-->
ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಜ್ಯಾಮಿತಿ ರಚನೆಗಳು : ಸಂಚಿಕೆ - 3

ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಜ್ಯಾಮಿತಿ ರಚನೆಗಳು : ಸಂಚಿಕೆ - 3

ಜ್ಯಾಮಿತಿ ರಚನೆಗಳು (GEOMETRY) ಸಂಚಿಕೆ - 3

                ಡ್ರಾಯಿಂಗ್ ಗ್ರೇಡ್ ಪರೀಕ್ಷೆ
           ಜ್ಯಾಮಿತಿ ರಚನೆಗಳು - ಸಂಚಿಕೆ - 3
    ------------------------------------------

     ವಿದ್ಯಾರ್ಥಿಗಳೇ,...... ಕಳೆದೆರಡು ಸಂಚಿಕೆಯಲ್ಲಿ ಕೊಟ್ಟಿರುವ ಜ್ಯಾಮಿತಿ ರಚನೆಗಳು ಲೋವರ್ ಮತ್ತು ಹೈಯರ್ ಗ್ರೇಡ್ ನ ಎರಡೂ ವಿಭಾಗಗಳಿಗೆ ಸಂಬಂಧ ಪಟ್ಟಿರುವಂತಹ ವುಗಳಾಗಿತ್ತು. ಅವುಗಳ ಆಧಾರದಲ್ಲಿಯೇ ಮುಂದಿನ ರಚನೆಗಳು ಇರುತ್ತವೆ. ಈ ಸಂಚಿಕೆಯಿಂದ ಬೇರೆ ಬೇರೆಯಾಗಿ ಕೊಡುತ್ತಿದ್ದೇವೆ. ಪ್ರೀತಿಯಿಂದ ಕಲಿಯುತ್ತೀರಲ್ಲಾ…

ಲೋವರ್ ಗ್ರೇಡ್ 
ಪ್ರಶ್ನೆ - 1) ಪಾದ 6 ಸೆಂ. ಮೀ. ಹಾಗೂ ಎರಡು ಬಾಹುಗಳು 8 ಸೆಂ. ಮೀ. ಅಳತೆಯುಳ್ಳ ಒಂದು ಸಮಬಾಹು ತ್ರಿಭುಜ ರಚಿಸಿರಿ.
         ವಿಧಾನ: ಮೊದಲು 6 ಸೆಂ. ಮೀ. ಅಳತೆಯ B C ಸರಳರೇಖೆಯನ್ನು ಎಳೆಯಿರಿ. ಈಗ ಕೈವಾರದಲ್ಲಿ 8 ಸೆಂ. ಮೀ. ತ್ರಿಜ್ಯ ತೆಗೆದುಕೊಂಡು ಕ್ರಮವಾಗಿ B ಮತ್ತು C ಬಿಂದುಗಳನ್ನು ಕೇಂದ್ರವಾಗಿಟ್ಟುಕೊಂಡು ಮೇಲ್ಬದಿಯಲ್ಲಿ ಎರಡು ಕಂಸಗಳು ಪರಸ್ಪರ ಅರ್ಧಿಸುವಂತೆ ಎಳೆಯಿರಿ. ಆ ಬಿಂದುವಿಗೆ ‘A’ ಎಂದು ಹೆಸರಿಸಿ. AB ಮತ್ತು AC ಗಳನ್ನು ಸೇರಿಸಿರಿ.
.....................................................

ಲೋವರ್ ಗ್ರೇಡ್ 
ಪ್ರಶ್ನೆ - 2) 120 ಡಿಗ್ರಿಯ ಒಂದು ಕೋನವನ್ನು ರಚಿಸಿ, ಅದನ್ನು 4 ಸಮಭಾಗಗಳನ್ನಾಗಿ ಮಾಡಿರಿ.
         ವಿಧಾನ: BC ಸರಳ ರೇಖೆಯನ್ನು ಎಳೆಯಿರಿ. B ಬಿಂದುವನ್ನು ಕೇಂದ್ರವಾಗಿರಿಸಿ ಯಾವುದಾದರೂ ತ್ರಿಜ್ಯದಿಂದ BC ಮೇಲೆ ಒಂದು ಕಂಸವನ್ನು ಎಳೆಯಿರಿ. ಆ ಕಂಸವು BC ಸರಳ ರೇಖೆಯ ಸಂಧಿಸುವಲ್ಲಿ X ಎಂದು ಹೆಸರಿಸಿ. X ಬಿಂದುವನ್ನು ಕೇಂದ್ರವಾಗಿರಿಸಿ ಅದೇ ತ್ರಿಜ್ಯದಿಂದ ಮೊದಲಿನ ಕಂಸವನ್ನು ಅರ್ಧಿಸಿರಿ. ಆ ಬಿಂದುವಿಗೆ Y ಎಂದು ಹೆಸರಿಸಿ. Y ಬಿಂದುವನ್ನು ಕೇಂದ್ರವಾಗಿರಿಸಿ ಮತ್ತೆ ಅದೇ ತ್ರಿಜ್ಯದಿಂದ ಮತ್ತೊಮ್ಮೆ ಕಂಸವನ್ನು ಅರ್ಧಿಸಿರಿ. ಆ ಬಿಂದುವಿಗೆ Z ಎಂದು ಹೆಸರಿಸಿ. ಈಗ BZ ಬಿಂದುಗಳನ್ನು ಸೇರಿಸಿ ಮುಂದುವರಿಸಿ A ಬಿಂದುವನ್ನು ಗುರುತಿಸಿದರೆ ABC 120 ಡಿಗ್ರಿಯ ಕೋನವು ದೊರಕುತ್ತದೆ. BY ಬಿಂದುಗಳನ್ನು ಸೇರಿಸಿ ಮುಂದುವರಿಸಿ N ಬಿಂದುವನ್ನು ಗುರುತಿಸಿದರೆ ಕೋನ ABCಗೆ ಕೋನಾರ್ಧರೇಖೆಯಾಗುತ್ತದೆ. ಕೋನ ABN ಮತ್ತು ಕೋನ NBCಗಳಿಗೂ ಕ್ರಮವಾಗಿ ಕೋನಾರ್ಧ ರೇಖೆಗಳನ್ನು ರಚಿಸಿದಾಗ 120 ಡಿಗ್ರಿ ಯ ABC ಕೋನವು ಸಮವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಡುತ್ತದೆ.
.....................................................



ಲೋವರ್ ಗ್ರೇಡ್ 
ಪ್ರಶ್ನೆ - 3) 8 ಸೆಂ. ಮೀ. ಅಳತೆಯುಳ್ಳ ಒಂದು ಚೌಕ ರಚಿಸಿರಿ.
      ವಿಧಾನ: 8ಸೆಂ. ಮೀ. ಕ್ಕಿಂತ ದೊಡ್ಡ ಅಳತೆಯ P Q ಸರಳ ರೇಖೆಯನ್ನು ಎಳೆಯಿರಿ. ಒಂದು ಬದಿಯಲ್ಲಿ ’A’ ಬಿಂದು ಗುರುತಿಸಿಕೊಂಡು, ಆ ಬಿಂದುವಿನಿಂದ PQ ರೇಖೆಗೆ ಲಂಬ ರೇಖೆ AMನ್ನು ರಚಿಸಿರಿ. ಈಗ ಕೈವಾರದಲ್ಲಿ 8 ಸೆಂ. ಮೀ. ತ್ರಿಜ್ಯ ತೆಗೆದುಕೊಂಡು A ಬಿಂದುವನ್ನು ಕೇಂದ್ರವಾಗಿರಿಸಿ AQ ಹಾಗೂ AM ರೇಖೆಗಳನ್ನು ಜೋಡಿಸುವಂತೆ ಒಂದು ಕಂಸವನ್ನು ಎಳೆದು ಆ ಕಂಸಗಳು ಸಂಧಿಸುವ ಬಿಂದುಗಳಿಗೆ B ಹಾಗೂ C ಎಂದು ಹೆಸರಿಸಿ. ಅದೇ ತ್ರಿಜ್ಯದಿಂದ ಕ್ರಮವಾಗಿ B ಮತ್ತು C ಬಿಂದುವನ್ನು ಕೇಂದ್ರವಾಗಿರಿಸಿ ಒಂದಕ್ಕೊಂದು ಅರ್ಧಿಸುವಂತೆ ಇನ್ನೆರಡು ಕಂಸಗಳನ್ನು ಎಳೆಯಿರಿ. ಆ ಬಿಂದುವಿಗೆ “D’ ಎಂದು ಹೆಸರಿಸಿ. ಈಗ C D ಮತ್ತು B D ಬಿಂದುಗಳನ್ನು ಸೇರಿಸಿದರೆ ABCD ಚೌಕ ಸಿದ್ಧವಾಗುತ್ತದೆ.
.....................................................


ಹೈಯರ್ ಗ್ರೇಡ್ 
ಪ್ರಶ್ನೆ -1) 8 ಸೆಂ. ಮೀ. ಹಾಗೂ 5 ಸೆಂ. ಮೀ. ಅಗಲವುಳ್ಳ ಒಂದು ಆಯತ ರಚಿಸಿರಿ.
ವಿಧಾನ: ಇದರ ಅರ್ಧ ರಚನೆ ಚೌಕದಂತೆಯೇ ಇದೆ. 8ಸೆಂ. ಮೀ. ಕ್ಕಿಂತ ದೊಡ್ಡ ಅಳತೆಯ M N ಸರಳ ರೇಖೆಯನ್ನು ಎಳೆಯಿರಿ. MN ಸರಳ ರೇಖೆಯ ಮೇಲೆ ಅಳತೆ ಪಟ್ಟಿಯ ಸಹಾಯದಿಂದ 8 ಸೆಂ. ಮೀ. ಅಂತರದಲ್ಲಿ AB ಬಿಂದುಗಳನ್ನು ಗುರುತಿಸಿಕೊಳ್ಳಿರಿ. A ಮತ್ತು B ಬಿಂದುಗಳಿಂದ MN ರೇಖೆಗೆ ಲಂಬ ರೇಖೆ AO B P ಗಳನ್ನು ರಚಿಸಿರಿ. ಈಗ ಕೈವಾರದಲ್ಲಿ 5 ಸೆಂ. ಮೀ. ತ್ರಿಜ್ಯ ತೆಗೆದುಕೊಂಡು ಕ್ರಮವಾಗಿ A ಮತ್ತು B ಬಿಂದುಗಳನ್ನು ಕೇಂದ್ರವಾಗಿರಿಸಿ AO ಹಾಗೂ BP ಲಂಬ ರೇಖೆಗಳ ಮೇಲೆ ಕಂಸವನ್ನು ಎಳೆದು ಆ ಕಂಸಗಳು ಸಂಧಿಸುವ ಬಿಂದುಗಳಿಗೆ C ಹಾಗೂ D ಎಂದು ಹೆಸರಿಸಿ. ಈಗ C D ಬಿಂದುಗಳನ್ನು ಸೇರಿಸಿದರೆ ABCD ಆಯತ ಸಿಗುತ್ತದೆ.
.....................................................


ಹೈಯರ್ ಗ್ರೇಡ್ 
ಪ್ರಶ್ನೆ - 2 ) 4 ಸೆಂ. ಮೀ. ತ್ರಿಜ್ಯವುಳ್ಳ ವೃತ್ತದೊಳಗೆ ಒಂದು ಪಂಚಭುಜಾಕೃತಿ ರಚಿಸಿರಿ.
       ವಿಧಾನ: ಮೊದಲು 4ಸೆಂ. ಮೀ. ತ್ರಿಜ್ಯದ ವೃತ್ತವೊಂದನ್ನು ರಚಿಸಿರಿ. ಆ ವೃತ್ತದ ವ್ಯಾಸವನ್ನು ಎಳೆಯಿರಿ (AQ). ವ್ಯಾಸ AQ ವನ್ನು ಐದು ಸಮಭಾಗಗಳನ್ನಾಗಿ ವಿಭಾಗಿಸಿರಿ ( ಸರಳ ರೇಖೆಯೊಂದನ್ನು ಐದು ಸಮಭಾಗಗಳನ್ನಾಗಿ ಮಾಡುವ ವಿಧಾನವನ್ನು ಈ ಹಿಂದೆ ನೀಡಲಾಗಿದೆ). ಕೈವಾರದಲ್ಲಿ AQ ತ್ರಿಜ್ಯ ತೆಗೆದುಕೊಂಡು A ಹಾಗೂ Q ಬಿಂದುಗಳನ್ನು ಕೇಂದ್ರೀಕರಿಸಿ ಎರಡು ಕಂಸಗಳನ್ನು ಎಳೆಯಿರಿ. ಅದು ಸೇರುವ ಬಿಂದುವಿಗೆ ‘P’ ಎಂದು ಹೆಸರಿಸಿ. P ಬಿಂದುವಿನಿಂದ ವ್ಯಾಸದ 2 ನೇ ಭಾಗದ ಮೂಲಕ ವೃತ್ತದ ಪರಿಧಿಯನ್ನು ಹಾದು ಹೋಗುವಂತೆ ಒಂದು ರೇಖೆಯನ್ನು ಎಳೆಯಿರಿ. ಅದು B ಎಂದಿರಲಿ. ಈಗ AB ತ್ರಿಜ್ಯ ಪಡೆದು B ಬಿಂದುವನ್ನು ಕೇಂದ್ರೀಕರಿಸಿ ಪರಿಧಿಯ ಮೇಲೊಂದು ಕಂಸ ಎಳೆಯಿರಿ. ಇದೇ ತರಹದಲ್ಲಿ C D E ಬಿಂದುಗಳನ್ನು ಗುರುತಿಸಿಕೊಳ್ಳಿ. ABCDE ಬಿಂದುಗಳನ್ನು ಸೇರಿಸಿ.
.....................................................

ಹೈಯರ್ ಗ್ರೇಡ್ 
ಪ್ರಶ್ನೆ - 3) 5 ಸೆಂ. ಮೀ. ಭುಜವುಳ್ಳ ಒಂದು ಪಂಚಭುಜಾಕೃತಿ ರಚಿಸಿರಿ.
        ವಿಧಾನ: ಗಮನಿಸಿ ವಿದ್ಯಾರ್ಥಿಗಳೇ, ಇಲ್ಲಿ ಪಂಚಭುಜಾಕೃತಿಯ ಒಂದು ಭುಜದ ಅಳತೆಯಿದೆ. ಆದ್ದರಿಂದ ಇದು ಸ್ವಲ್ಪ ಕಷ್ಟವೆನಿಸಬಹುದು. ಆದರೆ ಗಮನವಿಟ್ಟು ಮಾಡಿದರೆ ಯಾವುದೂ ಕಷ್ಟ ಅಲ್ಲ ಬಿಡಿ.
ಮೊದಲು ಒಂದು XY ಸರಳ ರೇಖೆಯನ್ನು ಎಳೆಯಿರಿ. ಅದರ ಮೇಲೆ A ಮತ್ತು B ಬಿಂದುಗಳನ್ನು 5 ಸೆಂ. ಮೀ. ಅಂತರದಲ್ಲಿ ಗುರುತಿಸಿಕೊಳ್ಳಿ. A B ಯನ್ನು ದ್ವಿಭಾಗಿಸಿ ’O’ ಬಿಂದುವಿನಲ್ಲಿ PQ ಲಂಬ ರೇಖೆಯನ್ನು ಎಳೆಯಿರಿ. ಆ ಲಂಬ ರೇಖೆಯಿಂದ B ಬಿಂದುವಿಗೆ ಒಂದು ಸಮಾಂತರ ರೇಖೆ BRನ್ನು ಎಳೆಯಿರಿ (ಅಥವಾ B ಬಿಂದುವಿಗೆ ಲಂಬ ರೇಖೆಯನ್ನೂ ಎಳೆಯಬಹುದು). A B ತ್ರಿಜ್ಯದಿಂದ B ಬಿಂದುವನ್ನು ಕೇಂದ್ರವಾಗಿಟ್ಟು B R ಲಂಬದ ಮೇಲೆ ಒಂದು ಕಂಸವನ್ನು ಎಳೆಯಿರಿ. ಅದು ಸಂಧಿಸುವ ಬಿಂದುವಿಗೆ ‘S’ ಎಂದು ಹೆಸರಿಸಿ. ಈಗ OS ತ್ರಿಜ್ಯ ಪಡೆದು ’O’ ಬಿಂದುವಿನಿಂದ XY ರೇಖೆಯ ಮೇಲೊಂದು ಕಂಸ ಎಳೆಯಿರಿ. ಆ ಬಿಂದುವಿಗೆ ‘T’ ಎಂದು ಹೆಸರಿಸಿ. AT ತ್ರಿಜ್ಯ ಪಡೆದು ’A’ ಬಿಂದುವಿನಿಂದ PQ ಲಂಬ ರೇಖೆಯ ಮೇಲೊಂದು ಕಂಸ ಎಳೆಯಿರಿ. ಈ ಕಂಸವನ್ನು ‘S’ ಬಿಂದುವಿನಿಂದ ಮುಂದುವರೆದ ಕಂಸ ಸೇರುವಲ್ಲಿ ‘C’ ಎಂದು ಹೆಸರಿಸಿ. BD ತ್ರಿಜ್ಯ ಪಡೆದು ’B’ ಬಿಂದುವಿನಿಂದ PQ ಲಂಬ ರೇಖೆಯ ಮೇಲೆ ಇನ್ನೊಂದು ಕಂಸ ಎಳೆಯಿರಿ. AB ತ್ರಿಜ್ಯ ಪಡೆದು ’A’ ಬಿಂದುವಿನಿಂದ ಈ ಮೊದಲು ಎಳೆದ ಕಂಸವನ್ನು ಅರ್ಧಿಸುವಂತೆ ಮತ್ತೊಂದು ಕಂಸವನ್ನು ಎಳೆಯಿರಿ. ಅದು ’E’ ಎಂದಿರಲಿ. ಇಲ್ಲಿಗೆ ನಿಮ್ಮ ಕೆಲಸ ಮುಗಿದಂತೆ. ಈಗ ABCDEಬಿಂದುಗಳನ್ನು ಸೇರಿಸುತ್ತಾ ಬನ್ನಿ. 5 ಸೆಂ. ಮೀ. ಭುಜಗಳುಳ್ಳ ಪಂಚಭುಜಾಕೃತಿ ತಯಾರು. 
ಗಮನಿಸಿ: ವಿಧಾನದ ಕ್ರಮಾನುಸಾರವಾಗಿ ಬಣ್ಣಗಳ ಪಟ್ಟಿಯನ್ನು ಬದಿಯಲ್ಲಿ ಕೊಡಲಾಗಿದೆ. 
..........……….ಮುಂದುವರೆಯುತ್ತದೆ
........................................ಭಾಸ್ಕರ್ ನೆಲ್ಯಾಡಿ 
ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕರು 
ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ , 
ಕಲ್ಲಬೆಟ್ಟು ,  ಮೂಡಬಿದ್ರೆ 
 ದಕ್ಷಿಣ ಕನ್ನಡ ಜಿಲ್ಲೆ
+91 99011 14843
********************************************



Ads on article

Advertise in articles 1

advertising articles 2

Advertise under the article