
ಜೀವನ ಸಂಭ್ರಮ : ಸಂಚಿಕೆ - 20
Sunday, January 23, 2022
Edit
ಜೀವನ ಸಂಭ್ರಮ : ಸಂಚಿಕೆ - 20
ದೊಡ್ಡಮ್ಮನ ಹಬ್ಬ
-----------------------
ನಮ್ಮೂರಿನಲ್ಲಿ ದೊಡ್ಡಮ್ಮನ ಹಬ್ಬ ಪ್ರತಿವರ್ಷ ನಡೆಯುತ್ತದೆ. ಈ ಹಬ್ಬವನ್ನು ಊರಿನ ಎಲ್ಲರೂ ಒಟ್ಟಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬ ಹೆಸರಿಗೆ ದೊಡ್ಡಮ್ಮನ ಹಬ್ಬವಾದರೂ , ಆ ದಿನ ಮೂರು ದೇವರಿಗೆ ಪೂಜೆ ಆಗುತ್ತದೆ. ಒಂದು ಮಾರಮ್ಮ , ಮತ್ತೊಂದು ದೊಡ್ಡಮ್ಮ , ಇನ್ನೊಂದು ಆದಿಶಕ್ತಿ. ಆದಿಶಕ್ತಿಯನ್ನು ಆಡುಭಾಷೆಯಲ್ಲಿ ಚೆನ್ನನಕೆರೆ ಅಮ್ಮ ಅಂದರೆ ಚೆನ್ನನಕೆರೆ ಎಂಬ ಊರಲ್ಲಿರುವ ಆದಿಶಕ್ತಿ ದೇವಸ್ಥಾನ. ಈ ಹಬ್ಬದ ದಿನ ಎಲ್ಲರೂ ಮನೆಗಳನ್ನು ಶುಚಿಗೊಳಿಸಿ , ಸ್ವಚ್ಛ ಉಡುಪಿನೊಂದಿಗೆ ಸಿದ್ಧವಾಗುತ್ತಾರೆ. ಹಬ್ಬಕ್ಕೆ ಮುನ್ನ ಮೂರು ಹೊಸ ಚಿಕ್ಕ ಮಡಿಕೆಗಳನ್ನು ತರುವರು. ಮಡಿಕೆಗಳಲ್ಲಿ ಅನ್ನ ಬೇಯಿಸುವರು. ಇದಕ್ಕೆ ಮಡೆ ಎಂದು ಹೆಸರು. ಮೂರು ತಂಬಿಟ್ಟು ಗಳನ್ನು ಮಾಡುವರು. ಆ ತಂಬಿಟ್ಟು ಗಳನ್ನು ಆಯತಾಕಾರದಲ್ಲಿ ಅರ್ಧ ಅಡಿ ಎತ್ತರಕ್ಕೆ ಮಾಡುವರು. ಅದರ ಹೊರಭಾಗದಲ್ಲಿ ಹುರಿದ ಶೇಂಗಾ ಬೀಜದ ಹೋಳುಗಳನ್ನು ಅಂಟಿಸುವರು. ತಂಬಿಟ್ಟು ಮೃದುವಾದುದರಿಂದ ಕಡಲೆ ಬೀಜದ ಹೋಳನ್ನು ಅದರ ಮೇಲೆ ಒತ್ತಿದರೆ ಅಂಟಿಕೊಳ್ಳುತ್ತದೆ. ಅದಕ್ಕೆ ಕೆಂಪು ಕಣಗಿಲೆ ಹೂವುಗಳನ್ನು ತಂದು , ಅದನ್ನು ಉದ್ದವಾದ ಅಂದರೆ ಸುಮಾರು ಅರ್ಧ ಅಡಿ ಉದ್ದದ ಕಡ್ಡಿಗೆ ಒಂದರ ಹಿಂದೆ ಒಂದು ಮುಖ ಬರುವಂತೆ ಚುಚ್ಚಿ ಸಿದ್ದ ಮಾಡುವರು. ಅಂತಹ ಮೂರು ಕಡ್ಡಿಗಳನ್ನು ತಂಬಿಟ್ಟಿನ ಮೇಲೆ ಸಿಕ್ಕಿಸಿ ಅಲಂಕಾರ ಮಾಡುವರು. ಮತ್ತೆ ಮಡೆ ಪಾತ್ರೆಯ ಕತ್ತಿಗೆ ಹೂವಿನಿಂದ ಅಲಂಕಾರ ಮಾಡಿ, ಅದರ ಮೇಲೆ ಬಣ್ಣದಿಂದ ತ್ರಿಶೂಲದ ಚಿತ್ರ ಹಾಕುವರು. ಹೀಗೆ ಮೂರು ದೇವರಿಗೆ ಪ್ರತ್ಯೇಕವಾಗಿ ಒಂದು ಮಡೆ, ಒಂದು ತಂಬಿಟ್ಟಿನಂತೆ ಸಿದ್ದ ಮಾಡುವರು. ಒಂದು ಮಡೆ ಮತ್ತು ಒಂದು ತಂಬಿಟ್ಟಿಗೆ ಒಂದು ಆರತಿ ಎಂದು ಕರೆಯುವರು.
ಊರಿನ ಯಜಮಾನರು ಪೂಜೆಯ ಸಮಯ ನಿಗದಿ ಮಾಡುವ ವೇಳೆಗೆ ಎಲ್ಲರೂ ಆರತಿಯನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಸಹಜವಾಗಿ ಮಧ್ಯಾಹ್ನ ಎರಡು ಗಂಟೆಯ ನಂತರ ಸಮಯ ನಿಗದಿಯಾಗುತ್ತದೆ. ಆ ದಿನ ನಾಲ್ಕು ದಿಕ್ಕಿಗೂ ನಾಲ್ಕು ದಿಕ್ಕಿನ ಮರಿ ಹಾಗೂ ಮೂರು ದೇವರಿಗೆ ಮೂರು ಮೇಕೆ ಮರಿಗಳನ್ನು ಖರೀದಿ ಮಾಡುವರು. ಇದಕ್ಕೆ ತಗಲುವ ವೆಚ್ಚವನ್ನು ಪ್ರತಿ ಮನೆಯಿಂದ ಸಮಾನವಾಗಿ ವಸೂಲಿ ಮಾಡುವುದು ಯಜಮಾನರ ಕೆಲಸ.
ಮೊದಲಿಗೆ ಯಜಮಾನ ಪ್ರತಿ ಮನೆಯವರಿಗೆ ಇಷ್ಟು ಗಂಟೆಗೆ ಮಾರಮ್ಮನ ಪೂಜೆ ಎಂದು ಪ್ರತಿಮನೆಗೂ ತಿಳಿಸುವರು. ಆ ಸಮಯಕ್ಕೆ ಸರಿಯಾಗಿ ತಮಟೆ, ಡೋಲು ಓಲಗದ ಸದ್ದು ಕೇಳಿಬರುತ್ತದೆ. ಎಲ್ಲರೂ ಪ್ರತಿ ಮನೆಯಿಂದ ಮಹಿಳೆಯರು ಸಿಂಗಾರ ಮಾಡಿಕೊಂಡು ಆರತಿ ತೆಗೆದುಕೊಂಡು ಹಾಜರಾಗುವರು. ಮಹಿಳೆಯರೆಲ್ಲಾ ತಲೆಯ ಮೇಲೆ ಮಡೆ ಇಟ್ಟುಕೊಂಡು, ತಟ್ಟೆಯಲ್ಲಿ ತಂಬಿಟ್ಟು ಇಟ್ಟು, ಅದರ ಮುಂದೆ ಎಣ್ಣೆ ದೀಪ ಹಚ್ಚಿ, ಕೈಯಲ್ಲಿ ತಂಬಿಟ್ಟಿನ ತಟ್ಟೆ ಇಟ್ಟುಕೊಂಡು ಬರುವರು. ಒಬ್ಬರ ಪಕ್ಕ ಒಬ್ಬರಂತೆ ಸಾಲಾಗಿ ಜೋಡಿಸಿಕೊಂಡು ನಿಂತು ಕೊಳ್ಳುವರು. ಅವರ ಮುಂದೆ ಆರತಿ ಇಡುವರು. ಮಾರಮ್ಮನ ದೇವಸ್ಥಾನ ಚಿಕ್ಕದು ಹಾಗಾಗಿ ಅದರ ಮುಂದಿರುವ ಜಾಗದಲ್ಲಿ ನಾಲ್ಕು ಸಾಲು ನಿಲ್ಲುವರು. ಹುಡುಗರಿಗೆ ಸಂಭ್ರಮ. ಪ್ರತಿ ತಟ್ಟೆಯಿಂದ ಹೂವಿನ ಕಡ್ಡಿ , ಒಂದು ಚೂರು ತಂಬಿಟ್ಟು ಮುರಿದುಕೊಂಡು ಹಾಗೆಯೇ ಮಡೆಯಿಂದ ಸ್ವಲ್ಪ ಅನ್ನವನ್ನು ತೆಗೆದುಕೊಂಡು ಸಂಗ್ರಹಿಸುವರು. ಪ್ರತಿ ಸಾಲಿನಲ್ಲೂ ನಾಲ್ಕರಿಂದ ಐದು ಹುಡುಗರು ಸಂಗ್ರಹಿಸಿ ಅದನ್ನು ದೇವರ ಮುಂದೆ ಇಟ್ಟು ಪೂಜೆ ಮಾಡುವರು. ಪೂಜಾರಿ ಪೂಜೆ ಮಾಡಿದ ನಂತರ ತೀರ್ಥವನ್ನು ಬಂದಿರುವ ಎಲ್ಲರ ಮೇಲೆ ಸಿಂಪರಿಸಿ ಪೂಜೆಮಾಡಿದ ಪ್ರಸಾದವನ್ನು ಎಲ್ಲರಿಗೂ ನೀಡುವರು. ಆಗ ಮತ್ತೊಮ್ಮೆ ಯಜಮಾನನಿಂದ ಸಂದೇಶ ಹೊರಡುತ್ತದೆ. ಇನ್ನು ಹತ್ತು ನಿಮಿಷಕ್ಕೆ ಎಲ್ಲರೂ ದೊಡ್ಡಮ್ಮನಿಗೆ ಆರತಿ ಸಿದ್ಧಪಡಿಸಿಕೊಂಡು ಬನ್ನಿ ಎಂದು. ನಂತರ ಮಾರಮ್ಮನಿಗೆ ಬಲಿ ನೀಡಲಾಗುತ್ತದೆ.
ದೊಡ್ಡಮ್ಮನ ದೇವಸ್ಥಾನ ನಮ್ಮ ಜಮೀನಿನಲ್ಲಿದ್ದು , ಅದು ಗದ್ದೆಯಾದ್ದರಿಂದ ಪಕ್ಕದ ವಿಶಾಲವಾದ ಹೊಲದಲ್ಲಿ ಪೂಜೆ ಮಾಡುವರು. ಓಲಗ, ಡೋಲು ಮತ್ತು ತಮಟೆ ಶಬ್ದ ಬಂದ ನಂತರ, ಪ್ರತಿ ಮನೆಯಿಂದ ಇಬ್ಬರು ಮಕ್ಕಳು ಇಲ್ಲದಿದ್ದಲ್ಲಿ ಗಂಡ ಮತ್ತು ಹೆಂಡತಿ, ದೊಡ್ಡಮ್ಮನಿಗೆ ಒಂದು ಆರತಿ ಆದಿಶಕ್ತಿಗೆ ಒಂದು ಆರತಿ ಸಿದ್ಧಮಾಡಿಕೊಂಡು , ಯಾರು ಯಾವ ದೇವರಿಗೆ ಪೂಜೆ ಮಾಡಬೇಕು ಎಂದು ನಿರ್ಧರಿಸಿಕೊಂಡು ಹೊರಡುವರು. ಈಗಾಗಲೇ ಹೇಳಿದಂತೆ ಮನೆಯಿಂದ ಹೊರಟು ಪೂಜೆ ಮಾಡುವ ಸ್ಥಳಕ್ಕೆ ಹೋಗುವುದನ್ನು ನೋಡುವುದೇ ಒಂದು ಸೊಗಸು. ಓಲಗದವರು ಮುಂದೆ, ಅವರ ಹಿಂದೆ ಎರಡು ಸಾಲು , ಒಂದು ಸಾಲು ದೊಡ್ಡಮ್ಮನಿಗೆ , ಮತ್ತೊಂದು ಸಾಲು ಆದಿಶಕ್ತಿಗೆ ಹೀಗೆ ಮೆರವಣಿಗೆಯಲ್ಲಿ ಹೋಗಿ ವಿಶಾಲವಾದ ಜಾಗದಲ್ಲಿ ಎರಡು ಭಾಗ ಮಾಡಿಕೊಂಡು ಒಂದು ಭಾಗದಲ್ಲಿ ದೊಡ್ಡಮ್ಮನಿಗೆ ಮತ್ತೊಂದು ಭಾಗದಲ್ಲಿ ಆದಿಶಕ್ತಿ ಪೂಜೆ ಮಾಡುವರು. ದೊಡ್ಡಮ್ಮನಿಗೆ ಪೂಜೆ ಮಾಡುವ ಮುನ್ನ ಮೂಲ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಬರುವರು. ಇಲ್ಲೂ ಸಹ ಮಾರಮ್ಮನ ದೇವಸ್ಥಾನದಲ್ಲಿ ಮಾಡಿದಂತೆ ಪ್ರತಿ ಆರತಿಯಿಂದ ತಂಬಿಟ್ಟು ಮತ್ತು ಅನ್ನವನ್ನು ಸಂಗ್ರಹಿಸಿ ಪೂಜೆ ಮಾಡುವರು. ಅರ್ಚಕ ಪೂಜೆಮಾಡಿ ತೀರ್ಥ ಎರಚಿದ ನಂತರ ಪೂಜೆಮಾಡಿದ ಪ್ರಸಾದ ಎಲ್ಲರಿಗೂ ಹಂಚುವರು. ಅಲ್ಲೂ ಎರಡು ದೇವರಿಗೂ ಬಲಿ ನೀಡಿದ ನಂತರ ಎಲ್ಲರೂ ವಾಪಸ್ ಬರುವಾಗ ಕುಚೇಷ್ಟೆ ಹೆಚ್ಚು. ನಾನು ಬಾಲ್ಯದಲ್ಲಿ ಇರುವಾಗ ಅತ್ತೆ ಆಗುವವರ ತಂಬಿಟ್ಟನ್ನು ಅವರಿಗೆ ಕಾಣದಂತೆ ಹಿಂದೆ ಹೋಗಿ ಅಪಹರಣ ಮಾಡುತ್ತಿದ್ದುದ್ದು ಇಲ್ಲವೇ ಅರ್ಧ ಮುರಿದು ಉಳಿದ ಅರ್ಧ ಆ ತಟ್ಟೇಯಲ್ಲೇ ಇಡುತ್ತಿದ್ದೆವು. ಅವರು ಮನೆಗೆ ಹೋಗಿ ನೋಡಿ ಬೈಯುತ್ತಿದ್ದರೆ ನಾವೆಲ್ಲ ಕೇಕೆಹಾಕಿ ಸಂಭ್ರಮ ಪಡುತ್ತಿದ್ದೆವು.
ಇದಾದನಂತರ ಯಜಮಾನರು ಊರಿನ ನಾಲ್ಕು ದಿಕ್ಕಿಗೂ ಬಲಿ ನೀಡುವರು. ಇದರ ಉದ್ದೇಶ ಯಾವ ಕೆಟ್ಟ ದೇವತೆಯು ನಮ್ಮ ಊರಿಗೆ ಬರಬಾರದೆಂದು. ಅನಂತರ ಬಲಿ ನೀಡಿದ ಪ್ರಾಣಿಯನ್ನು ಎಲ್ಲರೂ ಸೇರಿ ಶುಚಿಗೊಳಿಸಿ, ಎಷ್ಟು ಕುಟುಂಬಗಳು ಇವೆಯೋ ಅಷ್ಟು ಕುಟುಂಬಕ್ಕೆ ಸರಿಯಾಗಿ ಸಮಪಾಲು ಬರುವಂತೆ ಹಂಚುವರು. ನಂತರ ಮನೆಯಲ್ಲಿ ಅಡುಗೆಮಾಡಿ ಸಂಭ್ರಮ ಪಡುತ್ತಿದ್ದರು.
ಗ್ರಾಮ್ಯ ಭಾಗದ ಮೂಲದಿಂದಲೇ ಆಚರಿಸಿಕೊಂಡು ಬಂದಿರುವ ಇಂತಹ ಹಬ್ಬಗಳು ಜನರ ಸಂಭ್ರಮಕ್ಕೆ ಕಾರಣವಾಗಿದ್ದವು. ಭಾವನೆಯ ಎಲ್ಲೋ ಮೂಲೆಗಳಲ್ಲಿ ದುಃಖದ ಛಾಯೆ ಇದ್ದರೂ ಊರಿನ ಕಷ್ಟದ ನಿವಾರಣೆಯಲ್ಲಿ ಈ ಹಬ್ಬ ಮಹತ್ವವಾದದ್ದೆಂದು ಸಂಭ್ರಮ ಪಡುತ್ತಿದ್ದರು. ಊರಿನ ಪ್ರತಿ ಮನೆಯ ಎಲ್ಲರೂ ಒಂದೆಡೆ ಸೇರಿ ಆಚರಿಸುವ ಈ ಹಬ್ಬ ನಾಡಿನ ಸಮಷ್ಟಿಯ ಸಾಂಕೇತಿಕ ಚಿತ್ರಣವೂ ಆಗಿತ್ತು. ತಮ್ಮ ನಂಬಿಕೆಯು ಜೀವನದ ಸಂಭ್ರಮಕ್ಕೆ ಕಾರಣವಾಗುವುದಲ್ಲದೆ ನೆಮ್ಮದಿಯ ಬದುಕನ್ನು ಅದು ಕಟ್ಟಿಕೊಡುತ್ತಿತ್ತು. ಈ ರೀತಿಯಾಗಿ ಈಗ ಆಚರಿಸುವ ಎಲ್ಲಾ ಹಬ್ಬದಲ್ಲೂ ಪ್ರತಿಯೊಬ್ಬರು ಭಾಗಿಯಾಗಿ ಸಂಭ್ರಮಪಟ್ಟರೆ ಎಷ್ಟು ಚೆನ್ನ?
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************