-->
ಬಂಟ್ವಾಳ ತಾಲೂಕಿನ ಮೂಡಂಬೈಲು ಶಾಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಬಂಟ್ವಾಳ ತಾಲೂಕಿನ ಮೂಡಂಬೈಲು ಶಾಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿ


                     ಬಂಟ್ವಾಳ ತಾಲೂಕಿನ 
      ಮೂಡಂಬೈಲು ಶಾಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿ
         ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಪುಟ್ಟ ಹಳ್ಳಿ ಮೂಡಂಬೈಲು. ಇಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 90 ವರ್ಷಗಳ ಇತಿಹಾಸವಿದೆ. ಬಹಳಷ್ಟು ಖ್ಯಾತನಾಮ ಶಿಕ್ಷಕರನ್ನು ಕಂಡಿದ್ದ ಮೂಡಂಬೈಲು ಶಾಲೆ ಈ ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದು ಸುದ್ದಿ ಮಾಡಿದೆ. 
        ವಿಪ್ರೋ ಫೌಂಡೇಶನ್‌ ಶಾಲಾ ಕಾಲೇಜುಗಳಿಗಾಗಿ ನಡೆಸುವ ವಿಪ್ರೋ ಅರ್ಥಿಯನ್‌ ಸುಸ್ಥಿರ ಶಿಕ್ಷಣ ಕಾರ್ಯಕ್ರಮ ಎಂಬ ರಾಷ್ಟ್ರಮಟ್ಟದ ಯೋಜನಾ ಕಲಿಕಾ ಸ್ಪರ್ಧೆಯಲ್ಲಿ 2021-22 ನೇ ಸಾಲಿನ ರಾಷ್ಟ್ರಮಟ್ಟದ ವಿಜೇತರು (NATIONAL WINNERS) ಎಂದು ಆಯ್ಕೆಯಾಗುವ ಮೂಲಕ ಈ ಸಾಧನೆ ಮಾಡಿದ ಕರ್ನಾಟಕದ ಏಕಮಾತ್ರ ಸರಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
      ಈ ಶಾಲೆಯಲ್ಲಿ ಸೃಜನಶೀಲ ಶಿಕ್ಷಕ ಅರವಿಂದ ಕುಡ್ಲ ಅವರ ಪಾತ್ರ ಮಹತ್ವದಾಗಿದೆ. ಇಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಶಾಲಾ ಶಿಕ್ಷಕ ತಂಡವನ್ನು ಕ್ರಿಯಾಶೀಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ಶಿಕ್ಷಕರ ಸಮಯೋಚಿತ ಸಹಕಾರದಿಂದ , ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕ ವೃಂದದವರ ಪ್ರೋತ್ಸಾಹದಿಂದ ಶಾಲೆಯಲ್ಲಿ ನಿರಂತರವಾಗಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗಿದೆ. ವಿಪ್ರೋ ಅರ್ಥಿಯನ್‌ ಸುಸ್ಥಿರ ಶಿಕ್ಷಣ ಕಾರ್ಯಕ್ರಮದಡಿ ಇವರೆಲ್ಲರ ನೆರವಿನಿಂದ ವಿದ್ಯಾರ್ಥಿಗಳು ಸಮರ್ಥವಾಗಿ ನಿರ್ವಹಿಸಿ ರಾಷ್ಟ್ರಮಟ್ಟದ ಸಾಧನೆಗೈಯಲು ನೆರವಾಯಿತು.
      ರಾ಼ಷ್ಟ್ರ ಮಟ್ಟದಲ್ಲಿ 20 ಶಾಲೆಗಳನ್ನು WIPRO EARTHIAN NATIONAL WINNERS ಎಂದು ಆಯ್ಕೆ ಮಾಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಸರಕಾರಿ , ಖಾಸಗಿ , ಕನ್ನಡ ಮಾಧ್ಯಮ , ಇಂಗ್ಲೀಷ್‌ ಮಾಧ್ಯಮ ಭೇದವಿಲ್ಲದೆ ಯಾವುದೇ ಶಾಲೆ ಭಾಗವಹಿಸಬಹುದಾಗಿತ್ತು. ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಾದೇಶಿಕ ಭಾಷೆ ಕನ್ನಡದಲ್ಲೇ ಬರೆದ ಯೋಜನಾ ವರದಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. 
        ಏನಿದು....... Wipro earthian :
Wipro earthian ಎನ್ನವುದು ಶಾಲಾ ಕಾಲೇಜುಗಳಿಗಾಗಿ ಸುಸ್ಥಿರ ಶಿಕ್ಷಣ ಕಾರ್ಯಕ್ರಮ. ಯೋಜನಾ ಆಧಾರಿತ ಕಲಿಕಾ ಪದ್ಧತಿಯ ಈ ಕಾರ್ಯಕ್ರಮದಲ್ಲಿ ಮೂರು ಯೋಜನೆಗಳಿರುತ್ತವೆ
  1. ಸುಸ್ಥಿರತೆ ಮತ್ತು ತ್ಯಾಜ್ಯ ನಿರ್ವಹಣೆ
  2. ಸುಸ್ಥಿರತೆ ಮತ್ತು ನೀರು
  3.ಸುಸ್ಥಿರತೆ ಮತ್ತು ಜೀವವೈವಿಧ್ಯ
ಈ ಮೂರು ಯೋಜನೆಗಳಲ್ಲಿ ಒಂದು ಅಥವಾ ಹೆಚ್ಚನ್ನು ಶಾಲೆ ಆಯ್ಕೆ ಮಾಡಿಕೊಳ್ಳಬೇಕು. ಯೋಜನಾ ಕಾರ್ಯ ಹೇಗೆ ಮಾಡಬೇಕು ಎಂಬ ಮಾರ್ಗದರ್ಶಿ ಪುಸ್ತಕವನ್ನು ವಿಪ್ರೋ ಸಂಸ್ಥೆ ಒದಗಿಸುತ್ತದೆ. ಪ್ರತಿ ಯೋಜನೆಯಲ್ಲೂ ಕಡ್ಡಾಯ ಮತ್ತು ಆಯ್ಕೆಯ ಚಟುವಟಿಕೆಗಳು ಇರುತ್ತವೆ. ಜೊತೆಗೆ ಒಂದು ಪ್ರಬಂಧ ರಚನೆಯೂ ಇರುತ್ತದೆ. ಸಂದರ್ಶನ, ಕ್ಷೇತ್ರಭೇಟಿ , ಮಾಡಿನೋಡುವ ಚಟುವಟಿಕೆ ಮತ್ತು ತಂಡದ ಕ್ರಿಯಾಶೀಲತೆಗೆ ಅವಕಾಶಗಳು ಇದರಲ್ಲಿ ಇರುತ್ತವೆ. ಶಾಲೆಗಳಲ್ಲಿ ರಾಷ್ಟ್ರೀಯ ಹಸಿರು ಕಾರ್ಯಪಡೆಯ ಭಾಗವಾಗಿ ನಡೆಯುವ ಇಕೋಕ್ಲಬ್‌ ಚಟುವಟಿಕೆಯಾಗಿ ಈ ಯೋಜನೆಯನ್ನು ಶಾಲೆಗಳು ನಡೆಸುತ್ತವೆ. CPR ಪರಿಸರ ಶಿಕ್ಷಣ ಕೇಂದ್ರವು ಎಲ್ಲರೀತಿಯ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡುತ್ತದೆ. 
           ಮೂಡಂಬೈಲು ಶಾಲೆ ಯಾವ ಯೋಜನೆಯನ್ನು ಆರಿಸಿಕೊಂಡಿತ್ತು ? ಏನೇನು ವಿಶೇಷ ಚಟುವಟಿಕೆಗಳನ್ನು ಮಾಡಲಾಗಿತ್ತು....?
          ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡಂಬೈಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಬಾರಿ ಸುಸ್ಥಿರತೆ ಮತ್ತು ತ್ಯಾಜ್ಯ ನಿರ್ವಹಣೆಯ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದರು. 
 "ನಮ್ಮ ಕಸ ನಮ್ಮ ಹೊಣೆ ; ಸ್ವಚ್ಛತೆಗೆ ಹಾಕು ಮಣೆ" ಎಂಬ ಶೀರ್ಷಿಕೆಯಲ್ಲಿ ಈ ಯೋಜನೆಯನ್ನು ಕೈಗೊಂಡಿದ್ದರು. ಮಾರ್ಗದರ್ಶಿ ಪುಸ್ತಕದಲ್ಲಿರುವ ಚಟುವಟಿಕೆಗಳ ಜೊತೆಗೆ ಯೋಜನೆಗೆ ಪೂರಕವಾದ ಕೆಲವು ವಿಶೇಷ ಚಟುವಟಿಕೆಗಳನ್ನು ಶಾಲಾ ತಂಡ ಕೈಗೊಂಡಿತ್ತು. ಅವುಗಳೆಂದರೆ :
        1. ಹಳೆಯ ಸೀರೆಯಿಂದ ಕಾಲೊರೆಸುವ ಮ್ಯಾಟ್‌ ತಯಾರಿ. 
         2 . ಬಳಸಿ ಎಸೆಯುವ ಪೆನ್‌ ಗಳನ್ನು ಸಂಗ್ರಹಿಸಿ ಅದರಿಂದ ಪೆನ್‌ ಸ್ಟಾಂಡ್‌ ಮತ್ತು ಹೂದಾನಿ ತಯಾರಿ
        3. ಹಳೆಯ ಪ್ಯಾಂಟ್‌ ಬಟ್ಟೆಯಿಂದ ಬಹುಉಪಯೋಗಿ ಚೀಲ ತಯಾರಿ. 
         4. ಮರುಚಕ್ರೀಕರಣ ಗೊಳಿಸಲು ಸಾಧ್ಯವಾಗದ ಪ್ಲಾಸ್ಟಿಕ್‌ ನಿಂದ ಇಕೋ ಬ್ರಿಕ್‌ ತಯಾರಿ. 
         5. ರವಿಕೆ ಕಣದಿಂದ ಹಾರ ತಯಾರಿ
ಹಳೆಯ ಚಿಂದಿ ಬಟ್ಟೆಯಿಂದ ಡಸ್ಟರ್‌ ತಯಾರಿ
          6. ಮರುಚಕ್ರೀಕರಣ ಗೊಳ್ಳುವ ವಸ್ತುಗಳ ಸಂಗ್ರಹ ಮತ್ತು ವಿಂಗಡಣೆ
          7. ಎಲೆಕ್ಟ್ರಾನಿಕ್‌ ವೇಸ್ಟ್‌ ಸಂಗ್ರಹ
ಬಯೋ ಎನ್ಸೈಮ್‌ ತಯಾರಿ
          8. ಹಳೆಯ ಚಿಂದಿ ಪೇಪರ್‌ ನಿಂದ ಮತ್ತೆ ಹೊಸ ಪೇಪರ್‌ ತಯಾರಿ.
       ಹೀಗೆ ಇನ್ನೂ ಕೆಲವು ಚಟುವಟಿಕೆಗಳನ್ನು ಮಾಡಲಾಯಿತು. 
          ಕಸ ವಿಂಗಡಣೆ ಮತ್ತು ವಿಲೇವಾರಿಯ ಅಗತ್ಯವನ್ನು ಮನಗಂಡ ಮಕ್ಕಳು ತಾವೇ ತಯಾರಿಸಿದ ಪೇಪರ್ ನಿಂದ ಕಸವಿಂಗಡಣೆಯ ವಿಧಾನವನ್ನು ಕೈಯಾರೆ ಬರೆದು ಕರಪತ್ರ ತಯಾರಿಸಿದರು. ಈ ಕರಪತ್ರಗಳ ಸಹಾಯದಿಂದ ತಮ್ಮ ಮನೆ, ಆಸುಪಾಸಿನ ಮನೆ, ಹತ್ತಿರದ ಅಂಗಡಿ, ಪೋಸ್ಟ್‌ ಆಫೀಸ್‌ ಮೊದಲಾದ ಕಡೆ ಈ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದರು. ಹಸಿ ಕಸ ಒಣ ಕಸ ವಿಂಗಡಿಸಿ ಭೂದೇವಿಯನ್ನು ಸಂರಕ್ಷಿಸಿ ಎಂಬ ಘೊಷಣೆ ಕೂಗುತ್ತಾ ತಮ್ಮ ಶಾಲೆಯ ಆಸುಪಾಸಿನಲ್ಲಿ ಜಾಗೃತಿ ಜಾಥಾ ಕೈಗೊಂಡರು. ಮಕ್ಕಳು ಅವರ ಮನೆಗಳಲ್ಲಿ ಹಸಿಕಸ, ಒಣಕಸ, ಅಪಾಯಕಾರಿ ಕಸ ಪ್ರತ್ಯೇಕವಾಗಿ ಹಾಕಲು ಮೂರು ಚೀಲಗಳನ್ನು ಮಾಡಿದ್ದಾರೆ. 
         ಇವೆಲ್ಲದರ ಜೊತೆಗೆ ಕಸವಿಂಗಡಣೆ ಮತ್ತು ನಿರ್ವಹಣೆಯ ಮಹತ್ವವನ್ನು ಸಾರುವ ನಾಟಕವೊಂದನ್ನು ತಯಾರಿಸಿ ಅದನ್ನು ಪೋಷಕರ ಮುಂದೆ ಪ್ರದರ್ಶನ ಮಾಡಿರುತ್ತಾರೆ. 
ಕೊರೋನಾ ಕಾರಣದಿಂದ ಓಡಾಟ ಮತ್ತು ಕಾರ್ಯಕ್ರಮಗಳಿಗೆ ನಿರ್ಬಂಧ ಇರುವುದರಿಂದ ಈ ನಾಟಕವನ್ನು ಯೂಟ್ಯೂಬ್ ಮಾಧ್ಯಮದ ಮೂಲಕ ಇದನ್ನು ಇತರರ ಜೊತೆ ಹಂಚಿಕೊಂಡು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೊರೋನಾ ಕಡಿಮೆಯಾದರೆ ತಮ್ಮ ಗ್ರಾಮದ ಪ್ರತಿ ಶಾಲೆಯಲ್ಲೂ ಈ ನಾಟಕ ಪ್ರದರ್ಶನ ಮಾಡುವ ಮೂಲಕ ತಾವು ಕಲಿತದ್ದನ್ನು ಗ್ರಾಮದ ಇತರ ಮಕ್ಕಳ ಜೊತೆಗೂ ಹಂಚಿಕೊಳ್ಳುವ ಯೋಚನೆ ಇದೆ. 
         ಈ ಯೋಜನಾ ಕಾರ್ಯದ ಸಂದರ್ಭದಲ್ಲಿ ಮೂಡಂಬೈಲು ಶಾಲಾ ಮಕ್ಕಳು ಪುಸ್ತಕ ಓದುವ ಮೂಲಕ, ಯೂಟ್ಯೂಬ್ ನಲ್ಲಿ ತ್ಯಾಜ್ಯದ ಸಮಸ್ಯೆ ಮತ್ತು ನಿರ್ವಹಣೆಯ ಬಗೆಗೆ ಹಲವಾರು ವಿಡಿಯೋಗಳನ್ನು ಶಾಲೆಯಲ್ಲಿ ಜೊತೆಯಾಗಿ ಕುಳಿತು ನೋಡುವ ಮೂಲಕ , ಅದರ ಬಗೆಗೆ ಚರ್ಚೆಮಾಡುವ ಮೂಲಕ ಕಲಿತಿದ್ದಾರೆ. ಅವಕಾಶ ಸಿಕ್ಕಾಗ ಒಂದೆರಡು ಆನ್ಲೈನ್‌ ಸೆಮಿನಾರ್‌ ಗಳಲ್ಲಿಯೂ ಬಾಗವಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಆಕಾಶವಾಣಿಯಲ್ಲಿ ತ್ಯಾಜ್ಯ ನಿಭಾಯಿಸುವ ರೀತಿ ಸರಣಿ ಕಾರ್ಯಕ್ರಮವನ್ನು ನಿರಂತರವಾಗಿ ಕೇಳುತ್ತಿದ್ದಾರೆ. ಈ ಎಲ್ಲ ಕಲಿಕೆಯನ್ನು ತಮ್ಮದೇ ಚಿತ್ರಗಳ ಮೂಲಕ, ಕಥೆ, ಕವನಗಳ ಮೂಲಕ, ಮಾದರಿಗಳ ಮೂಲಕ ಅಭಿವ್ಯಕ್ತಿ ಮಾಡಿದ್ದಾರೆ. 
          ಇಂತಹ ಯೋಜನಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯ ಜೊತೆಗೆ ಸೃಜನಶೀಲತೆಯನ್ನು ಬೆಳೆಸುವುದರಿಂದ ನೈಸರ್ಗಿಕ ಸಂಪನ್ಮೂಲದ ಸದ್ಬಳಕೆಯ ಕುರಿತಾಗಿ ಅರಿವು ಮೂಡಬಹುದು. ಮಕ್ಕಳಲ್ಲಿ ಸ್ವ ಕಲಿಕೆಯ ಅರಿವು , ವೈವಿಧ್ಯ ಕೌಶಲ್ಯಗಳ ಅಭಿವೃದ್ಧಿ ಸಾಧ್ಯವಾಗಲು ಖಂಡಿತಾ ಕಾರಣವಾಗಲಿದೆ. ನೆಲ-ಜಲವನ್ನು ಉಳಿಸಲೇಬೇಕಾದ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಈ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಆಶಾದಾಯಕ ವಿಚಾರ. 
        ಮೂಡಂಬೈಲು ಶಾಲೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಳ್ಳಲು ಕಾರಣರಾಗಿರುವ  ಮೂಡಂಬೈಲು ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಅರವಿಂದ ಕುಡ್ಲ ,  ಸಹ ಶಿಕ್ಷಕಿ  ಶ್ರೀಮತಿ ಶೃತಿ , ಸಹಶಿಕ್ಷಕಿ ಅನಿತಾ ಕುಮಾರಿ , ಸಹಶಿಕ್ಷಕಿ ವಿನೋದಾ ಕುಮಾರಿ , ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು , ಸದಸ್ಯರು ಹಾಗೂ ಪೋಷಕ ವರ್ಗದ ಸರ್ವರಿಗೂ ಮಕ್ಕಳ ಜಗಲಿಯ ಪರವಾಗಿ ಅಭಿನಂದನೆಗಳು.......
.................................ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ 
ದಕ್ಷಿಣ ಕನ್ನಡ ಜಿಲ್ಲೆ
9844820979
*********************************************


Ads on article

Advertise in articles 1

advertising articles 2

Advertise under the article