ಹಕ್ಕಿ ಕಥೆ : ಸಂಚಿಕೆ - 34
Tuesday, February 15, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಹಕ್ಕಿ ಕಥೆ - 34
-------------------
ಮಕ್ಕಳೇ ನಮಸ್ತೇ. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ಕಳೆದ ವಾರದ ಹಕ್ಕಿ ಕಥೆಯಲ್ಲಿ ನಾವು ಬಾತುಕೋಳಿಗಳ ಬಗ್ಗೆ ಮಾತನಾಡಿದ್ದೆವು.. ಒಮ್ಮೆ ಹೀಗೇ ನನ್ನ ಬೈನಾಕುಲಾರ್ ಹಿಡಿದುಕೊಂಡು ಬೆಳಗ್ಗಿನ ವಾಕಿಂಗ್ ಹೊರಟಿದ್ದೆ. ಅಕ್ಟೋಬರ್ ತಿಂಗಳು ದಸರಾ ರಜೆ ಸಿಕ್ಕಿತ್ತು. ದಸರಾ ರಜೆಗೆಂದು ನನ್ನ ಮಡದಿಯ ಊರಾದ ಸಾಗರಕ್ಕೆ ಬಂದಿದ್ದೆ. ಆಗತಾನೇ ಮಳೆಗಾಲ ಮುಗಿದು ಚಳಿ ಪ್ರಾರಂಭವಾಗಿತ್ತು. ಬೆಳಗ್ಗಿನ ಬಿಸಿಲಿಗೆ ಮೈಯೊಡ್ಡಿ ಹಾಗೇ ವಾಕಿಂಗ್ ಹೋಗುವುದು ಬಹಳ ಆಹ್ಲಾದಕರವಾದ ಅನುಭವ.
ಸಾಗರದಲ್ಲಿ ಗಣಪತಿ ದೇವಸ್ಥಾನದ ಕೆರೆ ಬಹಳ ವಿಶಾಲವಾದದ್ದು. ಒಂದೇ ಆವರಣಗೋಡೆಯ ಈ ಕಡೆಗೆ ದೇವಸ್ಥಾನ, ಆ ಕಡೆಗೆ ಮಸೀದಿ, ಪಕ್ಕದಲ್ಲೇ ಚಂದದ ಕೆರೆ. ಸುಮಾರು ದೂರ ನಡೆದು ಸುಸ್ತಾಗಿದ್ದ ನನಗೆ ಕೆರೆಯ ಬದಿಯ ಕಟ್ಟೆಯ ಮೇಲೆ ಕುಳಿತುಕೊಳ್ಳುವ ಮನಸ್ಸಾಯಿತು. ಹಾಗೇ ಕುಳಿತುಕೊಂಡು ಕಣ್ಣಾಡಿಸುತ್ತಿದ್ದಾಗ ಮಿಂಚುಳ್ಳಿ, ಬೆಳ್ಳಕ್ಕಿ, ಗಿಡುಗ ಮೊದಲಾದ ಹಕ್ಕಿಗಳು ಹಾರಾಡುವುದು ಕಂಡಿತು. ಕೆರೆಯ ಒಂದು ಬದಿಯಲ್ಲಿ ದುಂಡಗಿನ ತೆಪ್ಪವೊಂದರಲ್ಲಿ ಮೀನು ಹಿಡಿಯುವಾತ ಬಲೆ ಬೀಸಿ ಮೀನುಹಿಡಿಯುತ್ತಿದ್ದ. ಅವನ ಕೆಲಸಗಳನ್ನೇ ನೋಡುತ್ತಾ ಕುಳಿತಿದ್ದೆ. ಬಹುಶಃ ಆತ ಅಲ್ಲಿನ ಖಾಯಂ ಗಿರಾಕಿ ಆಗಿದ್ದಿರಬೇಕು. ಆತನ ಇರುವಿಕೆಯನ್ನು ಲೆಕ್ಕಿಸದೇ ಹಕ್ಕಿಗಳು ತಮ್ಮಪಾಡಿಗೆ ತಾವು ಹೊಟ್ಟೆ ತುಂಬಿಸಿಕೊಳ್ಳುವ ಕಾಯಕ ನಡೆಸಿದ್ದವು. ಸ್ವಲ್ಪ ಹೊತ್ತಿನಲ್ಲಿ ದಡದ ಕಡೆಗೆ ಬಂದ ಆತ ನನ್ನ ಜೊತೆ ಮಾತನಾಡಲು ಪ್ರಾರಂಭಿಸಿದ. ಆತ ನನ್ನ ಬಳಿ ಇದ್ದ ಬೈನಾಕುಲಾರ್ ನೋಡಿ ಕ್ಯಾಮರಾ ಎಂದುಕೊಂಡು ಫೋಟೋ ತಗೆಯೋರಾ ಹೇಗೆ? ನಾಳೆ ಬೆಳಗ್ಗೆ ಬಂದರೆ ನಿಮ್ಮನ್ನು ತೆಪ್ಪದಲ್ಲಿ ಕೆರೆಯ ಇನ್ನೊಂದು ಕಡೆಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ಹಲವಾರು ಹಕ್ಕಿಯ ಗೂಡುಗಳಿವೆ. ಈಗ ಪುಟ್ಟ ಹಕ್ಕಿ ಮರಿಗಳನ್ನೂ ನೋಡಬಹುದು, ಬರ್ತೀರಾ ಎಂದ.
ಮಾರನೆಯ ದಿನ ನಾನು ಬೇರೆಕಡೆಗೆ ಹೋಗಬೇಕಾದ ಕಾರಣ ಬರಲು ಸಾದ್ಯವಾಗುವುದಿಲ್ಲ, ಮುಂದಿನ ಬಾರಿ ಬಂದಾಗ ಖಂಡಿತಾ ಬರುತ್ತೇನೆ ಎಂದೆ. ಆತ ಅಂದು ಸಿಕ್ಕಿದ ಮೀನುಗಳನ್ನು ಹಿಡಿದುಕೊಂಡು ಮಾರುಕಟ್ಟೆಗೆ ಹೊರಟು ಹೋದ. ನನಗೆ ಮಾತ್ರ ಅವನು ಹೇಳಿದ ಹಕ್ಕಿ ಮತ್ತು ಆ ಮರಿಗಳನ್ನು ನೋಡುವ ಆಸೆಯಾಯಿತು. ಕೆರೆಯ ಸುತ್ತಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಇನ್ನೊಂದು ಬದಿಯಲ್ಲಿ ಕೆರೆಯ ದಂಡೆಯಮೇಲೆ ಕುಳಿತು ಗಮನಿಸಲು ಪ್ರಾರಂಭಿಸಿದೆ. ಕೆರೆಯಲ್ಲಿ ಬೆಳೆಯುವ ಹುಲ್ಲುಗಳನ್ನು ಸುಂದರವಾಗಿ ಸೇರಿಸಿ, ಎತ್ತರದ ದಿಬ್ಬದ ಹಾಗಿನ ವ್ಯವಸ್ಥೆಯನ್ನು ಮಾಡಿಕೊಂಡು ಮೇಲೆ ತುಸು ದುಂಡಗಿನ ಬುಟ್ಟಿಯಂತಹ ಆಕಾರ ಮಾಡಿಕೊಂಡು ಕಪ್ಪುಬಣ್ಣ ಹಕ್ಕಿಯೊಂದು ಅದರ ಸುತ್ತಲೂ ಓಡಾಡುತ್ತಿತ್ತು. ನೀರಿನಲ್ಲಿ ಬಾತುಕೋಳಿಯ ಹಾಗೆ ಓಡಾಡುತ್ತಿತ್ತು ಆದರೆ ಬಾತುಕೋಳಿ ಅಲ್ಲ. ಬಿಳೀ ಬಣ್ಣದ ಕೊಕ್ಕು. ಕೊಕ್ಕಿನಿಂದ ಹಣೆಯವರೆಗೂ ಬಳೀ ಬಣ್ಣದ ನಾಮ. ನೀರಿನಿಂದ ಮೇಲೆ ಬಂದಾಗ ಕಾಲುಗಳನ್ನು ನೋಡಿದೆ ಜಾಲಪಾದವೂ ಅಲ್ಲದ ಬರೇ ಬೆರಳುಗಳೂ ಅಲ್ಲದ ವಿಶಿಷ್ಟವಾದ ಪಾದ. ನೀರಿನಿಂದಲೇ ಹಾರಬೇಕಾದರೆ ತುಸು ದೂರದವರೆಗೆ ನೀರಿನಲ್ಲಿ ಓಡುತ್ತಾ ನಂತರ ಆಕಾಶಕ್ಕೆ ಹಾರುವ ವಿಶಿಷ್ಟವಾದ ಟೇಕಾಫ್... ಗೂಡಿನಲ್ಲಿ ಪುಟ್ಟ ಪುಟ್ಟ ಮೂರು ಮರಿಗಳು ಇದ್ದವು. ತಂದೆ ತಾಯಿ ಎರಡೂ ನೋಡಲು ಒಂದೇ ರೀತಿ. ಒಂದು ಹಕ್ಕಿ ಮರಿಗಳನ್ನು ಕರೆದುಕೊಂಡು ನೀರಿನಲ್ಲಿ ಈಜುವುದನ್ನು, ಹುಲ್ಲು ಮತ್ತು ಜಲಸಸ್ಯಗಳನ್ನು ಹುಡುಕಿ ತಿನ್ನುವುದನ್ನು ಮರಿಗಳಿಗೆ ಕಲಿಸುತ್ತಿತ್ತು. ಇನ್ನೊಂದು ಹಕ್ಕಿ ಗೂಡಿನ ದುರಸ್ತಿ ಕಾರ್ಯವನ್ನು ಮಾಡುತ್ತಿತ್ತು. ಕ್ಯಾಮರಾ ಇಲ್ಲದೇ ಇದ್ದದುದರಿಂದ ಫೋಟೋ ತೆಗೆಯಲು ಸಾಧ್ಯವಾಗಲಿಲ್ಲ. ಬೈನಾಕುಲಾರ್ ನಲ್ಲೇ ಈ ಹಕ್ಕಿಯನ್ನು ಕಣ್ತುಂಬಾ ನೋಡಿ ಖುಷಿ ಪಟ್ಟೆ.
ಮನೆಗೆ ಮರಳಿದ ನಂತರ ನನ್ನ ಬಳಿ ಇದ್ದ ಹಕ್ಕಿಗಳ ಕುರಿತಾದ ಪುಸ್ತಕವನ್ನು ತೆಗೆದು ಈ ಹಕ್ಕಿಯನ್ನು ಹುಡುಕಿದೆ.. ಜೂನ್ ತಿಂಗಳಿನಿಂದ ಆಗಸ್ಟ್ ನಡುವೆ ಸಂತಾನಾಭಿವೃದ್ಧಿ ಕಾಲ ಇರುವ ಈ ಹಕ್ಕಿಯ ಮುಖ್ಯ ಆಹಾರ ಹುಲ್ಲು, ಜಲಸಸ್ಯಗಳು, ಪಾಚಿ ಮತ್ತು ಸಣ್ಣಪುಟ್ಟ ಕೀಟಗಳು. ಕೆರೆ, ಸರೋವರ ಮೊದಲಾದ ನಿಂತ ನೀರಿನ ಮೂಲಗಳೇ ಇದರ ಮುಖ್ಯ ಆವಾಸ ಸ್ಥಾನ. ಆಕಡೆ ಬಾತುಕೋಳಿಯೂ ಅಲ್ಲ, ಈಕಡೆ ನೀರುಕಾಗೆಯೂ ಅಲ್ಲದ ಆದರೆ ಎರಡರ ಗುಣಗಳನ್ನೂ ಹೊಂದಿರುವ ಈ ವಿಶಿಷ್ಟ ನೀರುಕೋಳಿಯ
ಕನ್ನಡ ಹೆಸರು: ನಾಮದ ನೀರು ಕೋಳಿ.
ಇಂಗ್ಲೀಷ್ ಹೆಸರು: Eurasian Coot
ಚಿತ್ರಗಳು : ಅಂತರ್ಜಾಲ ಕೃಪೆ
ಮುಂದಿನ ವಾರ ಇನ್ನೊಂದು ಹಕ್ಕಿಯ ಪರಿಚಯದ ಜೊತೆ ಸಿಗೋಣ, ನಮಸ್ಕಾರ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************