-->
ಮಕ್ಕಳ ತುಂಟ ಮನಸು : ಸಂಚಿಕೆ - 4

ಮಕ್ಕಳ ತುಂಟ ಮನಸು : ಸಂಚಿಕೆ - 4

ಮಕ್ಕಳ
ತುಂಟ ಮನಸು 
ಸಂಚಿಕೆ - 4


               ಕ್ಲಾಸಲ್ಲಿ ಹಾರುವ ರಾಕೆಟ್......!!
         ನಿಮಗೆಲ್ಲರಿಗೂ ರಾಕೆಟ್ ಉಡಾವಣೆಯ ಬಗ್ಗೆ ತಿಳಿದೇ ಇರುತ್ತದೆ.. ಅಂತರಿಕ್ಷದಲ್ಲಿ ಹಾರಾಡುವ ರಾಕೆಟ್.... ಶಬ್ದ ಮಾಡುವುದರ ಜೊತೆಗೆ , ಹೊಗೆಯನ್ನು ಕೂಡಾ ಬಿಡುತ್ತದೆ. ಆದರೆ ಶಬ್ಧ ಮಾಡದೇ.. ಹೊಗೆ ಬಿಡದೇ ಇರುವ ರಾಕೆಟ್ ಗಳು ನಮ್ಮ ತಲೆ ಮೇಲೆ ಹಾರಿ ಹೋಗುವುದನ್ನು ನಾವು ಶಾಲೆಯ ತರಗತಿಗಳಲ್ಲಿ ಕೆಲವೊಮ್ಮೆ ನೋಡಬಹುದು. ಕೆಲವೊಂದು ತುಂಟ ಮಕ್ಕಳು ಏನೇನೆಲ್ಲಾ ಕೀಟಲೆ ಮಾಡುತ್ತಾರೆಂದರೆ, ಈ ರಾಕೆಟ್ ಗಳು ನೇರ ಹೋಗಿ ಇನ್ನೊಬ್ಬರ ತಲೆಗೆ ಬೀಳುವಂತೆ ಹಾರಿಸುತ್ತಾರೆ. ನಮ್ಮ ತರಗತಿಯಲ್ಲಿ ಹೀಗೊಂದು ಘಟನೆ ನಡೆದಿತ್ತು..... 
       ಒಂದು ದಿನ ಪಾಠದ ಮಧ್ಯೆ ಟೀಚರ್ ಗೆ ಗೊತ್ತಾಗದಂತೆ ತಲೆಯ ಮೇಲಿನಿಂದ ರಾಕೆಟ್ ಒಂದು ಹಾರಿ ಹೋಗಿ ಒಬ್ಬನ ಪುಸ್ತಕದ ಮೇಲೆ ಬಿತ್ತು. ನಾನು ಹಿಂದೆ ತಿರುಗಿ ನೋಡಿದಾಗ ಆ ರಾಕೆಟ್ ಕೊನೆಯ ಬೆಂಚಿನ ಪ್ರಕಾಶ ಎಸೆದದ್ದು ಎಂದು ತಿಳಿಯಿತು..... ಸ್ವಲ್ಪ ಹೊತ್ತಿನಲ್ಲಿ ಮುಂದಿನ ಬೆಂಚಿನಿಂದ ಹಿಂದಕ್ಕೆ ಮತ್ತೊಂದು ರಾಕೆಟ್ ಹಾರಿತು.. ಅದು ಸುಯ್ಯನೆ ಹೋಗಿ ಒಬ್ಬಳ ಕಣ್ಣಿಗೆ ಬಿತ್ತು. ಇದರಿಂದಾಗಿ ಆಕೆಯು ನೋವಿನಿಂದ ಅಳಲು ಪ್ರಾರಂಭಿಸಿದಳು. ಕೂಡಲೇ ಟೀಚರ್ ಏನಾಯ್ತು ಯಾಕೆ ಅಳ್ತಾ ಇದ್ದಿ ಅಂತ ಕೇಳಿದಾಗ ಆಕೆ "ಮುಂದಿನ ಬೆಂಚಿನಿಂದ ನನ್ನತ್ತ ಯಾರೋ ರಾಕೆಟ್ ಬಿಟ್ಟಿದ್ದಾರೆ.. ಅದು ನನ್ನ ಕಣ್ಣಿಗೆ ಬಂದು ಬಿತ್ತು" ಅಂತ ಹೇಳಿದ್ಲು. ಆಕೆಯ ಕಣ್ಣಿಗೆ ಸ್ವಲ್ಪ ಪೆಟ್ಟಾಗಿತ್ತು.. ಇದರಿಂದ ಸಿಟ್ಟಿಗೆದ್ದ ಟೀಚರ್ "ಪಾಠ ಮಾಡುವಾಗ ಗಮನ ಇಟ್ಟು ಕೇಳುವ ಬದಲು ರಾಕೆಟ್ ಬಿಡ್ತೀರಾ" ಅಂತ ಮಕ್ಕಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡು ಹೋಗಿ ಕುರ್ಚಿಯ ಮೇಲೆ ಕುಳಿತುಕೊಳ್ಳುವಾಗ ಇನ್ನೊಂದು ಆಘಾತ ಕಾದಿತ್ತು. ಅವರು ಕುಳಿತ ಕುರ್ಚಿಯಲ್ಲಿ ಯಾರೋ ಚುಯಿಂಗ್ ಗಮ್ ಅಂಟಿಸಿ ಇಟ್ಟಿದ್ದರು. ಇದರಿಂದ ಇನ್ನಷ್ಟು ಕೋಪಗೊಂಡ ಟೀಚರ್, ಆ ಮಕ್ಕಳನ್ನು ಹುಡುಕಿ ಪ್ರಾಂಶುಪಾಲರ ಬಳಿ ಕಳಿಸಿದರು. 
        ಇದೇ ರೀತಿ ಎಷ್ಟೋ ಬಾರಿ ತಮಾಷೆ ಮಾಡಲೆಂದು ಹೋಗಿ, ಇನ್ನೊಬ್ಬರಿಗೆ ತೊಂದರೆಯನ್ನುಂಟು ಮಾಡುವ ಮಕ್ಕಳು ಎಷ್ಟೋ ಜನ ಇದ್ದಾರೆ. ಕೀಟಲೆ ಮಾಡುವುದರಿಂದ ಇನ್ನೊಬ್ಬರಿಗೆ ತೊಂದರೆಯಾಗುತ್ತದೆಯೇ.. ಇಲ್ಲವೇ.. ಎಂದು ಆಲೋಚಿಸುವ ಮನೋಭಾವ ಕೆಲವೊಬ್ಬರಿಗೆ ಇರುವುದಿಲ್ಲ.. ಇನ್ನೂ ಕೆಲವರು, ತಪ್ಪು ಅಂತ ಗೊತ್ತಿದ್ದರೂ ಕೂಡ ಬೇರೆಯವರಿಗೆ ತೊಂದರೆ ಮಾಡುತ್ತಾರೆ. ಪ್ರತೀ ತರಗತಿಯಲ್ಲೂ ಇಂತಹ ಮಕ್ಕಳು ಇದ್ದೇ ಇರುತ್ತಾರೆ....!! 
........................................... ರಮ್ಯ. ಎಮ್
ಅಂತಿಮ ಬಿ.ಎ (ಮನ:ಶಾಸ್ತ್ರ ವಿದ್ಯಾರ್ಥಿನಿ)
ಡಾ. ಪಿ. ದಯಾನಂದ ಪೈ - ಪಿ.ಸತೀಶ ಪೈ, 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, 
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article