-->
ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು


                     ನಮ್ಮ ಶಕ್ತಿ ಎಲ್ಲಿದೆ....?
                  --------------------------
      ಪುರಾಣ ಅಥವಾ ಭಾಗವತ ಓದಿದವರಿಗೆ ಹಿರಣ್ಯ ಕಶಿಪು ಮತ್ತು ಕಯಾದು ಇವರ ಪುತ್ರ ಪ್ರಹ್ಲಾದನ ಬಗ್ಗೆ ಗೊತ್ತಿದೆ. ಭಾಗವತವು ಭಗವಂತನ ಮಹಿಮೆಯನ್ನು ವ್ಯಾಖ್ಯಾನ ಮಾಡುವ ಸತ್ಯ ಕಥೆಗಳ ಮಹಾ ಕೋಶ. ಹಿರಣ್ಯಕಶಿಪು ರಾಕ್ಷಸನೂ ಹರಿ ವಿರೋಧಿಯೂ ಆಗಿದ್ದನು. ಕಯಾದು ಮಹಾವಿಷ್ಣುವಿನ ಅನನ್ಯ ಭಕ್ತೆ. ಪ್ರಹ್ಲಾದನೂ ತಾಯಿಯಂತೆ ಹರಿಭಕ್ತ. ಪ್ರಹ್ಲಾದನನ್ನು ರಾಕ್ಷಸರ ಗುರು ಶುಕ್ರಾಚಾರ್ಯರಲ್ಲಿ ಶಿಕ್ಷಣ ಪಡೆಯಲು ಕಳುಹಿಸಲಾಗುತ್ತದೆ. ಕಲಿಯುವುದರಲ್ಲಿ ಮಹಾ ನಿಪುಣ ನಾಗಿದ್ದ ಪ್ರಹ್ಲಾದನು ಹರಿ ಭಕ್ತನಾಗಿ ಬೆಳೆಯುತ್ತಿದ್ದಾನೆ ಎಂಬುದನ್ನು ಗುರುತಿಸಿದ ಶುಕ್ರಾಚಾರ್ಯರು ಅವನನ್ನು ಹಿರಣ್ಯಕಶಿಪುವಿಗೆ ಮರಳಿಸಿ ಆತ ರಾಕ್ಷಸ ಕುಲ ವಿರೋಧಿ ಮತ್ತು ಮಹಾ ಹರಿ ಭಕ್ತ ಎಂದನು. ಕೋಪೋದ್ರಿಕ್ತನಾದ ಹಿರಣ್ಯ ಕಶಿಪು ತನ್ನ ಮಗನ ಹರಿಭಕ್ತಿಯನ್ನು ನಾಶಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾನೆ. ಕೊಡಬಾರದ ಶಿಕ್ಷೆಗಳನ್ನು ಕೊಡುತ್ತಾನೆ. ಆದರೆ ಪ್ರಹ್ಲಾದನ ಹರಿ ಭಕ್ತಿಯು ಒಂದಿನಿತೂ ಕುಂದುವುದಿಲ್ಲ. ಸೃಷ್ಟಿಯಲ್ಲಿ ಹರಿಯೆಂಬವನೇ ಇಲ್ಲ. ಎಲ್ಲಿದ್ದಾನೆ ನಿನ್ನ ಹರಿ? ತೋರಿಸು ನನಗೆ ಎಂದಾಗ ಪ್ರಹ್ಲಾದನು; ಹರಿ ಸರ್ವ ವ್ಯಾಪಕ, ಅಣು ರೇಣು ತೃಣ ಕಾಷ್ಟ ಎಲ್ಲೆಂದರಲ್ಲಿ ಹರಿಯಿರುವನು ಎಂದೆನ್ನುವನು. “ಈ ಕಂಬದಲ್ಲಿ ನಿನ್ನ ಹರಿಯಿರುವನೇ?” ಎಂದು ಹಿರಣ್ಯಕಶಿಪುವು ಆರ್ಭಟಿಸುತ್ತಾನೆ. ಪ್ರಹ್ಲಾದ ಸ್ವಲ್ಪವೂ ವಿಷಚಲಿತನಾಗದೇ ವಿಶ್ವಾಸದಿಂದಲೇ, “ಹೌದು ಆ ಕಂಬದಲ್ಲಿಯೂ ಹರಿಯಿರುವನು” ಎಂದನು. ಹಿರಣ್ಯಕಶಿಪು ಆ ಕಂಬಕ್ಕೆ ಬಲವಾಗಿ ಹೊಡೆಯುತ್ತಾನೆ, ಕಂಬ ಇಬ್ಭಾಗವಾಗುತ್ತದೆ. ಹರಿ ನರಸಿಂಹನ ರೂಪದಲ್ಲಿ ಹೊರ ಬರುತ್ತಾನೆ. ಪ್ರಹ್ಲಾದನಿಗಿದ್ದ ಹರಿಯ ಮೇಲಿನ ವಿಶ್ವಾಸ ನೂರ್ಮಡಿಯಾಗುತ್ತದೆ. ತನ್ನ ವಿಶ್ವಾಸವು ಗೆದ್ದಿತಲ್ಲಾ ಎಂದು ಸಂತಸ ಪಡುತ್ತಾನೆ.
ತಾನು ನಂಬಿದ ದೇವನೆಲ್ಲಿರುವನೆಂದು ಖಂಡ ತುಂಡವಾಗಿ ಹೇಳುವ ಶಕ್ತಿ ಪ್ರಹ್ಲಾದನಿಗೆಲ್ಲಿಂದ ಒದಗಿತು. ತನ್ನ ಅಪ್ಪನ ಜೊತಗೆಯೇ ಪಣವೊಡ್ಡಿ ಅಸಾಮಾನ್ಯ ಹರಿಯ ಇರವನ್ನು ಹೇಳುವ ಅಮೋಘವಾದ ಶಕ್ತಿ ಪ್ರಹ್ಲಾದನಿಗೆ ಹೇಗೆ ಒದಗಿತು? ಪ್ರಹ್ಲಾದನ ಗೆಲುವಿನ ಶಕ್ತಿಯಾದರೂ ಯಾವುದದು? ಪ್ರಹ್ಲಾದನ ಆ ಶಕ್ತಿಯೇ ಆತನಿಗೆ ತನ್ನ ಮಾತಿನ ಮೇಲೆ ಇದ್ದ ಬಲಶಾಲಿಯಾದ ವಿಶ್ವಾಸ, ತನ್ನ ಯೋಚನೆಯ ಮೇಲೆ ಆತನಿಗಿದ್ದ ನಂಬುಗೆ ಮತ್ತು ಅದಮ್ಯ ಖಚಿತತೆ. ನಾವು ಹೇಳುವ ಮತ್ತು ಮಾಡುವ ಕಾರ್ಯದ ಮೇಲೆ ದೃಢ ವಿಶ್ವಾಸವಿದ್ದಾಗ ಆ ಕಾರ್ಯವು ಫಲಕೊಡುತ್ತದೆ. ಕೆಲವೊಮ್ಮೆ ನಮ್ಮ ವಿಶ್ವಾಸದಂತೆ ಕೆಲಸ ಕೈಗೂಡದೆಯೂ ಇರಬಹುದು. ಆದರೆ ತಾಳ್ಮೆಯಿಂದ ಸಕಾರಾತ್ಮಕವಾದುದೇ ಘಟಿಸುತ್ತದೆ ಎಂಬ ವಿಶ್ವಾಸವನ್ನು ಹೊಂದಿರಲೇ ಬೇಕು. ನಮ್ಮ ಯಶಸ್ಸಿನ ಗುಟ್ಟು ದೇವರ ದಯೆಯೇ ಆದರೂ ಅವಿರತ ಪ್ರಯತ್ನ, ಅನನ್ಯವಿಶ್ವಾಸ, ಅವಿಚಲಿತ ಸಂಕಲ್ಪ ಶಕ್ತಿಯೇ ನಮ್ಮ ಸಾಧನೆಯ ಮುಕುಟವಾಗುತ್ತದೆ.
          ಬೀಜ ಬಿತ್ತಿದೊಡನೆ ಫಲ ಬಾರದು, ಮೊಳಕೆಯೊಡೆಯಬೇಕು ನೀರು ಗೊಬ್ಬರ ಜೋಡಿಸ ಬೇಕು, ದಿಢೀರನೇ ಫಲ ಬರಲೆಂದು ಲೋಡು ಲೋಡು ಗೊಬ್ಬರ, ಕಡಾಯಿ ಕಡಾಯಿ ನೀರು ಹಾಕಿದರೆ ಬೀಜವೇ ಕೊಳೆಯುತ್ತದೆ. ಇನ್ನು ಗಿಡವೆಲ್ಲಿ? ಫಲವೆಲ್ಲಿ? ನಿಧಾನವೇ ಪ್ರಧಾನ. ಅಲ್ಲವೇ? ಫಲಕ್ಕಾಗಿ ಕಾಯಬೇಕು, ಕಾಯುವ ತಾಳ್ಮೆ ಬೇಕು, ಫಲ ಒದಗುತ್ತದೆಂಬ ವಿಶ್ವಾಸ ಬೇಕು. “ಕರ್ಮಣ್ಯೇ ವಾಧಿಕಾರಸ್ಥೇ, ಮಾ ಫಲೇಷು ಕದಾಚನ” ಎಂದು ಗೀತೆ ಸಾರುತ್ತದೆ. ಫಲವನ್ನು ಭಗವಂತ ಕೊಡುತ್ತಾನೆಂಬ ವಿಶ್ವಾಸದಿಂದ ಸಾಗೋಣ. ನಮ್ಮ ಆತ್ವಿಶ್ವಾಸವನ್ನು ಘಾತಿಗೊಳಿಸುವವರೂ ಇದ್ದಾರೆ. ಆದರೆ ನಮ್ಮ ಶಕ್ತಿಯ ಬಗ್ಗೆ ಸಂಶಯ ಬೇಡ ಮಕ್ಕಳೇ. ಕಾರ್ಯ ಬದ್ಧರಾದರೆ, ಕ್ರಿಯಾಶಾಲಿಗಳಾದರೆ ಗೆಲುವು ಖಂಡಿತವಾಗಿಯೂ ನಮ್ಮದು. ಆತ್ಮವಿಶ್ವಾಸವನ್ನೇ ಮನೋಬಲ ಎಂದೂ ಹೇಳುತ್ತೇವೆ. ಬಾಹುಬಲ, ಬುದ್ಧಿಬಲ, ದೇಹಬಲ.... ಹೀಗೇ ದೈಹಿಕವಾದ ಬೇರೆ ಬೇರೆ ಬಲಗಳಿವೆ. ಈ ಬಲಗಳಲ್ಲಿ ಆತ್ಮ ಬಲವೇ ಪ್ರಮುಖವಾದುದು. ಆತ್ಮಬಲವನ್ನೇ ಆತ್ಮ ವಿಶ್ವಾಸ ಎಂದಿರುವುದು. ನಮ್ಮ ಎಲ್ಲ ಬಲಗಳನ್ನೂ ಪ್ರಬಲಗೊಳಿಸುವ ಶಕ್ತಿಯೇ ಆತ್ಮವಿಶ್ವಾಸ
.............................ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************


Ads on article

Advertise in articles 1

advertising articles 2

Advertise under the article