ಓ ಮುದ್ದು ಮನಸೇ ...…...! ಸಂಚಿಕೆ -16
Monday, February 21, 2022
Edit
ಓ ಮುದ್ದು ಮನಸೇ ...…...! ಸಂಚಿಕೆ -16
ಎತ್ತಣದಿಂದೆತ್ತ ಚಿತ್ತ
---------------------------
ವಿಜ್ಞಾನಿ ಡಾರ್ವಿನ್ ಹೇಳಿದಂತೆ ಮನುಷ್ಯನೂ ಒಂದು ಕಾಡು ಪ್ರಾಣಿ..! ಜೀವಕುಲ ವಿಕಸನದಲ್ಲಿ ರೂಪಬದಲಿಸಿಕೊಂಡು ಮುಖಕ್ಕೊಂಚೂರು ಪೌಡರ್ ಮೆತ್ತಿ, ತುಟಿಗೆ ಲಿಪ್ ಸ್ಟಿಕ್ ಒತ್ತಿ, ಬೈಕು ಕಾರನ್ನು ಹತ್ತಿ ಸುತ್ತಾಡುತ್ತಿರುವ ನಾವು ಇವತ್ತಿಗೂ ಪ್ರಾಣಿಗಳೇ, ಕಾಡುಪ್ರಾಣಿಗಳಲ್ಲ ಅಷ್ಟೇ..! ಹೌದು ಮನುಷ್ಯನೂ ಒಂದು ಪ್ರಾಣಿ ಅನ್ನೋದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಸಾವಿರಾರು ವರ್ಷಗಳ ಹಿಂದೆ ಪ್ರಾಣಿ ಪ್ರಪಂಚದಲ್ಲಿ ಮನುಷ್ಯನೇ ಮೈನಾರಿಟಿ, ಆದರೆ ಈಗ ಭೂಮಿಯ ಮೇಲಿರುವ ಎಲ್ಲಾ ಜಲಚರ ಜೀವ ಜಂತುಗಳ ಮೇಲೂ ಮನುಷ್ಯ ಹಿಡಿತ ಸಾಧಿಸಿದ್ದಾನೆ. ಅವನ ದೃಷ್ಟಿ ಜಲದಂತರಾಳದಿಂದ ಹಿಡಿದು ಗಗನದೆತ್ತರಕ್ಕೆ ಚಾಚಿಕೊಂಡಿದೆ. ಎಲ್ಲವನ್ನು ಬಾಚಿಕೊಳ್ಳುವ ತವಕ, ಒಂದಿಡೀ ಬ್ರಹ್ಮಾಂಡವೇ ತನ್ನದೆನ್ನುವಂತೆ ತೋರುತ್ತಿರುವ ಅವನ ವರ್ತನೆ ನಿಸರ್ಗ ನಿಯಮಕ್ಕೆ ಬಾಹಿರ ಎಂದರೆ ತಪ್ಪಾಗಲಾರದು.
ಇವತ್ತು ಭೂಮಿಮೇಲಿನ ಬಹುತೇಕ ಜೀವ ಸಂಕುಲಗಳು ಮಾನವನ ಸ್ವಾರ್ಥ, ಲಾಸ್ಯ ಮತ್ತು ಅಹಂ ಗೆ ಬಲಿಪಶುಗಳಾಗಿವೆ, ನರಳಿವೆ ಮತ್ತು ನರಳುತ್ತಿವೆ. ಅದು ಎಷ್ಟರ ಮಟ್ಟಿಗೆ ಅಂದರೆ, ನಾನು ಇತ್ತೀಚೆಗೆ ಚೀನಾ ದೇಶದಲ್ಲಿದ್ದಾಗ ಒಂದು ಮಾಂಸ ತಯಾರಿಕಾ ಕಂಪೆನಿಗೆ ಭೇಟಿ ಕೊಟ್ಟಿದ್ದೆ, ಅದರಲ್ಲಿ ಜೋಡಿಸಲಾಗಿದ್ದ ಗಜಗಾತ್ರದ ಯಂತ್ರದ ಒಂದು ಬಾಗದಲ್ಲಿ ಸರದಿ ಸಾಲಿನಲ್ಲಿ ನಿಲ್ಲಿಸಲಾಗಿದ್ದ ಬೆಳ್ಳನೆ ಚರ್ಮದ ಗುಂಡು ಗುಂಡಾದ ಹಂದಿಗಳು ಕುಷಿ ಕುಷಿಯಾಗಿ ನೀರಿನ ಸ್ಪ್ರಿಂಕ್ಲರ್ ನಲ್ಲಿ ಒದ್ದೆಯಾಗುತ್ತಿದ್ದವು. ನನಗೆ ಗೈಡ್ ಮಾಡಲು ಬಂದಿದ್ದ ಕಂಪನಿಯ ಕೆಲಸಗಾರನೊಬ್ಬ ಪಕ್ಕದಲ್ಲಿದ್ದ ಹಸಿರು ಬಟನ್ ಒಂದನ್ನು ಒತ್ತಿದ. ತಕ್ಷಣ ಹಂದಿಗಳನ್ನು ನಿಲ್ಲಿಸಲಾಗಿದ್ದ ಆ ಭಾಗ ನಿಧಾನವಾಗಿ ಯಂತ್ರದ ಒಳಗೆ ಚಲಿಸಲಾರಂಭಿಸಿತು. ಹಾಗೆ ಒಳಗೆ ಹೋದ ಒಂದೊಂದೇ ಹಂದಿಗಳನ್ನ ತನ್ನೆಡೆಗೆ ಎಳೆದುಕೊಳ್ಳುತ್ತಿದ್ದ ಮತ್ತೊಂದು ಯಂತ್ರ ಅವುಗಳ ಕತ್ತು ಸೀಳಿ ಇನ್ನೊಂದು ಭಾಗಕ್ಕೆ ರವಾನೆ ಮಾಡುತ್ತಿತ್ತು, ಆಮೇಲೆ ದೇಹ, ಮತ್ತೆ ಕೈಕಾಲುಗಳು. ನಾನು ಆ ಬಹುಗಾತ್ರದ ಯಂತ್ರವನ್ನು ಸುತ್ತಿ ಇನ್ನೊಂದು ಭಾಗಕ್ಕೆ ಬರುವ ಹೊತ್ತಿಗೆ ಅತ್ತ ಕಡೆ ಜೀವಂತವಾಗಿ ಕುಷಿ ಕುಷಿಯಾಗಿದ್ದ ಹಂದಿಗಳು ಮಾಂಸದ ಮುದ್ದೆಗಳಾಗಿ ಪ್ಲಾಸ್ಟಿಕ್ ಲಕೋಟೆಯಲ್ಲಿ ಶೇಖರಣೆಗೊಂಡು ಹೊರಬರುತ್ತಿದ್ದವು...!
ಆಹಾರಕ್ಕಾಗಿ ಒಂದು ಜೀವಿ ಇನ್ನೊಂದು ಜೀವಿಯನ್ನು ತಿನ್ನುವುದು ಆಹಾರ ಸರಪಳಿಯ ಒಂದು ಭಾಗವೇ ಆಗಿದೆ, ಅದೇ ಪ್ರಕೃತಿಯ ನಿಯಮ. ಆದರೆ ಮಾನವನನ್ನು ಹೊರತು ಪಡಿಸಿ ಭೂಮಿಯ ಮೇಲಿನ ಯಾವ ಜೀವಿಯೂ ಆಹಾರ ಮತ್ತು ರಕ್ಷಣೆಗಲ್ಲದೆ ಇನ್ಯಾವುದೇ ಕಾರಣಕ್ಕೂ ಇನ್ನೊಂದು ಜೀವಿಗೆ ಹಾನಿಯುಂಟು ಮಾಡುವುದಿಲ್ಲ, ಬದಲಾಗಿ ಪ್ರಕೃತಿನಿಯಮಾನುಸಾರವಾಗಿ ಜೀವಸಂಕುಲಗಳ ಜೀವನಚಕ್ರದ ಭಾಗವಾಗಿ, ಪ್ರಕೃತಿಯ ಸಮತೋಲನಕ್ಕೆ ಸಹಕರಿಸುತ್ತದೆ. ಆದರೆ ಬೇರೆಲ್ಲಾ ಜೀವಿಗಳಿಗಿಂತ ಬುದ್ಧಿವಂತರಾದ ನಾವು ಆಹಾರ, ರಕ್ಷಣೆಗಷ್ಟೇ ಅಲ್ಲದೆ ವಿಲಾಸಕ್ಕಾಗಿ, ಸ್ವಾರ್ಥಕ್ಕಾಗಿ ಅಥವಾ ಕೇವಲ ನಮ್ಮ ಪೌರುಷದ ಪ್ರದರ್ಶನಕ್ಕಾಗಿ ಇನ್ನಿತರ ಜೀವ ಸಂಕುಲಗಳ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಲೇ ಇದ್ದೇವೆ.
ಈಗಾಗಲೇ ಮೂರರಲ್ಲಿ ಒಂದು ಭಾಗದಷ್ಟು ಕಾಡನ್ನು ನಾಶಮಾಡಿರುವ ನಾವು ಅದೆಷ್ಟೋ ಜೀವಿಗಳಿಗೆ ನೆಲೆಯಿಲ್ಲದಂತೆ ಮಾಡಿದ್ದೇವೆ. ಮೂಳೆ, ಚರ್ಮಗಳ ಕಳ್ಳಸಾಗಾಣಿಕೆಗಾಗಿ, ದಂತಕ್ಕಾಗಿ, ಮಾಂಸಕ್ಕಾಗಿ, ಮೂಢನಂಬಿಕೆಗಾಗಿ, ಅಥವಾ ಮನರಂಜನೆಗಾಗಿ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಪರಿಸರದ ನಿಯಮಕ್ಕೆ ಮಾರಕವಾಗಿದ್ದೇವೆ. ಜಗತ್ತಿನಾದ್ಯಂತ ಪ್ರತಿ ವರ್ಷ ಆಹಾರಕ್ಕಾಗಿ ಸುಮಾರು 170 ರಿಂದ 190 ಮೆಟ್ರಿಕ್ ಟನ್ ಮೀನುಗಳು ಮಾನವನಿಂದ ಕೊಲ್ಲಲ್ಪಟ್ಟರೆ ಸುಮಾರು ಅದೇ ಪ್ರಮಾಣದ ಮೀನುಗಳು ಅನವಶ್ಯಕವಾಗಿ ಬಲೆಗೆ ಸಿಕ್ಕು, ಕಲುಷಿತ ತೈಲಗಳಿಂದ, ಪ್ಲಾಸ್ಟಿಕ್ ನಿಂದ ಅಥವಾ ಇನ್ನಿತರ ಮಾನವನ ವರ್ತನೆಯಿಂದ ಸಾಯಲ್ಪಡುತ್ತವೆ.
ನಮ್ಮ ಆರಾಮದ ಜೀವನವನ್ನು ಹೆಚ್ಚಿಸಲು ಸಹಕಾರಿಯಾಗುವ ಕುರ್ಚಿ ಮೇಜುಗಳ ಮತ್ತು ಇನ್ನಿತರ ವಸ್ತುಗಳ ನಿರ್ಮಾಣಕ್ಕೆ ಕಾಡಿಗೆ ಹೋಗಿ ಹತ್ತಾರು ವರ್ಷಗಳಿಂದ ಬೆಳೆದು ನಿಂತಿರುವ ದಪ್ಪ ದಪ್ಪನೆಯ ಮರಗಳನ್ನು ಕಡಿದು, ಕೆತ್ತಿ ಸ್ವಾರ್ಥಕ್ಕಾಗಿ ಬಳಸುತ್ತೇವೆ. ಅವೇ ಮರಗಳು ನಾಡಿಗೆ ಬಂದು ಹತ್ತಾರು ವರ್ಷಗಳಿಂದ ಬದುಕಿ ಬಾಳಿರುವ ದಪ್ಪ ದಪ್ಪನೆಯ ಮನುಷ್ಯರನ್ನು ಕಡಿದು ಕೆತ್ತಿ ಬಳಸಿಕೊಂಡರೆ...? ಸಮುದ್ರಕ್ಕೆ ಹೋಗಿ ಬಲೆ ಬೀಸಿ ಬಣ್ಣ ಬಣ್ಣದ ಪುಟಾಣಿ ಮೀನುಗಳನ್ನು ಹಿಡಿದು ತಂದು ಮನೆಯೊಳಗಿನ ಗಾಜಿನ ಹೂಜಿಯಲ್ಲಿ ಬಿಟ್ಟು ಅವುಗಳನ್ನು ನಮ್ಮ ಮಕ್ಕಳ ಆಟಿಕೆಗಳಂತೆ ಬಳಸುತ್ತೇವೆ. ಅದೇ ಆ ಮೀನುಗಳು ನಾಡಿಗೆ ಬಂದು ಬೆಳ್ಳಗಿನ ಪುಟ್ಟ ಪುಟ್ಟ ಮಕ್ಕಳನ್ನು ಬಲೆ ಬೀಸಿ ಹಿಡಿದೊಯ್ದು ಸಮುದ್ರದಾಳದ ತಮ್ಮ ಮನೆಗಳಲ್ಲಿ ಗಾಜಿನ ಕೋಣೆ ನಿರ್ಮಿಸಿ ಅದರಲ್ಲಿ ಮಕ್ಕಳನ್ನು ಬಿಟ್ಟು ಆಟಿಕೆಯಂತೆ ಬಳಸಿದರೆ.....? ಅಥವಾ ಚೀನಾದ ಕಂಪನಿಯಂತೆ ಹಂದಿಗಳೆಲ್ಲಾ ಸೇರಿ ಒಂದು ಯಂತ್ರ ನಿರ್ಮಿಸಿ ಅದರಲ್ಲಿ ದಷ್ಟ ಪುಷ್ಟವಾಗಿ ಬೆಳೆದ ಮನುಷ್ಯರನ್ನು ಹಾಕಿ ಮಾಂಸದ ಮುದ್ದೆಗಳನ್ನು ತಯಾರಿಸಿದರೆ......? ನಮ್ಮಲ್ಲಿ ಸಾಕಷ್ಟು ಪ್ರಾಣಿ ಸಂಗ್ರಹಾಲಯಗಳಿವೆ ಅಲ್ಲಿ ಭಿನ್ನ ವಿಭಿನ್ನ ಪ್ರಾಣಿಗಳನ್ನು ಕೂಡಿ ಹಾಕಿರುವ ನಾವು ನೋಡಿ ಕುಷಿ ಪಡುತ್ತೇವೆ. ಅದೇ ಪ್ರಾಣಿಗಳು ನಮ್ಮನ್ನು ಹಿಡಿದು ಕಬ್ಬಿಣದ ಪಂಜರದಲ್ಲಿಟ್ಟು ನೋಡಿ ಕುಷಿಪಟ್ಟರೆ......?
ಇವೆಲ್ಲವೂ ಊಹೆಗೂ ನಿಲುಕದ ವಿಚಾರಗಳಷ್ಟೆ. ಆದರೆ ಬುದ್ಧಿಶೀಲ ಮಾನವರು ನಾವು ಮಾತ್ರ ಹೀಗೆ ಯೋಚಿಸಲು ಸಾಧ್ಯ.....! ನಮ್ಮ ಬುದ್ಧಿಶೀಲತೆಗೊಂದು ಅರ್ಥ ಇಲ್ಲವೆಂದರೆ ಉಳಿದೆಲ್ಲವೂ ವ್ಯರ್ಥ..!!
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು,
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
**********************************************