಂದಿನ ಜೀವನಕಥೆಗಳು ನೆನಪಿತ್ತು. ಇದರಿಂದ ಲಾಭವೆಂದರೆ ಪ್ರತಿಯೊಂದು ಜೀವನವೂ ತಾತ್ಕಾಲಿಕ ಎಂಬ ಅರಿವಾಗುತ್ತದೆ.
      ಈ ತತ್ವ ಎಲ್ಲರಿಗೂ ಪಾಲಿಸಲು ಅದರಲ್ಲೂ ಗೃಹಸ್ಥರು ಪಾಲಿಸಲು ಕಷ್ಟ ಎಂದು ಪಂಚಶೀಲ ತತ್ವಗಳನ್ನು ಹೇಳಿದ್ದಾನೆ.
ಗೃಹಸ್ಥರಿಗಾಗಿ ಪಂಚಶೀಲ ತತ್ವಗಳು :-
1. ಬುದ್ಧ, ಧರ್ಮ ಮತ್ತು ಸಂಘಕ್ಕೆ ಶರಣಾಗಬೇಕು. ಗುರುಗಳಿಗೆ ಶರಣಾಗತಿಯಾಗದೆ ಜ್ಞಾನ ಸಿಗುವುದಿಲ್ಲ. ಅದಕ್ಕಾಗಿ ಬುದ್ದಂ ಶರಣಂ ಗಚ್ಚಾಮಿ ಎಂದು ಹೇಳಿದ್ದು,
2. ಪ್ರಾಣಿ ಹತ್ಯೆ ಮಾಡಬಾರದು, ಪ್ರಾಣಿ ಹಿಂಸೆ ಮಾಡಬಾರದು.
3. ತನ್ನದಾದ ಅಥವಾ ತಾನು ತೆಗೆದುಕೊಳ್ಳ ಬಹುದಾದ ವಸ್ತುಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಪರರ ವಸ್ತು ಮುಟ್ಟಬಾರದು.
4. ಸದಾ ಸತ್ಯವನ್ನು ನುಡಿಯಬೇಕು. ಪರನಿಂದೆ ಮಾಡಬಾರದು. ಕುಹಕ, ವಂಚನೆ ಮಾತು ಬೇಡ.
5. ಬ್ರಹ್ಮಚರ್ಯ ಪಾಲಿಸಿ ಮತ್ತು ಮಾದಕವಸ್ತು ಸೇವನೆ ಮಾಡದಿರುವುದು.
       ಈ ಹೇಳಿಕೆಗಳನ್ನು ಗಮನಿಸಿದಾಗ ಇದು ಬೇರೆ ಯಾವುದೋ ದೇವರು ಹೇಳಿದ್ದಲ್ಲ , ಮಾನವನಾಗಿ ಹುಟ್ಟಿ, ಜೀವಿಸಿ , ಮಾನವನ ದುಃಖ ನಿವಾರಣೆಗಾಗಿ , ಸಂನ್ಯಾಸಿಯಾಗಿ , ಗುರುಗಳ ಹತ್ತಿರ ಶಿಕ್ಷಣ ಪಡೆದು , ದೇಹದಂಡನೆ ಮಾಡಿ , ಕೊನೆಗೆ ಧ್ಯಾನದಿಂದ ಕಂಡುಕೊಂಡ ಸತ್ಯ. ಹಿಂದೆ - ಇಂದು - ಮುಂದಿನ ಜೀವನಕ್ಕೆ ಸತ್ಯ ಎನ್ನ ಬಹುದೇ?.....
       ಮಕ್ಕಳೇ ,ಇಂದು ನಾನು ಹೇಳಬೇಕಾದ್ದು ಇಷ್ಟು. ಯಾವುದೇ ಧರ್ಮ ಕನಿಷ್ಠ ವಲ್ಲ ಹಾಗೆ ದೊಡ್ಡದಲ್ಲ. ಪ್ರತಿಯೊಂದು ಧರ್ಮದಲ್ಲಿ ಒಳ್ಳೆಯ ಅಂಶಗಳಿವೆ. ಧರ್ಮದಲ್ಲಿರುವ ಒಳ್ಳೆಯ ಅಂಶಗಳನ್ನು ಆಯ್ದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನವೇ ಶ್ರೇಷ್ಠ ವಾಗುವುದು ಮತ್ತು ಇದು ನಮಗೆ ಸಂಭ್ರಮ ಕೊಡುವಂತದ್ದು........
(ಈ ಲೇಖನವನ್ನು ಡಾಕ್ಟರ್ ಗುರುರಾಜ ಕರ್ಜಗಿಯವರ "ಬುದ್ಧನ ಜೀವನ ಚರಿತ್ರೆ" ಉಪನ್ಯಾಸ ಸರಣಿಯಲ್ಲಿ ಹೇಳಿದ್ದನ್ನು, ನಮ್ಮ ಮಕ್ಕಳಿಗೆ ಅನುಕೂಲವಾಗಲೆಂದು ಆಯ್ದುಕೊಂಡಿರುತ್ತೇನೆ.)
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************* Ads on article

Advertise in articles 1

advertising articles 2

Advertise under the article