-->
ಜೀವನ ಸಂಭ್ರಮ : ಸಂಚಿಕೆ - 24

ಜೀವನ ಸಂಭ್ರಮ : ಸಂಚಿಕೆ - 24

   ಜೀವನ ಸಂಭ್ರಮ : ಸಂಚಿಕೆ - 24

                          ಗಾಳಿಪಟದ ಹಬ್ಬ          
        ಗಾಳಿಪಟದ ಹಬ್ಬ ಸಹಜವಾಗಿ ಆಷಾಢ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಬೆಳೆಯನ್ನು ಕಟಾವು ಮಾಡಿ  ಊರಿನ ಜಮೀನು ಖಾಲಿ ಖಾಲಿಯಾಗಿ ಮೈದಾನದಂತಿರುತ್ತದೆ. ಮೈದಾನದಲ್ಲಿ ಗಾಳಿ ಚೆನ್ನಾಗಿ ಬೀಸುತ್ತಿರುತ್ತದೆ.  ಮದುವೆ ಆದ ಹೆಣ್ಣು ಮಗಳು , ಈ ತಿಂಗಳಲ್ಲಿ ತಾಯಿಮನೆಯಲ್ಲಿ ಇರುತ್ತಾಳೆ. ಈ ಹಬ್ಬಕ್ಕೆ ಹೊಸ ಅಳಿಯನನ್ನು ಕರೆದು ಬಗೆಬಗೆಯ ತಿಂಡಿ ಮಾಡಿ, ಉಪಚರಿಸಿ  ಅಳಿಯನಿಂದ ಗಾಳಿಪಟ ಹಾರಿಸುತ್ತಾರೆ. ಮಾರನೆ ದಿನ ಮಾಡಿದ ತಿಂಡಿಗಳನ್ನು  ಉಡುಗೊರೆಯೊಂದಿಗೆ ಅಳಿಯನ ಮನೆಗೆ - ಮಗಳನ್ನು ಕಳಿಸುತ್ತಾರೆ.
          ನಾವೆಲ್ಲ ಚಿಕ್ಕವರಿದ್ದಾಗ ವಿವಿಧ ನಮೂನೆಯ ಗಾಳಿಪಟಗಳನ್ನು ಹಾರಿಸುತ್ತಿದ್ದೆವು. ನಾನು ಚಿಕ್ಕವನಿದ್ದಾಗ ಶಿಳ್ಳೆಕ್ಯಾತ, ಬೋರಂಟಿ, ಗುಂಡು ಚಕ್ರ ,ಎಂಟು ಮೂಲ ಜಂಟಿ, ನಕ್ಷತ್ರ ಪಟ, ಗೂಬೆ ಪಟ ಮತ್ತು ಗಂಡಬೇರುಂಡ ಪಟ ಹೀಗೆ ವಿವಿಧ ನಮೂನೆಯ ಗಾಳಿಪಟಗಳನ್ನು ಕಟ್ಟುತ್ತಿದ್ದೆ. ಇದು ನಮ್ಮ ತಂದೆ ನನಗೆ ಕಲಿಸಿದ್ದು. ಗಾಳಿಪಟ ನಿರ್ಮಾಣಕ್ಕೆ ತೆಂಗಿನ ಗರಿಯ ಕಡ್ಡಿ ಅಥವಾ ಬಿದಿರನ್ನು ಕಡ್ಡಿಯಾಗಿ ಮಾಡಿಕೊಂಡು ದಾರದಿಂದ ಕಟ್ಟಲಾಗುತ್ತಿತ್ತು. ಅಳತೆ ಸರಿಯಾಗಿರಬೇಕು. ಇಲ್ಲದಿದ್ದರೆ ಅದು ಸರಿಯಾಗಿ ಹಾರುತ್ತಿರಲಿಲ್ಲ. ಕಡ್ಡಿಯಿಂದ ಚೌಕಟ್ಟು ತಯಾರಿಸಿದ ಮೇಲೆ,  ಕಳ್ಳಿ ಗಿಡದಿಂದ ಹಾಲನ್ನು ತರುತ್ತಿದ್ದವು. ಕಳ್ಳಿ ಹಾಲನ್ನು ಕಟ್ಟಿದ ಚೌಕಟ್ಟಿಗೆ ಸವರಿ, ಅದರ ಮೇಲೆ ಬಣ್ಣದ ಕಾಗದ ಹಿಟ್ಟು ಅಂಟಿಸುತ್ತಿದ್ದೆವು. ಬಣ್ಣದ ಕಾಗದದ ಮೇಲೆ ಬೇರೆ ಬೇರೆ ಬಣ್ಣದ ಕಾಗದದಿಂದ ವಿವಿಧ ಆಕೃತಿಗಳನ್ನು ಕತ್ತರಿಸಿ ಅದರಮೇಲೆ ಅಂಟಿಸುತ್ತಿದ್ದೆವು. ಆ ಪಟವನ್ನು ನೋಡುವುದೇ ಒಂದು ಸಂಭ್ರಮ.
           ಗಾಳಿಪಟಕ್ಕೆ ಬಣ್ಣದ ಕಾಗದ, ಅದರ ಮೇಲೆ ವಿವಿಧ ಚಿತ್ರದ ಆಕೃತಿ ಅಂಟಿಸಿದ ಮೇಲೆ, ಅದಕ್ಕೆ ಸೂತ್ರದಾರ ಕಟ್ಟಬೇಕು. ಅದು ಸರಿಯಾದ ಅಳತೆಯಲ್ಲಿರಬೇಕು. ಒಂದು ದಾರದ ಅಳತೆ ವ್ಯತ್ಯಾಸವಾದರೆ ಪಟ ಹಾರುವಾಗ ಒಂದು ಕಡೆ ವಾಲಿಕೊಂಡು ಮತ್ತೆ ಯಾವುದೋ ದಿಕ್ಕಿನಲ್ಲಿ ಹಾರುವ ಸಂಭವವಿತ್ತು. ಹಾರುವಾಗ ಶಬ್ದ ಉಂಟು ಮಾಡಲಿ ಎಂದು ಕಾಗದದಿಂದ ಹಲ್ಲಿನಂತೆ ಕತ್ತರಿಸಿ ಬೋರ್ ಮಾಡುತ್ತಿದ್ದೆವು. ಅದನ್ನು ಚೌಕಟ್ಟನ್ನು ಎಳೆದು ಹಿಂದೆ ಕಟ್ಟುತ್ತಿದ್ದೆವು. ಅದು ಹಾರುವಾಗ ಶಬ್ದ ಉಂಟು ಮಾಡುತ್ತಿತ್ತು. ಅದರ ಕೆಳಗೆ ಬಾಲಂಗೋಚಿ ಬೇಕಾಗಿತ್ತು.  ಅದಕ್ಕೆ ಮನೆಯಲ್ಲಿದ್ದ ಹಳೆ ಸೀರೆ ಹರಿದು ಬಾಲಂಗೋಚಿ ಮಾಡುತ್ತಿದ್ದೆವು.  ಅದಕ್ಕೆ ಪೂರಕವಾಗಿ ದಾರ ಬೇಕಾಗಿತ್ತು. ದಾರ ತುಂಬಾ ತೆಳುವಾದರೆ , ಪಟವು ಕಿತ್ತುಕೊಂಡು ಹೋಗುತ್ತಿತ್ತು. ಗಾಳಿ ಜೋರಾಗಿ ಬೀಸಿದರೆ ದಾರ ತೆಳುವಾಗಿದ್ದರೆ ಕಿತ್ತುಕೊಂಡು ಹೋಗಿ ಒಂದು ಅಥವಾ ಎರಡು ಕಿಲೋಮೀಟರ್ ದೂರದಲ್ಲಿ ಯಾವುದೋ ಮರದ ಕೊಂಬೆಗೆ ಸಿಕ್ಕಿ ನೇತಾಡುತ್ತಿತ್ತು.  ಆಗ ಗೆಳೆಯರೆಲ್ಲ ಕಿತ್ತುಹೋದ ಪಟದ ಹಿಂದೆ ಓಡಿ ಹೋಗಿ ಅದನ್ನು ವಾಪಸ್ಸು ತರುವುದು ಒಂದು ಸಾಹಸವಾಗುತ್ತಿತ್ತು. ಅದೇ ದಾರ ದಪ್ಪವಾದರೆ  ಮೇಲೆ ಹಾರುತ್ತಿರಲಿಲ್ಲ.  ಪ್ರತಿ ಮನೆಗೆ ಒಂದು ಅಥವಾ ಎರಡು, ಇನ್ನೂ ಹೆಚ್ಚು ಪಟಗಳು ಹಾರುತಿದ್ದವು. ಬಯಲು ಪಟದಿಂದ ತುಂಬಿರುತ್ತಿತ್ತು. ಆ ಹಾರಟ ನೋಡುವುದೇ ಒಂದು ಸಂಭ್ರಮ. ಎಲ್ಲಾ ಪಟಗಳು ಹಾರಾಡುವಾಗ ಒಂದು ಇನ್ನೊಂದರ ಮೇಲೆ ಬಿದ್ದು, ಎರಡು ಪಟಗಳು ಕೆಳಗಿಳಿಯುವಾಗ ಒಂದು ರೀತಿ ಜಗಳ ಪ್ರಾರಂಭವಾಗುತ್ತಿತ್ತು.
            ನಾನು ಬಾಲ್ಯದಲ್ಲಿ ವಿವಿಧ ನಮೂನೆ ಪಟ ಕಟ್ಟಿಕೊಟ್ಟು ಹಣ ಸಂಪಾದಿಸುತ್ತಿದ್ದೆ. ಹಬ್ಬ ಬಂದರೆ ಎಲ್ಲರಿಗೂ ಪಟ ಕಟ್ಟಿಕೊಡುವುದೇ ಒಂದು ಕೆಲಸ. ಪಟಗಳು ವಿವಿಧ ಗಾತ್ರದಲ್ಲಿ ನಿರ್ಮಾಣ ವಾಗುತ್ತಿತ್ತು. ಇದರ ಜೊತೆಗೆ ದೊಡ್ಡವರು ಗುಡಿಸಿಲಿಗೆ ನಿರ್ಮಿಸಿದ ಬಾಗಿಲನ್ನೇ ಪಟವನ್ನಾಗಿ  ಮಾಡಿ ಹಾರಿಸುತ್ತಿದ್ದರು. ಇದಕ್ಕೆ ದಾರವಾಗಿ ಬಾವಿಯಿಂದ ನೀರು ಸೇದುತ್ತಿದ್ದ ಹಗ್ಗವನ್ನೇ ಒಂದುಕ್ಕೊಂದು ಸೇರಿಸಿ ಗಂಟು ಹಾಕಿ ಹಾರಿಸುತ್ತಿದ್ದರು. ಆ ಪಟದ ಗಾತ್ರ ಒಬ್ಬ ದೊಡ್ಡ ಮನುಷ್ಯನ ಎತ್ತರ ಇರುತ್ತಿತ್ತು. ಅದನ್ನು ಹಾರಿಸಲು ಊರಿನ ಹಿರಿಯರು, ತರುಣರು 20ರಿಂದ 30 ಮಂದಿ ಹಗ್ಗ ಹಿಡಿದು ಹಾರಿಸುತ್ತಿದ್ದರು. ಅದು ಮೇಲಕ್ಕೆ ಹಾರುತ್ತಿದ್ದಂತೆ 20 ಮಂದಿ ಜನರನ್ನು ದರದರನೆ ಎಳೆದುಕೊಂಡು ಹೋಗುತ್ತಿತ್ತು. ಜನ ಕೇಕೆ ಹಾಕಿಕೊಂಡು ಉಸಿರು ಬಿಗಿಹಿಡಿದು ಹಾರಿಸಿದ್ದು  ನನ್ನ ಮುಂದೆ ಆ ಚಿತ್ರಣ ಇನ್ನೂ ಇದೆ.
            ಗಂಡ-ಬೇರುಂಡ ಪಟ ಬಹಳ ಎತ್ತರಕ್ಕೆ ಹಾರುತ್ತಿರಲಿಲ್ಲ. ಏಕೆಂದರೆ ಅದಕ್ಕೆ ಹೆಚ್ಚು ಕಡ್ಡಿ ಬಳಕೆ ಮಾಡಲಾಗುತ್ತಿತ್ತು. ಅದು ಹಾರಲು ಹೆಚ್ಚು ಗಾಳಿ ಬೇಕಾಗುತ್ತಿತ್ತು. ಬೇರೆ ಪಟಗಳು ಆಕಾಶದಲ್ಲಿ ತುಂಬಾ ಎತ್ತರದಲ್ಲಿ ಹಾರಾಡುತ್ತಿದ್ದರೆ ಬಣ್ಣಬಣ್ಣದ ನಕ್ಷತ್ರದಂತೆ ಕಾಣುತ್ತಿತ್ತು. 
         ಹೀಗೆ ಬಾಲ್ಯದಲ್ಲಿ ಗಾಳಿಪಟ ಹಬ್ಬವನ್ನು ಊರಿನ ಎಲ್ಲರೂ ಸೇರಿ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೆವು.  ಹಬ್ಬಗಳ ವೈಶಿಷ್ಟ ವಿಶಿಷ್ಟವಾಗಿ ಜನರನ್ನು ಒಂದು ಕಡೆ ಸೇರಿಸುತ್ತಿತ್ತು.  ಜನರೆಲ್ಲ ದುಃಖಗಳನ್ನು  ಮರೆತು ಸಡಗರದಿಂದ ಭಾಗವಹಿಸುತ್ತಿದ್ದರು. ನೆಮ್ಮದಿಯ ಜೀವನದ ಭಾಗವಾಗಿ  ಎಲ್ಲರ ಬದುಕಿನಲ್ಲಿ ಸಂತೋಷವನ್ನು ಮೂಡಿಸುತ್ತಿತ್ತು. ಜೀವನದ ಸಂಭ್ರಮಕ್ಕೆ ಮೂಲ ನೆಲೆಯಾಗಿತ್ತು ಈ ಹಬ್ಬ.
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************* Ads on article

Advertise in articles 1

advertising articles 2

Advertise under the article