-->
ಒಗ್ಗಟ್ಟಿನ ಬಲಕ್ಕೆ ಪುಟ್ಟ ಪುಟ್ಟ ಇರುವೆಗಳು ನೀಡುವ ಪಾಠ.....!

ಒಗ್ಗಟ್ಟಿನ ಬಲಕ್ಕೆ ಪುಟ್ಟ ಪುಟ್ಟ ಇರುವೆಗಳು ನೀಡುವ ಪಾಠ.....!


                         ಒಗ್ಗಟ್ಟಿನ ಬಲಕ್ಕೆ 
        ಪುಟ್ಟ ಪುಟ್ಟ ಇರುವೆಗಳು ನೀಡುವ ಪಾಠ.....!
        ಪ್ರೀತಿಯ ಪುಟಾಣಿಗಳೇ... ನಾವು ಬೇರೆಯವರಿಗೆ ಬಯ್ಯುವಾಗ, ತೆಗಳುವಾಗ ಪ್ರಾಣಿಗಳಿಗೆ ಹೋಲಿಕೆ ಕೊಡುತ್ತೇವೆ, ಪ್ರಾಣಿಗಳ ಹೆಸರು ಹೇಳಿ ಬಯ್ಯುತ್ತೇವೆ ಅಲ್ವ. ಆದರೆ ಬಹಳಷ್ಟು ಸಲ ಪ್ರಾಣಿಗಳ ಪೈಕಿ ಮನುಷ್ಯ ಕೂಡಾ ಒಂದು ಪ್ರಾಣಿ , ಮಾತ್ರವಲ್ಲ , ಪ್ರಾಣಿಗಳಿಗೆ ನಮಗಿಂತ ಹೆಚ್ಚು ವಿವೇಚನೆ ಇರುತ್ತದೆ ಎಂಬುದನ್ನೇ ನಾವು ಮರೆತು ಬಿಡುತ್ತೇವೆ. ತನಗೆ ಸಿಕ್ಕ ಒಂದು ಅಗುಳನ್ನು ತಾನು ಮಾತ್ರ ತಿನ್ನದೆ, ಬಳಗವನ್ನು ಕರೆದು ಹಂಚುವ ಕಾಗೆ , ತನ್ನ ಕರುವಿನ ಪಾಲಿನ ಹಾಲನ್ನೂ ಮಾನವನಿಗೆ ನೀಡುವ ಹಸು , ಹೊಟ್ಟೆ ತುಂಬಿದ ಬಳಿಕ ಬೇಟೆಯಾಡದ ಹುಲಿ , ಹೆಬ್ಬಾವು... ಹೀಗೆ ಪ್ರಾಣಿಗಳಲ್ಲೂ ಒಂದು ಶಿಸ್ತು, ಅವುಗಳಿಗೂ ಒಂದು ಬದ್ಧತೆ ಇರುತ್ತದೆ. ಇಂಥದ್ದೇ ಸಾಲಿಗೆ ಸೇರಿಸಬಹುದಾದ ಅಚ್ಚರಿಯ ಜೀವಿ ಇರುವೆ.
             ನಿಮಗೆ ಗೊತ್ತು. ಪ್ರಾಣಿಗಳ ಪೈಕಿ ಅತಿ ಹೆಚ್ಚು ಬುದ್ಧಿ ಇರುವುದು ನಮಗೆ, ಅರ್ಥಾತ್ ಮಾನವರಿಗೆ. ಆದರೆ ನಮ್ಮಲ್ಲಿ ಬಹಳಷ್ಟು ಸಲ ಒಗ್ಗಟ್ಟು ಕೆಟ್ಟು ಹೋಗುತ್ತದೆ. ನಾವು ಪ್ರಾದೇಶಿಕ, ಜಾತಿ, ಮತ, ಪಂಥ ಅಂತಸ್ತು, ಗಂಡು , ಹೆಣ್ಣು... ಹೀಗೆ ಬೇರೆ ಬೇರೆ ವಿಚಾರಗಳಿಗೆ ಪ್ರತ್ಯೇಕ ಪ್ರತ್ಯೇಕರಾಗಿ ಹೋರಾಡುವುದು, ಬದುಕುವುದು, ನಿಬಂಧನೆಗಳನ್ನು ವಿಧಿಸುವುದು... ಹೀಗೆ ನಾನಾ ಕಾರಣಗಳಿಂದ ಒಂದೇ ಮನಸ್ಸಿನಿಂದ ಕೆಲಸ ಮಾಡದೆ, ಬದುಕದೆ ಪ್ರತ್ಯೇಕ ಪ್ರತ್ಯೇಕವಾಗಿರುತ್ತೇವೆ.          ಆದರೆ ಇರುವೆ ಮಾತ್ರ ಹಾಗಲ್ಲ. ಹಾಗಲ್ಲ ಅನ್ನುವುದಕ್ಕೆ ನೀವಿಲ್ಲಿ ನೋಡ್ತಾ ಇರುವ ವಿಡಿಯೋವೇ ಸಾಕ್ಷಿ. ಪುಟ್ಟದೊಂದು ಚಾಕಲೇಟಿನ ತುಂಡು ಅಂಗಳದಲ್ಲಿ ಸಿಕ್ಕಾಗ ಅಲ್ಲಿದ್ದ ಇರುವೆಗಳೆಲ್ಲ ಚಕಚಕನೆ ಒಂದು ಪ್ಲಾನ್ ರೂಪಿಸಿದವು. ಈ ಚಾಕಲೇಟ್ ತುಂಡನ್ನು ತಮ್ಮ ಗೂಡಿಗೆ ಕೊಂಡೊಯ್ದು ಅಲ್ಲಿ ಮಳೆಗಾಲದಲ್ಲಿ ತಿನ್ನಲು ಸ್ಟಾಕ್ ಮಾಡಬೇಕು ಅಂತ. ಹೆಚ್ಚು ವಿಳಂಬ ಮಾಡಿದರೆ ಆ ತುಂಡು ಕಸಬರಿಕೆ ಎಡೆಗೆ ಸಿಲುಕಿ ಚರಂಡಿ ಸೇರುತ್ತಿತ್ತು. ಅದಕ್ಕಿಂತಲೂ ಮೊದಲೇ ಇರುವೆಗಳು ಕಾರ್ಯಾಚರಣೆ ಶುರು ಮಾಡಿದವು.  

        ಅಲ್ಲೇ ಅಂಗಳದಲ್ಲಿದ್ದ ನನಗೆ ಇವುಗಳ ಕಾರ್ಯಾಚರಣೆ ಕಂಡಿತು. ಈ ಪುಟ್ಟ ಪುಟ್ಟ ಇರುವೆಗಳು ಈ ಚಾಕಲೇಟ್ ತುಂಡನ್ನು ಎಲ್ಲಿಗೆ ಹೊತ್ತೊಯ್ಯಬಹುದು ಅಂತ ಕೆಮರಾ ಆನ್ ಮಾಡಿ ಕಾಯುತ್ತಾ ಕುಳಿತಾಗ ಅಚ್ಚರಿ ಕಾದಿತ್ತು. ತಮ್ಮ ದೇಹಕ್ಕಿಂತಲೂ 50-100 ಪಟ್ಟು ದೊಡ್ಡದಾದ ಆ ತುಂಡನ್ನು ಅಷ್ಟೂ ಇರುವೆಗಳು ಸೇರಿ ಸುಮಾರು 1 ಮೀಟರ್ ಎತ್ತರದ ಕಟ್ಟೆಯ ಮೇಲಿರುವ ಗೂಡಿಗೆ ಕೊಂಡೊಯ್ಯಲು ನಿರ್ಧರಿಸಿದ್ದವು. ಇಂಟರ್ ಲಾಕ್ ನಡುವಿನ ಕೊರಕಲನ್ನು ದಾಟಿ, ತುಳಸಿಕಟ್ಟೆಯ ಏರಿಳಿತಗಳನ್ನು ಹತ್ತಿ ಇಳಿದು, ಕಡಿದಾದ ಗೋಡೆಯಲ್ಲಿ ಜಾರಿ ಬೀಳದೆ ಹಿಂದಿನಿಂದ ತಳ್ಳಿ, ಮುಂದಿನಿಂದ ಎಳೆದು ಚಾಕಲೇಟ್ ತುಂಡನ್ನು ಯಶಸ್ವಿಯಾಗಿ ಇರುವೆಗಳು ತಮ್ಮ ಗೂಡಿನತ್ತ ಕೊಂಡೊಯ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಯಿತು. ಬಳಿಕ ಅದೊಂದು ಚಂದದ ದೃಶ್ಯ ಕಾವ್ಯವಾಯಿತು.
          ಇಲ್ಲಿ ನಾವು ಕಲಿಯಬೇಕಾದ ವಿಚಾರ ತುಂಬಾ ಇದೆ. ನಮ್ಮಷ್ಟು ತಿಳುವಳಿಕೆ ಇಲ್ಲ, ನಮ್ಮ ಹಾಗೆ ಮಾತು ಬರುವುದಿಲ್ಲ, ನಮ್ಮ ಹಾಗೆ ಅವುಗಳಲ್ಲಿ ಜೆಸಿಬಿ, ಹಿಟಾಚಿ, ರಾಟೆ, ಹಗ್ಗ ಏನೂ ಇಲ್ಲ ಅಂತ ನಾವು ತಿಳಿದುಕೊಂಡಿದ್ದೇವೆ. ಏನೂ ಇಲ್ಲದಿದ್ದರೂ ಕೇವಲ ಒಗ್ಗಟ್ಟಿನಿಂದ ಸೇರಿದ ಇರುವೆಗಳು ತಮ್ಮ ಆಹಾರವನ್ನು ಎಷ್ಟು ಚೆನ್ನಾಗಿ, ನಾಜೂಕಾಗಿ ತೆಗೆದುಕೊಂಡು ಹೋದವು ನೋಡಿ. ಹಾಗೆ ಹೋಗುವಾಗ ಅವುಗಳ ನಡುವೆ ಜಗಳ ಆಗುವುದಿಲ್ಲ. ಅವುಗಳು ಪರಸ್ಪರ ಹೊಡೆದಾಡಿ ಕೊಳ್ಳುವುದಿಲ್ಲ. ಭಿನ್ನಾಭಿಪ್ರಾಯಗಳಿಲ್ಲ. ಕಿರುಚಾಡುವುದಿಲ್ಲ. ಸದ್ದಿಲ್ಲದೇ, ಮಾತನ್ನೇ ಆಡದೆ ಆಗಾಗ ತಮ್ಮ ಸ್ಥಾನವನ್ನು ಬದಲಿಸಿ, ಆಹಾರದ ಹಿಂದೆ, ಮುಂದೆ ನಿಂತು ಆ ತುಂಡನ್ನು ತೆಗೆದುಕೊಂಡು ಹೋಗುವ ಆ ಜವಾಬ್ದಾರಿಯುತ ದೃಶ್ಯ ಇದೆಯಲ್ವ ಅದು ನಮಗೆ ಒಗ್ಗಟ್ಟನ್ನು ಸಾರಿ ಹೇಳುತ್ತವೆ. ಬುದ್ಧಿವಂತ ಮನುಷ್ಯರಾದ ನಮಗೆ ಎಷ್ಟೇ ಬುದ್ಧಿ ಇರಲಿ ಕೆಲವೊಮ್ಮೆ ಅದು ಉಪಯೋಗಕ್ಕೆ ಬರುವುದಿಲ್ಲ. ಯಾಕೆಂದರೆ ನಾವು ವಿವೇಚನಾರಹಿತರಾಗಿ ಯೋಚಿಸುತ್ತೇವೆ, ಮಾತನಾಡುತ್ತೇವೆ, ವರ್ತಿಸುತ್ತೇವೆ. ನಮ್ಮ ಶಕ್ತಿಯನ್ನು, ಪ್ರತಿಭೆಯನ್ನು ನಾವು ಕಚ್ಚಾಟದಲ್ಲಿ, ಮತ್ಸರದಲ್ಲಿ, ಅಪ್ರಬುದ್ಧ ಯೋಚನೆಗಳಲ್ಲಿ ಕಳೆದುಕೊಂಡು ಬಿಡುತ್ತೇವೆ. ನಾವೆಷ್ಟೇ ಶಕ್ತಿವಂತರಾದರೂ, ಸ್ವಾಭಿಮಾನಿಗಳಾದರೂ ನಾವು ಪರಾವಲಂಬಿ ಜೀವಿಗಳು ಎಂಬುದನ್ನು ಮರೆಯಬಾರದು. ನಮ್ಮನ್ನು ಸಾಕಿ ಸಲಹಲು, ನಮ್ಮನ್ನು ಪೋಷಿಸಲು, ಪೊರೆಯಲು, ಸಮಾಜದಲ್ಲಿ ಎಲ್ಲರಂತೆ ಬಾಳಲು ಮನೆಯವರ, ಅವರಿವರ ನೆರವು ಬೇಕು. ಅಷ್ಟೇ ಯಾಕೆ, ಸತ್ತ ಮೇಲೂ ನಮ್ಮ ದೇಹವನ್ನು ಹೊತ್ತುಕೊಂಡು ಹೋಗಲು ಕನಿಷ್ಠ ನಾಲ್ಕು ಮಂದಿಯ ನೆರವು ಬೇಕು. ಹಾಗಿರುವಾಗ ಇದನ್ನೆಲ್ಲ ಮರೆತು ದ್ವೇಷ, ಅಸೂಯೆ, ಲೋಭ, ಸ್ವಾರ್ಥದಿಂದ ಅವರಿವರ ಜೊತೆ ಕಚ್ಚಾಡಿ, ಜಗಳ ಮಾಡಿ, ದೂರ ಮಾಡಿ, ಸಿಟ್ಟು, ಅಹಂಕಾರ ಮೆರೆದರೆ ಅದು ನಮಗೆ, ನಮ್ಮ ಸಮಾಜಕ್ಕೆ, ನಮ್ಮ ದೇಶಕ್ಕೂ ಮಾರಕ. ಇಂತಹ ಸಂದರ್ಭ ಇರುವೆ ನಮಗೆ ಗುರುವಾಗಬೇಕು, ಇರುವೆಯ ಒಗ್ಗಟ್ಟು, ಎಲ್ಲರೂ ಜೊತೆಯಾಗಿ ಸಾಗಿದರೆ ಏನನ್ನೂ ಸಾಧಿಸಬಹುದು ಎಂಬ ವಿಚಾರಕ್ಕೆ ಅದರ ತತ್ವ ಸಿದ್ಧಾಂತ ನಮಗೆ ದಾರಿ ದೀಪವಾಗಬೇಕು. ಎಲ್ಲರೂ ಜೊತೆಗಿದ್ದರೆ, ಜೊತೆಯಾಗಿದ್ದರೆ ನಮ್ಮ ಕೆಲಸ, ಕಾರ್ಯ ಜವಾಬ್ದಾರಿ ಹಗುರವಾಗುವುದು ಮಾತ್ರವಲ್ಲ, ಯಾರಿಗೂ ನಮ್ಮನ್ನು ಒಡೆಯಲು, ಬಗ್ಗುಬಡಿಯಲು ಸಾಧ್ಯವಾಗುವುದಿಲ್ಲ ಎಂಬುದಕ್ಕೆ ಈ ದೃಶ್ಯ ನಮಗೆ ಪಾಠವಾಗಲಿ.
.............................. ಕೃಷ್ಣಮೋಹನ ತಲೆಂಗಳ.
ಉಪ ಸುದ್ದಿ ಸಂಪಾದಕ, 
ಕನ್ನಡಪ್ರಭ ಮಂಗಳೂರು.
********************************************

Ads on article

Advertise in articles 1

advertising articles 2

Advertise under the article