
ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 31
Friday, February 18, 2022
Edit
ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 31
ಅಜಾನುಬಾಹು ದೇಹ
ಈ ಗಾನಗಂಧರ್ವ ಹಾಡಿದರೆಂದರೆ ಭಕ್ತಿ ಗಂಗೆ ಕೇಳುಗರ ಮನದಲ್ಲಿ ಉಕ್ಕಿ ಹರಿಯುವುದು. ಭಾಗ್ಯದ ಲಕ್ಷ್ಮಿ ಬಾರಮ್ಮ, ವಿಠ್ಠಲ ಮುಂತಾದ ಭಕ್ತಿಗೀತೆಗಳಿಗೆ ದೇವತೆಗಳು ಒಲಿದು ಬಂದಾರು. ತನ್ಮಯತೆಯ ಗಾನಸುಧೆ ಗೆ ನಾಸ್ತಿಕನೂ ಆಸ್ತಿಕನಾದಾನು. ಇವರ ಭಜನ್, ಅಭಂಗಗಳನ್ನು ಕೇಳಲು ಆಸ್ವಾದಿಸಲು ಎರಡು ಕಿವಿಗಳು ಸಾಲದು.
ಇವರು ಮತ್ತಾರು ಅಲ್ಲ. ಸಂಗೀತ ಕ್ಷೇತ್ರದ ಬಲಾಢ್ಯರು. ಸಂಗೀತದ ಭಕ್ತಿಯ ಸೇನೆ ಕಟ್ಟಿದವರು. ಹಿಂದೂಸ್ಥಾನಿ ಸಂಗೀತದ ಕಿರಾನಾ ಘರಾನಾ ಪರಂಪರೆಯ ಮೇರು ಕೋಗಿಲೆ. ಈ ಕಲಾವಿದ ತನ್ನ ಬಾಲ್ಯದಲ್ಲಿ ಭವಿಷ್ಯದ ಕಲಾವಿದನನ್ನು ತನ್ನ ಅಂತರಂಗದಲ್ಲಿ ತೋರಿಸಿ ಕೊಟ್ಟವನು. ಹುಟ್ಟಿದ್ದು ಗದಗದಲ್ಲಿ ಗುರುರಾಜ ಜೋಶಿ ಹಾಗೂ ರಮಾಬಾಯಿ ದಂಪತಿಗೆ. ಮುಸ್ಸಂಜೆಯ ಹೊತ್ತು ತಾಯಿ ಭಜನೆಗಳನ್ನು ನಿರಂತರವಾಗಿ ಹಾಡುತ್ತಿದ್ದಾಗ ಕೇಳುತ್ತಾ ಕೇಳುತ್ತಾ ಬಾಲಕನಿಗೆ ಸಂಗೀತದಲ್ಲಿ ಆಸಕ್ತಿ ಹುಟ್ಟಿತು. ಹಾರ್ಮೋನಿಯಂ ಮತ್ತು ತಾನ್ಪುರ ಗಳ ಕಡೆಗೆ ಒಲವುಬೆಳೆಯಿತು. ಸಂಗೀತ ಇವರ ಮೇಲೆ ಎಷ್ಟು ಜಾದೂ ಮಾಡಿತ್ತು ಎಂದರೆ, ಮನೆಯ ಪಕ್ಕದ ಗಲ್ಲಿಗಳಲ್ಲಿ ಮ್ಯೂಸಿಕ್ ಬ್ಯಾಂಡ್ ಮೆರೆವಣಿಗೆ ಸಾಗುವುದು ಗೊತ್ತಾದ ಕೂಡಲೇ ಅದರ ಹಿಂದೆ ಓಡುತ್ತಿದ್ದರು. ಮತ್ತೆ ಎಲ್ಲೆಂದರಲ್ಲಿ ಆಯಾಸದಿಂದ ನಿದ್ರೆಗೆ ಜಾರುತ್ತಿದ್ದರು. ಮಗ ಮನೆಗೆ ಬಾರದಿರುವುದನ್ನು ಕಂಡು ಹೆತ್ತವರು ಹುಡುಕಾಟ ಆರಂಭಿಸುತ್ತಿದ್ದರು. ಇದು ಪದೇಪದೇ ಪುನರಾವರ್ತಿಸಿದಾಗ ಶಿಕ್ಷಕರಾದ ತಂದೆ ಅವರ ಶರ್ಟಿನ ಮೇಲೆ ಜೋಷಿ ಮಗ ಎಂದು ಬರೆಯುತ್ತಿದ್ದರು. ತದನಂತರ ಬಾಲಕನನ್ನು ನಿದ್ರಾವಸ್ಥೆಯಲ್ಲಿ ನೋಡಿದವರು ಮನೆಗೆ ಸುರಕ್ಷಿತವಾಗಿ ನಾಜೂಕಾಗಿ ಮರಳಿಸುತ್ತಿದ್ದರು.
ಸಂಗೀತ ಆಕಾಂಕ್ಷಿಯ ಸಂಗೀತ ಯಾನ ಚನ್ನಪ್ಪ ಕುರ್ತಕೋಟಿಯವರ ಆರಂಭಿಕ ಶಿಕ್ಷಣದಿಂದ ಶುರುವಾಯಿತು. ಪಂಡಿತ್ ಶ್ಯಾಮಾಚಾರ್ಯ ಜೋಷಿ ಅವರಲ್ಲಿ ಸಂಗೀತ ಮತ್ತು ಹಾರ್ಮೋನಿಯಂ ಅಭ್ಯಾಸ ಮಾಡಲು ತೊಡಗಿದರು. ಶ್ಯಾಮ್ ಆಚಾರ್ಯರ ಸಾಹಚರ್ಯ ಬಾಲಕನ ಜೀವನದಲ್ಲಿ ಒಂದು ಮಹತ್ತರ ತಿರುವು ತಂದಿತು. ಆಚಾರ್ಯರು ಆಗಾಗ ಮುಂಬೈಗೆ ಎಚ್ ಎಂ ವಿ ಕಂಪನಿಯಲ್ಲಿ ಧ್ವನಿಮುದ್ರಣಕ್ಕೆ ಎಂದು ಹೋಗುತ್ತಿದ್ದರು. ಆಗ ತನ್ನ ಜೊತೆಗೆ ಈ ಬಾಲಕನನ್ನು ಕರೆದೊಯ್ಯುತ್ತಿದ್ದರು. ಈ ಪ್ರವಾಸ ಸಂಗೀತಾಸಕ್ತನಿಗೆ ಒಂದು ಸುವರ್ಣ ಅವಕಾಶದ ಬಾಗಿಲನ್ನು ತೆರೆಯಿತು.
ಬಾಲ್ಯದಲ್ಲಿ ಕೇಳಿದ ಅಬ್ದುಲ್ ಕರೀಂ ಖಾನರ ಪಿಯಾ ಬಿನ್ ಎಂಬ ತುಂಬ್ರಿ ಯೊಂದು ಅವರನ್ನು ಸಂಗೀತಗಾರ ನಾಗಲು ಪ್ರೇರೇಪಿಸುತ್ತಿತ್ತು. ತನ್ನ ಆಟವಾಡುವ ಹನ್ನೊಂದನೆಯ ವಯಸ್ಸಿನಲ್ಲಿ ಸಂಗೀತದ ಕನಸು ಕಾಣುತ್ತಾ ಇಡೀ ಹಿಂದೂಸ್ಥಾನವನ್ನು ಅಲೆದಾಡಲು ಆರಂಭಿಸಿದರು. ಮೊದಲು ಧಾರವಾಡದಿಂದ ಬಿಜಾಪುರಕ್ಕೆ ಗುರುಗಳಿಗಾಗಿ ಹುಡುಕಾಟ, ಶೋಧ, ಅನ್ವೇಷಣೆ ಯಲ್ಲಿ ತೊಡಗಿ ಹೋದರು. ಸಂಗೀತದ ಬಗೆಗಿನ ತೀವ್ರ ತುಡಿತ, ಹಪಹಪಿಕೆ, ಅಭಿಲಾಷೆ ಅಭೀಪ್ಸೆ, ಮಹದಾಸೆಯಿಂದ ಇಡೀ ಹಿಂದೂಸ್ಥಾನದಲ್ಲಿ ಸಂಚಾರ, ತಿರುಗಾಟ ಮಾಡಿದರು. ಅದು ಗಾನಗಂಧರ್ವ ಗಾನ ಯಾನ ವಾಗಿತ್ತು. ಅನೇಕ ನಿಲ್ದಾಣಗಳನ್ನು ದಾಟಿದ ಪಯಣ ಮಹಾರಾಜರ ಸಂಗೀತ ಶಾಲೆಗೆ ತಂದಿತು. ಮತ್ತೊಮ್ಮೆ ಪಂಜಾಬಿನ ಜಲಂಧರ್ ನಲ್ಲಿ ದ್ರುಪದ್ ಕಲಿಯಲು ಹೋಗಿದ್ದರು. ಅಲ್ಲಿ ಸಿಕ್ಕಿದ ಸಂಗೀತಾಸಕ್ತರು ಒಬ್ಬರಿಂದ ಮಾರ್ಗದರ್ಶಕರಾಗಿ ಮತ್ತೆ ತನ್ನೂರಿಗೆ ಮರಳಿ ಬಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ರನ್ನು ಗುರುವಾಗಿ ಆರಿಸಿಕೊಂಡರು. ಗುರುಶಿಷ್ಯ ಪರಂಪರೆಯ ಮೂಲಕ ಸಂಗೀತಾಭ್ಯಾಸವನ್ನು ಮಾಡುತ್ತಿದ್ದರು. ಗುರುವಿನ ಸೇವೆ ಮಾಡುತ್ತಾ ಕಲಿಯುವಂತಹ ಸಂದರ್ಭದಲ್ಲಿ ದೂರದ ಸ್ಥಳದಿಂದ ಪುಟ್ಟ ಕೊಡಗಳಲ್ಲಿ ನೀರು ತರಬೇಕಾಗಿತ್ತು. ಕುಡಿಯಲು ಒಂದು ಬಗೆಯ ನೀರು, ಇತರ ಕಾರ್ಯಗಳಿಗಾಗಿ ಮತ್ತೊಂದು ಕಡೆಯಿಂದ ನೀರು. ಆಗ ಸಂಗೀತದ ಅಭ್ಯಾಸಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಈ ಬಾಲಕ ದೊಡ್ಡ ಕೊಡಗಳಿರುತ್ತಿದ್ದರೆ ನನ್ನ ಕೆಲಸವನ್ನು ಬೇಗ ಮುಗಿಸಿ ಸಂಗೀತ ಅಭ್ಯಾಸವನ್ನು ಮಾಡಬಹುದಿತ್ತು ಎಂದು ತುಡಿಯುತ್ತಿದ್ದರಂತೆ. ಗುರುಗಳು ಮಧ್ಯರಾತ್ರಿ 11:00 ಅಥವಾ ಎರಡು ಗಂಟೆಗೆ ಕರೆದರೂ ಹಾಡಲು ಹೋಗಬೇಕಿತ್ತು....! ಅದಕ್ಕೆ ಸಮಯದ ನಿರ್ಬಂಧವಿರಲಿಲ್ಲ. ಮುಂಜಾನೆ ಭೈರವ ರಾಗ, ಮಧ್ಯಾಹ್ನ ಮುಲ್ತಾನಿ, ಸಂಜೆ ಪುರಿಯಾ ಹೀಗೆ ರಿಯಾಜ್ ಮಾಡುತ್ತಾ ಗುರುವಿನ ಗುಲಾಮನಾಗಿ ಸಂಗೀತದ ಶಿಖರವನ್ನು ಪರಮ ಆಸಕ್ತಿಯಿಂದ, ಅಮರ ಪ್ರೇಮದಿಂದ ಏರಲು ತೊಡಗಿದ ಈ ಪ್ರತಿಭೆ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ತನ್ನ ಚೊಚ್ಚಲ ಕಚೇರಿಯನ್ನು ಮರಾಠಿ, ಹಿಂದಿಯಲ್ಲಿ ಭಕ್ತಿಗೀತೆ ಹಾಡುವ ಮೂಲಕ ಮುಂಬೈಯಲ್ಲಿ ಆರಂಭಿಸಿದರು. ಅತಿ ಬೇಗನೆ ರೇಡಿಯೋ ಕಲಾವಿದರಾಗಿ ಹೊರಹೊಮ್ಮಿದರು.
ಇವರ ಶಾಸ್ತ್ರೀಯ ಹಾಡುಗಾರಿಕೆ ನಿಖರ ಸ್ವರಗಳು, ವಿಶೇಷ ಸ್ವರಾಬ್ಯಾಸಗಳು ಲಯದಲ್ಲಿನ ಅಪೂರ್ವ ನಿಯಂತ್ರಣ, ಸುದೀರ್ಘ ತಾನ್ ಗಳು, ಅಚ್ಚರಿಯ ಶ್ವಾಸ ನಿಯಂತ್ರಣ, ಪ್ರತ್ಯುತ್ಪನ್ನಮತಿತ್ವದಿಂದ, ಸಮೃದ್ಧ ಘಾತಗಳು ಹಾಗೂ ರಾಗ ಪರಿಶುದ್ಧತೆಯಿಂದಾಗಿ ಜನ ಮನಸೂರೆಗೊಳ್ಳುತ್ತಿತ್ತು. ಶುದ್ಧ ಕಲ್ಯಾಣಿ, ಭೀಮಪಲಾಸ, ದರ್ಬಾರಿ, ಅಭೋಗಿ, ಲಲಿತ್, ರಾಮ ಕಲಿ ಮುಂತಾದ ರಾಗಗಳು ಇವರ ಕಂಠದಲ್ಲಿ ಲೀಲಾಜಾಲವಾಗಿ ಮಂಜುಳ ಸುಧೆಯಂತೆ ಹರಿದು ಬರುತ್ತಿತ್ತು. ಇವರು ವಿಶಾಲ ಮನೋಭಾವವನ್ನು ತಳೆದು ಇತರ ಘರಾನಾದ ಶೈಲಿಯ ಉತ್ತಮ ಅಂಶಗಳನ್ನು ತನ್ನ ಸಂಗೀತದಲ್ಲಿ ಅಳವಡಿಸಿ ತನ್ನ ಘರಾನ ಪರಂಪರೆಯನ್ನು ಉತ್ತುಂಗಕ್ಕೆ, ಉತ್ಕೃಷ್ಟತೆಗೆ ಅಪಾರ ಪರಿಶ್ರಮ ಹಾಗೂ ಶ್ರದ್ಧೆಯಿಂದ ಒಯ್ದರು.
ಹದವಾದ ಮಿಶ್ರಣದಿಂದ ಶಾಸ್ತ್ರೀಯ ಸಂಗೀತವನ್ನು ಭಕ್ತಿ ಸಂಗೀತದೊಂದಿಗೆ ಎರಕ ಹೊಯ್ದು ತನ್ನ ಅನನ್ಯವಾದ, ವಿಶಿಷ್ಟವಾದ, ನೂತನ, ವಿನೂತನ ಶೈಲಿಯನ್ನು ರೂಪಿಸಿಕೊಂಡು ಹಿಂದಿ, ಮರಾಠಿ, ಕನ್ನಡ ಭಕ್ತಿಗೀತೆಗಳ ಮೂಲಕ ಜನಸಾಮಾನ್ಯರನ್ನು ತಲುಪಿದರು. ಶಾಸ್ತ್ರೀಯ ಸಂಗೀತದ ಮಡಿವಂತಿಕೆಯಿಂದ ದೂರವಿದ್ದ ಜನಸಮುದಾಯ ಇವರ ಸಂಗೀತಕ್ಕೆ ಕೃಷ್ಣನ ಮುರಳಿಗೆ ಮನ ಸೋತಂತೆ ಸೇರುತ್ತಿದ್ದರು. ಅವರ ಸ್ವರ ಲಯ ಮೋಡಿಗೆ ದೇಶ-ವಿದೇಶ ದ ಸಂಗೀತ ಪ್ರೇಮಿಗಳು ಭಾವಪರವಶರಾಗುತ್ತಿದ್ದರು.
ಯಾವತ್ತೂ ಅವಕಾಶಗಳು ಸಾಧಕನ ಮನೆಬಾಗಿಲನ್ನು ಹುಡುಕಿಕೊಂಡು ಬರುತ್ತವೆ. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ವಿನಂತಿ ಮೇರೆಗೆ ರಾಷ್ಟ್ರೀಯ ಭಾವೈಕ್ಯತೆಗಾಗಿ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಮಿಲೆ ಸುರ ಮೇರಾ ತುಮಾರಾ ಎಂಬ ಮಾಂತ್ರಿಕ ವಿಡಿಯೋ ಹಾಡಿಗೆ ಸ್ವರ ಸಂಯೋಜನೆ ಮಾಡುವ ಅಪೂರ್ವ ಅವಕಾಶ ಇವರಿಗೆ. ಹೀಗೆ ರಾಷ್ಟ್ರಭಕ್ತಿಯ ರಾಯಭಾರಿಯಾಗಿ ಯಶಸ್ಸನ್ನು ಕಂಡ ಭಾರತದ ಮೂಲೆ ಮೂಲೆಯನ್ನು ತೀವ್ರ ಸಂವೇದನೆಗೆ ಹಚ್ಚಿದ ಈ ಹಾಡು ಈಗಲೂ ಜನಮಾನಸದಲ್ಲಿ ರಾಷ್ಟ್ರಭಕ್ತಿಯ ತರಂಗಗಳನ್ನು ಸೃಷ್ಟಿಸುತ್ತಲೇ ಇವೆ.
ಈ ಸಂಗೀತ ಸಾಧಕ ತನ್ನ ಗುರು ಸವಾಯಿ ಗಂಧರ್ವರ ನೆನಪಿನಲ್ಲಿ ಪ್ರತಿವರ್ಷ ಸಂಗೀತೋತ್ಸವವನ್ನು ನಡೆಸುತ್ತಾ ಬಂದರು. ಈ ವಾರ್ಷಿಕ ಸಂಗೀತೋತ್ಸವ ದೇಶದ ಸಂಗೀತ ಪ್ರಿಯರನ್ನು ಅಷ್ಟೇ ಅಲ್ಲ ವಿದೇಶದ ಸಂಗೀತಾಸಕ್ತರನ್ನು ಪ್ರತಿವರ್ಷ ಆಕರ್ಷಿಸಿ, ಸೆಳೆದು ಭಾರತಕ್ಕೆತರುತ್ತಿತ್ತು. ಸಂಗೀತ ರಸಿಕರಿಗೆ ಆ ಕೂಟವು ಒಂದು ಪ್ರವಾಸಿ ಸಂದರ್ಶನದ ಆಕರ್ಷಣೆಯಾಗಿ ಉನ್ನತೀಕರಿಸಲ್ಪಟ್ಟಿತ್ತು.
ಆಸ್ಥೆಯಿಂದ, ಅರ್ತಿಯಿಂದ, ಸಾಗರದಂತ ಪ್ರೀತಿಯಿಂದ, ಸ್ವರಲಯ ಮೋಹದಿಂದ ಇವರಿಗೆ ಸಂಗೀತ ಸಾಮ್ರಾಟ ಸ್ಥಾನ ಲಭ್ಯವಾಯಿತು. ಈ ವಿಶಿಷ್ಟ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ್ ಮಾತ್ರವಲ್ಲ ಭಾರತದ ಶ್ರೇಷ್ಠ ಪ್ರಶಸ್ತಿಯಾದ ಭಾರತ ರತ್ನ ಕೂಡ ಒಲಿದುಬಂತು.
ಸಂಗೀತಾಭಿಜ್ಞ ಆದರೂ ವೈಯಕ್ತಿಕವಾಗಿ ಇವರು ಒಬ್ಬ ಸಹೃದಯ, ಸೌಜನ್ಯವಂತ ಮೃದುಭಾಷಿ. ಸಂಗೀತವನ್ನು ತಪಸ್ಸಾಗಿ ಪರಿಗಣಿಸಿ ಎಲ್ಲಾ ವರ್ಗದ ಶ್ರೋತೃಗಳಿಗೆ ರಸಪಾಕ ವಾಗಿ ಉಣಬಡಿಸುತ್ತಾ ಭವ್ಯರಸ ಸಾಮ್ರಾಜ್ಯಕ್ಕೆ ಕೊಂಡೊಯ್ಯುತ್ತಿದ್ದ ಅಪೂರ್ವ ಸಂಗೀತ ಮಾಂತ್ರಿಕ, ಗಾರುಡಿಗ. ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಎರಡು ಪ್ರಕಾರಗಳಲ್ಲಿ ಅತ್ಯಂತ ಪ್ರಶಾಂತತೆಯಿಂದ ಹಾಡಬಲ್ಲ ಸಿರಿಕಂಠದ ಸಾಮ್ರಾಟ ಮೃದು ಹಾಗೂ ತೀವ್ರ ಎರಡು ಛಾಯೆಗಳಲ್ಲಿ ಸೌಂದರ್ಯ ಪ್ರಜ್ಞೆಯನ್ನು ಪಾವಿತ್ರ್ಯವನ್ನು, ಭಾವ ಬಂಧುರತೆಯನ್ನು ವಿಸ್ತರಿಸಬಲ್ಲರು.
ಡಾಕ್ಟರ್ ನಾಗರಾಜ್ ಅವರು ಪಂಡಿತರ ಬಗ್ಗೆ ಬರೆದ ಆತ್ಮಚರಿತ್ರೆ ನಾವು-ನೀವು ಕಂಡಂತೆ ಅಪಾರ ಜನಪ್ರಿಯತೆಯನ್ನು ಗಳಿಸುವುದರೊಂದಿಗೆ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಸಾಗರದಾಚೆಯ ನಾಡಿಗೂ ಪಯಣಿಸಿ ಲಕ್ಷ-ಲಕ್ಷ ಮಂದಿ ಓದುಗರು ಅವರ ಜೀವನದ ಒಳನೋಟಗಳನ್ನು ಗ್ರಹಿಸಿಕೊಂಡು ಅಭಿಪ್ರೇರಿತರಾಗಿದ್ದಾರೆ, ಪರಿವರ್ತನೆಗೊಂಡಿದ್ದಾರೆ. ಶ್ರದ್ಧೆ, ಪರಿಶ್ರಮ, ಗುರುಭಕ್ತಿ ಸೃಜನಶೀಲತೆ, ಸಮಯ ನಿರ್ವಹಣೆ, ಸಂಕಷ್ಟ ನಿರ್ವಹಣೆ ಈ ಎಲ್ಲಾ ವಿಶೇಷ ಗುಣಗಳ ಖನಿಯಾಗಿ ಸರ್ವರಿಗೂ ಪ್ರೇರಣೆಯಾಗುವಂತೆ ಮಾದರಿ ಜೀವನವನ್ನು ಬದುಕಿದ ಭಾರತದ ತಾನಸೇನರ ಸುರ ಸ್ವರ ಸಂಪತ್ತಿಗೆ ಶರಣು ಶರಣು.
ಇಂಥವರು ನಿಮ್ಮೊಳಗಿಲ್ಲವೇ .................?
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
Mob: +91 99016 38372
*******************************************