ಮಕ್ಕಳ ತುಂಟ ಮನಸು : ಸಂಚಿಕೆ - 3
Thursday, February 17, 2022
Edit
ಮಕ್ಕಳ
ತುಂಟ ಮನಸು
ಸಂಚಿಕೆ - 3
ನನ್ನ ಪಕ್ಕದ ಮನೆಯಲ್ಲಿ 2 ಜನ ಮಕ್ಕಳಿದ್ದಾರೆ. ಅಣ್ಣ-ತಂಗಿ ಎಂದರೆ ಅವರಂತೆ ಇರಬೇಕು... ಯಾಕೆ ಗೊತ್ತಾ..? ಮನೆಯಲ್ಲಿ ಅವರ ಅಪ್ಪ ಹಾಗೂ ಅಮ್ಮ ಯಾವುದೇ ವಸ್ತು ತಂದರೂ ಇಬ್ಬರಿಗೂ ಸೇರಿಸಿ ಎರಡು ವಸ್ತುಗಳನ್ನು ತರುತ್ತಾರೆ. ಇಲ್ಲದಿದ್ದರೆ ಆ ಮಕ್ಕಳ ಕಿತ್ತಾಟ ಇಡೀ ವಠಾರಕ್ಕೆ ಕಾಣಿಸುವಂತೆ ಇರುತ್ತದೆ. ಅಷ್ಟೇ ಯಾಕೆ.. ಅಪ್ಪ ಅಮ್ಮನ ಮೇಲೆಯೂ ರೇಗಾಡಿ, ರಂಪ ಮಾಡಿ ಬಿಡುತ್ತಾರೆ.
ಅದೊಂದು ರವಿವಾರ ಮೊದಲ ಬಾರಿಗೆ ನಾನು ಅವರೊಂದಿಗೆ ಆಡಲೆಂದು ಅವರ ಮನೆಗೆ ಹೋಗಿದ್ದೆ. ನಾನು ಅಮ್ಮ ಕೊಟ್ಟಿದ್ದ ಒಂದು ತಿಂಡಿ ಪ್ಯಾಕೆಟನ್ನು ಅವರಿಗೆ ಕೊಟ್ಟೆ. ಅಲ್ಲಿಗೆ ಶುರುವಾಯ್ತು ನೋಡಿ.... ಇಬ್ಬರೂ ನಂಗೆ ಬೇಕು ನಂಗೆ ಬೇಕು ಅಂತ ಹೊಡೆದಾಡಿ ಕೊನೆಗೆ ಆ ತಿಂಡಿ ಪ್ಯಾಕೆಟನ್ನು ಕೋಪದಿಂದ ಎಸೆದುಬಿಟ್ಟರು. ಅಷ್ಟರಲ್ಲಿ ಅವರ ಅಮ್ಮ ಬಂದು ನನ್ನ ಮಕ್ಕಳಿಗೆ 'ಮೂಗಿನ ತುದಿಯಲ್ಲಿ ಕೋಪ, ಸಣ್ಣ- ಪುಟ್ಟ ವಿಷಯಕ್ಕೂ ಜಗಳ ಆಡ್ತಾರೆ.... ನೀನೇನು ಬೇಜಾರು ಮಾಡ್ಬೇಡ' ಅಂತ ಹೇಳಿ ಆ ತಿಂಡಿ ಪೊಟ್ಟಣವನ್ನು ಒಳಗೆ ಇಟ್ಟರು. ಅವರ ಮನೆಯಲ್ಲಿ ಇದ್ದ ಕುರ್ಚಿಯ ಕಾಲು ಕೂಡ ಇವರಿಬ್ಬರ ಜಗಳದಿಂದಾಗಿ ಮುರಿದಿತ್ತು. ಅದರ ನಂತರ ನಾನು ಅವರ ಮನೆಗೆ ಹೋಗುವುದನ್ನೇ ಬಿಟ್ಟೆ.
ನನಗೆ ಈ 'ಮೂಗಿನ ತುದಿಯಲ್ಲಿ ಕೋಪ' ಅನ್ನುವ ವಿಷಯ ಕಾಡ್ತಾ ಇತ್ತು.. ಅಮ್ಮನ ಬಳಿ ಹೋಗಿ, ಪಕ್ಕದ ಮನೆಯಲ್ಲಿ ನಡೆದ ವಿಷಯ ಹೇಳಿ "ಅವರಿಬ್ಬರಿಗೆ ಮೂಗಿನ ತುದಿಯಲ್ಲಿ ಕೋಪ ಅಂತೆ ಹಾಗಂದ್ರೆ ಏನಮ್ಮಾ?" ಅಂತ ಕೇಳಿದೆ. ಕನ್ನಡಿ ಮುಂದೆ ನಿಂತು, ನನ್ನ ಮುಖವನ್ನೇ ನೋಡಿ "ಮೂಗಿನ ತುದಿಯಲ್ಲಿ ಏನೂ ಕಾಣಿಸ್ತಾ ಇಲ್ಲಮ್ಮ".. ಅಂತ ಜೋರಾಗಿ ಹೇಳಿದೆ. ಅಮ್ಮ ನನ್ನನ್ನು ನೋಡಿ ನಗ್ತಾ ಹೀಗೆ ಹೇಳಿದಳು.. ''ನೀನು ಕೂಡ ನನ್ನಲ್ಲಿ ಕೋಪ ಮಾಡಿ ಕೆಲವೊಮ್ಮೆ ಜಗಳ ಮಾಡ್ತೀಯ ಅಲ್ವಾ.. ಅದೇ ರೀತಿ, ಅವರಿಬ್ಬರೂ ಕೂಡ ಸ್ವಲ್ಪ ಜಾಸ್ತಿ ಕೋಪ ಮಾಡ್ಕೊಳ್ತಾರೆ ಅಷ್ಟೇ..... ಹಾಗಂತ ಕೋಪ ಮೂಗಿನ ತುದಿಯಲ್ಲಿ ಇರುತ್ತೆ ಅಂತ ಅರ್ಥ ಅಲ್ಲ..... ಅದು ಸುಮ್ಮನೆ ಅಂದಿದ್ದು'' ಅಂತ ಹೇಳಿದ್ಲು.
ಕೋಪ ಬಂದ ಕೂಡಲೇ ಎಲ್ಲವನ್ನೂ ಎಸೆದು ಪ್ರತಿಕ್ರಿಯಿಸುವುದು ತಪ್ಪು. ಇದರಿಂದ ನಮಗೂ ಬೇರೆಯವರಿಗೂ ತೊಂದರೆಯಾಗುತ್ತದೆ. ಹಾಗಾಗಿ ಮನೆಯವರೊಂದಿಗೆ ಆದಷ್ಟು ಸಮಾಧಾನದಿಂದ ಇದ್ದು ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡದೆ, ಖುಷಿಯಾಗಿ ಇರಬೇಕು ಎಂಬುದನ್ನು ನಾನು ಕಲಿತೆ. ಕೋಪ ಎನ್ನುವುದು ಮಾನವನ ಸಹಜ ಭಾವನೆ ಆದರೆ ಅದು ಅತಿರೇಕಕ್ಕೆ ಹೋದಾಗ ಮಾತ್ರ ಅಸಹಜವಾಗಿಬಿಡುತ್ತದೆ.
........................................... ರಮ್ಯ. ಎಮ್
ಅಂತಿಮ ಬಿ.ಎ (ಮನ:ಶಾಸ್ತ್ರ ವಿದ್ಯಾರ್ಥಿನಿ)
ಡಾ. ಪಿ. ದಯಾನಂದ ಪೈ - ಪಿ.ಸತೀಶ ಪೈ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ,
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************