-->
ಓ ಮುದ್ದು ಮನಸೇ ...…...! ಸಂಚಿಕೆ -15

ಓ ಮುದ್ದು ಮನಸೇ ...…...! ಸಂಚಿಕೆ -15

 
ಓ ಮುದ್ದು ಮನಸೇ ...…...! ಸಂಚಿಕೆ -15


    ಪ್ರೀತಿ ಗಳಿಸೋದನ್ನೂ ಕಲಿಸಿಕೊಡೋಣವೇ?
------------------------------------------------
           ಒಂದೂರಲ್ಲಿ ಮಂಜಪ್ಪ ಗೌಡ ಎನ್ನುವ ವ್ಯಕ್ತಿಯಿದ್ದ. ಊರಿನ ಪ್ರಮುಖನಾಗಿ, ಹಲವಾರು ಗೌರವ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದವನು. ಅಷ್ಟೇ ಅಲ್ಲದೆ, ಆ ಕಾಲದಲ್ಲೇ ಪದವಿಪಡೆದುಕೊಂಡಿದ್ದ ಊರಿನ ಕೆಲವೇ ಕೆಲವು ಮಂದಿಯಲ್ಲಿ ಅವನೂ ಒಬ್ಬ. ತಂದೆ ತಾಯಿ ತೀರಿಕೊಂಡ ಮೇಲೆ ಮನೆಯ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣವನ್ನೂ ಕೊಟ್ಟು, ಅವರ ಭವಿಷ್ಯತ್ತಿಗೆ ಬೇಕೆಂದು ಆಸ್ತಿ ಅಂತಸ್ತುಗಳನ್ನೂ ಮಾಡಿಟ್ಟಿದ್ದ. ಇನ್ನು ಕಷ್ಟ ಅಂತ ಬಂದವರ ಪಾಲಿಗೂ ಆಸರೆಯಾಗಿದ್ದು ಎಲ್ಲರಿಂದ ಗೌರವಿಸಲ್ಪಡುತ್ತಿದ್ದ. ಕಾಲ ಕಳೆದಂತೆ ಅವನಿಗೆ ವಯಸ್ಸಾಯಿತು, ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ, ಅವರಿಗೆ ಮದುವೆ ಮಾಡಿದ್ದೂ ಆಗಿದೆ. ವಯಸ್ಸಿನ ಕಾರಣದಿಂದ ಮೊದಲಿನಂತೆ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ಜನರೂ ಇವನ ಸಹಾಯವನ್ನು ಅರಸಿ ಬರೋದನ್ನ ನಿಲ್ಲಿಸಿದ್ದಾರೆ. ಪ್ರತಿದಿನವೂ ಕ್ರಿಯಾಶೀಲನಾಗಿರುತ್ತಿದ್ದ ಮಂಜಪ್ಪ ಗೌಡ ಹೆಚ್ಚು ಸಮಯವನ್ನು ಮನೆಯಲ್ಲೇ ಕಳೆಯಬೇಕಾದ ಅನಿವಾರ್ಯ. ಮನಸ್ಸು ಯಾಕೋ ಸಹಕರಿಸುತ್ತಿಲ್ಲ. ಮನೆಯ ವ್ಯವಹಾರವನ್ನೆಲ್ಲಾ ಮಕ್ಕಳೇ ವಹಿಸಿಕೊಂಡದ್ದೂ ಆಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಅಪ್ಪನ ಸಲಹೆಗಳಿಗೆ ಜಾಗವಿಲ್ಲ. ಕೊಟ್ಟರೂ ಒಪ್ಪಿಕೊಳ್ಳುವ ತಾಳ್ಮೆ ಅವರಿಗಿಲ್ಲ "ನಿಂಗೇನು ಗೊತ್ತು ಸುಮ್ಮನಿರು" ಎನ್ನುವ ಉತ್ತರ. ಇನ್ನು ಅವನ ಹೆಂಡತಿಯದ್ದೂ ಅದೇ ಗೋಳು, ಸೊಸೆಯಂದಿರದ್ದೇ ಕಾರು ಬಾರು... ಪಾಪ ಮುದುಕಿಯ ಮಾತಿಗೆಲ್ಲಿದೆ ಬೆಲೆ? ತಮ್ಮ ನಾಲಿಗೆಗೆ ರುಚಿ ಹೊಂದುವ ಅಡುಗೆಯನ್ನು ತಿಂದು ಅದೆಷ್ಟು ಕಾಲವಾಗಿದೆಯೋ, ಟಿವಿ ಮುಂದೆ ಕೂತರೂ ತಮ್ಮಿಷ್ಟದ ಯಕ್ಷಗಾನ, ಜಾನಪದ, ನಾಟಕ, ಯೋಗ-ಧ್ಯಾನದಂತಹ ಕಾರ್ಯಕ್ರಮಗಳಿಗೆ ಜಾಗವಿಲ್ಲ. ಸೊಸೆಯಂದಿರ ಅಚ್ಚುಮೆಚ್ಚಿನ ದಾರವಾಹಿ, ಮೊಮ್ಮೊಕ್ಕಳ ಕಾರ್ಟೂನ್ ಚಾನಲ್ಗಳದ್ದೇ ಕಾರುಬಾರು.
      ಸಂಜೆ ಅಂಗಳದ ಗಿಡಗಳಿಗೆ ನೀರುಣಿಸುತ್ತಿದ್ದ ಮಂಜಪ್ಪನ ಬಳಿ ಬಂದ ಮೊಮ್ಮಗನಂದ "ಅಲ್ಲಿ ಟೇಬಲ್ ಮೇಲೆ ಟೀ ಮತ್ತು ಚಕ್ಕುಲಿ ಇಟ್ಟಿದ್ದೇನೇ ತಿನ್ನು" ಹಲ್ಲಿಲ್ಲದ ಮುದುಕರು ಚಕ್ಕುಲಿಯನ್ನು ಹೇಗೆ ತಿಂದಾರೂ.....? ಇವರಿಗೆ ಗೊತ್ತಿಲ್ಲವೆಂದೇನಲ್ಲ, ಗೊತ್ತಿದ್ದೂ ಅದನ್ನೇ ಕೊಟ್ಟಿದ್ದಾರೆಂದರೆ ನೀವೆ ಅರ್ಥ ಮಾಡಿಕೊಳ್ಳಿ...! ಅಂದೊಂದು ದಿನ ಮಕ್ಕಳು ಮತ್ತು ಅವರ ಹೆಂಡತಿಯರ ನಡುವೆ ಅದೇನೋ ಗುಸು ಗುಸು. ಗಂಡುಮಕ್ಕಳು ತಲೆಭಾರದಲ್ಲಿದ್ದಂತೆ ಅನಿಸಿತು ಮಂಜಪ್ಪನಿಗೆ "ಏನಾಯ್ತೋ? ವ್ಯವಹಾರದಲ್ಲೇನಾದ್ರೂ ಸಮಸ್ಯೇನಾ? ಮಗನಂದ "ನೀನ್ಯಾಕೆ ತಲೆಕೆಡಿಸಿಕೊಳ್ತೀಯಾ? ನಮಗೆಲ್ಲಾ ಗೊತ್ತಿದೆ". "ಅಲ್ಲಾ, ಸಮಸ್ಯೆ ಏನಾದ್ರೂ...." ಅನ್ನುವಷ್ಟರಲ್ಲಿ ಅಪ್ಪನ ಮಾತುಗಳನ್ನು ಕೇಳಿಸಿಕೊಂಡರೂ ಕೇಳದವನಂತೆ ಸುಮ್ಮನೆ ಹೊರನಡೆದ. ಮನೆಯಲ್ಲಿ ಅದೆಂತಹ ಹಬ್ಬ ಹರಿದಿನಗಳಿದ್ದರೂ ಈ ಮುದುಕರಿಗೆ ಮೂಲೆಯೇ ಗತಿ. ಎಲ್ಲರೊಟ್ಟಿಗೆ ಬೆರೆಯುವಾಸೆ, ಅವಕಾಶವಿಲ್ಲ..! ಬೆರೆತರೂ ಸೇರಿಸಿಕೊಳ್ಳೋದಿಲ್ಲ. ಅದೆಷ್ಟೇ ಅನುಭವವಿದ್ದರೂ, ಗೌರವಿಸುವವರಿಲ್ಲ. ಎಲ್ಲಾ ಗೌರವ ಆದರಗಳಿಂದ ಬದುಕಿದ ವ್ಯಕ್ತಿ ಮುಪ್ಪಿನಲ್ಲಿ ಅವೆಲ್ಲವನ್ನೂ ಕಳೆದುಕೊಂಡು ಒಬ್ಬೊಂಟಿಯಾಗಿ ದಿನ ದೂಡುವುದಿದೆಯಲ್ಲಾ..! ಅಡಿಕೆ ವ್ಯಾಪಾರಕ್ಕೆ ಮನೆಗೆ ಬಂದಿದ್ದ ತನ್ನ ಜಮಾನದ ಗೆಳೆಯ ದುಗ್ಗಪ್ಪನಲ್ಲಿ ಅಂದ "ಕಾಡು ಬಾ ಅಂತಿದೆ, ನಾಡು ಹೋಗು ಅಂತಿದೆ ನಾನು ಹೊರಡುವುದೊಂದೆ ಬಾಕಿ!"
        ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತಾವಧಿಯಲ್ಲಿ ಎರಡು ಬಾರಿ ಬಾಲ್ಯವನ್ನು ಅನುಭವಿಸುತ್ತಾನೆ...! ಬಾಲ್ಯಾವಸ್ಥೆಯಲ್ಲಿ ಹೇಗೆ ಒಬ್ಬ ವ್ಯಕ್ತಿ ತನ್ನ ಚಟುವಟಿಕೆಗಳಿಗೆ ತಂದೆ ತಾಯಿಯನ್ನು ಅವಲಂಬಿತನಾಗುತ್ತನೆಯೋ ಹಾಗೆ ಅದೇ ವ್ಯಕ್ತಿ ತನ್ನ ಮುಪ್ಪಿನಲ್ಲಿ ಮಕ್ಕಳನ್ನು ಅವಲಂಬಿಸುತ್ತಾನೆ. ಬಾಲ್ಯದಲ್ಲಿ ಹೇಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲನಾಗಿರುವುದಿಲ್ಲವೋ ಹಾಗೆ ಮುಪ್ಪಿನಲ್ಲಿ ದುರ್ಬಲನಾಗಿರುತ್ತಾನೆ. ಇಂತಹ ಸಂದರ್ಭದಲ್ಲಿ ತಮ್ಮ ಜೀವನಾನುಭವದ ಬುತ್ತಿಯನ್ನು ಬಿಚ್ಚಿಡಲು ಕೇಳುವ ಕಿವಿಗಳಿಗಾಗಿ ತಡಕಾಡುವ ವಯಸ್ಕರು ಯಾರೇ ಮಾತಿಗೆ ಸಿಕ್ಕರೂ ತಮ್ಮ ಬದುಕಿನ ಭೂತಕಾಲಕ್ಕೆ ಜಾರಿ ಬಿಡುತ್ತಾರೆ. ತಮ್ಮ ಜೀವನಗಾಥೆಯನ್ನು ಕೇಳಲೊಲ್ಲದ ಕಿವಿಗಳಿಗೆ ಸಿಡಿ-ಮಿಡಿಗೊಳ್ಳುವುದೂ ಉಂಟು. ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿರುವುದಕ್ಕೆ ದುಃಖಿತರಾಗುತ್ತ, ಭಾವನಾತ್ಮಕವಾಗಿ ಕುಗ್ಗುತ್ತಾರೆ. ಮಕ್ಕಳು ಮೊಮ್ಮಕ್ಕಳಿಂದ ಕಿಂಚಿತ್ ಗೌರವಾದರಗಳನ್ನು ಬಯಸುತ್ತಾರೆ ಸಿಕ್ಕಿಲ್ಲವಾದರೆ ಮರುಗುತ್ತಾರೆ. ಟೆಕ್ನಾಲಜಿಗೆ ಮಾರು ಹೋಗಿರುವ ಈಗಿನ ಮೊಮ್ಮಕ್ಕಳನ್ನ ನೋಡಿದಾಗಲಂತೂ ಎಲ್ಲಿಲ್ಲದ ಕೋಪ. ಯಾವುದೇ ಆಚರಣೆಗಳಿರಲಿ ಅವು ಶಾಸ್ತ್ರಬದ್ಧವಾಗಿರಬೇಕು, ಇಲ್ಲವಾದರೆ ಅವರ ಮನಸ್ಸಿಗೆ ಸಮಾಧಾನವಿಲ್ಲ. ಮನೆ, ಮಕ್ಕಳು, ಮೊಮ್ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ಬೆಳೆಸಿಕೊಳ್ಳುವ ಅವರು ಮಕ್ಕಳ ಮನೆಯ ರಕ್ಷಣೆಗೆ ಪಣತೊಟ್ಟವರಂತೆ ಸದಾಕಾಲ ಅದು ಹಾಗಲ್ಲ-ಹೀಗಲ್ಲ, ಅದುಬೇಡ, ಹಾಗೆ ಮಾಡಬೇಡಿ, ಮನೆ ಜೋಪಾನ ಮುಂತಾದ ಮಾತುಗಳಿಂದ ಉಳಿದವರನ್ನು ಎಚ್ಚರಗೊಳಿಸುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರ ಮಾತುಗಳಿಗೆ ಬೆಲೆ ಸಿಗದಿದ್ದಾಗ ಮಾನಸಿಕವಾಗಿ ಮತ್ತಷ್ಟು ದುರ್ಬಲಗೊಳ್ಳುತ್ತಾರೆ. ಯಾವಾಗಲೂ ಮಕ್ಕಳು ಮೊಮ್ಮಕ್ಕಳ ಒಳಿತನ್ನು ಚಿಂತಿಸುವ ಹಿರಿಯರು ಮಕ್ಕಳ ಏಳಿಗೆಯನ್ನು ಮತ್ತು ಮೊಮ್ಮಕ್ಕಳ ಮದುವೆ ಸಂಭ್ರಮವನ್ನು ಕಣ್ ತುಂಬಿಕೊಳ್ಳಲು ಹಂಬಲಿಸುತ್ತಾರೆ. ಮೊಮ್ಮಕ್ಕಳು ಓದು ಮತ್ತು ಉದ್ಯೋಗಕ್ಕೆ ಮನೆಬಿಟ್ಟು ದೂರದೂರಿಗೆ ಹೋಗೋದನ್ನು ಕಿಂಚಿತ್ ಒಪ್ಪದ ಅವರು ಸದಾಕಾಲ ಅವರ ಬರುವಿಕೆಗಾಗಿ ಕಾಯುತ್ತಾರೆ. ಮಕ್ಕಳ ಒಳಿತನ್ನು ನೋಡದೆಯೇ ಹೊರಟು ಹೋಗುಬಿಡುತ್ತೇನೋ ಎನ್ನುವ ಭಯ ಅವರನ್ನು ಆವರಿಸುತ್ತದೆ. ಇಂತಹ ಸಂದರ್ಭದಲ್ಲಿ ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡಾಗಂತೂ ಬದುಕಿನ ಮೇಲಿರುವ ಕಿಂಚಿತ್ ನಂಬಿಕೆಯನ್ನೂ ಕಳೆದುಕೊಂಡು ತಮ್ಮ ಕೊನೆಗಳಿಗೆಗಾಗಿ ಕಾತರಿಸುತ್ತಾರೆ.
        ಇಂತಹ ಕ್ಷಣಗಳೂ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಘಟಿಸುವ ಮತ್ತು ಘಟಿಸಲೇ ಬೇಕಾದ ಜೀವಿತಾವಧಿಯ ಭಾಗಗಳು. ಸಂಪೂರ್ಣ ಜೀವನವನ್ನು ಅನುಭವಿಸುವ ಯಾವೊಬ್ಬನೂ ಇವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಎಲ್ಲಾ ವಿಚಾರಗಳನ್ನು ಬಲ್ಲವರಾದ ನಾವು ನಮ್ಮ ತಂದೆ ತಾಯಂದಿರನ್ನು ಅಥವಾ ಅಜ್ಜ ಅಜ್ಜಿಯರನ್ನು ಹೇಗೆ ನೋಡಿಕೊಳ್ಳುತ್ತೇವೆ? ಅವರಿಗೆ ಸಾರ್ಥಕ ಮುಪ್ಪಿನ ಅನುಭವ ಕಟ್ಟಿಕೊಡಲು ಕಿಂಚಿತ್ ಪ್ರಯತ್ನವನ್ನಾದರೂ ಪಟ್ಟಿದ್ದೀವಾ? ಅನ್ನೋದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಇಲ್ಲವಾದರೆ, ಮನೆಯಲ್ಲಿ ಆಚರಿಸುವ ಪ್ರತಿಯೊಂದೂ ಕಾರ್ಯಕ್ರಮಗಳಲ್ಲಿ ಹಿರಿಯರಿಗೆ ಮೊದಲ ಆದ್ಯತೆ ನೀಡಿ, ಅವರ ಮಾರ್ಗದರ್ಶನದಲ್ಲಿ ಆಚರಿಸಿದರೆ ನಿಜಕ್ಕೂ ಅದು ಅವರಿಗೆ ಮಕ್ಕಳಾದ ನಾವು ಕೊಡುವ ಕಿಂಚಿತ್ ಗೌರವ. ಹಣಸಂಪಾದನೆಯೊಂದೇ ಜೀವಮಾನದ ಗುರಿಯೆನ್ನುವಂತೆ ವರ್ಷವಿಡೀ ದುಡಿಯುವ ನಾವು ನಮ್ಮ ಬಿಡುವಿನ ಸಮಯವನ್ನು ಹಿರಿಯರೊಟ್ಟಿಗೆ ಕಳೆದಾಗ, ಅವರ ಜೀವನಗಾತೆಗೆ ಧ್ವನಿಯಾದಾಗ ಅವರ ಮನಸ್ಸು ಹಗುರಾಗುತ್ತದೆ. ನಮ್ಮ ಮಕ್ಕಳನ್ನು ಹಾರ್ಟ್ ಲೆಸ್ ಮಶಿನರೀಸ್ ಗಳೊಟ್ಟಿಗೆ ಬೆರೆಸದೆ ಹಿರಿಯರೊಟ್ಟಿಗೆ ಬಿಟ್ಟಾಗ ಮಕ್ಕಳೂ ಅವರ ಮೇಲೇ ಪ್ರೀತಿ ಗೌರವಗಳನ್ನು ಬೆಳೆಸಿಕೊಳ್ಳೋದರ ಜೊತೆ ಜೊತೆಗೆ ಮುಂದೊಂದು ದಿನ ನಮ್ಮ ಮುಪ್ಪಿನಲ್ಲೂ ನಮ್ಮ ಜೊತೆನಿಲ್ಲುತ್ತಾರೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಿರಿಯರ ಅಭಿಪ್ರಾಯಕ್ಕೂ ಒಂಚೂರು ಜಾಗ ಮಾಡಿಕೊಟ್ಟರೆ ನಿರ್ಧಾರಕ್ಕೂ ಉತ್ತಮ ಮತ್ತು ಹಿರಿಯರೂ , ಮಕ್ಕಳು ತಮ್ಮ ಮಾತಿಗೆ ಬೆಲೆಕೊಡೋದನ್ನ ನೋಡಿ ಖಷಿಪಡುತ್ತಾರೆ. ಅವರ ಅಭಿರುಚಿಗೆ ತಕ್ಕ ಅಡುಗೆ ಮಾಡೋದು, ಯಕ್ಷಗಾನ, ನಾಟಕ ಮುಂತಾದ ಕಾರ್ಯಕ್ರಮಗಳಿಗೆ ತಪ್ಪದೇ ಕರೆದೊಯ್ಯೋದು, ಅವರ ಆರೋಗ್ಯ ಕಾಳಜಿ ವಹಿಸೋದು, ಯಾವುದೇ ಕಾರಣಕ್ಕೂ ಅವರು ನಿಮ್ಮಲ್ಲಿ ಹಣಕ್ಕೆ ಕೈಚಾಚದಂತೆ ನೋಡಿಕೊಳ್ಳೋದು, ಸದಾ ಕಾಲ ಅವರೊಟ್ಟಿಗೆ ನಾವಿದ್ದೇವೆ ಎನ್ನುವ ವಾತಾವರಣವನ್ನು ನಿರ್ಮಿಸಿದರೆ ಅವರ ಮನಸ್ಸು ನಿರಾಳ. ಅವರು ಕಟ್ಟಿ ಬೆಳೆಸಿದ, ಮನೆ , ಆಸ್ತಿ , ಜಮೀನು , ಉದ್ಯಮ ಮುಂತಾದವುಗಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳೋದು ಅತೀ ಪ್ರಮುಖವಾದದ್ದೂ ಯಾಕೆಂದರೆ ಅವುಗಳ ಹಿಂದೆ ಹಿರಿಯರ ನೆನಪಿನ ಬುತ್ತಿಗಳಿವೆ. ಅವಕಾಶಗಳಿದ್ದರೆ ಯೋಗ ಧ್ಯಾನದಂತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳೋದಕ್ಕೆ ಅಥವಾ ಇನ್ಯಾವುದೇ ಅವರ ಆಸಕ್ತಿದಾಯಕ ಯೋಜನೆಗಳನ್ನು ಸಾಕಾರ ಗೊಳಿಸಲು ನೀವು ಮಾಡುವ ಅಲ್ಪ ಪ್ರಯತ್ನವೂ ಅವರಿಗೆ ಬದುಕಲು ಹುಮ್ಮಸ್ಸು ಹುಟ್ಟಿಸುತ್ತದೆ. ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವುದು ಕೇವಲ ಆಚರಣೆಯಲ್ಲ ಬದಲಾಗಿ ಅವರ ಬದುಕಿನ ಅನುಭವಗಳ ಮುಂದೆ, ಸಾಧನೆಗಳ ಮುಂದೆ, ಕೊಡುಗೆಗಳ ಮುಂದೆ ಶರಣಾಗುವುದೇ ಆಗಿದೆ. ಹಾಗೆ ಮಾಡುವುದರಿಂದ ಅವರಲ್ಲಿ ಸಾರ್ಥಕಭಾವ ಮೂಡಿ ಹೃದಯತುಂಬಿ ನಮ್ಮನ್ನು ಆಶೀರ್ವದಿಸುವುದರಿಂದ ನಮಗೆ ಸಿಗುವ ಪ್ರೀತಿ ನಾವು ಪಡೆದ ಪದವಿಗಿಂತ ದೊಡ್ದದು, ಸಿಹಿಯಾದದ್ದು. ಅಂತಹದ್ದೊಂದು ಸವಿಯನ್ನು ಉಂಡವನೇ ಬಲ್ಲ. ನಮ್ಮೆಲ್ಲರ ಬಾಲ್ಯದ ಹೆಗಲಾಗಿದ್ದ ಹಿರಿಯರ ಮುಪ್ಪಿನಲ್ಲಿ ನಾವು ಹೆಗಲಾಗುವುದಿದೆಯಲ್ಲ ಅದು ಕೇವಲ ಕರ್ತವ್ಯವಲ್ಲ ಜವಾಬ್ದಾರಿ ಕೂಡ, ಎಂದೆಂದಿಗೂ ತೀರಿಸಲಾಗದ್ದು ಅದು. ಮಕ್ಕಳಿಗೆ ಪದವಿಗಳಿಸೋದನ್ನ ಕಲಿಸುತ್ತಿರುವ ನಾವು ಪ್ರೀತಿ ಗಳಿಸೋದನ್ನೂ ಕಲಿಸಿಕೊಡೋಣವೇ...?
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
**********************************************

Ads on article

Advertise in articles 1

advertising articles 2

Advertise under the article