-->
ಪರಿಸರ ಶಿಕ್ಷಣ ಪಡೆದ ಬಾಲಕ : ಅಬ್ದುಲ್ ನಾಫೀಹ

ಪರಿಸರ ಶಿಕ್ಷಣ ಪಡೆದ ಬಾಲಕ : ಅಬ್ದುಲ್ ನಾಫೀಹ

             ಪರಿಸರ ಶಿಕ್ಷಣ ಪಡೆದ ಬಾಲಕ 
                      ಅಬ್ದುಲ್ ನಾಫೀಹ
      ಪ್ರಕೃತಿಯ ನಂಟಿನಿಂದ ದೂರವಾಗಿ ನಾಲ್ಕು ಗೋಡೆಯ ಮಧ್ಯದ ಶಿಕ್ಷಣಕ್ಕೆ ಒಳಪಟ್ಟ ಇಂದಿನ ಮಕ್ಕಳ ಚಟುವಟಿಕೆಗಳೆಲ್ಲಾ ಒಂದು ಚೌಕಟ್ಟಿನೊಳಗೆ ಬಂಧಿತವಾಗಿದೆ. ಆಧುನಿಕತೆಯ ಸೋಗಿನಲ್ಲಿ ಕಾಣದ ಕನಸನ್ನು ಕಟ್ಟಿಕೊಡುವ ಇಂದಿನ ವ್ಯವಸ್ಥೆಯಲ್ಲಿ ಮಕ್ಕಳು ಪಠ್ಯದೊಳಗೆ ಪ್ರಕೃತಿಯನ್ನು ಕಾಣುವವರಾಗಿದ್ದಾರೆ. ನೆಲದ ಒಡನಾಟದಿಂದ ಮುಕ್ತವಾಗಿ ಮಣ್ಣಿನ ವಾಸನೆ ತಿಳಿಯದ ಮಕ್ಕಳ ಭವಿಷ್ಯ ಕಾಂಕ್ರೀಟು ಕಾಡಲ್ಲಿ ರೂಪಿತವಾಗುತ್ತಿದೆ.......!! ಇದು ಪ್ರಸ್ತುತ ಕಾಲಘಟ್ಟದ ವಿದ್ಯಮಾನ....... ಆದರೆ ಇಲ್ಲೊಬ್ಬ ಹುಡುಗನಿಗೆ ಪ್ರಕೃತಿಯ ಸಹಜ ಸುಂದರ ಒಡನಾಟವೇ ಕಲಿಕೆಗೆ ಪ್ರೇರಣೆಯಾಗಿದೆ. ಗಿಡ-ಮರಗಳೇ ಈತನ ಗೆಳೆಯರು... ದಿನದ ಬಹು ಸಮಯವನ್ನು ಪರಿಸರದ ಜೊತೆ ಕಳೆಯಲಿಚ್ಛಿಸುವ ಈತನ ಚಟುವಟಿಕೆಗೆ ಯಾರೇ ಆಗಲಿ ಬೆರಗಾಗದಿರಲಾರರು...!!
        ಇವನ ಹೆಸರು ಅಬ್ದುಲ್ ನಾಫೀಹ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ. ಈತ ಯಾವುದೇ ಮರಗಳನ್ನು ಸರಸರನೆ ಏರಬಲ್ಲ. ಲೀಲಾಜಾಲವಾಗಿ ಮರಗಳನ್ನು ಹತ್ತಿಳಿಯಬಲ್ಲ ವಿದ್ಯೆ ಇವನಿಗೆ ಕರಗತವಾಗಿದೆ. ಹಿರಿಯರಿಗೆ ಸರಿಸಮಾನವಾಗಿ ಮರಗಳನ್ನು ಹತ್ತುವ ಹವ್ಯಾಸ ಆರಂಭವಾದುದು ತಾನಿನ್ನೂ ನಾಲ್ಕನೇ ತರಗತಿಯಲ್ಲಿರುವಾಗ.....
         ತನ್ನ ಮಾವಂದಿರು ಮರಗಳನ್ನು ಹತ್ತಿ ಮಾಡುವ ಕೆಲಸವನ್ನು ನೋಡಿಕೊಂಡು ಮರಹತ್ತಿ ಕೆಲಸ ಮಾಡಬೇಕೆನ್ನುವ ಕುತೂಹಲವನ್ನು ಸಣ್ಣಪ್ರಾಯದಲ್ಲೇ ಬೆಳೆಸಿಕೊಂಡ ನಾಫೀಹ , ತನ್ನ ಮನೆಯ ಸುತ್ತ ಮುತ್ತಲಿನ ಸಣ್ಣ ಸಣ್ಣ ಮರಗಳನ್ನು ಹತ್ತುವ ಅಭ್ಯಾಸವನ್ನು ಮಾಡಿಕೊಂಡನು. ತನ್ನ ಮನೆಯ ಕಷ್ಟದ ದಿನಗಳನ್ನು ಮನವರಿಕೆ ಮಾಡಿಕೊಂಡ ಈತ ಈ ಹವ್ಯಾಸವನ್ನು ಸವಾಲಾಗಿ ಸ್ವೀಕರಿಸಿದ. ಇನ್ನೂ 10 ಹರೆಯದ ಪ್ರಾಯದಲ್ಲೇ ಅಡಿಕೆ ಮರವನ್ನೇರುವ ಸಾಹಸ ಇವನದಾಗಿತ್ತು. ಅಡಿಕೆ ಮರವನ್ನೇರಿ ಅಡಿಕೆ ತೆಗೆಯುವುದು , ತೆಂಗಿನ ಮರವನ್ನೇರಿ ತೆಂಗಿನಕಾಯಿಗಳನ್ನು ಕೀಳುವುದು ನಿತ್ಯದ ಚಟುವಟಿಕೆಯಲ್ಲಿ ಒಂದಾಯಿತು. ಶಾಲಾ ಪಠ್ಯದ ಚಟುವಟಿಕೆಯ ಜೊತೆಜೊತೆಗೆ ಪರಿಸರದ ಒಡನಾಟದೊಂದಿಗೆ ಶಿಕ್ಷಣವನ್ನು ಪಡೆಯಲಾರಂಭಿಸಿದ.   
         ಈಗ 14ರ ಹರೆಯದ ನಾಫಿಹ ದಿನಕ್ಕೆ 200 ಕ್ಕಿಂತಲೂ ಅಧಿಕ ಅಡಿಕೆ ಮರವನ್ನೇರಿ ಅಡಿಕೆ ತೆಗೆಯುವ ಸಾಮರ್ಥ್ಯ ಹೊಂದಿದ್ದಾನೆ. ಐವತ್ತಕ್ಕಿಂತಲೂ ಅಧಿಕ ತೆಂಗಿನ ಮರವನ್ನೇರುವ ಪ್ರತಿಭಾಶಾಲಿಯಾಗಿದ್ದಾನೆ. ಯಾವುದೇ ಮರವಾಗಲಿ ಹತ್ತಿ ಗೆಲ್ಲುಗಳನ್ನು ಕಡಿಯುವ , ತೊಂದರೆಯಾಗುತ್ತಿರುವ ಮರಗಳ ರೆಂಬೆಗಳನ್ನು ಕಡಿದು ಉಪಕಾರವಾಗುತ್ತಿರುವ ಈತನ ಸಮಯಪ್ರಜ್ಞೆ ಮೆಚ್ಚಲೇಬೇಕು. 
         ಪಠ್ಯದ ವಿಷಯಗಳಲ್ಲಿ ಅಧಿಕ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳ ಪ್ರತಿಭೆಗಳಿಗಿಂತಲೂ ವಿಶೇಷವಾದ ಪ್ರತಿಭೆ ಇದಾಗಿದ್ದು ಗುರುತಿಸಿ ಪ್ರೋತ್ಸಾಹಿಸುವ ಅನಿವಾರ್ಯತೆ ಖಂಡಿತಾ ಇದೆ. ಆದರೆ ನಾಫೀಹ ಅನುಭವದಲ್ಲಿ "ಕೃಷಿಯ ಚಟುವಟಿಕೆಯಲ್ಲಿ ನನಗೆ ತುಂಬಾ ಆಸಕ್ತಿ..... ಆದರೆ ಇಂತಹ ಕೆಲಸ ಮಾಡುವಾಗ ಮನೆಯಲ್ಲಿ ಅಥವಾ ಹೊರಗಡೆ ಹೊಗಳಿಕೆಗಿಂತ ತೆಗಳಿಕೆಯನ್ನೇ ಕಂಡಿದ್ದೇನೆ.... " ಎನ್ನುತ್ತಾನೆ.... ಈತನ ನೈಜ ಪ್ರತಿಭೆಗೆ ಸರಿಯಾದ ಬೆಂಬಲ , ಹೊಗಳಿಕೆಯ ಮಾತುಗಳು ದೊರೆತರೆ ಈತ ಪಠ್ಯದ ವಿಷಯದಲ್ಲಿಯೂ ಅಧಿಕ ಅಂಕಗಳನ್ನು ಪಡೆದು ಎಲ್ಲರ ವಿಶ್ವಾಸ ಪಡೆಯುವುದರಲ್ಲಿ ಸಂಶಯವಿಲ್ಲ. 
       ಈತನ ತಾಯಿಯ ಹೆಸರು ಅವ್ವಮ್ಮ , ತಂದೆಯ ಹೆಸರು ಅಬ್ಬಾಸ್... "ಆಟವಾಡುವ ವಯಸ್ಸಿನಲ್ಲಿ   ಕೆಲಸ ಮಾಡುವ ಜವಾಬ್ದಾರಿಯನ್ನು ಹೊತ್ತ ಬಾಲಕ , ಮನೆಯ ಕಷ್ಟದ ದಿನಗಳಿಗೆ ಆಸರೆಯಾಗಿ ತನ್ನ ಬಾಲ್ಯವನ್ನು ಪ್ರಕೃತಿಯ ಜೊತೆಗೆ ಕಳೆಯುವ ಅವಕಾಶವನ್ನು ಪಡೆದವನಾದ." ಎಂದು ತಾಯಿ ಅವ್ವಮ್ಮ ಮಾರ್ಮಿಕವಾಗಿ ನುಡಿಯುತ್ತಾರೆ. ತಾನು ಆಟವಾಡುವ ಗೊಂಬೆ , ಕಾರು , ಬಾಲುಗಳನ್ನು ಹಾಗೂ ಇನ್ನಿತರ ಯಾವುದೇ ಆಟದ ಸಾಮಾನುಗಳನ್ನು ಬಯಸದೆ ಬೆಳೆದವನು. ಯಾವುದೇ ಹಣವನ್ನು ಪ್ಯಾಕೆಟ್ ತಿಂಡಿಗಾಗಿ ಖರ್ಚು ಮಾಡುವ ಗೋಜಿಗೆ ಹೋಗದೆ ಬದುಕಿನ ಎಲ್ಲಾ ಸ್ತರದ ಏರಿಳಿತಗಳಿಗೆ ಒಗ್ಗಿಕೊಂಡು ಬೆಳೆದವನು. 
         ತನ್ನ ಶಾಲೆಗಾಗಿ ತಗಲುವ ಖರ್ಚನ್ನು ತಾನೇ ಸಂಪಾದಿಸಿ ಮನೆಯವರಿಗೆ ಹೊರೆಯಾಗದೆ ಬದುಕುವ ಸಂಸ್ಕಾರವನ್ನು ಈಗಾಗಲೇ ಪಡೆದಿರುವುದು ಪ್ರಶಂಸನಾರ್ಹ. ಬಟ್ಟೆ , ಬರೆಯುವ ಪುಸ್ತಕ , ಬ್ಯಾಗ್ , ಛತ್ರಿಗಳನ್ನು ಖರೀದಿಸಿ ಶಾಲಾ ಆರಂಭಕ್ಕೆ ಮುನ್ನ ಸಿದ್ಧತೆ ಮಾಡಿಕೊಳ್ಳುವುದು ಈತನ ಕಾಳಜಿ ಎದ್ದು ಕಾಣುತ್ತದೆ. 
       ಮರಗಿಡಗಳ ಪರಿಚಯವನ್ನು ಚೆನ್ನಾಗಿ ಅರಿತಿರುವ ಈತ , ತರಕಾರಿ ಗಿಡ ಬೆಳೆಸುವುದರಲ್ಲೂ ಎತ್ತಿದ ಕೈ. ಸಾವಯವ ಗೊಬ್ಬರ ತಯಾರಿ , ದನ - ಕರುಗಳನ್ನು ಸಾಕುವುದು ಈತನಿಗೆ ಅತ್ಯಂತ ಪ್ರಿಯವಾದುದು. ಎಲ್ಲಾ ಬಗೆಯ ತರಕಾರಿ ಗಿಡಗಳನ್ನು ಬೆಳೆಸುವುದು , ಬೀಜಗಳನ್ನು ತಂದು ಗಿಡ ಮಾಡುವುದು , ಆ ಬಗ್ಗೆ ಮಾಹಿತಿ , ಜ್ಞಾನ , ಅಪಾರ. ಈ ವಯಸ್ಸಿಗೆ ಪ್ರಕೃತಿಯ ಜೊತೆಗಿನ ಅಪರಿಮಿತವಾದ ವಾತ್ಸಲ್ಯ ಮೆಚ್ಚಲೇಬೇಕಾದದ್ದು.
        ಶಾಲಾ ಶಿಕ್ಷಣದ ಜೊತೆಗೆ ಪರಿಸರದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಅತ್ಯಂತ ವಿರಳ. ಸ್ವಯಂ ಕಲಿಕೆಯೊಂದಿಗೆ ಬೆಳೆದ ನಾಫಿಹ್ ಪ್ರತಿಭೆ , ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಹಳ್ಳಿಬಿಟ್ಟು ಪೇಟೆಗೆ ಮುಖಮಾಡುವ ಯುವಕರ ಇಂದಿನ ಫ್ಯಾಷನ್ ನಡುವೆ ನಾಫೀಹ ವಿಭಿನ್ನವಾಗಿ ನಿಲ್ಲುತ್ತಾನೆ. ಗಿಡಮರಗಳ ಬಗೆಗಿರುವ ಕಾಳಜಿ , ಪರಿಸರದ ಒಡನಾಡಿಗಳ ಜೊತೆಗಿರುವ ಪ್ರೀತಿ ಅನನ್ಯವಾದದ್ದು. ಪರಿಸರದ ಒಳ ಅರಿವುಗಳನ್ನು ಅರಿತಿರುವ ಈತನಿಗೆ ಮಕ್ಕಳಜಗಲಿಯ ಪರವಾಗಿ ಅಭಿನಂದನೆಗಳು.
...................................ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : 9844820979
********************************************
          

Ads on article

Advertise in articles 1

advertising articles 2

Advertise under the article