-->
ಸ್ಪೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093


                        ಸತ್ಯವೇ ಸೌಂದರ್ಯ
                    ------------------------
     ಮುದ್ದು ಮಕ್ಕಳೇ ನಮಸ್ಕಾರ.... ಅಮೇರಿಕಾವನ್ನು ಅಧ್ಯಕ್ಷರಾಗಿ ಆಳಿದವರು ಅನೇಕರಿದ್ದಾರೆ. ಅವರಲ್ಲಿ ಅತ್ಯಂತ ಹೆಸರುವಾಸಿಯಾದವರು ಅಬ್ರಹಾಂ ಲಿಂಕನ್. ಅವರ ಅಂತರಂಗದ ರೂಪಕ್ಕಾಗಿ ಜಗತ್ತೇ ಅವರನ್ನು ಮೆಚ್ಚಿದೆ. ಅವರ ಮುಖ ವಿರೂಪವೇ ಆಗಿತ್ತಾದರೂ ಜನ ಹೊರ ರೂಪಕ್ಕೆ ಮನ್ನಣೆ ಕೊಡದೆ ಅವರ ಅಂತರಂಗದ ನೈಜ ಸೌಂದರ್ಯಕ್ಕೆ ಮಾರು ಹೋದರು. ಬಾಲೆಯೊಬ್ಬಳು ಮುಖದ ಗುಳಿಗಳು ಕಾಣಿಸದಿರಲು ಮುಖದಲ್ಲಿ ಗಡ್ಡ ಬೆಳೆಸಲು ಅವರಿಗೆ ಸಲಹೆ ನೀಡಿದಳಂತೆ. ಆದರೆ ಲಿಂಕನ್ ಬಾಹ್ಯ ಸೌಂದರ್ಯ ವರ್ಧನೆಯಲ್ಲಿ ಆಸಕ್ತರಾಗಲಿಲ್ಲ. ಭವಿಷ್ಯದ ದಿನಗಳಲ್ಲಿ ಗಡ್ಡ ತೆಗೆದಾಗ ಸೌಂದರ್ಯದ ಮುಖವಾಡ ಕಳಚುವುದಿಲ್ಲವೇ? ಎಂದು ಲಿಂಕನ್ ಅರಿತಿದ್ದರು. ವಿಶ್ವ ಪ್ರಸಿದ್ಧ ಇಟಾಲಿಯನ್ ತತ್ವಜ್ಜಾನಿ ಬೆನೆಡಿಕ್ಟೋ ಕ್ರೋಶಿಯೋ ಸತ್ಯದ ಮುಂದೆ ಯಾವುದೇ ಸೌಂದರ್ಯವು ನಿಲ್ಲದು ಎಂದಿರುವರು. ಸುಂದರ ಮನೆ, ವಾಹನ, ಉಡುಪು, ಒಡವೆಗಳನ್ನು ಇಟ್ಟುಕೊಂಡು ಸುಂದರವಾದ ಬದುಕೆಂದು ಸಮಾಜದಲ್ಲಿ ಬಿಂಬಿಸಬಹುದು. ಅವು ಯಾವುವೂ ಶಾಶ್ವತವಲ್ಲ. ನಾನಾ ರೀತಿಯ ವರ್ಣಗಳನ್ನು ಬಳಿದು ಮುಖ ಮತ್ತು ಚರ್ಮವನ್ನು ಕಾಂತಿಯುತಗೊಳಿಸಬಹುದು. ಆದರೆ ಅದೆಲ್ಲವೂ ತೊಳೆದಾಗ ಹಿಂದೆ ಕಾಣಿಸಿದ್ದು ಮಿಥ್ಯಾ ಸೌಂದರ್ಯವೆಂದು ಜಾಹೀರಾಗುವುದಿಲ್ಲವೇ. ಆದರೆ ಒಳಗಿನ ಸೌಂದರ್ಯವನ್ನು ತೊಳೆದರೂ ಆ ಸೌಂದರ್ಯ ಸಹಜವಾಗಿಯೇ ಉಳಿಯುತ್ತದೆ. ಅದೇ ಸತ್ಯವಾದ ಸೌಂದರ್ಯ. ಆದುದರಿಂದ ಸತ್ಯವೇ ಸೌಂದರ್ಯ...
        ರಾಬಿಯಾ ಎಂಬ ಮಹಾ ಗುರುವೊಬ್ಬರು ಸಂಜೆಯ ಹೊತ್ತಿಗೆ ಅಂಗಳದಲ್ಲಿ ಏನನ್ನೋ ಹುಡುಕುತ್ತಿರುವುದನ್ನು ಅವರ ಗೆಳೆಯರು ಮತ್ತು ಶಿಷ್ಯರು ಗಮನಿಸಿದರು. ಅವರಲ್ಲಿ, “ ಏನನ್ನು ಹುಡುಕುತ್ತಿರುವಿರಿ ಗುರುಗಳೇ?” ಎಂದು ಕೇಳಿಯೇ ಬಿಟ್ಟರು. ಆಗ ಗುರುಗಳು, “ಕಳೆದು ಹೋದ ಸೂಜಿಯೊಂದನ್ನು ಹುಡುಕುತ್ತಿದ್ದೇನೆ” ಎಂದರಂತೆ. ಶಿಷ್ಯರೆಲ್ಲರೂ ಗುರುಗಳನ್ನು ಮತ್ತೆ ಪ್ರಶ್ನಿಸಿದರು’ “ ಸೂಜಿ ಎಲ್ಲಿ ಬಿದ್ದಿದೆ? ಹೇಳಿ; ನಾವೂ ತಮ್ಮ ಜೊತೆ ಸೇರಿ ಹುಡುಕುತ್ತೇವೆ” ಎಂದರಂತೆ. “ಮನೆಯೊಳಗೆ ಬಿದ್ದಿದೆ” ಎಂದರು ಗುರುಗಳು. ಸ್ನೇಹಿತರು ಮತ್ತು ಶಿಷ್ಯರು ಅವಾಕ್ಕಾದರು. ಮನೆಯೊಳಗೆ ಬಿದ್ದಿರುವುದನ್ನು ಹೊರಗೇಕೆ ಹುಡುಕುವಿರಿ? ಮನೆಯೊಳಗೇ ಹುಡುಕಬೇಕಲ್ಲವೇ? ಎಂದಾಗ ಗುರುಗಳು ಹೇಳುವ ಮಾತು ಬಹಳ ಮನೋಜ್ಞವಾಗಿದೆ. “ಹೌದು ಒಳಗಿರುವುದನ್ನು ಹೊರಗಡೆಯೇ ಹುಡುಕುವವರು ಎಲ್ಲರೂ. ನಮ್ಮೊಳಗೆ ಸೌಂದರ್ಯವಿದೆ, ಆದರೆ ನಾವು ಸೌಂದರ್ಯವನ್ನು ಹೊರಗಡೆ ಹುಡುಕುತ್ತೇವೆ. ದೇವರು ಅಂತರಂಗದಲ್ಲಿದ್ದರೂ ನಾವು ದೇವರನ್ನೂ ಹುಡುಕುವುದು ಹೊರಗಡೆಯೇ ತಾನೇ? ಮನದೊಳಗೆ ಸುಂದರವಾದ ಸತ್ಯವೇ ಇದೆ. ಆದರೆ ಸತ್ಯಶೋಧನೆ ಮಾಡುವುದು ಹೊರಗಡೆಗೆ ತಾನೇ?”
       ಗುರುಗಳ ಮಾತೆಷ್ಟು ನಿಜವಲ್ಲವೇ? ನಮ್ಮೊಳಗೆ ಎಲ್ಲವೂ ಇದೆ. ನಮ್ಮ ಒಳಗಿರುವುದೇ ಸತ್ಯವಾದುದು ಮತ್ತು ಸುಂದರವಾದುದು ಹಾಗೂ ದೈವಿಕವಾದುದು. ಆದುದರಿಂದ ನಾವು ನಮ್ಮೊಳಗೆಯೇ ಎಲ್ಲವನ್ನೂ ದೃಷ್ಟಿಸಬಲ್ಲ ಆಧ್ಯಾತ್ಮಿಕ ದೃಷ್ಟಾರರಾಗೋಣ ಆಗದೇ?
.............................ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************



Ads on article

Advertise in articles 1

advertising articles 2

Advertise under the article