-->
ಕಲಾ ಪ್ರೇಮಿಗಳನ್ನು ಕೈಬೀಸಿ ಕರೆವ : ಸುಳ್ಯದ ರಂಗಮನೆ

ಕಲಾ ಪ್ರೇಮಿಗಳನ್ನು ಕೈಬೀಸಿ ಕರೆವ : ಸುಳ್ಯದ ರಂಗಮನೆ


             ಕಲಾ ಪ್ರೇಮಿಗಳನ್ನು ಕೈಬೀಸಿ ಕರೆವ
                     ಸುಳ್ಯದ ರಂಗಮನೆ
      ಕಲಾ ಸಂವೇದನೆಯುಳ್ಳ ಚಟುವಟಿಕೆಗಳು ಮನುಷ್ಯನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಿಗೆ ಸ್ಪೂರ್ತಿಯಾಗಿದೆ. ಮಾನಸಿಕವಾದ ನೆಮ್ಮದಿಗೆ ಕಾರಣವಾಗುವ ಕಲಾಪ್ರಕಾರಗಳು ವ್ಯಕ್ತಿಯಲ್ಲಿ ಅಂತರ್ಗತವಾದಾಗ ಸೃಜನಶೀಲ ಅಭಿವ್ಯಕ್ತಿಗೆ ಪ್ರೇರಣೆಯಾಗುತ್ತದೆ. ಸೃಜನಶೀಲ ವ್ಯಕ್ತಿತ್ವವುಳ್ಳ ಮನಸುಗಳು ಕ್ರಿಯಾಶೀಲರಾದಾಗ ಒಂದು ಊರಿನ ಬದಲಾವಣೆ ಸಾಧ್ಯತೆ ಇದೆ. ರಂಗಭೂಮಿಯ ದಶಾವತಾರಿಯಾಗಿ ಒಂದು ಹಳ್ಳಿಯ ಸಾಂಸ್ಕೃತಿಕ ವಿನ್ಯಾಸಕ್ಕೆ ಕಾರಣವಾದ , ನಿಂತ ನೆಲದಲ್ಲಿ ಕಲಾ ದೇಗುಲವನ್ನು ಕಟ್ಟಿದ ಒಂದು ಕಥೆ ಇಲ್ಲಿದೆ.  
        ಹೌದು ..... ಈ ಮನೆ , ಕೇವಲ ಮನೆಯಲ್ಲ... ಕಲಾ ಅರಮನೆ..... ಇದು ಸುಳ್ಯದ ರಂಗಮನೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಳೆ ಗೇಟಿನಿಂದ ಅರ್ಧ ಕಿಲೋ ಮೀಟರ್ ಅಂತರದಲ್ಲಿ ರಂಗಮನೆ ಇದೆ. ರಂಗಮನೆಯ ಪ್ರವೇಶ ದ್ವಾರವೇ ಅತ್ಯಾಕರ್ಷಕ.... ಅಂಗಳದಲ್ಲೇ ಭವ್ಯವಾದ ಶಿಲ್ಪಗಳು. 15 ಅಡಿ ಎತ್ತರದ ಬಣ್ಣದ ಮಾಲಿಂಗನ ಯಕ್ಷಗಾನ ಪ್ರತಿಮೆ , ಕಣ್ಮನ ಸೆಳೆಯುವ ನಟರಾಜನ ಶಿಲ್ಪ. ಗೋಡೆ ತುಂಬಾ ಜನಪದ ಶೈಲಿಯ ರೇಖಾಚಿತ್ರಗಳು.... ಕಿಟಕಿ ಬಾಗಿಲುಗಳಲ್ಲೆಲ್ಲಾ ಕಲಾತ್ಮಕ ವಿನ್ಯಾಸಗಳು , ಆವರಣದ ಗೋಡೆಗಳಲ್ಲಿ ಉಬ್ಬು ಶಿಲ್ಪಗಳು . ಥರ್ಮಾಕೋಲ್ , ಥರ್ಮಾ ಫೋಮ್ ನಿಂದ ಮಾಡಿರುವ ಶಿಲ್ಪಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.... ರಂಗಮನೆ ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರವಾಗಿ ರಾರಾಜಿಸುತ್ತಿರುವುದು ಕಲಾರಸಿಕರ ಸೌಭಾಗ್ಯವೇ ಸರಿ..... ಓರ್ವ ವ್ಯಕ್ತಿ ತನ್ನ ಮನೆಯನ್ನೇ ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ ದೃಷ್ಟಾಂತ ಹಾಗೂ ದೇಶಕ್ಕೆ ಮಾದರಿಯಾಗುವ ಈ ವಿಶಿಷ್ಟ ಸಾಂಸ್ಕೃತಿಕ ಕೇಂದ್ರದ ರೂವಾರಿಯೇ ಜೀವನ ರಾಮ್ ಸುಳ್ಯ........
        ಜೀವನರಾಮ್ ಸುಳ್ಯ ಮೂಲತಹ ಕಲಾವಿದ ಕುಟುಂಬದಿಂದಲೇ ಜನಿಸಿದವರು. ತಂದೆ ಸುಜನಾ ಸುಳ್ಯ ಯಕ್ಷಗಾನ ಕಲಾವಿದರು. ತಾಯಿ ದಿವಂಗತ ವನಜಾ...... ಬಾಲ್ಯದಲ್ಲಿ ಕಲೆಯ ಅಭಿರುಚಿಯನ್ನು ಬೆಳೆಸಿದವರು. ಕಲಾಕ್ಷೇತ್ರದ ಅಭಿರುಚಿಯನ್ನು ತಂದೆಯಿಂದ ಬಳುವಳಿಯಾಗಿ ಪಡೆದುಕೊಂಡರೂ ತನ್ನ ಶ್ರದ್ಧೆ , ಕಠಿಣ ಪರಿಶ್ರಮ ಗಳಿಂದ ರಂಗ ಕಲಾವಿದನಾಗಿ ರಂಗ ಮಾಂತ್ರಿಕ ನಾಗಿ ಪ್ರಸಿದ್ಧಿಯಾದವರು. ನೀನಾಸಂ ರಂಗಶಿಕ್ಷಣ ಕೇಂದ್ರ ಹೆಗ್ಗೋಡು ಇಲ್ಲಿ ಪದವೀಧರನಾಗಿ ರಂಗಭೂಮಿಯ ಎಲ್ಲಾ ಆಯಾಮಗಳನ್ನು ಸಮರ್ಥವಾಗಿ ನಿಭಾಯಿಸುವ ಕಲಾವಿದರಾಗಿ ಹೊರಹೊಮ್ಮಿದರು. 
            ರಂಗ ನಿರ್ದೇಶನ , ರಂಗವಿನ್ಯಾಸ , ಸಂಗೀತ , ವಸ್ತ್ರವಿನ್ಯಾಸ , ಬೆಳಕಿನ ವಿನ್ಯಾಸ , ಪ್ರಸಾದನ , ರಂಗ ಪರಿಕರಗಳ ತಯಾರಿ ಹೀಗೆ ರಂಗ ದಶಾವತಾರಿಯಾಗಿ ಜೀವನ್ ಕಾಣುತ್ತಾರೆ. ಅದ್ಭುತ ನಾಟಕಗಳನ್ನು ನಿರ್ದೇಶಿಸಿದ ಇವರು ತುಳು , ಕನ್ನಡ , ಅರೆಭಾಷೆ , ಹೀಗೆ ವಿವಿಧ ಭಾಷೆಗಳಲ್ಲಿ ನಾಟಕದ ಪರಿಪಕ್ವತೆಯನ್ನು ಪಸರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಿರಿಯರ ನಾಟಕದ ಜೊತೆಗೆ ಮಕ್ಕಳ ನಾಟಕದಲ್ಲೂ ಜೀವನ್ ಇವರನ್ನು ಮೀರಿಸುವವರು ವಿರಳ. ಮೂಡಬಿದ್ರೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ರಂಗಭೂಮಿಯಲ್ಲಿ ಸತತ 10 ಕ್ಕಿಂತಲೂ ಹೆಚ್ಚು ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿ ಪಡೆಯಲು ಕಾರಣಕರ್ತರಾದ ರಂಗ ದಿಗ್ದರ್ಶಕ....!!
         ಕಿರುಚಿತ್ರ , ಬೀದಿ ನಾಟಕಗಳು , ಜನಜಾಗೃತಿಯ ಕಾರ್ಯಕ್ರಮಗಳು ಹೀಗೆ ವೈವಿಧ್ಯ ಪ್ರಾಕಾರಗಳಲ್ಲಿ ತನ್ನ ರಂಗಭೂಮಿಯ ಅನುಭವಗಳನ್ನು ಧಾರೆಯೆರೆದು ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಂಡವರು. ಇವರು ಪಡೆದ ಪ್ರಶಸ್ತಿ ಸಮ್ಮಾನಗಳಿಗೆ ಲೆಕ್ಕಗಳಿಲ್ಲ. ಇವರು ಪಡೆದ ಬಿರುದುಗಳನ್ನು ಬರೆಯುತ್ತಾ ಹೋದರೆ ಪುಟಗಳಿಗೆ ಮಿತಿ ಇರಲಾರದು...!!
         ಕಲೆಯ ವೈವಿಧ್ಯ ಮಜಲುಗಳಲ್ಲಿ ಇವರು ಕೈಯಾಡಿಸಿದವರು. ಯಕ್ಷಗಾನ , ಸಂಗೀತ , ಜಾದು , ಥರ್ಮಫೋಮ್ ಮುಖವಾಡಗಳು , ಕ್ರಾಫ್ಟ್ , ಸ್ಮರಣಿಕೆಗಳ ರಚನೆ , ವೇದಿಕೆ ವಿನ್ಯಾಸಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.... 
        ಜೀವನ್ ರಾಮ್ ಸುಳ್ಯ ತಾನು ಅದ್ಭುತವಾಗಿ ಬೆಳೆಯುವುದರ ಜೊತೆಗೆ ತನ್ನ ಜೊತೆ ಕಲಾವಿದರನ್ನು ಬೆಳೆಸುತ್ತಿದ್ದಾರೆ. ಸುಳ್ಯದಾದ್ಯಂತ ಪ್ರತೀ ಮನೆ - ಕಛೇರಿ , ಸಭಾಂಗಣ , ಪೋಲೀಸ್ ಸ್ಟೇಷನ್ ಗಳನ್ನು ವರ್ಲಿ ಕಲೆ ಸಿಂಗರಿಸುವ ತಂಡದ ನೇತೃತ್ವ ವಹಿಸಿ ಸೌಂದರೀಕರಣಗೊಳಿಸಿ ಜನರಲ್ಲಿ ಕಲಾ ಪ್ರಜ್ಞೆ ಮಾಡಿಸುವ ವಿಶೇಷ ಪ್ರಯತ್ನ ಇವರದ್ದು. ಸಾವಿರಾರು ಯುವ ರಂಗ ಕಲಾವಿದರು ಇವರ ಗರಡಿಯಲ್ಲಿ ಪಳಗಿದವರು. ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ರಂಗ ಮನೆಯನ್ನು ಕಲಾವಿದರ ತಾಣವನ್ನಾಗಿ ಈ ದೇಶಕ್ಕೆ ಸಮರ್ಪಿಸಿದ್ದಾರೆ. ತಾನು ನೆಲೆನಿಂತ ಮನೆಯನ್ನೇ ಕಲಾ ಕೇಂದ್ರವನ್ನಾಗಿಸಿದ ಅಪರೂಪದ ಕಲಾವಿದ.....  
      ಮಕ್ಕಳಿಗಾಗಿ - ಚಿಣ್ಣರಮೇಳ - ಬೇಸಿಗೆ ರಜಾ ಶಿಬಿರವನ್ನು ಸತತವಾಗಿ ಅನೇಕ ವರ್ಷಗಳಿಂದ ಆಯೋಜಿಸುತ್ತಿದ್ದು ದಾಖಲೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ರಂಗಮನೆಯ ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿ. ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಚಿಣ್ಣರ ಮೇಳದ ಸವಿ ಕಂಡಿರುವುದು ತಾವು ಅನುಭವಿಸಿದ ರಂಗ ಶಿಕ್ಷಣದಿಂದ. ವರ್ಷಪೂರ್ತಿ ಶಾಲೆಯಲ್ಲಿ ಸಿಕ್ಕದ ಪರಿಪೂರ್ಣ ಶಿಕ್ಷಣವನ್ನು ಚಿಣ್ಣರ ಮೇಳದಲ್ಲಿ ಪಡೆದ ವಿದ್ಯಾರ್ಥಿಗಳು ಸೃಜನಶೀಲರಾಗಿ ಇನ್ನೂ ಉನ್ನತ ಸಾಧನೆಯತ್ತ ಮುಖ ಮಾಡಿರುವುದು ಇಲ್ಲಿ ಕಂಡ ಸತ್ಯ...!!
      ಸಾಂಸ್ಕೃತಿಕ ಕಲಾಕೇಂದ್ರ (ರಿ) ರಂಗಮನೆ ಸುಳ್ಯ , ಇಲ್ಲಿ ರಂಗಮನೆ ನಾಟಕ ಶಾಲೆ , ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ , ರಂಗಮನೆ ಸಂಗೀತ ಶಾಲೆ ಹೀಗೆ ಮಕ್ಕಳ ಸಾಂಸ್ಕೃತಿಕ ಕಲಾ ವಿಕಾಸಕ್ಕೆ ಪೂರಕವಾಗಿ ತರಬೇತಿ ನೀಡಲಾಗುತ್ತಿದೆ. ಮಕ್ಕಳ ನಾಟಕಗಳು , ಮಕ್ಕಳ ಯಕ್ಷಗಾನ ಮೂಲಕ ಬಾಲಪ್ರತಿಭೆಗಳನ್ನು ಹುಡುಕಿ ಸಮಾಜಕ್ಕೆ ಅರ್ಪಿಸುವ ಉನ್ನತ ಕೈಂಕರ್ಯದಲ್ಲಿ ನಿರತವಾಗಿದೆ ರಂಗಮನೆ. ಇಲ್ಲಿ ಬೆಳೆದ ಅನೇಕ ಬಾಲ ಪ್ರತಿಭೆಗಳು ಇಂದು ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ಅಭೂತಪೂರ್ವ ಮತ್ತು ಅಭಿಮಾನದ ಸಂಗತಿ. 
        ಅಪ್ಪಟ ಕಲಾವಿದನೊಬ್ಬ ಯಾವುದೇ ಸ್ವಾರ್ಥವಿಲ್ಲದೆ ಮಕ್ಕಳ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಕಲಾ ರಾಯಭಾರಿಯಾಗಿ ಜೀವನ್ ರಾಂ ನಮ್ಮೆಲ್ಲರ ಅಕ್ಷಿಪಟಲದಲ್ಲಿ ನಿಲ್ಲುತ್ತಾರೆ. ರಂಗಮನೆಯ ಭವಿಷ್ಯವಾಗಿ ಬೆಳೆಯುತ್ತಿರುವ ಮನುಜ ನೇಹಿಗ ಈಗಾಗಲೇ ಸಕಲಕಲಾ ಪಾರಂಗತರಾಗಿ ಆಶಾಕಿರಣವಾಗಿ ಮೂಡಿದ್ದಾರೆ. ಜೀವನ್ ರಾಂ ಸುಳ್ಯ ಮತ್ತು ಶ್ರೀಮತಿ ಮೌಲ್ಯ ಜೀವನ್ ರಾಮ್ ಇವರ ಏಕೈಕ ಪುತ್ರ , ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ 8ನೇ ತರಗತಿಯಲ್ಲಿ ಕಲಿಯುತ್ತಿರುವ ನೇಹಿಗ ಯಕ್ಷಗಾನ , ನಾಟಕ , ಸಂಗೀತೋಪಕರಣ , ಸಂಗೀತ , ಜಾದು ಹೀಗೆ ಹತ್ತು ಹಲವಾರು ವಿದ್ಯೆಗಳನ್ನು ಕರಗತಮಾಡಿಕೊಂಡು ರಂಗಮನೆಯ ಬೆಳಕಾಗಿದ್ದಾರೆ. ತನ್ನ ಅದ್ಭುತ ಪ್ರತಿಭೆಯ ಮೂಲಕ ಈಗಾಗಲೇ ನೂರಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಇವರು ಜೀವನ್ ರಾಂ ಸುಳ್ಯ ಇವರಿಗೆ ಸಾಥಿಯಾಗಿರುವುದು ಸಂತೋಷದ ವಿಷಯ.
          ರಂಗಮನೆಯಲ್ಲಿ ವರ್ಷಪೂರ್ತಿ ಸಾಂಸ್ಕೃತಿಕ ಹಬ್ಬ. ಸುಳ್ಯದ ಜನತೆ ಸಾಂಸ್ಕೃತಿಕ ರಸದೌತಣವನ್ನು ಸವಿಯುವುದರ ಜೊತೆಗೆ ದೂರದೂರದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಒಂದು ಪ್ರವಾಸಿ ತಾಣವಾಗಿಯೂ ರಂಗಮನೆ ಕಾಣಸಿಗುತ್ತದೆ. ಇಲ್ಲಿ ಕಲಾವಿದರು ಬೆಳೆಯುವುದರ ಜೊತೆಗೆ ಹಿರಿಯ - ಕಿರಿಯ ಕಲಾವಿದರ ಸಮ್ಮಿಲನದೊಂದಿಗೆ ಕಲೆಯ ಎಲ್ಲಾ ಪ್ರಕಾರಗಳ ವಿನಿಮಯವಾಗುತ್ತಿರುವುದು ರಂಗಮನೆಯ ವಿಶೇಷತೆಗಳಲ್ಲೊಂದು.  
         ರಂಗ ಮನೆಗೀಗ 20 ನೇ ವರ್ಷದ ಹುಟ್ಟಿನ ಸಂಭ್ರಮ. ರಂಗ ಸಂಭ್ರಮ , ವನಜಾ ರಂಗಮನೆ 
ಪ್ರಶಸ್ತಿ , ಯಕ್ಷ ಸಂಭ್ರಮ , ಸಂಗೀತ ಸಂಭ್ರಮ ಹೀಗೆ ಇಲ್ಲಿ ನಡೆಯುವ ವರ್ಷದ ಹತ್ತಾರು ಕಾರ್ಯಕ್ರಮಗಳು ರಂಗಮನೆಯ ವ್ಯಾಪ್ತಿಯನ್ನು ದೇಶದಗಲಕ್ಕೆ ಕೊಂಡೊಯ್ಯುತ್ತದೆ. ಇಲ್ಲಿಗೆ ನೂರಾರು ಪ್ರಖ್ಯಾತ ಕಲಾವಿದರು , ಮಹಾನ್ ಗಣ್ಯರು , ಮಂತ್ರಿ - ಮಹೋದಯರು ಸದಾ ಭೇಟಿ ನೀಡುತ್ತಿರುತ್ತಾರೆ.  
         ಸುಳ್ಯದ ರಂಗಮನೆ ಮುಂದೊಂದು ದಿನ ರಾಷ್ಟ್ರ - ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ನಮ್ಮೂರಿನ ಕಲೆ - ಸಂಸ್ಕೃತಿಯನ್ನು ಮುಂದಿನ ಮಕ್ಕಳಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಮನೆಯ ಮಕ್ಕಳನ್ನು ಕಲಾಪ್ರಜ್ಞೆ ಬೆಳೆಸಿಕೊಳ್ಳುವವರಾಗಲು ಇಂತಹ ಸಾಂಸ್ಕೃತಿಕ ಕಲಾಕೇಂದ್ರಕ್ಕೆ ಕರೆದುಕೊಂಡು ಹೋಗಬೇಕಾಗಿದೆ. ನಮ್ಮ ಮನೆಯ ಮಕ್ಕಳು ನಮ್ಮ ನೆಲದ ಮಕ್ಕಳಾಗಿ ರಂಗ ಮನೆಗೆ ಓಡೋಡಿ ಬರಲಿ....!!
................................ ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article