-->
ಹಕ್ಕಿ ಕಥೆ : ಸಂಚಿಕೆ - 30

ಹಕ್ಕಿ ಕಥೆ : ಸಂಚಿಕೆ - 30

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                       ಹಕ್ಕಿ ಕಥೆ - 30
                   --------------------
       ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿ ಕಥೆಗೆ ಸ್ವಾಗತ......... ಕಳೆದವಾರ ಬಣ್ಣದ ಕೊಕ್ಕರೆಯ ವಿಚಾರ ಓದಿದ ನನ್ನ ಗೆಳೆಯರೊಬ್ಬರು ನನಗೆ ಎರಡು ಚಿತ್ರ ಕಳುಹಿಸಿದರು. ನಮ್ಮ ಮನೆಯ ಹತ್ತಿರದ ಕೆರೆಯಲ್ಲಿ ಈ ಹಕ್ಕಿಗಳು ಕಾಣಸಿಗುತ್ತವೆ. ಇವು ಯಾವ ಹಕ್ಕಿ...? ಎಂದು ಕೇಳಿದರು. ಅವರು ಕಳುಹಿಸಿದ ಫೋಟೋದಲ್ಲಿದ್ದ ಹಕ್ಕಿ ಈ ರೀತಿಯಾಗಿತ್ತು. ಬೂದುಮಿಶ್ರಿತ ಬಿಳಿ ಬಣ್ಣದ ದೇಹ, ಉದ್ದನೆಯ ಕಾಲುಗಳು, ರೆಕ್ಕೆಯ ತುದಿ ಮತ್ತು ಬಾಲ ಕಪ್ಪು ಬಣ್ಣದ್ದು, ಒಟ್ಟಾಗಿದ್ದರೂ ಮಧ್ಯೆ ತೆರೆದುಕೊಂಡಂತಿರುವ ವಿಶೇಷ ಆಕಾರದ ಕೊಕ್ಕು. ಬಾಯಿ ಮುಚ್ಚಿದ್ದರೂ ತೆರೆದುಕೊಂಡಂತಿರುವ ವಿಶೇಷವಾದ ಕೊಕ್ಕಿನ ಆಕಾರದ ಕಾರಣದಿಂದ ಈ ಹಕ್ಕಿಗೊಂದು ವಿಶೇಷ ಹೆಸರೂ ಬಂದಿದೆ. ಈ ಹಕ್ಕಿಯ ಕನ್ನಡ ಹೆಸರು ಬಾಯ್ಕಳಕ. ಕೊಕ್ಕರೆಯ ಜಾತಿಗೆ ಸೇರಿದ ಹಕ್ಕಿಯಾದ್ದರಿಂದ ಬಾಯ್ಕಳಕ ಕೊಕ್ಕರೆ. ಇದರ ಇಂಗ್ಲೀಷ್ ಹೆಸರು Asian openbill stork.
       ಯಾವಾಗಲೂ ಬಾಯಿ ತೆರೆದುಕೊಂಡೇ ಇರುವಂತಹ ಕೊಕ್ಕಿನ ರಚನೆಯಿಂದ ಈ ಹಕ್ಕಿಗೇನು ಪ್ರಯೋಜನ ಎಂದು ನೀವು ಕೇಳಬಹುದು. ಕೆರೆ, ಸರೋವರ, ನದಿಯ ಹಿನ್ನೀರು ಮತ್ತು ಗದ್ದೆಗಳಲ್ಲಿ ಈ ಹಕ್ಕಿ ಸಾಮಾನ್ಯವಾಗಿ ಕಾಣಲು ಸಿಗುತ್ತದೆ. ಸುಮಾರು ಎರಡರಿಂದ ಎರಡೂವರೆ ಅಡಿ ಎತ್ತರದ ಈ ಕೊಕ್ಕರೆ ತನ್ನ ಉದ್ದನೆಯ ಕಾಲಿನ ಸಹಾಯದಿಂದ ನೀರು ಅಥವಾ ಕೆಸರಿನ ಪ್ರದೇಶಗಳಲ್ಲಿ ಆಹಾರ ಅರಸುತ್ತದೆ. ಕಪ್ಪೆ, ಏಡಿ, ಕೀಟಗಳನ್ನು ಹಿಡಿದು ತಿನ್ನುವ ಈ ಹಕ್ಕಿಯ ಮುಖ್ಯ ಆಹಾರ ಶಂಕುಹುಳು. ಶಂಕುಹುಳಗಳಿಗೆ ಗಟ್ಟಿಯಾದ ಚಿಪ್ಪು ಇರುತ್ತದೆ. ಆ ಚಿಪ್ಪು ಇರುವುದರಿಂದ ಅದನ್ನು ಇಡಿಯಾಗಿ ತಿನ್ನುವುದು ಅಷ್ಟು ಸುಲಭವಲ್ಲ. ಅಡಕತ್ತರಿಯ ಸಹಾಯದಿಂದ ಅಡಿಕೆಯನ್ನು ತುಂಡು ಮಾಡಿದಂತೆ, ಈ ಹಕ್ಕಿ ತನ್ನ ಬಾಗಿದ ಕೊಕ್ಕಿನ ಭಾಗದಲ್ಲಿ ಶಂಕುಹುಳುವನ್ನು ಹಿಡಿದುಕೊಂಡು ತನ್ನ ಗಟ್ಟಿಯಾದ ಕೊಕ್ಕಿನ ಸಹಾಯದಿಂದ ಅದರ ಚಿಪ್ಪನ್ನು ಒಡೆದು ಒಳಗಿನ ಮೃದುವಾದ ಹುಳುವನ್ನು ತಿನ್ನುತ್ತದೆ ಎಂದು ಪಕ್ಷಿ ತಜ್ಞರು ಮತ್ತು ಪಕ್ಷಿವೀಕ್ಷಕರು ಹೇಳುತ್ತಾರೆ. ಉಳಿದ ಕೊಕ್ಕರೆಗಳಿಗೆ ಇರುವ ನೇರವಾದ ಕೊಕ್ಕಿನಲ್ಲಿ ದುಂಡಗಿನ ಶಂಕು ಹುಳುವನ್ನು ಹಿಡಿದುಕೊಂಡು ಅದರ ಚಿಪ್ಪನ್ನು ಒಡೆಯುವುದು ಸಾಧ್ಯವಾಗುವುದಿಲ್ಲ. ಬಾಯ್ಕಳಕ ಕೊಕ್ಕರೆಗಿರುವ ವಿಶೇಷ ಕೊಕ್ಕಿನ ಕಾರಣಕ್ಕಾಗಿಯೇ ಇದು ಸಾಧ್ಯವಾಗುತ್ತದೆ. ಆ ಮೂಲಕ ಶಂಕು ಹುಳದಂತಹ ಜೀವಿಗಳ ಸಂಖ್ಯೆಯನ್ನು ಈ ಹಕ್ಕಿ ನಿಯಂತ್ರಣದಲ್ಲಿ ಇಡುತ್ತದೆ
           ನವೆಂಬರ್ ನಿಂದ ಮಾರ್ಚ್ ನಡುವೆ ಮರದ ಮೇಲೆ ಅಟ್ಟಳಿಗೆಯಂತಹ ಗೂಡು ಕಟ್ಟಿ ಸಂತಾನಾಭಿವೃದ್ಧಿ ಮಾಡುತ್ತದೆ. ಮಳೆ ಕಡಿಮೆಯಾಗಿ, ನೀರು ಕಡಿಮೆಯಾದ ಕೆರೆ, ಸರೋವರ, ಹಿನ್ನೀರು ಮತ್ತು ಗದ್ದೆಗಳಲ್ಲಿ ಸುಲಭವಾಗಿ ಸಿಗುವ ಜೀವಿಗಳನ್ನು ಹಿಡಿದು ತಿನ್ನುತ್ತವೆ ಮತ್ತು ತನ್ನ ಆಹಾರಕ್ಕೂ ಸಂತಾನಾಭಿವೃದ್ಧಿ ಕಾಲಕ್ಕೂ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ನಾವು ಬದುಕುವ ಈ ಪ್ರಕೃತಿಯಲ್ಲಿರುವ ಜೀವಿಗಳ ಸಮತೋಲನ ಕಾಪಾಡಲು ಇಂತಹ ವ್ಯವಸ್ಥೆಯನ್ನು ಪ್ರಕೃತಿಯೇ ಮಾಡಿರುತ್ತದೆ. ಮನುಷ್ಯರಾದ ನಾವು ಮಾತ್ರ ಎಲ್ಲವನ್ನೂ ನಮ್ಮ ಉಪಯೋಗಕ್ಕೆ ಇರುವ ವಸ್ತು ಎಂದು ತಿಳಿದು ಬಳಸುತ್ತೇವೆ ಮತ್ತು ಅನೇಕಬಾರಿ ಪ್ರಕೃತಿಯ ಸಮತೋಲನವನ್ನು ಕೆಡಿಸುತ್ತೇವೆ ಮತ್ತು ಅದರಿಂದಾಗುವ ಪರಿಣಾಮಗಳನ್ನು ನೋಡಿ ಈಗ ಕಾಲ ಕೆಟ್ಟುಹೋಗಿದೆ ಎಂದು ಸುಲಭವಾಗಿ ಹೇಳಿಬಿಡುತ್ತೇವೆ, ಅಲ್ಲವೇ.......?
ಕನ್ನಡ ಹೆಸರು: ಬಾಯ್ಕಳಕ ಕೊಕ್ಕರೆ
ಇಂಗ್ಲೀಷ್ ಹೆಸರು: Asian Openbill Stork
ವೈಜ್ಞಾನಿಕ ಹೆಸರು: Anastomus oscitans ಫೊಟೋಗಳು : ಅಂತರ್ಜಾಲ ಕೃಪೆ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*******************************************


Ads on article

Advertise in articles 1

advertising articles 2

Advertise under the article