-->
ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 32

ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 32

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 32

                     ವೈಧ್ಯನ ಸಿದ್ದಿ..........
       ಸಾವಿರಾರು ವರ್ಷಗಳ ಹಿಂದಿನ ಸುದ್ದಿ
       ಗುರುಕುಲ ಪದ್ಧತಿಯ ಶಿಕ್ಷಣ. ಗುರುವಿನ ಮುಂದೆ ಆಗತಾನೇ ಸತ್ತ ವ್ಯಕ್ತಿಯ ಹೆಣ, ಕಳೇಬರ. ಶಿಷ್ಯರಿಗೆ ಗುರುವಿನಿಂದ ಆದೇಶ. ಶರೀರ ಶಾಸ್ತ್ರದ ಪ್ರಕಾರ ಪರೀಕ್ಷೆ ಮಾಡಿ ಆತ ಹೇಗೆ ಸತ್ತ ಎಂದು ಹೇಳಬೇಕು. ಒಬ್ಬ ಶಿಷ್ಯ ಸ್ವಾಭಾವಿಕವಾಗಿ ಎಂದ. ಅಲ್ಲ....... ಇನ್ನೊಬ್ಬ , ಉಸಿರುಗಟ್ಟಿ ಸತ್ತ ..... ಸ್ವಲ್ಪ ಸರಿ. ಕೊನೆಗೆ ಗುರು ಬುದ್ಧಿವಂತ ಶಿಷ್ಯನನ್ನು ಕರೆದು ಕಳೇಬರವನ್ನು ಪರೀಕ್ಷಿಸಲು ಹೇಳಿದರು. ಆತ ಹೃದಯ, ನಾಡಿಮಿಡಿತ ಎಲ್ಲ ಪರೀಕ್ಷಿಸಿ ಅಂದ. ಇವನು ಸತ್ತೆ ಇಲ್ಲ. ಹೃದಯಸ್ತಂಭನ ಆಗಿದೆ ಅಷ್ಟೇ. ಈತನನ್ನು ಸೂಕ್ತ ಚಿಕಿತ್ಸೆಯಿಂದ ಬದುಕಿಸಬಹುದು. ಗುರು ಸ್ತಂಭೀಭೂತನಾದ, ದಿಗ್ಮೂಢನಾದ, ದಿಗ್ಬ್ರಮೆಗೊಳಗಾದ. ಎಷ್ಟೊಂದು ದಾಷ್ಟೀಕ.....! ಶಿಷ್ಯನೆಂದ ನಾನು ಹಿಂದೊಮ್ಮೆ ಪ್ರಯೋಗ ಮಾಡುತ್ತಾ ಒಂದು ಹುಲ್ಲಿನಿಂದ ವಿಷವನ್ನು ಸಂಗ್ರಹಿಸಿಟ್ಟಿದ್ದೇನೆ. ವಿಷ ಚಿಕಿತ್ಸೆಯಿಂದ ಹೃದಯ ಮರು ಕ್ರಿಯಾಶೀಲ ವಾಗಬಹುದು. ನನಗೆ ಅದರ ಪ್ರಯೋಗಕ್ಕೆ ಇಷ್ಟರವರೆಗೆ ಅವಕಾಶ ಒದಗಿ ಬಂದಿರಲಿಲ್ಲ. ಈಗ ಸಂದರ್ಭ ಬಂದಿದೆ ಎಂದ. ಗುರುವಿನ ಅನುಮತಿ ಮೇರೆಗೆ ಆ ಔಷಧವನ್ನು ಪ್ರಯೋಗಿಸಿದ. ಹೆಣವಾಗಿದ್ದ ವ್ಯಕ್ತಿ ನಿಧಾನವಾಗಿ ಉಸಿರಾಡಲಾರಂಭಿಸಿದ. ಮಾತನಾಡಿದ. ನನಗೆ ಸ್ವಲ್ಪ ಕೆಮ್ಮು ಬಂತು ಎದೆ ನೋವಾಯಿತು ಕುಸಿದೆ. ಮತ್ತೆ ಏನಾಯಿತೋ ಗೊತ್ತಿಲ್ಲ. ಕಣ್ತೆರೆದಾಗ ಆಶ್ರಮದಲ್ಲಿ ಇದ್ದೇನೆ.. ಅಂದ. ಅಂದು ಸತ್ತ ಎಂದು ತಿಳಿದ ವ್ಯಕ್ತಿಗೆ ಪ್ರಾಣ ನೀಡಿದ ಈತ ಪ್ರಾಣಾಚಾರ್ಯನಾದ. ಇದು ನಡೆದ ಕಾಲ ಒಂದನೇ ಶತಮಾನ. ಇಸಿಜಿ ಸ್ಕ್ಯಾನಿಂಗ್ ಇಲ್ಲದ ಕಾಲ. ಅಂತಹ ಶರೀರಶಾಸ್ತ್ರ ವನ್ನು ಸಂಪೂರ್ಣವಾಗಿ ಪ್ರಾಯೋಗಿಕವಾಗಿ ಅಧ್ಯಯನ ಮಾಡಿದ್ದ. ಅನೇಕ ರೋಗ, ರೋಗ ಲಕ್ಷಣಗಳನ್ನು ಪತ್ತೆಹಚ್ಚಿದ್ದ. 2000 ಔಷಧಗಳನ್ನು ತಯಾರಿ ಮಾಡಿದ್ದ. 100000 ಗಿಡಮೂಲಿಕೆಗಳನ್ನು ಸಂಗ್ರಹಿಸಿ ಪರಿಣಾಮವನ್ನು ಕೂಲಂಕುಷವಾಗಿ, ಸಮಗ್ರವಾಗಿ ವೀಕ್ಷಿಸಿ, ವಿಶ್ಲೇಷಿಸಿ, ದಾಖಲಿಸಿದ. ರೋಗಕ್ಕೆ ಚಿಕಿತ್ಸೆಗಿಂತ ರೋಗವನ್ನು ತಡೆಯುವುದು ಮೇಲು ಎಂದು ಮೊದಲ ಬಾರಿಗೆ ಹೇಳಿಕೆ ನೀಡಿದ ವೈದ್ಯ. ಈತ ಬೇರಾರು ಅಲ್ಲ ಮಹರ್ಷಿ ಅಗ್ನಿವೇಶರ ನಂತರದ ವೈದ್ಯ ಆಯುರ್ವೇದ ಪಿತಾಮಹ. ಅಲೆದಾಡುವ ಮಹರ್ಷಿ ಎಂದೇ ಖ್ಯಾತ.
       ಪಂಚನದಿಗಳ ನಾಡು ಪಂಜಾಬಿನ ಜಲಂಧರ್ ನಲ್ಲಿ ಜನನ. ತಂದೆ ವೇದ-ವೇದಾಂಗಿ. ವೇದಶಾಸ್ತ್ರ ಪಾರಂಗತ, ವಿಬುಧ. ಈ ಪ್ರಾಣಾಚಾರ್ಯ ತಕ್ಷಿಲಾ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ಅಭ್ಯಾಸ ಮಾಡಿದ.
   'ಬೆಳೆಯ ಸಿರಿ ಮೊಳಕೆಯಲ್ಲಿ'. ಬಾಲ್ಯದಲ್ಲಿ ಗುಡ್ಡಬೆಟ್ಟ, ಕಾನನ, ವಿಪಿನ ಅಲೆದು ಗಿಡಮೂಲಿಕೆಗಳನ್ನು ಸಂಗ್ರಹಿಸಿ ಅವುಗಳ ಔಷಧೀಯ ಗುಣಗಳ ಪ್ರಯೋಗ ಮಾಡುತ್ತ ಇರುತ್ತಿದ್ದ. ಒಂದು ಬಾರಿ ಆಡೊಂದು ವಿಚಿತ್ರವಾಗಿ ಕೂಗುತ್ತಿದ್ದುದನ್ನು ಗಮನಿಸಿ ಹಿರಿಯರ ಗಮನ ಸೆಳೆದ. ಆದರ ಸ್ವಾಸ್ತ್ಯ ಕೆಡುತ್ತಿದೆ ಅಂದ. ಅದು ಹುಲ್ಲು ತಿನ್ನುತ್ತಾ, ತಿನ್ನುತ್ತಾ ಸತ್ತು ಹೋಗಿತ್ತು. ವಿಷದ ಹುಲ್ಲು ತಿಂದಿದೆ ಎಂದ. ಅದನ್ನು ಪ್ರತ್ಯೇಕವಾಗಿ ವಿಷ ಚಿಕಿತ್ಸೆ ಎಂದು ಅಧ್ಯಯನ ಮಾಡಿದ. ಅಂತಹ ವಿಲಕ್ಷಣ ಬಾಲಕನೆ ಮುಂದೆ ತನ್ನ ವಿಚಕ್ಷಕ ದೃಷ್ಟಿ, ತೀವ್ರ ಬುದ್ಧಿಮತ್ತೆಯಿಂದ, ಪ್ರಯೋಗಶೀಲತೆಯಿಂದ ಆಯುರ್ವೇದವನ್ನು ಕರತಲಾಮಲಕ ಮಾಡಿಕೊಂಡ. ಕುಶಾಗ್ರಮತಿತ್ವದಿಂದ ಸಿದ್ಧಿಸಿಕೊಂಡ, ದಕ್ಕಿಸಿಕೊಂಡ, ರೂಢಿಸಿಕೊಂಡ. ಆಯುರ್ವೇದ ವಿದ್ಯೆಯನ್ನು ಅಷ್ಟೇ ಹೃದಯ ವಂತಿಕೆಯಿಂದ ಮನುಕುಲದ ರೋಗ ಪರಿಹಾರಕ್ಕಾಗಿ, ಆರೋಗ್ಯವರ್ಧನೆಗಾಗಿ, ದೇಹದಾರ್ಢ್ಯ  ಸ್ಥಿರತೆಗಾಗಿ ರಾಜ್ಯ ರಾಜ್ಯ ಅಲೆದಾಡಿ ವಿನಿಯೋಗಿಸಿದ. ಆಯುರ್ವೇದದ ಮೌಲ್ಯವರ್ಧನೆ ಮಾಡಿ ಸುಸ್ಥಿರ ಗೊಳಿಸಿದ. ಮಹರ್ಷಿಯಾದ.
         ಆಯುರ್ವೇದದ ಪ್ರಕಾರ ದೇಹವು ವಾತ ಪಿತ್ತ ಕಫ ಎಂಬ ತ್ರೀ ದೋಷಗಳಿಂದಾಗಿ ಕಾರ್ಯನಿರ್ವಹಿಸುತ್ತದೆ ಅಂದರು. ಒಂದೇ ರೀತಿ ಆಹಾರ ಸೇವಿಸಿದರೂ ಆಹಾರದ ಮೇಲೆ ಧಾತುಗಳು ನಡೆಸುವ ಕ್ರಿಯೆಯಿಂದಾಗಿ ಬೇರೆ ಬೇರೆ ದೇಹಗಳಲ್ಲಿ ಬೇರೆ ಬೇರೆ ದೋಷಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಒಂದು ಶರೀರ ಇನ್ನೊಂದಕ್ಕಿಂತ ಭಿನ್ನ. ತ್ರಿದೋಷಗಳು ಸಮತೋಲನ ತಪ್ಪಿದಾಗ ದೇಹಕ್ಕೆ ಅಸೌಖ್ಯ. ಆ ಕಾಲದಲ್ಲೇ ಮಹರ್ಷಿ ಶರೀರ ಶಾಸ್ತ್ರವನ್ನು ಆಳವಾಗಿ ಅಭ್ಯಾಸಮಾಡಿ ದೇಹದಲ್ಲಿ 360 ಎಲುಬುಗಳಿವೆ ಎಂದರು. ಹೃದಯ ದೇಹದ ನಿಯಂತ್ರಕ. ಪೌಷ್ಟಿಕಾಂಶ ಸಾಗಾಟಕ್ಕೊಂದು ಮಾರ್ಗ, ತ್ಯಾಜ್ಯ ವಿಸರ್ಜನೆಗೆ ಇನ್ನೊಂದು ಮಾರ್ಗವಿದೆ ಎಂದು ನಿರೂಪಿಸಿದರು. ಇವುಗಳಲ್ಲಿ ವ್ಯತ್ಯಾಸವಾದರೆ ರೋಗ.
     ವೇದಕಾಲದಿಂದಲೇ ಆಯುರ್ವೇದ ಬಳಕೆಯಲ್ಲಿತ್ತು. ಆಯುರ್ವೇದ ದೇವರಿಂದ ಋಷಿಗಳಿಗೆ, ಋಷಿಗಳಿಂದ ಗುರುಕುಲದಲ್ಲಿ ಇತರ ಶಿಕ್ಷಣಾರ್ಥಿಗಳಿಗೆ ಬೋಧಿಸಲ್ಪಟ್ಟಿತ್ತು. ಅಥರ್ವವೇದದಲ್ಲಿ ಬ್ರಹ್ಮನಿಂದ ಧನ್ವಂತರಿ ಉಪದೇಶಿಸಲ್ಪಟ್ಟಿದೆ ಎನ್ನಲಾಗಿದೆ.
      ಯುರೋಪಿನಲ್ಲಿ ಶರೀರಶಾಸ್ತ್ರದ ಬಗ್ಗೆ ಅನುಮಾನ, ಗೊಂದಲಗಳಿದ್ದಾಗ ಈ ಮಹರ್ಷಿ ಸ್ವಯಂ ಪ್ರತಿಭೆಯಿಂದ ರಕ್ತಪರಿಚಲನೆ, ಭ್ರೂಣ, ಮಧುಮೇಹ, ಹೃದಯ ರೋಗಗಳನ್ನು ವಿಪುಲ ಪ್ರಯೋಗ ಮಾಡಿ ಕಂಡುಕೊಂಡ ಸತ್ಯಗಳನ್ನು ಲೋಕಕ್ಕೆ ನೀಡಿದರು. ಸಕಲ ಚಿಕಿತ್ಸಾಕ್ರಮಗಳನ್ನು ವಿಷದವಾಗಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ತಾನು ಕಂಡುಕೊಂಡ, ಅನ್ವೇಷಿಸಿದ ಜ್ಞಾನನಿಧಿಯನ್ನು ಎಲ್ಲಾ ರೋಗ, ರೋಗ ಲಕ್ಷಣ, ರೋಗ ನಿಧಾನ, ಔಷಧಿ ಗಿಡಮೂಲಿಕೆ ವಿಚಾರಗಳನ್ನು ತನ್ನ ಸಂಹಿತೆಯಲ್ಲಿ 1120 ಅಧ್ಯಾಯಗಳಲ್ಲಿ 12000 ಶ್ಲೋಕಗಳಲ್ಲಿ ದಾಖಲಿಸಿದ್ದರು. ಈ ಉತ್ಕೃಷ್ಟ, ಮಹೋನ್ನತ ಕೃತಿಯ ಮೂಲಕ ಆಯುರ್ವೇದ ಚಿರಾಯುವಾಯಿತು. ಭಾರತದ ಶ್ರೇಷ್ಠ ಪಾರಂಪರಿಕ ವಿದ್ಯಾ ನಮ್ಮ ದೇಶಕ್ಕೆ ಮಾತ್ರವಲ್ಲ ವಿದೇಶಗಳಿಗೂ ಪಸರಿಸಿ ವಿಶ್ವ ಮನ್ನಣೆ ಪಡೆಯಿತು. ಆ ಮೂಲಕ ಭಾರತವು ವಿಶ್ವದಲ್ಲಿ ಅಗ್ರಪಂಕ್ತಿಯ ಗೌರವ ಭಾಜನವಾಯಿತು. ಪ್ರಾಚೀನ ಕಾಲದಲ್ಲೇ ಕಾಯ ಚಿಕಿತ್ಸೆ, ಕೌಮಾರಭೃತ್ಯ, ಶಲ್ಯತಂತ್ರ, ಶಸ್ತ್ರಚಿಕಿತ್ಸೆ, ಶಾಲಾಖ್ಯ ತಂತ್ರ, ರಸಾಯನ ತಂತ್ರ ವಶೀಕರಣ ತಂತ್ರ ಮುಂತಾದ ವಿಶೇಷ ವೈದ್ಯ ವಿಭಾಗಗಳಿದ್ದವು. ಅವುಗಳಲ್ಲೆಲ್ಲಾ ಮಹರ್ಷಿ ಸೈ ಎನಿಸಿಕೊಂಡಿದ್ದರು. ತನ್ನ ಔಷಧದ ಮೂಲಕ ಚಮತ್ಕಾರ ಮಾಡಿ ಗುರುವಿನಿಂದ ಭೇಷ್ ಎನಿಸಿಕೊಂಡ ಮುಕ್ತಕಂಠದ ಹೊಗಳಿಕೆಗೆ ಪಾತ್ರನಾದ ಸತ್ಪಾತ್ರ, ಸಜ್ಜನಿಕೆಯ, ಸಮ್ಯಕ್ ಜ್ಞಾನದ ಮಹರ್ಷಿ ತನ್ನ ಸದ್ಗುಣದಿಂದಾಗಿ, ಸನ್ನಡತೆಯಿಂದಾಗಿ , ರಾಜ್ಯ - ರಾಜ್ಯ ಸಂಚಾರ ಮಾಡುತ್ತಾ ತನ್ನ ವೈದ್ಯಕೀಯ ಸೇವೆಯನ್ನು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸಾಮಾನ್ಯರಿಂದ ಹಿಡಿದು ರಾಜರವರೆಗೆ ನೀಡುತ್ತಾ ಬಂದರು. ಯಶಸ್ವಿ ಚಿಕಿತ್ಸೆಯಿಂದ ಮನೆ ಮಾತಾದರು. ಆತನ ಪ್ರಸಿದ್ಧಿ ಉತ್ತರದ ರಾಜ ಕನಿಷ್ಕನ ಕರ್ಣಗಳಿಗೂ ತಲುಪಿತು. ಆತ ಮಹರ್ಷಿಯನ್ನು ತನ್ನ ಆಸ್ಥಾನಕ್ಕೆ ಆಹ್ವಾನಿಸಿದ. ಅತಿ ವಿನಯದಿಂದ ಸಭೆಯನ್ನು ಪ್ರವೇಶಿಸಿದ ಮಹರ್ಷಿಯನ್ನು ಸತ್ಕರಿಸಿದ ರಾಜ ವಿನಯಪೂರ್ವಕವಾಗಿ ಆಯುರ್ವೇದ ಸಂಹಿತೆಯ ಬಗ್ಗೆ ತೀವ್ರ ಕುತೂಹಲದ ಪ್ರಶ್ನೆಗಳನ್ನು ಮುಂದಿಟ್ಟ. ಮಹರ್ಷಿಯ ಮನಮುಟ್ಟುವ ವಿದ್ವತ್ ಪೂರ್ಣ ಹೃದ್ಯ, ಸೋದಾಹರಣ ಪ್ರಸ್ತುತಿಯಿಂದ ಅತೀವ ಆಕರ್ಷಿತನಾದ ರಾಜ ಅವರನ್ನು ತಮ್ಮ ರಾಜ ವೈದ್ಯನಾಗಲು ಕೇಳಿಕೊಂಡ. 'ಪರೋಪಕಾರಾರ್ಥಮಿದಂ ಶರೀರಂ ' ಎಂಬಂತೆ ಆ ರಾಜ್ಯದ ಜನರ ಸೇವೆ ಮಾಡಲು ಸಿಗುವ ಅವಕಾಶಕ್ಕಾಗಿ ಮಹರ್ಷಿ ಅತ್ಯಂತ ಹರ್ಷಚಿತ್ತದಿಂದ ರಾಜನ ಪ್ರಸ್ತಾವನೆಯನ್ನು ಒಪ್ಪಿಕೊಂಡು ಅಪ್ಪಿಕೊಂಡರು. ವೈದ್ಯೋ ನಾರಾಯಣೋ ಹರಿಃ ಎಂಬುವುದಕ್ಕೆ ನಿದರ್ಶನವಾಗಿ ಬಾಳಿದರು. ಗ್ರೀಕ್ ಚಿಕಿತ್ಸಾ ಶಾಸ್ತ್ರಿ ಹಿಪೊಕ್ರೆಟಿಸ್ ಕೂಡ ಚರಕ ಸಂಹಿತೆಯ ತ್ರಿದೋಷ ತತ್ವವನ್ನು ಸಮರ್ಥಿಸಿದ. ಇತರ ದೇಶಗಳಲ್ಲಿ ನಡೆದ ವೈದ್ಯಕೀಯ ಸಂಶೋಧನೆಗಳನ್ನು ಅದೆಷ್ಟೋ ಸಹಸ್ರ ವರ್ಷಗಳ ಹಿಂದೆಯೇ ತನ್ನ ಕಾಲದಲ್ಲಿ ಪ್ರಯೋಗಮಾಡಿ ಪ್ರಥಮ ವಿಷ ಚಿಕಿತ್ಸೆ ಹೃದಯ ಚಿಕಿತ್ಸೆ ಮಾಡಿ ಆ ವಿಚಾರಗಳಲ್ಲಿ ಮೊತ್ತಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟ ಆಯುರ್ವೇದ ಆಕಾಶದ ಮಿನುಗು ತಾರೆಗೆ ನಮೋ ನಮಃ. ಅಭಿಜಾತ ತನ್ನ ಅಭಿಜ್ಞತೆಯಿಂದ ಔಷಧ ಶಾಸ್ತ್ರ ಪಿತಾಮಹ ಎಂಬ ಅಭಿದಾನವನ್ನು ಅಲಂಕರಿಸಿ ಆತ್ಯಂತಿಕವಾದ, ಅಭಿರುಚಿ, ಅಭಿಲಾಶೆ, ಅಭೀಪ್ಸೆಯಿಂದ ಆಬಾಲ ವೃದ್ಧರಿಗೆ ಆರೋಗ್ಯದ ಅಭಯವನ್ನು, ಭದ್ರ, ಸುಭದ್ರ ಜೀವನವನ್ನು ಅನುಗ್ರಹಿಸಿದ ಅಭಿನಂದನಾ ಕಾರ್ಯಕ್ಕೆ ಅಭಿವಂದನೆ.
     ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************

Ads on article

Advertise in articles 1

advertising articles 2

Advertise under the article