-->
ಅಕ್ಕನ ಪತ್ರ : ಸಂಚಿಕೆ -18

ಅಕ್ಕನ ಪತ್ರ : ಸಂಚಿಕೆ -18

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 18


     ನಮಸ್ತೆ ಮಕ್ಕಳೇ... ಎಲ್ಲರೂ ಚೆನ್ನಾಗಿದ್ದೀರಿ ಅಲ್ವಾ.....? ಕಳೆದ ವಾರದ ಪತ್ರ ಓದಿದ್ದೀರಲ್ಲಾ...?
ಯಾರನ್ನೆಲ್ಲಾ ಮಾತನಾಡಿಸಿದ್ರಿ....? ಒಂದಷ್ಟು ತಮ್ಮ ತಂಗಿಯರು ಅವರ ಅನುಭವಗಳನ್ನು ಹಂಚಿಕೊಂಡ್ರು.... ಇಷ್ಟು ದಿನ ಏನು ಫೋನ್ ಮಾಡ್ಲಿಲ್ಲಾ...? ಈಗ ಹೇಗೆ ನೆನಪಾಯ್ತು....? ಎನ್ನುವ ಮಾತುಗಳನ್ನೂ ಕೇಳಿಸಿಕೊಂಡವರಿದ್ದೀರಿ....! ಒಟ್ಟಿನಲ್ಲಿ ಒಂದು ಕರೆ... ಎಲ್ಲರನ್ನೂ ಸಂಭ್ರಮಿಸುವಂತೆ ಮಾಡಿತು..
      ಹೊರದೇಶದಲ್ಲಿ ನಡೆದ ನೈಜ ಘಟನೆ ಇದು. ಅದೊಂದು ಮಾಂಸ ವ್ಯಾಪಾರ ಮಾಡುವ ದೊಡ್ಡ ಅಂಗಡಿ..... ಪ್ರತಿದಿನವೂ ಸಾವಿರಾರು ಜನ ಓಡಾಡುವ ಆ ವ್ಯಾಪಾರ ಮಳಿಗೆಯಲ್ಲಿ ನಡೆದ ಈ ಘಟನೆ ಮಾತ್ರ ಸಂಬಂಧಗಳಿಗೆ ನೀಡುವ ಮೌಲ್ಯದ ಮಹತ್ವವನ್ನು ಮನುಕುಲಕ್ಕೆ ತಲುಪಿಸಿತು.
          ಆ ದಿನ ಎಂದಿನಂತೆ ಕೆಲಸ ಮುಗಿಸಿ ಇನ್ನೇನು ಮನೆಗೆ ಹೊರಡಬೇಕೆನ್ನುವಷ್ಟರಲ್ಲಿ ಕೆಲಸದ ಹುಡುಗರು ಒಂದು ಡಬ್ಬವನ್ನು ಅವಳ ಕೈಯಲ್ಲಿಟ್ಟು ಫ್ರೀಝರ್ ನಲ್ಲಿ ಇಡುವಂತೆ ಹೇಳಿ ಹೊರಡ್ತಾರೆ. ನಮ್ಮೆಲ್ಲರ ಮನೆಗಳಲ್ಲಿ ಫ್ರಿಡ್ಜ್ ಇದೆ... ಅದರ ಮೇಲ್ಭಾಗದ ಫ್ರೀಝರ್ ಲ್ಲಿ ಇಟ್ಟ ನೀರು ಮತ್ತಿತರ ಹೆಚ್ಚಿನ‌ ವಸ್ತುಗಳೆಲ್ಲವೂ ಗಟ್ಟಿಯಾಗುತ್ತವೆ. ದೊಡ್ಡ ವ್ಯಾಪಾರದ ಮಳಿಗೆಗಳಲ್ಲಿ ಅದೇ ಮಾದರಿಯ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ಫ್ರೀಝರ್ ಸಾಮಾನ್ಯವಾದ ಒಂದು ಕೋಣೆಯಷ್ಟು ದೊಡ್ಡದಾಗಿರುತ್ತದೆ....! ಬ್ಯಾಗ್ ನ್ನು ಹೊರಗಿಟ್ಟು, ಪ್ರತಿದಿನವೂ ಹೊರಡುವ ಸಮಯಕ್ಕಿಂತ ತಡವಾಗಿ ಅವಳು ಆ ಡಬ್ಬವನ್ನು ಅದರೊಳಗಿಡಲು ತೆರಳಿದಳು. 
        ಅವಳು ಫ್ರೀಝರ್ ನೊಳಗಿರುವುದನ್ನು ಅರಿಯದ ವಾಚ್ ಮನ್ ಎಲ್ಲ ಕೋಣೆಗಳಿಗೂ ಬೀಗ ಹಾಕಿ ತೆರಳುತ್ತಾನೆ. ಮನೆಯಲ್ಲಿ, ಮಗಳು ಬಾರದೆ ತಂದೆ ಚಡಪಡಿಸುತ್ತಾರೆ... ದೂರು ಕೊಟ್ಟು ಎಲ್ಲಿ ಹುಡುಕಾಡಿದರೂ ಹೆಣ್ಣು ಮಗಳ ಸುಳಿವಿಲ್ಲ...! ಅವಳು ಕೆಲಸ ಮಾಡುತ್ತಿರುವ ವ್ಯಾಪಾರ ಮಳಿಗೆಯಲ್ಲಿ ಎಲ್ಲ ಕಡೆಯೂ ಪ್ರಯತ್ನಿಸಿದರು. ಆಗ ಆ ವ್ಯಾಪಾರ ಮಳಿಗೆಯ ಕಾವಲುಗಾರ ತನ್ನನ್ನು ಅವಳು ಬೆಳಗ್ಗೆ ಮತ್ತು ಸಾಯಂಂಕಾಲ ಹೊರಡುವ ಎರಡೂ ಸಮಯಗಳಲ್ಲೂ ತಪ್ಪದೇ ಮಾತನಾಡಿಸುತ್ತಿದ್ದವಳು.. ನಿನ್ನೆ ಸಂಜೆ ಅವಳು ಇಲ್ಲಿಂದ ಮನೆಗೆ ತೆರಳಲಿಲ್ಲ ಎಂದು ತಿಳಿಸಿದ.....!
ಮತ್ತೆ ಹುಡುಕಾಡಿ, ಕೊನೆಗೆ ಫ್ರೀಝರ್ ನ‌ ಬಾಗಿಲು ತೆರೆದಾಗ ಅವಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು.....! ಸುಮಾರು ಆರು ಘಂಟೆಗಳ ಕಾಲ‌, ಅವಳು ಜೀವ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ *ಹೆಲೆನ್* ಎನ್ನುವ‌ ಮಲಯಾಳ‌ ಚಲನ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ.
        ಮಕ್ಕಳೇ, ಇದು ನಡೆದ ಘಟನೆ. ಬಹುಶಃ ಒಂದೆರಡು ಘಂಟೆ ತಡವಾಗುತ್ತಿದ್ದರೂ ಅವಳು ಬದುಕಿನಿಂದ ದೂರ ಸರಿದುಬಿಡುತ್ತಿದ್ದಳು. ಇಂತಹ ಭಯಾನಕ ಸನ್ನಿವೇಶದಲ್ಲಿ ಅವಳನ್ನು ಬದುಕಿಸಿದ್ದು ಅವಳು, ಕಾವಲುಗಾರರಿಗೆ ತೋರುತ್ತಿದ್ದ ಪ್ರೀತಿ.. ಅವಳ ದಿನದ ಎರಡು ಮಾತುಗಳು ಹಾಗೂ ಮುಗುಳ್ನಗು ಆ ಹಿರಿಯ ಜೀವದಲ್ಲಿ ಚೈತನ್ಯ ತುಂಬುತ್ತಿತ್ತು. ಆ ಕಾರಣಕ್ಕಾಗಿ ಅವಳು ವಾಚ್ ಮ್ಯಾನ್ ಗೆ ನೆನಪಾದಳು.
         ಗೆಳೆಯ, ಗೆಳತಿಯರೇ... ನಮ್ಮ ಪ್ರತಿದಿನದ ಸಂದರ್ಭಗಳಲ್ಲಿಯೂ ಇಂತಹ ಹಲವರು ಭೇಟಿಯಾಗುತ್ತಿರುತ್ತಾರೆ. ನಮ್ಮ ಆಟೋ ಡ್ರೈವರ್, ಬಸ್ಸಿನ ಚಾಲಕ, ಕಂಡಕ್ಟರ್.. ಶಾಲೆಯ ಬಿಸಿಯೂಟದ ಅಕ್ಕನವರು... ಪೇಪರ್ ಅಂಗಡಿಯವರು..... ಎಲ್ಲರ ಕೆಲಸವೂ ಶ್ರೇಷ್ಠವೇ..‌ ಅವರ ಸೇವೆಯ ಬಗ್ಗೆ ಒಂದು ಸಣ್ಣ ಮೆಚ್ಚುಗೆಯ ಮಾತು.. ನಮ್ಮಪ್ರತಿದಿನದ ನಗು... ನಾವು ತೋರುವ ಆತ್ಮೀಯತೆ... ಎಲ್ಲವೂ ಅವರಿಗೆ ಇನ್ನಿಲ್ಲದ ಸಂತಸವನ್ನು ಕೊಡುವುದಂತೂ ಸತ್ಯ!
       ಗೊತ್ತಿಲ್ಲ....ಯಾರು ಯಾವ ಸಂದರ್ಭದಲ್ಲಿ ಆಪತ್ಭಾಂಧವರಾಗುತ್ತಾರೆ ಎನ್ನುವುದು...! ಜನರನ್ನು ಅವರಿರುವ ಸ್ಥಾನದಿಂದ ಅಳೆಯದೆ ಹೃದಯದಿಂದ ಪ್ರೀತಿಸೋಣ..... ಎಲ್ಲರೂ ನಮ್ಮವರೆನ್ನುವ 'ವಿಶ್ವ ಮಾನವತೆಯು' ಉದಯಿಸಲಿ. ಎಲ್ಲರೆಡೆಯೂ ಆತ್ಮೀಯತೆಯ ನಗೆಯನ್ನು ಬೀರುತ್ತಾ ಈ ಬದುಕಿನಲ್ಲಿ ಸಂತಸದ ಸಂಬಂಧಗಳನ್ನು ಬೆಸೆಯೋಣ.
      ಏನನ್ನಿಸುತ್ತಿದೆ.....? ಬರೆದು ಕಳುಹಿಸಿ... ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************Ads on article

Advertise in articles 1

advertising articles 2

Advertise under the article