-->
ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

               ಬಾಹು ಬಲ ಮತ್ತು ಬುದ್ಧಿಬಲ
              -------------------------------
         ಮಕ್ಕಳೇ ನಮಸ್ಕಾರ........ ಬಾಹು ಬಲ ಮತ್ತು ಬುದ್ಧಿಬಲಗಳಲ್ಲಿ ಯಾವುದು ಜ್ಯೇಷ್ಠ ಅಥವಾ ಶ್ರೇಷ್ಠ.....? ಇದು ಉತ್ತರಿಸಲು ಬಹಳ ಜಟಿಲವಾದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸುವ ಮೊದಲು, ನಾನಾಲಿಸಿದ ಕಥೆಯನ್ನೊಮ್ಮೆ ನೀವೂ ಗಮನಿಸಿ. 
          ಅದೊಂದು ದೊಡ್ಡ ದೇಶ. ಆ ದೇಶಕ್ಕೊಬ್ಬ ರಾಜ. ಎಲ್ಲಾ ರಾಜರಿಗಿರುವಂತೆ ನಮ್ಮ ಕಥೆಯ ರಾಜನಿಗೂ ಒಬ್ಬ ಮಂತ್ರಿ ಮತ್ತು ಒಬ್ಬ ಸೇನಾಧಿಪತಿ ಇದ್ದರು. ಮಂತ್ರಿಯನ್ನು ಕಂಡರೆ ಸೇನಾಧಿಪತಿಗೆ ಸ್ವಲ್ಪ ಹೊಟ್ಟೆಹುಳ. ಹೊಟ್ಟೆ ಉರಿ ಅಥವಾ ಮತ್ಸರವೆಂದರೂ ಅಡ್ಡಿಯಿಲ್ಲ. ತನಗಿಂತ ಹೆಚ್ಚಿನ ಮನ್ನಣೆ ಮಂತ್ರಿಗೆ ಯಾಕೆ....? ದೇಶದ ರಕ್ಷಣೆ ಮಾಡುವವನು ತಾನಾಗಿರುವಾಗ, ರಾಜನು ಮಂತ್ರಿಗೆ ಯಾಕೆ ಹೆಚ್ಚಿನ ವೇತನವನ್ನು ಕೊಡುತ್ತಾನೆ......? ಮಂತ್ರಿಗಿಂತ ನಾನು ಹೆಚ್ಚೇ ಹೊರತು ಕಡಿಮೆಯಲ್ಲವಲ್ಲಾ........ ಹೀಗೆ ಹಲವು ಹುಳಗಳು ಸೇನಾಧಿಪತಿಯ ತಲೆಯೊಳಗೆ ಹೊಕ್ಕು, ಅವನ ಮನಸನ್ನು ಕೆಡಿಸಲು ತೊಡಗಿದುವು. ಒಂದು ದಿನ ಸೇನಾಧಿಪತಿಯು ರಾಜನನ್ನು ಪ್ರಶ್ನಿಸಿಯೂ ಬಿಡುತ್ತಾನೆ. ತನಗೆ ಅನ್ಯಾಯವಾಗುತ್ತಿದೆ. ಮಂತ್ರಿಗಿಂತ ತಾನೇ ಮಿಗಿಲು ಎಂಬಂತೆ ವಾದವನ್ನು ಮಂಡಿಸಿದನು. ರಾಜನು ಸುಮ್ಮನಿದ್ದನು. ಆದರೆ ಸಂದರ್ಭಗಳಿಗಾಗಿ ಕಾಯುತ್ತಿದ್ದನು.
            ಒಂದು ದಿನ ಸೇನಾಧಿಪತಿಯೊಂದಿಗೆ ರಾಜನು ನಗರಸಂಚಾರ ಮಾಡುತ್ತಿದ್ದನು. ದೂರದ ಮರದ ಕೆಳಗೆ ಅಸಂಖ್ಯ ಜನರು ಗುಂಪು ಸೇರಿದ್ದರು. ಅಷ್ಟೊಂದು ಜನ ಅಲ್ಲಿ ಯಾಕೆ ಸೇರಿದ್ದಾರೆ ಎಂದು ತಿಳಿದು ಬರಲು ಸೇನಾಧಿಪತಿಗೆ ರಾಜನು ನಿರ್ದೇಶಿಸಿದನು. ಸೇನಾಧಿಪತಿಯು ಜನರ ಗುಂಪಿನೊಳಗೆ ನುಗ್ಗಿ ಜನಸಂದಣಿ ಸೇರಿದ ಕಾರಣವನ್ನರಿತು ಮರಳಿದನು. ರಾಜನೊಂದಿಗೆ, ಅಲ್ಲೊಂದು ಬೆಕ್ಕು ಮರಿ ಹಾಕಿದೆ. ಅದನ್ನು ಜನ ಸುತ್ತುವರಿದು ನೋಡುತ್ತಿದ್ದಾರೆ ಎಂದು ಹೇಳಿದನು. ರಾಜನು ಎಷ್ಡು ಮರಿಗಳಿವೆ? ಎಂಬುದಾಗಿ ಪುನಹ ಪ್ರಶ್ನೆ ಮಾಡಿದನು. ಲೆಕ್ಕ ಮಾಡಿ ಬರುತ್ತೇನೆಂದು ಸೇನಾಧಿಪತಿಯು ಪುನಹ ಹೋಗಿ ಮರಿಗಳನ್ನು ಲೆಕ್ಕಮಾಡಿ ಮರಳಿ ಬಂದು ಐದು ಮರಿಗಳಿವೆ ಎಂದನು. ಓಹೋ ಐದು ಮರಿಗಳಿವೆಯಾ.....? ಯಾವ ಯಾವ ಬಣ್ಣಗಳ ಮರಿಗಳಿವೆ....? ಎಂದು ರಾಜನು ಮರು ಪ್ರಶ್ನೆ ಹಾಕಿದನು. ಬಣ್ಣವನ್ನು ಗಮನಿಸಲಿಲ್ಲ ನೋಡಿ ಬರುತ್ತೇನೆಂದು ಪುನಹ ಸೇನಾಧಿಪತಿಯು ಹೋಗುವನು. ಹಿಂದಿರುಗಿ ಬಂದ ಸೇನಾಪತಿಯು, ಎರಡು ಕರಿಯದು ಮತ್ತು ಮೂರು ಬಿಳಿಯ ಮರಿಗಳಿವೆ ಎಂದು ಹೇಳುವನು. ಹಾಗಾದರೆ ಗಂಡು ಎಷ್ಟು ಹೆಣ್ಣು ಎಷ್ಟು ಹೇಳುವೆಯಾ.....? ಎಂದಾಗ ಸೇನಾಧಿಪತಿಯು ಐದನೇ ಬಾರಿಗೆ ಹೋಗಿ ಲಿಂಗ ಲೆಕ್ಕ ಮಾಡಿ ಮರಳಿ ಬಂದು ಎಲ್ಲವೂ ಹೆಣ್ಣು ಮರಿಗಳೆಂದನು. 
ಅಷ್ಟರಲ್ಲಿ ಎತ್ತಲೋ ಹೋಗಿದ್ದ ಮಂತ್ರಿಯೂ ಅದೇ ದಾರಿಯಲ್ಲಿ ಬರುತ್ತಾನೆ. ರಾಜನು ಅವನಿಗೂ ದೂರದ ಮರದ ಕೆಳಗೆ ಜನರು ಸೇರಿದ್ದಾರೆ, ಯಾಕೆಂದು ತಿಳಿದು ಬನ್ನಿ ಎಂದು ಹೇಳಿದನು. ಮಂತ್ರಿಯು ಹೋಗಿ ಮರಳಿ ಬಂದು ರಾಜನೊಂದಿಗೆ, “ರಾಜನ್, ಅಲ್ಲಿರುವ ಮಾವಿನ ಮರದ ಕೆಳಗೆ ಬೆಕ್ಕೊಂದು ಐದು ಮರಿಗಳನ್ನು ಹೆತ್ತಿದೆ. ಎರಡು ಮರಿಗಳು ಕರಿಯವು. ಉಳಿದವುಗಳು ಬಿಳಿಯವು. ಎಲ್ಲವೂ ಹೆಣ್ಣು ಮರಿಗಳೇ. ಅವು ನೋಡಲು ಬಹಳ ಸುಂದರವಾಗಿವೆ. ಅವುಗಳನ್ನು ನೋಡಲು ಜನ ಸೇರಿದ್ದಾರೆ. ಆ ಮರಿಗಳನ್ನು ಅರಮನೆಗೆ ಒಯ್ದರೆ ಮಹಾರಾಣಿಗೆ ಸಂತಸವಾಗಬಹುದು” ಎಂದು ವಿವರಿಸಿದನು. ಸೇನಾಧಿಪತಿಯ ಮುಖವು ರಸಹೀನ ಗೇರು ಹಣ್ಣಿನಂತೆ ಮುದುಡಿ ಹೋಗಿತ್ತು. ರಾಜನು ಸೇನಾಧಿಪತಿಯತ್ತ ತಿರುಗಿ, “ಸೇನಾಧಿಪತಿಗಳೇ ನಿಮ್ಮ ಸಂದೇಹ ಪರಿಹಾರವಾಯಿತೇ....?” ಎಂದು ಕೇಳಿದನು. ಸೇನಾಧಿಪತಿಯು ತನ್ನ ಪೆಚ್ಚು ಮೋರೆಯನ್ನು ಅಲುಗಾಡಿಸುತ್ತಾ ಅರ್ಥವಾಯಿತೆಂಬ ಸಂದೇಶವನ್ನು ರಾಜನಿಗೆ ರವಾನಿಸಿ ಅಧೋಮುಖಿಯಾದನು.
        ಕಥೆಯಲ್ಲಿ ಕಾಣುವ ಮಂತ್ರಿಯು ಬುದ್ಧಿವಂತಿಕೆ ಅಥವಾ ವಿವೇಚನೆಯ ಸಂಕೇತ. ಅವನು ಸಮಯ ಪ್ರಜ್ಞೆ ಮತ್ತು ಸಾಮಾನ್ಯ ಜ್ಞಾನದ ಸಂಕೇತವೂ ಹೌದು. ಸೇನಾಧಿಪತಿಯಾದರೋ ಬಾಹು ಅಥವಾ ಭುಜಬಲದ ಸಂಕೇತ. ಎರಡೂ ಬಲಗಳು ಸಮಾನವೇ ಆದರೂ ವಿವೇಚನಾ ಬಲ ಅಥವಾ ಬುದ್ಧಿಯ ಬಲವು ಮಿಗಿಲೆಂದೇ ಹೇಳ ಬೇಕಾಗುತ್ತದೆ. ದೇಹ ಬಲವು ಬುದ್ಧಿಯ ಬಲದೊಂದಿಗೆ ನಿಯಂತ್ರಿತವಾಗಿರದೇ ಇದ್ದರೆ ಅಪೇಕ್ಷಿತವಾದುದು ನಡೆಯುತ್ತದೆಂದು ಹೇಳಲಾಗದು. ಯಾವುದೇ ಸಮಸ್ಯೆಗೆ ಬುದ್ಧಿಬಲದಿಂದ ಪರಿಹಾರವು ಸಾಧ್ಯವಿದೆ. ಹಾಗಾದರೆ ಭುಜ ಬಲವು ಬೇಡವೇ ಎಂಬ ಸಂದೇಹವಿದೆಯೇ? ಭುಜಬಲವೂ ಬೇಕು. ಆದರೆ ಬುದ್ಧಿ ಬಲಕ್ಕೆ ಮೊದಲ ಆಧ್ಯತೆಯಿರಬೇಕು.
ದೇಶದ ರಕ್ಷಣೆಯಲ್ಲಿ ಸೇನಾ ಬಲ ಮಹತ್ತರವೇ ಆಗಿದೆ. ಆದರೆ ಸೇನೆಯನ್ನು ಮುನ್ನಡೆಸುವ ಬುದ್ಧಿಬಲವಿದ್ದಾಗ ಮಾತ್ರವೇ ದೇಶಕ್ಕೆ ಹಿತ. ಬುದ್ಧಿಬಲವಿರದೇ ಬಾಹು ಬಲವೊಂದನ್ನೇ ಅವಲಂಬಿಸಿದರೆ ಅನಾಹುತಗಳೇ ಆಗುತ್ತವೆ ಎಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಮಾದರಿಗಳು ದೊರೆಯುತ್ತವೆ. 
          ಮಕ್ಕಳೇ, ಬುದ್ಧೀ ಬಲವನ್ನು ನಿರಂತರ ಹರಿತವಾಗಿಡಿ. ಬುದ್ಧಿಬಲದಿಂದ ದೇಶ ಕಟ್ಟುವ ಕಾಯಕದಲ್ಲಿ ತಲ್ಲೀನರಾಗಿ. ಹಾಗೆಯೇ ನಿಮ್ಮ ಬಾಹುಬಲವನ್ನೂ ವರ್ಧಿಸುತ್ತಾ ಇರಿ. ಬಾಹುಬಲ ನಿಮ್ಮ ಸಾಧನೆಗೆ ಎರಡನೇ ಮೆಟ್ಟಿಲಾಗಿರಲಿ. ಮೊದಲ ಮೆಟ್ಟಲು ವಿವೇಕ, ಬುದ್ದಿ ಅಥವಾ ಜ್ಞಾನವೇ ಆಗಿರಲಿ. ಬಾಹುಬಲ ಮತ್ತು ಬುದ್ಧಿಬಲಗಳು ಸಮನ್ವಯಗೊಂಡ ಬದುಕೇ ಸರ್ವ ಶ್ರೇಷ್ಟ. ನಮಸ್ಕಾರ
.............................ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article