-->
ಪದಗಳ ಆಟ ಭಾವ ಚಿತ್ರ ಪಾತ್ರ ; ಸಂಚಿಕೆ - 27

ಪದಗಳ ಆಟ ಭಾವ ಚಿತ್ರ ಪಾತ್ರ ; ಸಂಚಿಕೆ - 27

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 27

                ದೇವರಿಗೆ ಸವಾಲು ಹಾಕಿದವನೀತ
    ಆದಿ-ಅನಾದಿ ಇಲ್ಲದಂದು ಅಖಂಡ ಬ್ರಹ್ಮಾಂಡ ಕೋಟಿಗಳು ಉದಯವಾಗ ದಂದುಲಿಂಗದಲ್ಲಿ ನೀನೊಬ್ಬನೇ ಮಹಾಜ್ಞಾನಿ ಎಂಬುದು ಕಾಣಬಂದಿತ್ತು ಕಣ.
    ವಿಜ್ಞಾನದ ಬಿಗ್ ಬ್ಯಾಂಗ್ ತತ್ವಕ್ಕೆ ಸಮಾನವಾದಂತಹ ಈ ವಚನವನ್ನು 12ನೇ ಶತಮಾನದಲ್ಲಿಯೇ ರಚಿಸಲಾಗಿತ್ತು ಗೊತ್ತೇ !!!
       ಹೀಗೆ ಬರೆದ ವಿಶಿಷ್ಟ ವಚನಕಾರ ಮೂವರು ಶ್ರೇಷ್ಠ ವಚನಕಾರರಲ್ಲಿ ಒಬ್ಬ. ಬಹುಶ್ರುತ ಸಂತ. ಸಿದ್ಧ, ಸಮಾಜ ಸುಧಾರಕ, ಯೋಗಿ, ಮಾಂತ್ರಿಕ, ತತ್ವಜ್ಞಾನಿ, ಅಧ್ಯಾತ್ಮಿಕ ನಾಯಕ, ಕವಿ. ಈತ ಶಿವಮೊಗ್ಗದ ಬಳ್ಳಿಗಾವಿಯಲ್ಲಿ ಸುಜ್ಞಾನಿ ಮತ್ತು ನಿರಹಂಕಾರ ದಂಪತಿಗಳಿಗೆ ಜನಿಸಿದ. 
        ವೇದ ಕಾಲದ ಸಾಮಾಜಿಕ ಸಂಪ್ರದಾಯಗಳನ್ನು , ಆಚರಣೆಗಳನ್ನು, ವಚನಗಳ ಮೂಲಕ ವಿಮರ್ಶಿಸಿದ , ಟೀಕಿಸಿದ , ಪ್ರಶ್ನಿಸಿದ. ಸಾಮಾಜಿಕ ಮಿತಿಯನ್ನು ಒಡೆದು ನೈತಿಕ ಮೌಲ್ಯಕ್ಕೆ ಒತ್ತುಕೊಟ್ಟ , ಶಿವನ ಭಕ್ತಿಯ ಡಾಂಭಿಕತೆಯನ್ನು ಕೆಚ್ಚಿನಿಂದ ಪ್ರಶ್ನಿಸಿದ ನಿಷ್ಟುರವಾದಿ. ಅಪ್ರತಿಮ ಅದ್ವೈತವನ್ನು ಆಚರಿಸಿದ. 
       ಈತನದು ದೇವಾಲಯ ಕಾರ್ಮಿಕರ ವಂಶ. ಜನಕ ನೃತ್ಯಗುರು. ಈತ ಮದ್ದಲೆಗಾರ. ಪತ್ನಿ ನೃತ್ಯಗಾತಿ. ಪ್ರೀತಿಸಿ ಮದುವೆಯಾದ ಸಂಗಾತಿ, ವಲ್ಲಭೆ, ಪ್ರಾಣಸಖಿ, ಸತಿ. ತನ್ನ ಪ್ರಿಯೆ ಅಕಾಲ ಮರಣಕ್ಕೆ ತುತ್ತಾದಾಗ ಅತೀವ ದುಃಖಿತ. ಗೊತ್ತುಗುರಿಯಿಲ್ಲದೆ ಅಲೆತ. ಗುಹೆ ದೇವಾಲಯಕ್ಕೆ ಗಮನ. ಅನಿಮಿಷ ಗುರುವಿಂದ ಲಿಂಗದೀಕ್ಷೆ. ಜ್ಞಾನದ ಆಶೀರ್ವಚನ. ಜ್ಞಾನೋದಯವಾಗಿ ಅಧ್ಯಾತ್ಮದ ಜಿಜ್ಞಾಸುವಾಗಿ ಪರಿವರ್ತನೆ. ಊರಿಂದ ಊರಿಗೆ ಹಾಡುತ್ತಾ ಪಯಣ. ತನ್ನ ಅನನ್ಯವಾದ ವಚನಗಳ ಮೂಲಕ ಅಧ್ಯಾತ್ಮದ ಸಂದೇಶ. ಪ್ರತ್ಯಕ್ಷ ಅನುಭವ, ಅನುಭಾವವನ್ನು ವಚನಗಳಲ್ಲಿ ಬಿಂಬಿಸಿದ. ವೇದ ಪ್ರಣೀತ , ಮೂರ್ತಿಪೂಜೆ , ಜಾತಿವ್ಯವಸ್ಥೆ , ಯಜ್ಞ , ಪ್ರಾಣಿಬಲಿಗಳನ್ನೆಲ್ಲಾ ಪ್ರಶ್ನಿಸಿದ. ಅಂತರಂಗ-ಬಹಿರಂಗ ಶೋಧಿಸಲು ಯತ್ನಿಸಿದ.
           ಸತ್ಯವಿಲ್ಲ ಅಸತ್ಯವಿಲ್ಲ
           ಸಹಜ ಇಲ್ಲ ಅಸಹಜವೂ ಇಲ್ಲ. 
           ನಾನು ಇಲ್ಲ ನೀನು ಇಲ್ಲ
 ಎನ್ನುತ್ತಾ ಆಡಂಬರದ ಭಕ್ತಿಯನ್ನು ಅಲ್ಲ ಗಳೆದವ. 
 ಆತನ ವಚನಗಳೆಲ್ಲ ಬೆಡಗುಗಳು. ಒಡಪುಗಳು. ರೂಪಕ ದೃಷ್ಟಾಂತಗಳನ್ನು ಒಳಗೊಂಡ ಆಶು ವಚನಗಳು. ಸರಳ ಕನ್ನಡದಲ್ಲಿ ಬರೆದರೂ ಭಾಷೆ ರಹಸ್ಯ. 
     ಅಂಜಬೇಡ ಅಳುಕಬೇಡ
     ಹೋದವರಾರು ಇದ್ದವರಾರು ಎಲೆ ಮರುಳೆ? 
     ಒಂದು ಮುಖದಲ್ಲಿಪ್ಪ ದೇವನೊಬ್ಬನೆ
     ಹಲವು ಮುಖದಲ್ಲಿಪ್ಪ ದೇವನೊಬ್ಬನೆ
     ನಾಮ ಹಲವಲ್ಲದೆ..... 
ಹೀಗೆ ಹಲವು ದೇವರ ಭಕ್ತಿಯನ್ನು ಟೀಕಿಸಿದ. ದೇವರ ಹೆಸರಲ್ಲಿ ಜನ ಎಷ್ಟು ಭ್ರಾಂತಿಯಲ್ಲಿ ಇದ್ದಾರೆ. 
    ಅಜ್ಞಾನವೆಂಬ ತೊಟ್ಟಿಲೊಳಗೆ ಜೋಗುಳ      
    ಜ್ಞಾನವೆಂಬ ಶಿಶುವ ಮಲಗಿಸಿ
    ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು     
    ತೂಗಿ ಜೋಗುಳವಾಡುತ್ತಿದ್ದಳು 
    ಭ್ರಾಂತಿ ಯೆಂಬ ತಾಯಿ. 
    ತೊಟ್ಟಿಲು ಮುರಿದು ನೇಣು ಹರಿದು ಜೋಗುಳ   
    ನಿಂದಲ್ಲದೆ ಲಿಂಗನ ಕಾಣಬಾರದು. 
ಹೀಗೆ ಮೂಢ ಆಚಾರಗಳ ಬುಡಕ್ಕೆ ಕೊಡಲಿ ಹಾಕಿದ. ಮಾತಿನಲ್ಲಿ ಹೇಳಲಾಗದ್ದನ್ನು ಅನುಭವ ಹೇಳುತ್ತದೆ ಎಂದ. 
        ರೂಪೆನೆಂಬೆ ಕಣ್ಣಿನ ಎಂಜಲು  
        ರುಚಿ ಎಂಬೆನೆ ಜಿಹ್ವೆಎಂಜಲು ನಾನೆಂದರೆ      
        ಅರಿವಿನೆಂಜಲು ಎಂಜಲೆಂಬ ಭಿನ್ನ ವಳಿದ    
        ಬೆಳಗಿನೊಳಗಣ ಬೆಳಕು. 
ಅಬ್ಬಬ್ಬಾ ಈತನ ವಚನಗಳು ಒಂದಕ್ಕಿಂತ ಒಂದು ತೀವ್ರ , ವೈಯಕ್ತಿಕ ಹಾಗೂ ಪ್ರಯೋಗಾತ್ಮಕ ಬಹಳ ಸಂಕೀರ್ಣ. ಆದ್ರೆ ಬಹಳ ಕಾವ್ಯಮಯ ಆಳವನ್ನು ಹೊಂದಿವೆ. ಯಾರೂ ಟೀಕೆ ಮಾಡಲು ಸಾಧ್ಯವಿಲ್ಲದಂತಹ ವಿಭಿನ್ನ ಲಯಗಳಲ್ಲಿ ಬರೆದ ವಚನ ಶ್ರೇಷ್ಠ. ಕವಿ ಶ್ರೇಷ್ಠ. 
      ಚಾಮರಸ ಈತನ ಸಾವಿರಕ್ಕಿಂತ ಹೆಚ್ಚು 
ವಚನಗಳನ್ನು ಪ್ರಭುಲಿಂಗಲೀಲೆ ಎಂಬ ಪುಸ್ತಕದಲ್ಲಿ ಬರೆದಿದ್ದಾನೆ. ಇದು ತಮಿಳು, ತೆಲುಗು, ಮರಾಠಿ, ಸಂಸ್ಕೃತಕ್ಕೆ ಅನುವಾದಗೊಂಡಿದೆ. 
          ಭಗ್ನಪ್ರೇಮಿಯಾಗಿ ಹುಚ್ಚನಂತೆ ಅಲೆದಾಡುತ್ತಿದ್ದ ಈತನ ಜೀವನದ ತಲ್ಲಣದಿಂದ ಮೊಸರು ಕಡೆದ ನವನೀತ ದಂತದಂತೆ ಹುಟ್ಟಿಕೊಂಡ ಆಧ್ಯಾತ್ಮ ಹೊಳಹುಗಳೇ ಬೆಡಗಿನ ವಚನಗಳು. 
     ಜೀವನವನ್ನು ಹೇಗೆ ಎದುರಿಸಬೇಕು ಎಂಬುವುದಕ್ಕೆ ಅವನು ರಚಿಸಿದಂತಹ ವಚನ ಬಹಳ ಉತ್ತಮವಾಗಿದೆ. 
      ಕೆಂಡದ ಮಳೆ ಕರೆವಲ್ಲಿ ಉದಕವಾಗು 
      ಜಲಪ್ರಳಯದಲ್ಲಿ ವಾಯುವಾಗು 
      ಜಗ ಪ್ರಳಯವಾದರೆ ತನ್ನ ತಾ ಮರೆ.... !!
ಶರಣರು ಹುಟ್ಟುಹಾಕಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷನಾಗಿದ್ದ ಶ್ರೇಷ್ಠತೆ , ಉತ್ಕೃಷ್ಟತೆ , ಉಜ್ವಲತೆ , ಉತ್ಕಟತೆ ಅವನದು. ಜೀವನಕ್ಕೆ ಶೂನ್ಯದ ಪರಿಕಲ್ಪನೆಯನ್ನು ಕೊಟ್ಟ ಅದನ್ನು ಒಪ್ಪಿಕೊಂಡ ಧೈರ್ಯಶಾಲಿ
     ಮನುಷ್ಯ ಮಾತ್ರನಾದವನು ಹೊಟ್ಟೆಗಾಗಿ ಏನೆಲ್ಲ ಮಾಡುತ್ತಾನೆ! ನೀನೊಮ್ಮೆ ಒಡಲನ್ನು ಹೊತ್ತು ನೋಡು ಎಂದು ದೇವರಿಗೆ ಸವಾಲು ಹಾಕಿದವನೀತ. 
       ತನ್ನ ಜೀವನದ ಕೊನೆಯಲ್ಲಿ ವಚನಗಳನ್ನು ರಚಿಸುತ್ತಾ, ಹಾಡುತ್ತಾ , ಹಾಡುತ್ತಾ , ಶ್ರೀಶೈಲದಲ್ಲಿ ಲಿಂಗೈಕ್ಯನಾದ ಪ್ರಭುವಿಗೆ ಶರಣು ಶರಣು. 
      ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************

Ads on article

Advertise in articles 1

advertising articles 2

Advertise under the article