-->
ಅಕ್ಕನ ಪತ್ರ -17ಕ್ಕೆ ಮಕ್ಕಳ ಉತ್ತರ : ಸಂಚಿಕೆ -1

ಅಕ್ಕನ ಪತ್ರ -17ಕ್ಕೆ ಮಕ್ಕಳ ಉತ್ತರ : ಸಂಚಿಕೆ -1

ಅಕ್ಕನ ಪತ್ರ - 17ಕ್ಕೆ
ಮಕ್ಕಳ ಉತ್ತರ : ಸಂಚಿಕೆ -1

ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ....... ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ...... ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಮಕ್ಕಳ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........            ನಮಸ್ತೆ ಅಕ್ಕ..... ನಾನು ಶ್ರಾವ್ಯ .... ನೀವು ಪ್ರತಿ ಬಾರಿ ನಮ್ಮೊಂದಿಗೆ ಹಂಚಿಕೊಳ್ಳುವ ವಿಚಾರ ನಿಜವಾಗಿಯೂ ನಮ್ಮ ಜೀವನದಲ್ಲಿ ಒಂದು ಬದಲಾವಣೆ ತರುತ್ತದೆ. ನಿಮ್ಮ ಮಾತು ಸತ್ಯ. ಅವಿಭಕ್ತ ಕುಟುಂಬದಿಂದಲೇ ಕೂಡಿದ್ದಂತಹ ಕಾಲ ಬದಲಾಗಿ ಈಗ ಎಲ್ಲೆಡೆ ವಿಭಕ್ತ ಕುಟುಂಬಗಳು ಮನೆ ಮಾಡಿದೆ. ಈಗ ಮನೆಯಲ್ಲಿ ಕೇವಲ 3 ರಿಂದ 4 ಜನ ಇರುವುದು. ಹಬ್ಬ ಸಮಾರಂಭ ಇದ್ದಾಗ ಮಾತ್ರ ಎಲ್ಲಾ ಒಟ್ಟುಗೂಡುವುದು, ಆಟವಾಡುವುದು, ಮಾತನಾಡುವುದು. ವ್ಯಕ್ತಿಗಳು ದೂರವಾದಂತೆ ಸಂಬಂಧವೂ ದೂರವಾಗುತ್ತಿದೆ. ಎಷ್ಟೋ ಸ‌ಂದರ್ಭದಲ್ಲಿ ಸಂಬಂಧಿಕರನ್ನು ಸಂಪರ್ಕಿಸುವ ಅವಕಾಶ ಇದ್ದರೂ ನಾವು ಅವರಲ್ಲಿ ಮಾತನಾಡುವ, ವಿಚಾರ ವಿನಿಮಯ ಮಾಡುವ ಗೋಜಿಗೆ ಹೋಗುವುದಿಲ್ಲ. ತೀರಾ ಹತ್ತಿರ ಸಂಬಂಧಿ ಸ್ನೇಹಿತೆಯಾದರೂ ಸರಿ. ಒಮ್ಮೆ ಯಾವುದೋ ಹಬ್ಬಕ್ಕೆ ಭೇಟಿಯಾದರೆ ಇನ್ನೂ ಮುಂದಿನ ವರುಷವೆ ಭೇಟಿಯಾಗುತ್ತೇವೆ. ಹೀಗಿರುವಾಗಲೂ ನಾವು ಅವರಿಗೆ ಒಂದು ಕರೆ ಮಾಡಿ ಮಾತನಾಡುವುದು ಕಡಿಮೆ. ನಿಮ್ಮ ಮಾತು ನಿಜ. ಒಂದು ಪ್ರೀತಿಯ ಕರೆ ಅಕ್ಕರೆಯ ಮಾತು ಸಾಕು ಮನಸ್ಸು ತೃಪ್ತಿಗೊಳ್ಳಲು. ಈ ಪತ್ರದ ಮೂಲಕ ನಾನು ನನ್ನ ಕೆಲ ಸಂಬಂಧಿಕರಿಗೆ ಸ್ನೇಹಿತರಿಗೆ ಕರೆಮಾಡಿ ಕೆಲ ವಿಚಾರ ಹಂಚಿಕೊಳ್ಳುವಂತೆ ಆಯಿತು. ಧನ್ಯವಾದ ಅಕ್ಕ ನಿಮ್ಮ ಪ್ರೀತಿಯ ಮಾತು ಸದಾ ನಮ್ಮ ಜೊತೆಗಿರಲಿ
....................................................... ಶ್ರಾವ್ಯ
ಪ್ರಥಮ ಪಿಯುಸಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************


         ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ಅಕ್ಕ ನಾನು ಕ್ಷೇಮ , ನೀವು ಕ್ಷೇಮವಾಗಿದ್ದೀರಿ ಎಂದು ಭಾವಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ನಮಗೆ ನಮ್ಮ ಸಂಬಂಧಿಕರೊಂದಿಗೆ, ಬಂಧುಗಳೊಂದಿಗೆ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಮಾತನಾಡಲು ಅವಕಾಶವೇ ಇಲ್ಲ ಎಂಬಂತಾಗಿದೆ. ಆದರೂ ನಾವು ಅವರಿಗಾಗಿ ಸಮಯವನ್ನು ಮೀಸಲಿಡಬೇಕಾಗಿರುವುದು ಬಹಳ ಮುಖ್ಯ. ಅವರೊಂದಿಗೆ ನಮ್ಮ ಸಮಯವನ್ನು ಹಂಚಿಕೊಂಡಾಗ ತುಂಬಾ ಖುಷಿಯೆನಿಸುತ್ತದೆ. ನಾನು ಸಮಯವಿದ್ದಾಗ ನನ್ನ ಅಜ್ಜಿ ಜೊತೆ ತುಂಬಾ ಮಾತನಾಡುತ್ತೇನೆ. ಅವರಿಗೆ ನಮ್ಮ ಮನೆಗೆ ಬರಲು ಕೆಲಸದೊತ್ತಡದಿಂದ ಸಾಧ್ಯವಾಗುತ್ತಿಲ್ಲ. ನಾನು ನನ್ನ ಅಜ್ಜ, ಅಜ್ಜಿಯೊಂದಿಗೆ ಮಾತನಾಡಿದಾಗ ಅವರಿಗೂ ಏನೋ ಕಳೆದುಕೊಂಡದ್ದು ಸಿಕ್ಕಿದಂತಾಗುತ್ತದೆ. ನನ್ನೊಂದಿಗೆ ಮನಬಿಚ್ಚಿ ಹರಟುತ್ತಾರೆ. ನನಗೂ ಅವರೊಂದಿಗೆ ಮಾತನಾಡಿದ ಒಂದೊಂದು ವಿಷಯವೂ ಅಮೂಲ್ಯವೆನಿಸುತ್ತದೆ. ಆ ಹಿರಿಜೀವಗಳಿಗೆ ಖುಷಿ ಕೊಟ್ಟೆನಲ್ಲಾ ಎಂದು ಸಮಾಧಾನವಾಗುತ್ತದೆ. ಹೀಗೆ ಎಲ್ಲರೂ ಸಂಬಂಧಿಕರಿಗಾಗಿ ತಮ್ಮ ಕಿಂಚಿತ್ತು ಸಮಯವನ್ನು ಮೀಸಲಿಡೋಣ.
            ಧನ್ಯವಾದಗಳೊಂದಿಗೆ
........................................ ವೈಷ್ಣವಿ ಕಾಮತ್ 
5ನೇ ತರಗತಿ.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
********************************************
 

        ನಮಸ್ತೆ ನನ್ನ ಪ್ರೀತಿಯ ಅಕ್ಕನಿಗೆ ಆಯಿಷತ್ ಹರ್ಝ ಮಾಡುವ ನಮಸ್ಕಾರಗಳು.... ಹೌದು ನಿಜವಾಗಿಯೂ ನಮ್ಮ ಸಂಬಂಧವನ್ನು , ನಮ್ಮ ಕುಟುಂಬದವರನ್ನು ನಾವು ಮರೆಯುತ್ತಿದ್ದೇವೆ. ಈಗ ನಮ್ಮ ಮನೆಯಲ್ಲಿ ನಾನು, ಅಮ್ಮ, ಅಪ್ಪ, ಅಕ್ಕ, ತಮ್ಮ ಇಷ್ಟೇ.. ನೋಡಬೇಕೆಂದರೆ ಈಗ ಎಲ್ಲರ ಮನೆಯಲ್ಲಿ ಇಷ್ಟೇ ಜನ ಇರುವುದು.. ನಂಗೆ ತುಂಬಾ ಆಸೆ ನನ್ನ ಅಜ್ಜಿಯ ಮಡಿಲಲ್ಲಿ ಮಲಗಿ ಕಥೆ ಕೇಳಬೇಕು.... ಆದ್ರೆ ಆಗುವುದಿಲ್ಲ. ನಮ್ಮೆಲ್ಲರಲ್ಲೂ ಫೋನ್ ಇದೆ , ಆದರೂ ಕೂಡ ನಮ್ಮ ಸಂಬಂಧಿಕರಲ್ಲಿ ಮಾತನಾಡುವಷ್ಟು ಸಮಯ ಕೂಡ ನಮ್ಮಲ್ಲಿಲ್ಲ... ಈ ಅಕ್ಕನ ಪತ್ರ ಓದಿ ಈಗ ಅರ್ಥ ಆಗುತ್ತಿದೆ... ನಾನು ವಾರಕ್ಕೆ ಒಂದು ಸಾರಿ ಆದ್ರೂ ಮಾತನಾಡುವಷ್ಟು ಸಮಯ ತೆಗೆದುಕೊಳ್ತೇನೆ.. thanks ಅಕ್ಕ.. ನಿಮ್ಮ ಪತ್ರ ದಿಂದ ನಮಗೆ ತುಂಬಾ ಸಹಾಯ ಆಗ್ತಿದೆ.. ಆದ್ರೆ ನನ್ನ ಪುಣ್ಯ ನೀವು ನನ್ನ ಟೀಚರ್.. ನೀವು ಯಾವಾಗಲೂ ಪಾಠ ಮಾಡುವಾಗ ಬುದ್ಧಿ ಮಾತು ಹೇಳ್ತೀರಿ... ಇನ್ನು ವಾರಕ್ಕೆ ಎರಡು ಮೂರು ದಿನ ಆದ್ರೂ ಸಂಬಂಧಿಕರ ಜೊತೆ ಮಾತನಾಡುತ್ತಾ ಇರುತ್ತೇವೆ.. ನಿಮಗೆ ನನ್ನ ವಂದನೆಗಳು...
...................................ಆಯಿಷತ್ ಹರ್ಝ
8 ನೆಯ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಗೋಳಿತ್ತಟ್ಟು.
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


        ನಮಸ್ತೆ ಅಕ್ಕ, ನಾನು ಶ್ರೇಯ. ನಾನು ಕ್ಷೇಮವಾಗಿದ್ದೇನೆ. ನೀವು ಕ್ಷೇಮವಾಗಿದ್ದೀರೆಂದು ಭಾವಿಸುತ್ತೇನೆ. ಇದೀಗ ನೀವು ಬರೆದ ಪತ್ರಕ್ಕೆ ನಾನು ಎರಡನೆಯ ಬಾರಿ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಪತ್ರದಿಂದ ನನಗೆ ಸಂಬಂಧದ ಬಾಂಧವ್ಯ ತಿಳಿಯಿತು. ಮೊದಲೆಲ್ಲಾ ಒಂದೇ ಮನೆಯಲ್ಲಿ ದೊಡ್ಡ ಕುಟುಂಬಗಳು ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಒಂದು ಮನೆಯಲ್ಲಿ ತಂದೆ -ತಾಯಿ, ಮಕ್ಕಳು ಮಾತ್ರ ಇದ್ದೇವೆ. ನಾವೆಲ್ಲಾ ಮಕ್ಕಳು ಅಜ್ಜಿಯ ಕಥೆ, ಅಜ್ಜನ ಒಡನಾಟ, ಹೀಗೇ ಎಲ್ಲವನ್ನು ಕಳೆದುಕೊಂಡಿದ್ದೇವೆ. ಬಿಡುವಿನ ಸಮಯದಲ್ಲಿಯಾದರೂ ಅವರನ್ನೆಲ್ಲ ನೆನಪಿಸಿಕೊಂಡು ಒಂದು ಪೋನ್ ಮಾಡಿ ಮಾತನಾಡಬೇಕೆಂದು ಅಂದುಕೊಂಡಿದ್ದೇನೆ. ಇನ್ನು ಮುಂದೆ ನೀವು ಹೇಳಿದ ಹಾಗೆ ನಮಗೆ ಪ್ರೀತಿಪಾತ್ರರಾದ ಹಿರಿಯಲ್ಲಿ ಮಾತಾಡ್ತಾ ಸಂತೋಷದಿಂದ ಇರುತ್ತೇವೆ. ಖುಷಿ ಆಯ್ತು. ಇನ್ನು ನಮ್ಮ ಭೇಟಿ ಮುಂದಿನ ಪತ್ರದಲ್ಲಿ. 
ಧನ್ಯವಾದಗಳೊಂದಿಗೆ ........................
.......................................... ಶ್ರೇಯ 
8ನೇ ತರಗತಿ
ಸರ್ಕಾರಿ ಪ್ರೌಢಶಾಲಾ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ,ದಕ್ಷಿಣ ಕನ್ನಡ ಜಿಲ್ಲೆ
********************************************

ಮಕ್ಕಳ ಜಗಲಿ.... ಅಕ್ಕನ ಪತ್ರ...17
   ಪ್ರೀತಿಯ ಅಕ್ಕ... ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು... ನಿಜಕ್ಕೂ ನಮ್ಮ ಸಂಬಂಧಿಕರೊಂದಿಗೆ ಕಳೆದ ಸಮಯವು ನಮಗೆ ತುಂಬಾ ಉಲ್ಲಾಸವನ್ನು ತಂದುಕೊಡುವುದು... ನಾನು ಆವಾಗಾವಾಗ ನನ್ನ ಅಜ್ಜಿ ಮನೆಗೂ, ಮುತ್ತಜ್ಜಿಯ ಮನೆಗೂ ಅಮ್ಮನೊಂದಿಗೆ ಹೋಗುತ್ತಿರುತ್ತೇನೆ... ಅವರೊಂದಿಗೆ ಮಾತನಾಡುವುದು, ಸಮಯ ಕಳೆಯುವುದು ನನಗೆ ತುಂಬಾ ಖುಷಿ... ಹಾಗೆಯೇ ನನ್ನಜ್ಜ , ಮಾವ ಅವರ ಮಕ್ಕಳು ಹಾಗೂ ನನ್ನ ನೆರೆಯ ಗೆಳತಿಯರೊಂದಿಗೆ ನಾನು ತುಂಬಾ ಒಡನಾಟದಲ್ಲಿ ಇರುತ್ತೇನೆ.... ನಿಜಕ್ಕೂ ಅವರೆಲ್ಲರೊಂದಿಗೆ ಕಳೆದ ಸಮಯವು ನನಗೆ ತುಂಬಾ ಅಮೂಲ್ಯ ವೆನಿಸುವುದು.... ಧನ್ಯವಾದಗಳು ಅಕ್ಕ... ನೀವು ಪತ್ರದಲ್ಲಿ ತುಂಬಾ ಒಳ್ಳೆಯ ವಿಚಾರವನ್ನು ನಮಗೆ ತಿಳಿಸಿರುತ್ತೀರಿ.. ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಿರುತ್ತೇನೆ... ಇಂತಿ ನಿಮ್ಮ ಪ್ರೀತಿಯ ಲಹರಿ.
............................................ ಲಹರಿ ಜಿ.ಕೆ.
7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್
ತುಂಬೆ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************


ನಮಸ್ತೆ ಅಕ್ಕ. ನಾನು ಕೃತಿಕಾ. ಈ ವಾರದ ನಿಮ್ಮ ಅಕ್ಕನ ಪತ್ರದಲ್ಲಿ ಸಂಬಂಧಗಳನ್ನು ಗಟ್ಟಿಯಾಗಿಸುವ ವಿಚಾರವಿದೆ. ಹೌದು. ನೀವು ಹೇಳಿದ್ದು ಸರಿ. ನಮ್ಮ ಕುಟುಂಬದವರು ಮಾತ್ರ ನಮ್ಮ ಸಂಬಂಧಿಕರಲ್ಲ. ನಮಗೆ ಸಹಾಯ ಮಾಡುವವರು, ನಮ್ಮ ಸುಖ ದುಃಖಗಳಲ್ಲಿ ಭಾಗಿಯಾಗುವವರೂ ನಮ್ಮ ಸಂಬಂಧಿಕರೇ. ಅದು ಗೆಳೆಯರೆ ಆಗಿರಲಿ ಅಥವಾ ನಮ್ಮ ನೆರೆ ಹೊರೆಯವರೆ ಆಗಿರಲಿ. ನಾನು ನನ್ನ ಸಂಬಂಧಿಕರ ಜೊತೆ ಬಹಳ ಸಲ ಮಾತನಾಡಿದ್ದೇನೆ. ಅವರಿಗೆ ನಾವು ಕರೆ ಮಾಡಿ ಅವರೊಂದಿಗೆ ಮಾತನಾಡಿದೆವಲ್ಲ ಎಂದು ಸಂತೋಷವಾಗುತ್ತದೆ. ಇನ್ನೂ ಒಳ್ಳೆಯ ವಿಷಯವನ್ನು ಪತ್ರದ ಮೂಲಕ ನಮಗೆ ಕಳುಹಿಸಿ. ಧನ್ಯವಾದಗಳು
................................................ ಕೃತಿಕಾ. ಕೆ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************

      ನಮಸ್ತೇ ಅಕ್ಕಾ...... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶನು ಮಾಡುವ ನಮಸ್ಕಾರಗಳು.
        ನಿಮ್ಮ ಪತ್ರವನ್ನು ನಾನು ಎಲ್ಲರೊಂದಿಗೆ ಕುಳಿತು ಓದಿದೆನು. ಸುಮಾರು ವರುಷಗಳ ಹಿಂದೆ ದೂರವಾಣಿ ಎಂಬುದು ಇರಲಿಲ್ಲಾ. ಆಗೆಲ್ಲ ರಾಜರ ಕಾಲದಲ್ಲಿ ಪಾರಿವಾಳ ದ ಮೂಲಕ ವಿಷಯವನ್ನು ಕಳುಹಿಸುತಿದ್ದರು. ಆಮೇಲೆ ಅಂಚೆಯ ಮೂಲಕ ಪತ್ರವನ್ನು ಕಳುಹಿಸಿ ಅದರಿಂದ ವಿಷಯವನ್ನು ತಿಳಿಯುತ್ತಿದ್ದೆವು.
       ಆದರೆ ಈಗ ದೂರವಾಣಿಯ ಮೂಲಕ ಎಲ್ಲರಲ್ಲಿಯೂ ಮಾತನಾಡುವ ಒಳ್ಳೆಯ ಒಂದು ವ್ಯವಸ್ಥೆಯು ನಮ್ಮಲ್ಲಿ ಆಗಿದೆ. ನಮಗೆ ಫೋನ್ ನಲ್ಲಿ ನಮ್ಮ ಅಜ್ಜ-ಅಜ್ಜಿ, ದೊಡ್ಡಪ್ಪ -ದೊಡ್ಡಮ್ಮ, ಚಿಕ್ಕಪ್ಪ -ಚಿಕ್ಕಮ್ಮ, ಅಣ್ಣಾ -ಅಕ್ಕಾ, ತಮ್ಮ ಇವರಲ್ಲಿ ಮಾತನಾಡುವಾಗ ತುಂಬಾ ಸಂತೋಷವಾಗುತ್ತದೆ.
 ಬಿಡುವು ಮಾಡಿಕೊಂಡು ನಾವು ಒಂದು ಫೋನ್ ಮೂಲಕ ಮಾತನಾಡಿ ನಮ್ಮ ಬಾಂಧವ್ಯವನ್ನು ಉಳಿಸೋಣ ಮತ್ತು ನಮ್ಮ ದೇಶದ ಸಂಸ್ಕೃತಿಯ ಸೊಬಗನ್ನು ಉಳಿಸಿ ನಾವೆಲ್ಲರೂ ಪ್ರೀತಿಯಿಂದ ಬಾಳೋಣ. ಎಂದು ಪತ್ರದ ಮೂಲಕ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು ಅಕ್ಕಾ.
 ....................................... ಸಾತ್ವಿಕ್ ಗಣೇಶ್ 7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


ನಮಸ್ತೆ ಅಕ್ಕಾ......... ನಾನು ನಿಭಾ
      ಹೌದು ನೀವು ಹೇಳಿದ್ದು ಸತ್ಯ. ನಾವು ಎಷ್ಟೋ ಬಾರಿ ಹಿರಿಯರು ಹೇಳಿದ ಮಾತುಗಳನ್ನು ಗಮನಿಸುವುದಿಲ್ಲ. ಆದರೆ ಕೆಲವೊಮ್ಮೆ ಆ ಮಾತುಗಳು ನಮಗೆ ಸಹಾಯವಾಗುತ್ತದೆ. ಇನ್ನೂ ಕೆಲವೊಮ್ಮೆ ಹಿರಿಯರ ಸಲಹೆಗಳನ್ನು ಅರ್ಧಂಬರ್ದ ಕೇಳಿಸಿಕೊಂಡರೆ ಮುಂದೊಂದು ದಿನ ನಾನು ಅವರ ಸಲಹೆಗಳನ್ನು ಪೂರ್ತಿಯಾಗಿ ಕೇಳಿದ್ದರೆ ಒಳ್ಳೆಯದಿತ್ತು ಎಂದು ಭಾಸವಾಗುತ್ತದೆ. ಹೀಗೆ ಎಷ್ಟೋ ಬಾರಿ ನನಗೂ ಅನಿಸಿದೆ. ನಾನು ಕೂಡ ಕೆಲವೊಮ್ಮೆ ಮೊಬೈಲ್ ಅಥವಾ ಟಿವಿ ನೋಡುತ್ತಾ ಕುಳಿತರೆ ಯಾರ ಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲ. ಆದರೆ ಈಗ ನನಗೆ ಅಕ್ಕನ ಪತ್ರ ಓದಿದ ಮೇಲೆ ಅರ್ಥವಾಗಿದೆ. ಇನ್ನೂ ಮುಂದೆ ಟಿವಿ ಮೊಬೈಲ್ ಬಿಟ್ಟು ಮನೆಯವರೊಂದಿಗೆ ಕಾಲ ಕಳೆಯುತ್ತೇನೆ.
ನನಗೆ ಇದನ್ನು ತಿಳಿಸಿದ ನಿಮಗೆ ತುಂಬಾ ಧನ್ಯವಾದಗಳು. ಮುಂದಿನ ನಿಮ್ಮ ಪತ್ರಕ್ಕಾಗಿ ಕಾಯುತ್ತಿದ್ದೇನೆ.
................................................... ನಿಭಾ 
8ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ನೇರಳಕಟ್ಟೆ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************

       ನಮಸ್ತೆ ಅಕ್ಕ ನಾನು ನಿಮ್ಮ ಮಮತೆಯ ತಂಗಿ ಧೃತಿ. ನಾನು ಚೆನ್ನಾಗಿದ್ದೇನೆ , ನೀವು ಹೇಗಿದ್ದೀರಿ.....? ಹೌದು ನೀವು ಹೇಳಿದ ಹಾಗೆ ಮೊದಲು ಮನೆಗಳು ಚಿಕ್ಕದಾಗಿದ್ದು ಅದರೊಳಗಿನ ಜನರು ತುಂಬಾ ಇದ್ದರೂ ಸಹ ಅವರ ಮನಸ್ಸು ಬಹಳ ವಿಶಾಲವಾಗಿದ್ದವು. ಆದರೆ ಈಗಿನ ಕಾಲದಲ್ಲಿ ಮನೆಗಳ ದೊಡ್ಡದಾಗಿದ್ದರೂ ಅದರೊಳಗಿನ ಜನರ ಸಂಖ್ಯೆ ಕಡಿಮೆಯಾಗಿದೆ. ಹಾಗೆಯೇ ಅವರ ಮನಸ್ಸುಗಳು ಚಿಕ್ಕದಾಗಿದೆ. ನಾವು ಇದನ್ನು ತಿಳಿದಿದ್ದರೂ ನಾವು ಹಾಗೆ ವರ್ತಿಸುತ್ತೇವೆ. ಏಕೆಂದರೆ ಅದು ಮನುಷ್ಯನ ಸಹಜ ಗುಣ ಎನ್ನಬಹುದು. ನನಗೆ ನನ್ನ ಅಜ್ಜಿಯ ಜೊತೆ ಮಾತನಾಡುವುದೆಂದರೆ ಬಹಳ ಇಷ್ಟ. ನಾನು ವಾರದಲ್ಲಿ ಒಂದು ಸಲವಾದರೂ ಅಜ್ಜಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತೇನೆ. ಅವರು ಸಹ ಖುಷಿಯಿಂದ ಮಾತನಾಡುತ್ತಾರೆ. ಅಜ್ಜಿ ,ಮಾತ್ರವಲ್ಲದೆ ಅಕ್ಕ ,ಅತ್ತೆ , ಮಾವ, ಚಿಕ್ಕಮ್ಮ, ದೊಡ್ಡಮ್ಮ ಇವರ ಜೊತೆ ಮಾತನಾಡುತ್ತೇನೆ. ನಾವು ಸಣ್ಣದಿರುವಾಗ ಸಾಕಿ ಸಲಹಿದ ಅಜ್ಜಿಯನ್ನು ನಾವು ಎಂದೂ ಮರೆಯಬಾರದು. ನಾನು ನನ್ನನ್ನು ಸಾಕಿದ ಅಜ್ಜಿಯ ಮನೆಗೆ ವಾರದಲ್ಲಿ ಒಂದು ಸಲ ಹೋಗಿ ಮಾತನಾಡಿಸಿ ಕ್ಷೇಮಸಮಾಚಾರ ಕೇಳಿ ಬರುತ್ತೇನೆ. ಇದು ನನಗೆ ಬಹಳ ಆನಂದವನ್ನು ನೀಡುತ್ತದೆ. ನಾವು ವಾರದಲ್ಲಿ ಒಂದು ಸಲ ಅಲ್ಲದಿದ್ದರೂ ತಿಂಗಳಿಗೆ ಒಮ್ಮೆಯಾದರೂ ನಮ್ಮ ಅಣ್ಣ, ಅಕ್ಕ ಅವರ ಜೊತೆ ಮುಖತಹ ಮಾತನಾಡದಿದ್ದರೂ ಫೋನ್ನಲ್ಲಿ ಮಾತನಾಡಿದರೆ ಅವರ ನಮ್ಮಬಾಂಧವ್ಯ ಗಟ್ಟಿಯಾಗಿರುತ್ತದೆ. ಇದನ್ನು ಮತ್ತೊಮ್ಮೆ ನೆನಪಿಸಿದ್ದಕ್ಕೆ , ಅಕ್ಕನಿಗೆ ಧನ್ಯವಾದಗಳು...
....................................................... ಧೃತಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ..
********************************************

        ನಮಸ್ತೆ ಅಕ್ಕ..... ನಾನು ನಿಮ್ಮ ಪ್ರೀತಿಯ ತಂಗಿ ರಕ್ಷಾ. ಒಂದು ದಿನ ನಾನು ಅಜ್ಜಿಗೆ ಕರೆ ಮಾಡಿದ್ದೆ. ನೀನು ಚೆನ್ನಾಗಿ ಇದ್ದೀಯಾ ಅಂತ ಕೇಳಿದರು. ನಾನು ಚೆನ್ನಾಗಿ ಇದ್ದೇನೆ ಅಂತ ಹೇಳಿದೆ. ‌ಆಗ ಅಜ್ಜಿ ಪರೀಕ್ಷೆಗಳೆಲ್ಲ ಆಯಿತಾ ಎಂದು ಕೇಳಿದರು. ಆಗ ನಾನು ಆಯಿತು ಎಂದು ಹೇಳಿದೆ. ನಂತರ ಅಜ್ಜಿ ನನ್ನ ಬಾಲ್ಯದ ತುಂಟಾಟವನ್ನು ನಾನು ಚಿಕ್ಕಂದಿನಲ್ಲಿ ಇರುವ ವಿಷಯವನ್ನು ಹೇಳುತ್ತಾ ಅಜ್ಜಿ ನೀನು ಚೆನ್ನಾಗಿ ಓದಿ ಒಳ್ಳೆಯ ವಿದ್ಯಾವಂತಳಾಗು ಎಂದು ಹೇಳಿದರು. ಆ ಮಾತು ನನ್ನ ಮನಸ್ಸಿಗೆ ತುಂಬಾ ಸಂತೋಷವನ್ನುಂಟು ಮಾಡಿತು. ಮನೆಯ ಹಿರಿಯರೊಂದಿಗೆ ಮಾತನಾಡಿದಾಗ ಅದೇನು ತುಂಬಾ ಖುಷಿ.... ಅವರು ಪ್ರೀತಿಪೂರ್ವಕವಾಗಿ ಹಾರೈಸುವ ಮಾತುಗಳು ನನ್ನಲ್ಲಿ ತುಂಬಾ ಶಕ್ತಿ ನೀಡುತ್ತದೆ. ಹೀಗೆ ಎಲ್ಲರೊಂದಿಗೆ ನಾನು ಮಾತನಾಡುತ್ತಾ ಖುಷಿಯಲ್ಲಿ ಇರುತ್ತೇನೆ...
ಧನ್ಯವಾದಗಳೊಂದಿಗೆ
....................................................... ರಕ್ಷಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article