-->
ಜೀವನ ಸಂಭ್ರಮ : ಸಂಚಿಕೆ - 22

ಜೀವನ ಸಂಭ್ರಮ : ಸಂಚಿಕೆ - 22



                         ನಮ್ಮ ಸಂವಿಧಾನ 
                     -----------------------
           ಮಕ್ಕಳೇ , ನಾವು ಗಣರಾಜ್ಯೋತ್ಸವ ಹಬ್ಬವನ್ನು ಆಚರಣೆ ಮಾಡುತ್ತೇವೆ. ಇದನ್ನು ನಾವು ಪ್ರತಿವರ್ಷ ಜನವರಿ 26ರಂದು ಆಚರಣೆ ಮಾಡುತ್ತೇವೆ. ಇದರ ಉದ್ದೇಶ ನಮ್ಮ ಭಾರತದ ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಣೆ ಮಾಡುತ್ತೇವೆ. ನಾನು ಆರ್ ಟಿ ಇ ತರಬೇತಿಗೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿಗೆ ಹೋಗಿದ್ದಾಗ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಬಂದಿದ್ದ ಹೈಕೋರ್ಟ್ ಗೌರವಾನ್ವಿತ ನ್ಯಾಯಮೂರ್ತಿಗಳಾದ ನಾಗಮೋಹನದಾಸ್ ಅವರು ಹೇಳಿದ್ದು "ಎಲ್ಲಾ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳು ಗಣರಾಜ್ಯಗಳಲ್ಲ, ಆದರೆ ಎಲ್ಲಾ ಗಣರಾಜ್ಯಗಳು ಪ್ರಜಾಪ್ರಭುತ್ವ ರಾಷ್ಟ್ರಗಳು ಆಗಿವೆ. ಹಾಗೆಯೇ ಭಾರತ ಗಣರಾಜ್ಯವನ್ನು ಹೊಂದಿರುವ ಪ್ರಜಾಪ್ರಭುತ್ವ ದೇಶವಾಗಿದೆ."
           ಹಾಗಾದರೆ ಸಂವಿಧಾನ ಎಂದರೇನು?. ನಾವೆಲ್ಲ ಕೇಳಿರುತ್ತೇವೆ ಇದು ಕಾನೂನು ಪುಸ್ತಕ. ವಕೀಲರ ಪುಸ್ತಕ ಎಂದು. ಎಲ್ಲಾ ಕಾನೂನು ಪುಸ್ತಕಗಳು ಸಂವಿಧಾನಗಳಲ್ಲ. ಮಕ್ಕಳೇ ನಿಮಗೆ ಸುಲಭವಾಗಿ ಅರ್ಥೈಸಲು ನಾನು ಅಂದುಕೊಂಡಿದ್ದು ಹೀಗೆ. ಸಂವಿಧಾನ ಎಂದರೆ ಪ್ರತಿಯೊಬ್ಬ ವ್ಯಕ್ತಿ ಸುಂದರವಾಗಿ, ಸಂತೋಷವಾಗಿ ಜೀವಿಸಲು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಹಾಗೆಯೇ ಪ್ರತಿಯೊಬ್ಬ ವ್ಯಕ್ತಿ ಸುಂದರವಾಗಿ ಸಂತೋಷವಾಗಿರಲು ಸಮಾಜ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಿಯಮಗಳನ್ನಾಗಿ ಮಾಡಿಕೊಂಡಿರುವ ಕಾನೂನು ಪುಸ್ತಕ.
            ಭಾರತದ ಸಂವಿಧಾನದಲ್ಲಿ ಒಂದು ವಾಕ್ಯ ಇದೆ "ಎಲ್ಲರೂ ಕಾನೂನಿನ ಮುಂದೆ ಸಮಾನರು" ಬಡವರಾಗಲಿ, ಶ್ರೀಮಂತರಾಗಲಿ, ಅಧಿಕಾರಿಯಾಗಲಿ , ರಾಷ್ಟ್ರಪತಿ ಆಗಲಿ, ಪ್ರಧಾನಿಯಾಗಲಿ , ಮುಖ್ಯಮಂತ್ರಿಯಾಗಲಿ ಕಾನೂನಿನ ಮುಂದೆ ಸಮಾನರು. ಸಮಾನತೆ ಎಂದಾಗ ರಾಜಕೀಯ ಸಮಾನತೆ , ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ಸಮಾನತೆ ಮುಖ್ಯ. ಹಾಗಾದರೆ ಎಲ್ಲರಿಗೂ ರಾಜಕೀಯ , ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಗಳು ದೊರೆತಿದೆಯೇ ಎಂದು ಪ್ರಶ್ನಿಸಿದರೆ, ಸಾಧಾರಣವಾಗಿ ರಾಜಕೀಯ ಸಮಾನತೆ ಬಂದಿದೆ. ಆದರೆ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ಸಮಾನತೆ ಇನ್ನೂ ಪೂರ್ಣಪ್ರಮಾಣದಲ್ಲಿ ಇಲ್ಲ. ನಮ್ಮ ಸಂವಿಧಾನ ಆರ್ಥಿಕ , ಸಮಾನತೆ ಮತ್ತು ಸಾಮಾಜಿಕ ಸಮಾನತೆ ದೊರಕಲು ಸಮಾನತೆ ದೊರಕದವರಿಗೆ ವಿಶೇಷ ಸೌಲಭ್ಯ ನೀಡಬೇಕೆಂದು ಹೇಳಿದೆ. ಅದಕ್ಕಾಗಿ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದು , ಸಬ್ಸಿಡಿ ನೀಡುವುದು, ಆರ್ಥಿಕ ಸಹಾಯ ನೀಡುವುದು. ಹೀಗೆ ಹಲವಾರು ರೀತಿಯ ನೆರವನ್ನು ಸರ್ಕಾರ ನೀಡುತ್ತಿವೆ. 
        ನೋಡಿದ್ರಾ ಮಕ್ಕಳೇ, ಪ್ರತಿಯೊಬ್ಬರೂ ಸುಂದರವಾಗಿ ಸಂತೋಷವಾಗಿರಲು ನಮ್ಮ ಸಂವಿಧಾನ ನೀಡಿರುವ ವ್ಯವಸ್ಥೆಯನ್ನು. ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ. ಶಿಕ್ಷಣವು ಮೂಲಭೂತ ಹಕ್ಕಾಗಿದೆ. ಘನತೆಯಿಂದ ಜೀವಿಸುವ ಹಕ್ಕು, ವಾಕ್ ಸ್ವತಂತ್ರ , ಅನ್ಯಾಯವಾದಾಗ ಬಡವರಿಗೆ ಉಚಿತವಾಗಿ ಕಾನೂನು ಸೇವೆ ಪಡೆಯಲು ತಾಲೂಕು , ಜಿಲ್ಲಾ ಮತ್ತು ರಾಜ್ಯ ಹಂತದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಇವೆ. ನಾವು ಬಯಸುವ ಧರ್ಮ ಆಚರಿಸುವ ಹಕ್ಕು ,ಇಷ್ಟವಾದವರನ್ನು ವಿವಾಹವಾಗುವ ಹಕ್ಕು ಇದಕ್ಕೆ ಧರ್ಮ ಜಾತಿ ಅಡ್ಡಿ ಬರುವಂತಿಲ್ಲ. ಈ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಕಾನೂನು ಮೊರೆ ಹೋಗಿ ನ್ಯಾಯ ಪಡೆಯಬಹುದು. ಘನತೆಯಿಂದ ಜೀವಿಸುವ ಹಕ್ಕನ್ನು ಪಾಲಿಸಲು ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದೆ. ಅಲ್ಲದೆ ಪಡಿತರ ಧಾನ್ಯಗಳನ್ನು ಕಡಿಮೆ ದರದಲ್ಲಿ ನೀಡುವುದು , ಮಹಾತ್ಮಗಾಂದಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಮೂಲಕ ನೂರು ದಿನ ಕೆಲಸ ಖಾತ್ರಿಗೊಳಿಸುವುದು ಸೇರಿದೆ.
           ಸಂವಿಧಾನ ನಿರ್ಮಾತೃಗಳು ಪ್ರಪಂಚದ ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಅದರಲ್ಲಿ ನಮ್ಮ ದೇಶಕ್ಕೆ ಬೇಕಾದನ್ನು ಆರಿಸಿ , ಮಾರ್ಪಡಿಸಿ ರಚನೆ ಮಾಡಿರುತ್ತಾರೆ. ಅದು ನಮ್ಮ ದೇಶದಲ್ಲಿರುವ ವಿವಿಧ ಧರ್ಮ, ಜಾತಿ, ಸಂಸ್ಕೃತಿ, ಆಚಾರ ಮತ್ತು ವಿಚಾರಗಳಿಗೆ ಧಕ್ಕೆಯಾಗದಂತೆ ರಚಿಸಲಾಗಿದೆ. ಮುಂದೆ ದೇಶ ಬೆಳೆದಂತೆ ಬದಲಾಗುತ್ತದೆ. ಬದಲಾವಣೆಗನುಗುಣವಾಗಿ ತಿದ್ದುಪಡಿ ಮಾಡಲು ಅವಕಾಶವಿದೆ. ಆದರೆ ಆ ತಿದ್ದುಪಡಿ ಸಂವಿಧಾನದ ಮೂಲ ರಚನೆಗೆ ಚ್ಯುತಿಬಾರದಂತೆ ತಿದ್ದುಪಡಿ ಮಾಡಬಹುದು. ಮೂಲ ರಚನೆಗೆ ಚ್ಯುತಿ ಬಂದಾಗ ನಮ್ಮ ದೇಶದ ಸುಪ್ರೀಂಕೋರ್ಟ್ ಅದನ್ನು ರದ್ದು ಪಡಿಸಲು ಅವಕಾಶವಿದೆ. ಸುಪ್ರೀಂಕೋರ್ಟ್ ಸಂವಿಧಾನದ ಕಾವಲುಗಾರ ಇದ್ದಂತೆ. ಅದೇ ನ್ಯಾಯಾಲಯದ ನ್ಯಾಯಾಧೀಶರು ಸಂವಿಧಾನಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಂಡರೆ, ಅವರನ್ನು ಹಕ್ಕುಚ್ಯುತಿ ನಿರ್ಣಯದ ಮೂಲಕ ಅಧಿಕಾರದಿಂದ ಕೆಳಗಿಳಿಸಲು ಶಾಸಕಾಂಗಕ್ಕೆ ಅಧಿಕಾರವಿದೆ. ಹಾಗಾಗಿ ಇಲ್ಲಿ ಯಾರ ಮೇಲು, ಯಾರು ಕೀಳು ಅನ್ನುವಂತಿಲ್ಲ. ಪ್ರತಿಯೊಬ್ಬರು ಒಬ್ಬರಿಗೊಬ್ಬರು ಸಹಮತದಿಂದ ಕೆಲಸ ಮಾಡಬೇಕಾಗುತ್ತದೆ. 
        ನಮ್ಮ ದೇಶದ ಸಂವಿಧಾನ ಲಿಖಿತವಾಗಿದ್ದು, ಕೆಲವು ದೇಶಗಳಲ್ಲಿ ಅಲಿಖಿತ ಸಂವಿಧಾನವಿದೆ. ಭಾರತ, ಅಮೆರಿಕ ಮತ್ತು ಬ್ರಿಟನ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ, ಆಡಳಿತ ವ್ಯವಸ್ಥೆ ಬೇರೆ ಬೇರೆಯಾಗಿದೆ. ಅಮೆರಿಕ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ ಅಧಿಕಾರ ನೇರವಾಗಿ ರಾಷ್ಟ್ರಾಧ್ಯಕ್ಷರ ಕೈಯಲ್ಲಿದೆ. ರಾಷ್ಟ್ರಾಧ್ಯಕ್ಷರನ್ನು ನೇರವಾಗಿ ಜನರೇ ಆಯ್ಕೆ ಮಾಡುತ್ತಾರೆ. ಇಂಗ್ಲೆಂಡ್ ನಲ್ಲಿ ರಾಷ್ಟ್ರಾಧ್ಯಕ್ಷರಾಗಿ ಬ್ರಿಟನ್ ರಾಣಿ ಇದ್ದರೂ , ಅವರಿಗೆ ನೇರವಾದ ಅಧಿಕಾರವಿಲ್ಲ. ಅವರು ಪ್ರಧಾನಿ ನೇತೃತ್ವದ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರದಂತೆ ಬ್ರಿಟನ್ನಿನ ರಾಣಿ ಅಧಿಕಾರ ಚಲಾಯಿಸುತ್ತಾರೆ.
          ನಮ್ಮ ಸಂವಿಧಾನ ತಜ್ಞರು ಅಮೆರಿಕದಿಂದ ದ್ವಿಸದನ ಪದ್ಧತಿಯನ್ನು ಆಯ್ದು ಭಾರತದ ಕೇಂದ್ರದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಯನ್ನಾಗಿ , ರಾಜ್ಯಗಳಲ್ಲಿ ವಿಧಾನಸಭೆಯ ಮತ್ತು ಕೆಲವು ಕಡೆ ವಿಧಾನಪರಿಷತ್ತು ಗಳನ್ನು ಮಾಡಿದರು. ಅಮೆರಿಕದಲ್ಲಿ ನೇರ ಅಧಿಕಾರ ರಾಷ್ಟ್ರಾಧ್ಯಕ್ಷರ ಕೈಯಲ್ಲಿದ್ದರೆ , ಭಾರತದಲ್ಲಿ ರಾಷ್ಟ್ರಾಧ್ಯಕ್ಷರಿಗೆ ಮತ್ತು ರಾಜ್ಯಪಾಲರಿಗೆ ನೇರ ಅಧಿಕಾರವಿರುವುದಿಲ್ಲ. ನಮ್ಮ ದೇಶದಲ್ಲಿ ಅಧಿಕಾರವಿರುವುದು ರಾಷ್ಟ್ರಮಟ್ಟದಲ್ಲಿ ಪ್ರಧಾನಮಂತ್ರಿ , ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಗೆ. ಈ ವಿಧಾನವನ್ನು ಇಂಗ್ಲೆಂಡ್ ಸಂವಿಧಾನದಿಂದ ಆಯ್ದುಕೊಂಡಿದ್ದು. ಏಕೆಂದರೆ ಭಾರತದಲ್ಲಿ ನಿರಂಕುಶ ಅಧಿಕಾರ ಉಳ್ಳವರು ರಾಷ್ಟ್ರಾಧ್ಯಕ್ಷರಾಗಿ ನೇರ ಆಯ್ಕೆಯಾದರೆ , ಅವರಿಗೆ ನೇರ ಅಧಿಕಾರ ನೀಡಿದರೆ, ಭಾರತದಲ್ಲಿರುವ ವಿವಿಧ ಧರ್ಮ, ಜಾತಿ , ಸಂಸ್ಕೃತಿ , ಆಚಾರ ಮತ್ತು ವಿಚಾರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಮನಗಂಡು, ನೇರ ಅಧಿಕಾರ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ನೀಡಲಿಲ್ಲ. ನಮ್ಮ ದೇಶದಲ್ಲಿ ನೇರ ಅಧಿಕಾರ ಕೇಂದ್ರದಲ್ಲಿ ಪ್ರಧಾನಮಂತ್ರಿ , ರಾಜ್ಯದಲ್ಲಿ ಮುಖ್ಯಮಂತ್ರಿಗಿದೆ. ಇವರನ್ನು ಜನರಿಂದ ಆಯ್ಕೆಯಾದ , ಬಹುಮತಪಡೆದ ಪಕ್ಷದ ಸದಸ್ಯರು ಆಯ್ಕೆ ಮಾಡುತ್ತಾರೆ. ನಮ್ಮ ಸಂವಿಧಾನ ಸೂಚಿಸಿರುವಂತೆ ವಯಸ್ಕ ಮತದಾನ ಪದ್ಧತಿಯ ಮೂಲಕ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಮತದಾನದ ಹಕ್ಕನ್ನು ನೀಡಿದೆ. ಮತದಾನದ ಮೂಲಕ ಆಯ್ಕೆಗೊಂಡ ಜನಪ್ರತಿನಿಧಿಗಳು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಧಾನಮಂತ್ರಿಯಾಗಲಿ , ಮುಖ್ಯಮಂತ್ರಿಯಾಗಲಿ ನೇರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಚಿವ ಸಂಪುಟದ ಬಹುಮತದ ಒಪ್ಪಿಗೆ ಪಡೆದು ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಪ್ರಧಾನಮಂತ್ರಿ , ಅಥವಾ ಮುಖ್ಯಮಂತ್ರಿ ಸಚಿವ ಸಂಪುಟ ಒಪ್ಪಿಗೆ ಇಲ್ಲದೆ ನಿರ್ಧಾರ ಕೈಗೊಂಡರೆ. ಅವರನ್ನು ಕೆಳಗಿಳಿಸಲು ಆಡಳಿತ ಪಕ್ಷದ ಸದಸ್ಯರಿಗೆ ಅಧಿಕಾರವಿದೆ. ಅದು ಅಲ್ಲದೆ ಸರ್ಕಾರ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ತಿಳಿಸಲು ರಾಜ್ಯ ನಿರ್ದೇಶಕ ತತ್ವಗಳನ್ನು ಕೂಡ ನಮ್ಮ ಸಂವಿಧಾನ ಒಳಗೊಂಡಿದೆ. ಇದರ ಜೊತೆಗೆ ಮೂಲಭೂತ ಕರ್ತವ್ಯವನ್ನು ಪ್ರತಿಯೊಬ್ಬ ಪ್ರಜೆಗೂ ನೀಡಿದೆ.
         ಭಾರತೀಯರೆಲ್ಲರಿಗೂ ಸುಂದರವಾದ ಸಂತೋಷವಾದ ಜೀವನ ಕಲ್ಪಿಸುವ ಸಂವಿಧಾನವನ್ನು , ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ , ಭಾರತೀಯರಾದ ನಾವೆಲ್ಲರೂ ಒಪ್ಪಿ , ಅಂಗೀಕರಿಸಿ ಅನುಷ್ಠಾನಕ್ಕೆ ತಂದಿರುತ್ತೇವೆ. ಹಾಗಾಗಿ ನಾವು ಅದನ್ನು ಗೌರವಿಸಬೇಕು. ನಾವು ಯಾವುದೇ ಧರ್ಮಕ್ಕೆ ಸೇರಿದ್ದರೂ, ಧರ್ಮಗ್ರಂಥಗಳನ್ನು ಓದುವಂತೆ, ನಮ್ಮ ಸುಂದರ ಸಂತೋಷದ ಜೀವನಕ್ಕಾಗಿ ಇರುವ ಸಂವಿಧಾನವನ್ನು ಪ್ರತಿ ಮನೆಯಲ್ಲಿಟ್ಟುಕೊಂಡು ಓದಿ ಮನನ ಮಾಡಿಕೊಂಡರೆ , ನಮ್ಮ ಸುಂದರ ಜೀವನಕ್ಕೆ ಮಾರ್ಗದರ್ಶಿಯಾಗುತ್ತದೆ. ಇಂತಹ ಸುಂದರ ಸಂವಿಧಾನವನ್ನು ನಿರ್ಮಿಸಿದ ನಿರ್ಮಾತೃವಿಗೆ ಅನಂತ ವಂದನೆಗಳು.
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************* 



Ads on article

Advertise in articles 1

advertising articles 2

Advertise under the article