-->
ಸ್ವಾತಂತ್ರ್ಯ ಹೋರಾಟಗಾರರ ಅಗ್ರಪಂಕ್ತಿಯಲ್ಲಿ ನೇತಾಜಿ - ವಿಶೇಷ ಲೇಖನ

ಸ್ವಾತಂತ್ರ್ಯ ಹೋರಾಟಗಾರರ ಅಗ್ರಪಂಕ್ತಿಯಲ್ಲಿ ನೇತಾಜಿ - ವಿಶೇಷ ಲೇಖನ

         ಸರ್ವರಿಗೂ ಸುಭಾಷರ ಜನ್ಮ ಜಯಂತಿಯ      
                        ಶುಭಾಶಯಗಳು


                  ಸ್ವಾತಂತ್ರ್ಯ ಹೋರಾಟಗಾರರ 
                    ಅಗ್ರಪಂಕ್ತಿಯಲ್ಲಿ ನೇತಾಜಿ
     'ಜೈ ಹಿಂದ್' ಎಂಬ ಘೋಷಣೆಯನ್ನು ಕೇಳುತ್ತಿದ್ದಂತೆ, ರಾಷ್ಟ್ರಾಭಿಮಾನವನ್ನು ಹೊಂದಿರುವ ಪ್ರತಿಯೊಬ್ಬ ಭಾರತೀಯನ ರಕ್ತದ ಕಣ ಕಣದಲ್ಲೂ ಸಂಚಲನ ಉಂಟಾಗುತ್ತದೆ. ದೇಶಪ್ರೇಮದ ಒರತೆ ಉಕ್ಕಿ ಹರಿಯುತ್ತದೆ….!! ಅಂದು ಆದದ್ದೂ ಅದೇ…!
       ಕೇವಲ ವ್ಯಾಪಾರದ ಉದ್ದೇಶವಿರಿಸಿ ಆಗಮಿಸಿದ ಆಂಗ್ಲರು , ಕ್ರಮೇಣ ನಮ್ಮ ನೆಲವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ನಮ್ಮನ್ನೇ ಪರಕೀಯ ಭಾವದಿಂದ ಬಾಳುವಂತೆ ಮಾಡಿದ ಆ ಕರಾಳ ದಿನಗಳ ಸಂದರ್ಭದಲ್ಲೂ ಇದೇ 'ಜೈಹಿಂದ್' ಘೋಷಣೆ , ಬ್ರಿಟಿಷರಲ್ಲೂ ನಡುಕವನ್ನು ಸೃಷ್ಟಿಸಿತ್ತು. ಅವರು ಬೇಸ್ತು ಬೀಳುವಂತೆ ಮಾಡಿತ್ತು…. ಅವರೆದೆಯಲ್ಲಿ ಭಯದ ಅಲೆಗಳನ್ನೆಬ್ಬಿಸಿತ್ತು....!!!
      ರಾಷ್ಟ್ರದ ಮೂಲೆ ಮೂಲೆಯಲ್ಲೂ ಚಳುವಳಿ , ಸತ್ಯಾಗ್ರಹ , ಧರಣಿಗಳ ಮೂಲಕ ಆಕ್ರೋಶ , ಆವೇಶಗಳ ಆರ್ಭಟ...!! ಗಾಂಧೀಜಿಯವರ ಅಹಿಂಸಾತ್ಮಕ ನಡೆ , ತಿಲಕರ ಉಗ್ರತೆಯ ಕಾವು , ಭಗತರ ಕ್ರಾಂತಿಕಾರಿ ನಿಲುವುಗಳ ನಡುವೆ ಮಗದೊಬ್ಬ ಸಿಂಹದ ಮರಿ ಅಂದು ಭಾರತಾಂಬೆಯ ಮಡಿಲಲ್ಲಿ ಜನಿಸಿದ್ದ. 'ಜೈಹಿಂದ್ ' ಎನ್ನುತ್ತಾ ಸ್ವಾತಂತ್ರ್ಯ ಕಹಳೆ ಮೊಳಗಿಸಿದ್ದ. ಅವನೇ ಸುಭಾಶ್ಚಂದ್ರಬೋಸ್..... 
     ಅಚಲ ನಿರ್ಧಾರ , ಧೈರ್ಯ- ಸಾಹಸದ ಕಿಚ್ಚು, ಸ್ವಾತಂತ್ರ್ಯ ಪಡೆಯುವ ಕೆಚ್ಚು , ಪ್ರಚಂಡ ವಾಗ್ಮಿ, ಸಂಘಟನಾ ಚಾತುರ್ಯಗಳನ್ನೆಲ್ಲ ಮೇಳೈಸಿ ಮಿಂಚಿದ ವೀರನೀತ....
      23 ಜನವರಿ 1897ರಂದು ಒರಿಸ್ಸಾದ ಬಂಗಾಳಿ ಕುಟುಂಬದಲ್ಲಿ ಪ್ರಭಾವತಿ ಹಾಗೂ ಜಂಕಿನಾಥ್ ಬೋಸರ ಹದಿನಾಲ್ಕು ಮಕ್ಕಳಲ್ಲಿ ಓರ್ವನಾಗಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಈತನೊಳು ಶ್ರೀಮಂತ ಕನಸಿತ್ತು. ಅಧ್ಯಯನದಲ್ಲಿ ಅಮಿತ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಸುಭಾಸ ರೆಂದರೆ ಶಿಕ್ಷಕರಿಗೆ ಬಲು ಅಚ್ಚುಮೆಚ್ಚು…. ಗೆಳೆಯರಿಗೆಲ್ಲ ಆಪ್ತರಕ್ಷಕ…. 
ಪ್ರಾಥಮಿಕ ಶಾಲಾ ಶಿಕ್ಷಣದ ಸಾರವನ್ನು ಕಟಕ್ ನಲ್ಲಿ ಹೀರಿಕೊಂಡ ಸುಭಾಷರು, ಉನ್ನತ ಶಿಕ್ಷಣಕ್ಕಾಗಿ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿಗೆ ಅಡಿಯಿಟ್ಟರು .
       ಶಿಸ್ತು ಸಂಯಮಕ್ಕೆ ಹೆಸರುವಾಸಿಯಾಗಿದ್ದ ಆ ಕಾಲೇಜಿನಲ್ಲಿ ಐ.ಎಫ್.ಓಟನ್ ಎಂಬ ಆಂಗ್ಲ ಅಧಿಕಾರಿ ಭಾರತೀಯ ವಿದ್ಯಾರ್ಥಿಗಳನ್ನು ಕೀಳಾಗಿ ಪರಿಗಣಿಸುತ್ತಿದ್ದರು. ಮೊದಲೇ ರಾಮಕೃಷ್ಣರ, ವಿವೇಕಾನಂದರ, ಅರವಿಂದ ಘೋಷರ ತತ್ತ್ವ ಮಹಿಮೆಗೆ ಮಾರು ಹೋಗಿದ್ದ ಸುಭಾಷರಿಗೆ ಕಾಲೇಜಿನಲ್ಲಿ ನಡೆಯುತ್ತಿದ್ದ ಭೇದಭಾವ ರೋಷ ಉಕ್ಕಿ ಹರಿಯುವಂತೆ ಮಾಡಿತು. ವಿದ್ಯಾರ್ಥಿ ದೆಸೆಯಲ್ಲಿಯೇ ದೇಶದ ಆಡಳಿತ ಸೂತ್ರವನ್ನು ಹಿಡಿಯುತ್ತಿದ್ದವರ ವಿರುದ್ಧವೇ ಗೆಳೆಯರನ್ನು ಜತೆಗೂಡಿಸಿಕೊಂಡು ತಿರುಗಿಬಿದ್ದರು... ಹರತಾಳ ನಡೆಸಿದರು. ತಮ್ಮ ವಿರುದ್ಧ ತೊಡೆತಟ್ಟಿದ ಭಾರತೀಯನ ಎದೆಗಾರಿಕೆಯನ್ನು ಕಂಡು ಕಾಲೇಜು ಆಡಳಿತ ಮೂಕವಿಸ್ಮಿತವಾಯಿತು. ಪರಿಣಾಮವಾಗಿ ಸುಭಾಸರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಯಿತು…!!
       ಅನ್ಯಾಯ , ಅಕ್ರಮಗಳ ವಿರುದ್ಧ ತನ್ನ ಪ್ರತಿಭಟನೆಯನ್ನು ಇಲ್ಲಿಂದಲೇ ಆರಂಭಿಸಿದ ಸುಭಾಷರು ಇಂಗ್ಲೆಂಡಿಗೆ ತೆರಳಿ ಐಪಿಎಸ್ ಪರೀಕ್ಷೆಗೆ ಕುಳಿತರು. ಆ ಪರೀಕ್ಷೆಯಲ್ಲಿ ನಾಲ್ಕನೇ ಶ್ರೇಣಿಯಲ್ಲಿ ಉತ್ತೀರ್ಣರಾದುದು ಅವರ ಶ್ರೇಷ್ಠ ಬುದ್ಧಿಮತ್ತೆಯನ್ನು ಎತ್ತಿತೋರಿಸುತ್ತದೆ. ಮುಂದೆ ಇಂಗ್ಲೆಂಡ್ ನಲ್ಲಿದ್ದರೂ ಬ್ರಿಟಿಷರ ದಬ್ಬಾಳಿಕೆಗೆ ನಲುಗಿಹೋಗಿದ್ದ ಭಾರತಕ್ಕಾಗಿ ಮರುಗುತ್ತಿದ್ದ ಸುಭಾಷ್ ಸಿವಿಲ್ ಸರ್ವಿಸಿಗೆ ರಾಜಿನಾಮೆಯಿತ್ತು , ಭಾರತಕ್ಕೆ ಓಡಿ ಬಂದ ದೇಶಭಕ್ತ ಬಂಧು. ಭಾರತದಲ್ಲಿ ಗಾಂಧೀಜಿಯವರ ಸಖ್ಯದಲ್ಲಿ ಹಲವು ಸಮಯ ಕಳೆದ ಸುಭಾಷರು ಸ್ವಾತಂತ್ರ್ಯಕ್ಕಾಗಿ ಅಹಿಂಸೆಯ ತತ್ವ ಪಥವನ್ನು ಒಪ್ಪದೆ ಶಸ್ತ್ರಧಾರಿಯಾಗಿ ಮುನ್ನಡೆಯಲು ಯೋಜನೆಯನ್ನು ರೂಪಿಸಿದರು.
        1921 ರಿಂದ 1941ರವರೆಗೆ ಹನ್ನೊಂದು ಬಾರಿ ಜೈಲಿಗೆ ಹೋಗಿ ದೇಶಕ್ಕಾಗಿ ನೋವು ಅನುಭವಿಸಿ ಬಂದರು. 1928ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ 'ಪೂರ್ಣ ಸ್ವಾತಂತ್ರ್ಯ ನಮ್ಮ ಗುರಿ 'ಎಂಬುದಾಗಿ ಘೋಷಿಸಿ ಅದನ್ನೇ ತನ್ನ ಉಸಿರಾಗಿಸಿಕೊಂಡರು.
        1938ರಲ್ಲಿ ತ್ರಿಪುರದ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಕಾಂಗ್ರೆಸ್ಸಿಗೆ ಹೊಸ ರೂಪುರೇಷೆ ನೀಡಿದರು. ಮುಂದೆ ರಾಜಕೀಯ ವೈಮನಸ್ಸು ಉಂಟಾಗಿ ಕಾಂಗ್ರೆಸ್ಸನ್ನು ತೊರೆದು ಬೋಸರು 'ಫಾರ್ವರ್ಡ್ ಬ್ಲಾಕ್' ಎಂಬ ಪಕ್ಷ ಕಟ್ಟಿ ಬ್ರಿಟಿಷರ ವಿರುದ್ಧ ಸಮರ ಸಾರಿದ ಗಂಡುಗಲಿ ಎನಿಸಿಕೊಂಡರು.
       'ಸುಭಾಸ' ರೆಂಬ ಭಾರತದ ಒಂದು ಕ್ರಾಂತಿಕಿಡಿಯಿಂದ ನಿದ್ದೆಗೆಟ್ಟು ಹೋಗಿದ್ದ ಬ್ರಿಟಿಷ್ ಸರ್ಕಾರ ಅವರನ್ನು ಸೆರೆಮನೆಯಲ್ಲಿಟ್ಟು ಸರ್ಪಗಾವಲು ಹಾಕಿ ದಿಗ್ಬಂಧನದಲ್ಲಿಟ್ಟರು. ಬ್ರಿಟಿಷರ ಹದ್ದಿನಗಣ್ಣಿನ ಕಾವಲನ್ನು ತಪ್ಪಿಸಿಕೊಂಡು ನಮ್ಮ ಹೆಮ್ಮೆಯ ನೇತಾರ ಚಾಣಾಕ್ಷತನದಿಂದ ತಪ್ಪಿಸಿಕೊಂಡು ಅಲ್ಲಿಂದ ಜರ್ಮನಿಗೆ ಪಯಣಿಸಿದರು.
          ಅಲ್ಲಿನ ನಾಯಕನಾಗಿದ್ದ ಹಿಟ್ಲರ್ ನನ್ನು ಭೇಟಿಯಾಗಿ ಭಾರತದ ಸ್ವಾತಂತ್ರ್ಯಕ್ಕೆ ರಣಭೇರಿ ಬಾರಿಸಲು ನೆರವು ಕೋರಿದರು. 'ಆಜಾದ್ ಹಿಂದ್ ಕೇಂದ್ರ ಕಚೇರಿ', 'ಆಜಾದ್ ಹಿಂದ್ ರೇಡಿಯೋ ಕಾರ್ಯಾಲಯ' ಹಾಗೂ 'ಭಾರತೀಯ ತರುಣ ಸಂಸ್ಥೆ' ಗಳನ್ನು ಹುಟ್ಟುಹಾಕಿ ಭಾರತೀಯ ಯೋಧರಿಗೆ ಸೇನಾ ಶಿಕ್ಷಣವನ್ನು ನೀಡಿ 'ಆಜಾದ್ ಹಿಂದ್ ಸೇನೆ' ಯನ್ನು ಸ್ಥಾಪಿಸಿ ತಮ್ಮ ಕನಸಿನ ಭರ್ಜಿಯನ್ನು ಎಸೆಯಲು ಅಣಿಯಾದರು. 
         ನಾಲ್ಕು ಸಾವಿರ ಸಂಖ್ಯೆಯ ಸೈನಿಕರಿದ್ದ ಸೇನೆಗೆ ಸೈನಿಕ ಸಮವಸ್ತ್ರ ಧರಿಸಿ ತಾವೇ ದಂಡನಾಯಕರಾಗಿ 'ದೆಹಲಿ ಚಲೋ'ಗೆ ಕರೆ ನೀಡಿದರು. ಎರಡನೇ ಮಹಾಯುದ್ಧದಲ್ಲಿಯೂ ಇವರ 'ಆಜಾದಿ ಹಿಂದ್ ಫೌಂಡೇಶನ್ 'ಅತ್ಯುತ್ತಮವಾಗಿ ಸಕ್ರೀಯವಾಗಿ ಭಾಗವಹಿಸಿತು .
            "ವೀರ ಯೋಧರೇ.... , ನನಗೆ ನಿಮ್ಮ ರಕ್ತ ಕೊಡಿ. ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ." ಎಂಬ ಧೀರೋದ್ಧಾತ ಗರ್ಜನೆಯೊಂದಿಗೆ ಸೇನಾನಿಗಳನ್ನು ಹುರಿದುಂಬಿಸುತ್ತಾ ಆಂಗ್ಲ ಸೇನೆ ತತ್ತರಿಸುವಂತೆ ಮಾಡಿದರು ಬೋಸರು. ದುರದೃಷ್ಟವಶಾತ್ ಕೊನೆಯಲ್ಲಿ ಬೋಸರ ಸೈನ್ಯ ಈ ಯುದ್ಧದಲ್ಲಿ ಹಿಮ್ಮೆಟ್ಟಬೇಕಾಯಿತು. ಜೀವನದ ಕೊನೆಯವರೆಗೂ ಭಾರತ ಮಣ್ಣಿಗೆ ತನ್ನನ್ನು ಅರ್ಪಿಸಿಕೊಂಡಿದ್ದ ಶ್ರೇಷ್ಠ ನಾಯಕರಿವರು.
ದೇಶದ ನೆಲದ ಗುಲಾಮಗಿರಿಗೆ ಪ್ರತಿಯಾಗಿ, ದೇಶದ ಜನರ ದಾಸ್ಯದ ಕಣ್ಣೀರಿಗೆ ಪ್ರತಿಯಾಗಿ ಬ್ರಿಟಿಷರ ರಕ್ತವನ್ನೇ ಹೀರಿದ ಬೋಸರು 1945ರ ಆಗಸ್ಟ್ ನಲ್ಲಿ ಬ್ಯಾಂಕಾಂಗ್ ನಲ್ಲಿ ಮಿಲಿಟರಿ ಕಾರ್ಯನಿಮಿತ್ತ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ನಿಧನಹೊಂದಿದರೆಂದು ಇತಿಹಾಸ ನುಡಿಯುತ್ತದೆ.....!!??
         ಅಳತೆಗೂ ನಿಲುಕದ ದೇಶಪ್ರೇಮ , ಅಸಾಧಾರಣ ಸಂಘಟನಾ ಚತುರ ನೆನೆಸಿಕೊಂಡ ಸುಭಾಸರು 'ನೇತಾಜಿ' ಯಾಗಿ , ಸ್ವಾತಂತ್ರ್ಯ ಹೋರಾಟಗಾರರಲ್ಲಿ, ನಮ್ಮ ಆದರ್ಶ ನಾಯಕರಲ್ಲಿ ಅಗ್ರಮಾನ್ಯರೆನಿಸಿಕೊಳ್ಳುತ್ತಾರೆ.
        ಅಖಂಡ ಭಾರತದ ಕನಸಿನ ಚೇತನ ಸುಭಾಷರು ನಮಗೆಲ್ಲ ದಾರಿದೀಪ.ಅವರ 125ನೆಯ ಜನ್ಮ ಜಯಂತಿಯ ಈ ಸಂದರ್ಭದಲ್ಲಿ ಅವರ ಆದರ್ಶಗಳಿಗೆ ಯುವಪೀಳಿಗೆ ಆಕರ್ಷಣೆಗೊಂಡು ಅದನ್ನು ಅಪ್ಪಿಕೊಳ್ಳುವಂತಾಗಲಿ. ಶ್ರೇಷ್ಠ ವೃಕ್ಷದ ಜೀವನ ಆದರ್ಶದ ನೆರಳಿನಲ್ಲಿ ಭಾರತದ ಭಾವೀ ಜನಾಂಗದ ಮೊಳಕೆಗಳು ಚಿಗುರೊಡೆಯಲಿ.
     "ಸರ್ವರಿಗೂ ಸುಭಾಷರ ಜನ್ಮ ಜಯಂತಿಯ ಶುಭಾಶಯಗಳು."
.................................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************


Ads on article

Advertise in articles 1

advertising articles 2

Advertise under the article