-->
ಮನದೊಳಗಿನ ಪ್ರಶ್ನೆ ಕೇಳಿ....! : ಸಂಚಿಕೆ -1

ಮನದೊಳಗಿನ ಪ್ರಶ್ನೆ ಕೇಳಿ....! : ಸಂಚಿಕೆ -1


          ಮನದೊಳಗಿನ ಪ್ರಶ್ನೆ ಕೇಳಿ :  ಸಂಚಿಕೆ - 1
       ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ನಾವೆಲ್ಲಾ ಇದ್ದೇವೆ. ವಾರ್ಷಿಕ ಪರೀಕ್ಷೆಗಳು ಹತ್ರ ಬರ್ತಾ ಇದೆ. ಶೈಕ್ಷಣಿಕವಾಗಿ ಅನೇಕ ತೊಂದರೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ನಿರಾಳವಾಗಿ ಪರೀಕ್ಷೆಯನ್ನು ಎದುರಿಸಬೇಕೆಂದು ಮಕ್ಕಳ ಜಗಲಿಯ ಉದ್ದೇಶ. ತಮ್ಮ ಮನದೊಳಗಿನ ಅನೇಕ ಪ್ರಶ್ನೆಗಳ ಗೊಂದಲದಲ್ಲಿ ಮುಳುಗದೆ ಅದನ್ನು ಪರಿಹರಿಸುವ ಸಲುವಾಗಿ ಈ ವಿಶೇಷ ಅಂಕಣವನ್ನು ಪ್ರಾರಂಭಿಸಿದ್ದೇವೆ. ಓ ಮುದ್ದು ಮನಸೇ - ಅಂಕಣದ ಮೂಲಕ ಮಕ್ಕಳ ಜಗಲಿಯಲ್ಲಿ ಪರಿಚಿತರಾಗಿರುವ ಡಾ. ಗುರುರಾಜ ಇಟಗಿಯವರು....... ಮಕ್ಕಳು ಕಳಿಸಿರುವ ಮನದೊಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ್ದಾರೆ..... 

        ಪ್ರಶ್ನೆ ೧: ಸರ್ ನನ್ನ ಹೆಸರು ಗೀತಾ (ಹೆಸರು ಬದಲಿಸಲಾಗಿದೆ) ನಾನು ಈಗ ಹತ್ತನೇ ತರಗತಿ, ಎರಡೇ ತಿಂಗಳು ಬಿಟ್ಟು ವಾರ್ಷಿಕ ಪರೀಕ್ಷೆ, ಯಾವರೀತಿ ಓದಬೇಕು ಅಂತಾ ಗೊತ್ತಾಗ್ತಾ ಇಲ್ಲ, ಓದಿದ್ದು ನೆನಪಿರಲ್ಲ. ಪರೀಕ್ಷೆ ಹತ್ರ ಬರುತ್ತಿದ್ದ ಹಾಗೆ ಭಯ ಬರೋದಿಕ್ಕೆ ಪ್ರಾರಂಭವಾಗ್ತಿದೆ. ಪರಿಹಾರ ತಿಳಿಸಿ ಸರ್?                    
         ಮೊದಲು ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ನೀವೇ ನಿಮ್ಮ ಪ್ರಶ್ನೆಯಲ್ಲಿ ಹೇಳಿರುವಂತೆ ಪರೀಕ್ಷೆಯ ಕುರಿತು ನೀವು ಭಯವನ್ನು ಬೆಳೆಸಿಕೊಂಡಿರುವುದರಿಂದ ಮೆದುಳು ಒತ್ತಡಕ್ಕೆ ಸಿಲುಕಿ ಓದಿದ್ದನ್ನು ಅರ್ಥೈಸಿಕೊಳ್ಳಲು, ಅರ್ಥೈಸಿಕೊಂಡದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಮತ್ತು ನೆನಪಿಟ್ಟುಕೊಂಡದ್ದನ್ನು ಸಮಯಾನುಸಾರ ಮರು ಪಡೆಯಲು ಸಮಸ್ಯೆಯಾಗುತ್ತದೆ. ಇನ್ನು ಭಯದಿಂದ ಹೊರಬರುವುದನ್ನು ತಿಳಿಯುವ ಮುನ್ನ ಭಯ ಯಾಕೆ ಬರುತ್ತದೆ ಎನ್ನುವುದನ್ನು ತಿಳಿಯಬೇಕು. 
ಸಾಮಾನ್ಯವಾಗಿ ಈ ಕೆಳಗಿನ ಕಾರಣಗಳು ಪರೀಕ್ಷಾ ಭಯವನ್ನು ಹುಟ್ಟುಹಾಕುತ್ತವೆ.
೧) ಕೊನೆಯ ಹಂತದಲ್ಲಿ ಓದಲು ಆರಂಭಿಸುವುದರಿಂದ ಆಗುವ ಸಮಯದ ಅಭಾವ.
೨) ಕಡಿಮೆ ಅಂಕಗಳಿಸಿದಾಗ ಆಗಬಹುದಾದ ಅಪಮಾನದ ಕುರಿತು ಯೋಚಿಸುವುದು.
೩) ಲಭ್ಯವಿರುವ ಸಮಯವನ್ನು ಸದ್ಭಳಕೆ ಮಾಡದಿರುವುದು.
೪) ಕಲಿಕಾ ಕೆಲಸ-ಕಾರ್ಯಗಳನ್ನು ಮುಂದೂಡುವ ಹವ್ಯಾಸ.
೫) ಪರೀಕ್ಷೆಗೆ ಓದಲು ಸರಿಯಾದ ಪೂರ್ವ ತಯಾರಿ ಮಾಡದಿರುವುದು.
೬) ವರ್ತನಾ ಸಮಸ್ಯೆಯುಳ್ಳ ಗೆಳೆಯರೊಟ್ಟಿಗಿನ ಸಂಪರ್ಕ.
೭) ನಕಾರಾತ್ಮಕವಾಗಿ ಯೋಚಿಸುವುದು.
೮) ಉತ್ತಮ ಓದಿಗೆ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳದಿರುವುದು.
೯) ಪರೀಕ್ಷೆಯನ್ನು ಒಂದು ಸವಾಲಿನಂತೆ ನೋಡುವುದು.
೧೦) ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒತ್ತು ಕೊಡದಿರುವುದು.
        ಹಾಗಿದ್ದರೆ ಇವುಗಳಿಂದ ಹೊರಬಂದು ಉತ್ಸಾಹದಿಂದ ಪರೀಕ್ಷೆಯ ಸವಿಯನ್ನು ಸವಿಯುವುದು ಹೇಗೆ?
          ಪರೀಕ್ಷೆ ಒಂದು ಆತಂಕವಲ್ಲ ಬದಲಾಗಿ ಅದೊಂದು ಆಚರಣೆ! ವರ್ಷವಿಡೀ ಓದಿ ಪರೀಕ್ಷೆಯೆಂಬ ಆಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಉತ್ತಮ ಪ್ರಯತ್ನದಿಂದ ಒಂದಿಷ್ಟು ಅಂಕಗಳಿಸುವುದೇ ಚೆಂದ. ಹಾಗಾಗಿ ಅಂತಹ ಆಚರಣೆಗೆ ಪ್ರತಿದಿನದ ಸಿದ್ಧತೆಯ ಅವಶ್ಯಕತೆಯಿದೆ. ಶಾಲೆಗೆ ಸೇರಿದಾಗಿಂದ ಪರೀಕ್ಷೆ ಆರಂಭವಾಗುವವರೆಗೂ ನೀವು ಬದ್ಧತೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಧೈರ್ಯ ಹೆಚ್ಚುತ್ತದೆ. ಇನ್ನು ಕೆಲವು ವಿದ್ಯಾರ್ಥಿಗಳು ಸದಾಕಾಲ ನಕಾರಾತ್ಮಕವಾಗಿ ಯೋಚಿಸುತ್ತ ಪರೀಕ್ಷೆ ಬರೆಯುವ ಮುನ್ನವೇ ಪಡೆಯಬಹುದಾದ ಅಂಕಗಳ ಕುರಿತು ಮತ್ತು ಅದರಿಂದ ಆಗಬಹುದಾದ ಅವಮಾನದ ಕುರಿತೂ ಯೋಚಿಸುತ್ತಾರೆ. ಹೀಗೆ ಮಾಡುವುದರ ಅವಶ್ಯಕತೆಯಿಲ್ಲ ಏಕೆಂದರೆ ಎಲ್ಲರೂ ಸಮರಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಸಾಮರ್ಥ್ಯವಿರುತ್ತದೆ. ಅಂಕ ಹೆಚ್ಚು ಅಥವಾ ಕಡಿಮೆಯಿರಲಿ ಅದು ನಿಮ್ಮ ಸಾಮರ್ಥ್ಯಕ್ಕೆ ತಕ್ಕದಾಗಿರಲಿ. ಹಾಗಾಗಿ ಉತ್ತಮ ರೀತಿಯಲ್ಲಿ ಸಿದ್ಧರಾಗಿ ಪರೀಕ್ಷೆ ಬರೆಯುವುದಷ್ಟೇ ನಿಮ್ಮ ಕೆಲಸ, ಅಂಕದ ಕುರಿತು ಯೋಚಿಸುವುದಲ್ಲ. ಪ್ರತಿದಿನವೂ ಲಭ್ಯವಿರುವ ಸಮಯವನ್ನು ಒಟ್ಟಿಗೆ ಸೇರಿಸಿ, ಅತ್ಯವಶ್ಯಕವಲ್ಲದ ಕೆಲಸ ಕಾರ್ಯಗಳಿದ್ದರೆ ಅವುಗಳನ್ನು ಸಧ್ಯದ ಮಟ್ಟಿಗೆ ಮುಂದೂಡಿ. ಪ್ರತಿದಿನವೂ ಓದಲು ಒಂದಿಷ್ಟು ಗುರಿಗಳನ್ನು ಇಟ್ಟುಕೊಂಡರೆ ಉತ್ತಮ. ಸ್ವಲ್ಪ ಓದಿದರೂ ಪರವಾಗಿಲ್ಲ ಸರಿಯಾಗಿ ಓದಿ, ಇಂದಿನದ್ದನ್ನು ಇಂದೇ ಮುಗಿಸುವ ಹವ್ಯಾಸ ಬೆಳೆಸಿಕೊಳ್ಳಿ. ಓದಲು ಒಂದು ಉತ್ತಮ ಸ್ಥಳವನ್ನು ಗುರುತಿಸಿ ಮತ್ತು ಅಲ್ಲಿ ಓದಲು ಪ್ರೇರಕವಾಗುವಂತ ವಸ್ತುಗಳನ್ನು, ಪುಸ್ತಕಗಳನ್ನು, ಚಿತ್ರಪಟಗಳನ್ನು ಶಿಸ್ತಿನಿಂದ ಜೋಡಿಸಿ. ನಿಮ್ಮ ಭವಿಷ್ಯತ್ತಿನ ಗುರಿಯನ್ನು ದೊಡ್ಡ ಬಿಳಿ ಹಾಳೆಯ ಮೇಲೆ ಬರೆದು ಬಣ್ಣ ತುಂಬಿ ಗೋಡೆಗೆ ಅಂಟಿಸಿ. ಯಾವುದೇ ಕಾರಣಕ್ಕೂ ನಿಮ್ಮ ದೇಹಕ್ಕೆ ಆರಾಮ ನೀಡುವಂತಹ ಕುರ್ಚಿ, ದಿಂಬು, ಹಾಸಿಗೆ ಮುಂತಾದ ವಸ್ತುಗಳನ್ನು ಬಳಸುವುದು ಬೇಡ ಇವುಗಳು ನಿಮ್ಮನ್ನು ನಿದ್ರೆಗೆ ಜಾರುವಂತೆ ಮಾಡುತ್ತವೆ. ಓದುವ ಕೋಣೆಯಲ್ಲಿ ನಿಮ್ಮ ಜೀವನದ ರೋಲ್ ಮಾಡೆಲ್ ಫೋಟೋ ಅಂಟಿಸಿದರೂ ಒಳ್ಳೆಯದು. ಸುಮಧುರ ಪರಿಮಳ ಬೀರುವ ಅಥವ ನಿಮಗೆ ಇಷ್ಟವಾದ ಪರಿಮಳ ಭರಿತ ವಸ್ತುವೊಂದನ್ನು ಆ ಕೋಣೆಯಲ್ಲಿಟ್ಟುಬಿಡಿ. ಪ್ರತಿದಿನವೂ ಓದನ್ನು ಆರಂಭಿಸೋದಕ್ಕೂ ಮತ್ತು ನಿಲ್ಲಿಸೋದಕ್ಕೂ ಒಂದು ಸಮಯ ನಿಗದಿ ಮಾಡಿ. ಪರೀಕ್ಷಾ ತಯಾರಿಯ ಸಂದರ್ಭದಲ್ಲಿ ಉತ್ತಮ ನಿದ್ರೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಏಳು ಘಂಟೆಗಳ ಉತ್ತಮ ನಿದ್ರೆ ನಿಮ್ಮದಾಗಲಿ. ಸರಿ ಸುಮಾರು ಹತ್ತು ಘಂಟೆಗೆ ಮಲಗಿ ಐದರಿಂದ ಐದು ಮೂವತ್ತರ ಸಮಯದಲ್ಲಿ ಎದ್ದು ಕೈಕಾಲು ಮುಖ ತೊಳೆದು ಓದುವುದು ಉತ್ತಮ. ಹೀಗೆ ಮಾಡುವಾಗ ಹಾಸಿಗೆಯಿಂದ ದೂರವಿರಿ. ಕೆಲವು ಗೆಳೆಯರು ನಿಮ್ಮನ್ನು ಒತ್ತಡಕ್ಕೆ ತಳ್ಳುತ್ತಾರೆ. ನಕಾರಾತ್ಮಕ ವಿಚಾರಗಳನ್ನು ಹೇಳಿ ನಿಮ್ಮಲ್ಲಿ ಭಯ ಬಿತ್ತುತ್ತಾರೆ. ಅಂತವರಿಂದ ದೂರವಿರಿ ಮತ್ತು ನಿಮ್ಮಲ್ಲಿ ಧೈರ್ಯ ತುಂಬುವ, ಓದಿಗೆ ಸಹಕರಿಸುವವರೊಟ್ಟಿಗೆ ಗೆಳೆತನ ಮಾಡಿ. ಶಿಕ್ಷಕರು, ಪಾಲಕರು, ಪಕ್ಕದಮನೆಯ ಅಕ್ಕ ಅಣ್ಣಂದಿರು, ಸುತ್ತಲಿನ ಗೆಳೆಯರು, ಊರಿನ ಗ್ರಂಥಾಲಯ ಮುಂತಾದವುಗಳನ್ನು ನಿಮ್ಮ ಓದಿಗೆ ಬಳಸಿಕೊಳ್ಳಿ ಅವರ ಸಹಕಾರ ಪಡೆಯಿರಿ. ಜೀವನದ ಪ್ರತಿ ಹಂತದಲ್ಲೂ ಪರೀಕ್ಷೆಗಳನ್ನು ನಾವು ಎದುರಿಸಬೇಕಾಗುತ್ತದೆ, ಇದೊಂದೇ ಪರೀಕ್ಷೆ ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಹಾಗಾಗಿ ಇದನ್ನೂ ಒಂದು ಅವಕಾಶವನ್ನಾಗಿ ಬಳಸಿಕೊಳ್ಳಿ. ನೀವು ದೈಹಿಕ ಮತ್ತು ಮಾನಸಿಕವಾಗಿ ಅರೋಗ್ಯಶೀಲರಾಗಿದ್ದರೆ ನಿಮ್ಮ ಮೆದುಳು ಕ್ರೀಯಾಶೀಲತೆಯಿಂದ ಓದಿನಲ್ಲಿ ಸಹಕರಿಸುತ್ತದೆ ಹಾಗಾಗಿ ದಿನನಿತ್ಯ ಮುಂಜಾನೆ ಕನಿಷ್ಟ ಅರ್ಧಘಂಟೆಗಳ ಯೋಗ ವ್ಯಾಯಾಮಗಳು ನಿಮ್ಮ ಜೀವನದ ಭಾಗವಾಗಲಿ. ಉತ್ತಮ ಆಹಾರ ಸೇವಿಸಿ, ಚಿತ್ರ ಬಿಡಿಸಿ, ಹಾಸ್ಯ ಓದಿ ಮತ್ತು ಹಾಸ್ಯ ಮಾಡಿ, ನಗುತ್ತಿರಿ ಮತ್ತು ನಗಿಸಿ. ಪ್ರತಿದಿನವೂ ಅಲ್ಪ ಸಮಯವನ್ನು ಹೀಗೆ ಕಳೆಯುವುದರಿಂದ ನೀವು ಕ್ರಿಯಾಶೀಲರಾಗಿ ಒದಿನಲ್ಲಿ ತೊಡಗಿಸಿಕೊಳ್ಳಬಹುದು. ಓದುವಾಗ ಅರ್ಥೈಸಿಕೊಂಡದ್ದನ್ನು ತುಣುಕು ವಾಕ್ಯದಲ್ಲಿ ಬರೆದಿಟ್ಟುಕೊಂಡರೆ ಪರೀಕ್ಷೆ ಹತ್ತಿರ ಬಂದಂತೆ ಹೆಚ್ಚು ಓದುವ ಒತ್ತಡದಿಂದ ಹೊರಬರಬಹುದು. ಅಲ್ಪ ಸಮಯದಲ್ಲಿ ಬರೆದಿಟ್ಟ ತುಣುಕು ವಾಕ್ಯಗಳನ್ನು ಓದಿಕೊಳ್ಳುವುದರಿಂದ ಓದಿದ್ದನ್ನು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಹೆಚ್ಚಿನ ಸಹಾಯಕ್ಕಾಗಿ ಶಿಕ್ಷಕರನ್ನು ಸಂಪರ್ಕಿಸಿ. ಪರೀಕ್ಷಾ ಹಬ್ಬವು ನಿಮಗೆ ಖುಷಿಕೊಡಲಿ. 


ಪ್ರಶ್ನೆ ೨: ನನ್ನ ಹೆಸರು ನಯನಾ (ಹೆಸರು ಬದಲಿಸಲಾಗಿದೆ) ನನಗೆ ಓದಲು ಮನಸ್ಸಿಲ್ಲ..... ಜಾಸ್ತಿ ಮೊಬೈಲ್ ನೋಡಿ ಹೋಗುತ್ತೆ.... ಕಲಿತದ್ದು ನೆನಪಲ್ಲಿ ಇರಲ್ಲ.. ಏನುಮಾಡೋದು?
        ಉತ್ತರ ನಿಮ್ಮ ಪ್ರಶ್ನೆಯಲ್ಲೇ ಇದೆ..! ಮೊಬೈಲ್ ಎಂಬ ಮಾಯಾ ಪೆಟ್ಟಿಗೆಯು ನಿಮ್ಮ ಮೆದುಳಿನಲ್ಲಿ ಹೊಕ್ಕು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಕೆಲವರಂತಾರೆ ಮೊಬೈಲ್ ನಲ್ಲಿ ಸಾಕಷ್ಟು ಒಳ್ಳೆ ವಿಚಾರಗಳಿವೆ, ನಾನಿದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅದೇ ಮೊಬೈಲ್ ನಲ್ಲಿ ಕೆಟ್ಟದ್ದೂ ಇದೆ. ಮೊಬೈಲ್ ಅನ್ನು ವಯಸ್ಕರಿಗೆ ಅನುಗುಣವಾಗಿ ಸೃಷ್ಠಿಸಲಾಗಿದೆಯೇ ವಿನಹ ಮಕ್ಕಳಿಗಾಗಿ ಅಲ್ಲ. ಪ್ರಸ್ತುತ ಲಭ್ಯವಿರುವ ಮೊಬೈಲ್ ಗಳು ಮಕ್ಕಳ ಬಳಕೆಗೆ ಯೋಗ್ಯವಾಗಿಲ್ಲ. ಸಾಕಷ್ಟು ಸಂಶೋಧನೆಗಳು ಮೊಬೈಲ್ ಮತ್ತು ಇಂಟರ್ ನೆಟ್ ಬಳಕೆಯು ಮಕ್ಕಳ ಮಾನಸಿಕ, ದೈಹಿಕ, ಸಾಮಾಜಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಆರೋಗ್ಯಕ್ಕೆ ಮಾರಕ ಅನ್ನುವುದನ್ನು ಕಂಡುಕೊಂಡಿವೆ. ಅಷ್ಟಕ್ಕೂ ನಿಮಗೆ ಓದುವ ವಯಸ್ಸಿನಲ್ಲಿ ಯಾವುದಾದರೂ ಉದ್ಯೋಗವಿದೆಯೇ? ವ್ಯವಹಾರ? ಅಥವಾ ನೀವು ಯಾವುದಾರರೂ ಕ್ಷೇತ್ರದಲ್ಲಿ ಜವಾಬ್ದಾರಿಯನ್ನೇನಾದರೂ ವಹಿಸಿಕೊಂಡಿದ್ದೀರಾ? ಇಲ್ಲ ತಾನೇ? ಕೇವಲ ಮನರಂಜನೆಗಾಗಿ ನಮ್ಮ ಓದಿನ ಆಸಕ್ತಿಯನ್ನೇ ಕಸಿಯುವ, ಸಮಯವನ್ನು ತಿಂದುಹಾಕುವ ಮೊಬೈಲ್ ಬಳಸುವ ಅವಶ್ಯಕತೆಯೇನಿದೆ. ಮನೋರಂಜನೆಗಾಗಿ ಸಾಕಷ್ಟು ಅವಕಾಶಗಳಿವೆ. ಯಾವುದಾದರೂ ನೃತ್ಯ, ಚಿತ್ರಕಲೆ, ಸಂಗೀತ ಮುಂತಾದ ತರಗತಿಗಳಿಗೆ ಸೇರಿಕೊಂಡಾಗ ನಿಮ್ಮ ಅಮೂಲ್ಯ ಸಮಯ ಮೊಬೈಲ್ ನೋಡಿ ವ್ಯರ್ಥವಾಗುವ ಬದಲೂ ನಿಮಗೊಂದಿಷ್ಟು ಗೌರವ, ಸಾಧನೆ ಮತ್ತು ಸಂತೋಷವನ್ನು ಪಡೆಯಲು ಸಹಾಯವಾಗುತ್ತದೆ. ನೀವು ಮೊಬೈಲ್ ನೋಡುತ್ತೀರಿ ಅಂದಾದರೆ ನಿಮಗೆ ಮೊಬೈಲ್ ಲಭ್ಯವಿದೆ ಎಂದರ್ಥ. ಕೆಲವೊಮ್ಮೆ ಪಾಲಕರ ಮಾತುಕೇಳದೆ ಮೊಬೈಲ್ ಬಳಸುತ್ತೀರಿ. ಇದರಿಂದ ಮನೆಯಲ್ಲಿ ಪ್ರತಿದಿನ ಕಿರಿಕಿರಿ. ಕೆಲವೊಮ್ಮೆ ಪಾಲಕರೇ ನಿಮ್ಮ ಖುಷಿಗೋಸ್ಕರ ಮೊಬೈಲ್ ಕೊಡುವುದುಂಟು. ಅಂತಹದ್ದೊಂದು ಲಭ್ಯತೆಯಿಂದ ಮೊದಲು ಹೊರಬನ್ನಿ. ಪಾಲಕರೂ ಮಕ್ಕಳ ಮುಂದೆ ಮೊಬೈಲ್ ಬಳಸೋದನ್ನು ಕಡಿಮೆ ಮಾಡಿದರೆ ಉತ್ತಮ. ನಿಮ್ಮ ಭವ್ಯ ಭವಿಷ್ಯತ್ತನ್ನು ಮಾಯಾಪೆಟ್ಟಿಗೆ ಮೊಬೈಲ್ ನಲ್ಲಿಡದಿರಿ. ಇನ್ನು ಉತ್ತಮ ಓದಿಗಾಗಿ ಮೇಲೆ ತಿಳಿಸಿರುವ ಮಾರ್ಗಗಳನ್ನು ಪಾಲಿಸಿ. 
           ನಿಮ್ಮ ಅಡೆತಡೆಯಿಲ್ಲದ ಓದಿಗೆ ಶುಭವಾಗಲಿ..!
.................................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
      With Regards 
Dr. Gururaj Itagi 
MSW (Medical & Psychiatry), PGDCP, Ph.D. (Psychology)
Researcher & Counselor 
Sharada Group of Educational Institutions 
Mangaluru, Karnataka, India
Contact: +91 6361007190
*******************************************


Ads on article

Advertise in articles 1

advertising articles 2

Advertise under the article