
ಜೀವನ ಸಂಭ್ರಮ : ಸಂಚಿಕೆ -19
Sunday, January 16, 2022
Edit
ಜೀವನ ಸಂಭ್ರಮ : ಸಂಚಿಕೆ -19
ಮುಯ್ಯಾಳು
------------------
ಮುಯ್ಯಾಳು - ಈ ಪದ್ಧತಿ ಈಗಲೂ ನಮ್ಮ ಊರಿನಲ್ಲಿ ಇದೆ. ಇದು ಗ್ರಾಮದ ಜನರಲ್ಲಿ ಹೇಗೆ ಕೆಲಸವನ್ನು ಸಂಭ್ರಮದಿಂದ ಮಾಡುವುದು ಎನ್ನುವುದರ ಪ್ರತೀಕ. ಇಂದು ಯಂತ್ರಗಳ ಕಾಲವಾದುದ್ದರಿಂದ, ಕೆಲಸಕ್ಕೆ ಜನರಿಲ್ಲ ಎಂಬ ಕೊರಗು ಇದೆ. ಆದರೆ ನಮ್ಮೂರಿನಲ್ಲಿ ಈ ಪದ್ಧತಿಯಿಂದ ಆ ಕೊರಗು ಕಡಿಮೆ ಇದೆ.
ಕೃಷಿಯಲ್ಲಿ ಭತ್ತ , ರಾಗಿ ನಾಟಿ ಮಾಡಲು , ಜನರ ಅಗತ್ಯವಿದೆ. ನಾಟಿಗೆ ಮುನ್ನ , ರಾಗಿ , ಭತ್ತದ ಪೈರನ್ನು ಬಳಸುವರು. ಹೊಲಗದ್ದೆಗಳನ್ನು ಉಳುಮೆ ಮಾಡಿ, ಮಣ್ಣನ್ನು ಸಡಿಲಿಸಿ, ಅದರಲ್ಲಿ ಬೆಳೆದಿರುವ ಕಳೆಯನ್ನು ತೆಗೆಯುವುದರಿಂದ ಹಿಡಿದು , ಬೆಳೆ ಕಟಾವು ಮಾಡಿ , ಶುಚಿಮಾಡಿ , ಸಾಗಿಸುವ ವರೆಗೆ ಮುಯ್ಯಿ ಆಳು ಪದ್ಧತಿ ಇದೆ.
ಎಂಟು ಹತ್ತು ಮನೆಯವರು ಒಟ್ಟುಗೂಡಿ, ಗಂಡು ಮುಯ್ಯಿ ಆಳು, ಹೆಣ್ಣು ಮುಯ್ಯಿ ಆಳುಗಳಾಗಿ ದುಡಿಯುವರು. ಇವರುಗಳಿಗೆ ಕೂಲಿ ಇರುವುದಿಲ್ಲ. ಒಟ್ಟುಗೂಡಿದ ಎಲ್ಲರ ಕೃಷಿ ಕಾರ್ಯ ಮುಗಿಯುವವರೆಗೂ ಒಟ್ಟಾಗಿ ಕೆಲಸ ಮಾಡುವರು. ಅವರಿಗೆ ಒಳ್ಳೆಯ ಊಟವನ್ನು ಆ ದಿನ ಕೆಲಸ ಮಾಡುವ ಜಮೀನು ಮಾಲೀಕರು ನೀಡುವರು.
ನೆಲ ಉಳುಮೆ ಮಾಡಲು, ಹಲುವೆ ಹೊಡೆಯುವುದು , ಕಳೆ ತೆಗೆಯುವುದು , ಪಾತಿಗಳ ನಡುವೆ ಇರುವ ತೆವರು ಕೊಚ್ಚಿ ಹದ ಮಾಡುವುದು , ಗಂಡು ಆಳಿನ ಕೆಲಸ. ಹೆಣ್ಣು ಮುಯ್ಯಿ ಆಳಿನ ಕೆಲಸ....... ಪೈರು ಕೀಳುವುದು, ನಾಟಿ ಮಾಡುವುದು ಆಗಿರುತ್ತದೆ. ಬೆಳೆ ಬಂದಾಗ, ಕಟಾವು ಮಾಡಲು ಹೆಣ್ಣು-ಗಂಡು ಆಳುಗಳು ಸೇರಿ ಕೆಲಸ ಮಾಡುವರು. ಕೆಲಸದ ಸ್ಥಿತಿಗೆ ಅನುಗುಣವಾಗಿ , ಕಠಿಣತೆಗೆ ಅನುಗುಣವಾಗಿ, ಗಂಡು ಮತ್ತು ಹೆಣ್ಣು ಮುಯ್ಯಿ ಆಳುಗಳು , ಕೆಲಸ ವಿಂಗಡಿಸಿ ಕೊಂಡು , ಕೆಲಸ ಮಾಡುವರು. ಆದರೆ ಕೆಲಸ ಮಾಡುವ ಸಂಭ್ರಮ ಮಾತ್ರ ವರ್ಣನಾತೀತ.
ಪೈರು ಕೀಳುವಾಗ , ನಾಟಿ ಮಾಡುವಾಗ , ಮಹಿಳೆಯರು ಹಾಡುಗಳನ್ನು ಹಾಡುವುದು , ಹರಟೆ ಹೊಡೆಯುವುದು , ಒಬ್ಬರು ಮತ್ತೊಬ್ಬರ ಕಾಲೆಳೆಯುವುದು , ಪುರುಷರು ಮಹಿಳೆಯರನ್ನು ರೇಗಿಸುವುದು, ಮಹಿಳೆಯರು ಪುರುಷರ ಕೆಲಸವನ್ನು ಟೀಕಿಸುವುದು ಸಾಮಾನ್ಯ. ಇದರಿಂದ ದೇಹಕ್ಕೆ ಶ್ರಮವಾಗುವುದು ತಿಳಿಯುವುದಿಲ್ಲ. ಕೆಲಸ ಸಾಗುವುದು ತಿಳಿಯುವುದಿಲ್ಲ. ಹೀಗೆ ಸಂಭ್ರಮದಿಂದ ಕೆಲಸ ಮಾಡಿ, ಎಲ್ಲರೂ ಕೈ ಕಾಲು ತೊಳೆದು ಒಟ್ಟಿಗೆ ಊಟ ಮಾಡುವುದು. ಆಗಲೂ ಹರಟೆ ಇದ್ದದ್ದೆ...!
ದಿನಸಿಗಳನ್ನು ಶುಚಿ ಮಾಡಲು, ಕಣ ಮಾಡುವುದು ಸರ್ವೇಸಾಮಾನ್ಯವಾಗಿತ್ತು. ಕಣ ಮಾಡುವ ಹಿಂದಿನ ದಿನ ಒಂದಷ್ಟು ಮಂದಿ ಒಟ್ಟಾಗಿ ಸೇರಿ ಅದನ್ನು ಸಮತಟ್ಟು ಮಾಡಿ ನೀರನ್ನು ಹಾಕಿ ಮೆದುಗೊಳಿಸುವರು. ಕಣ ಮಾಡುವ ಬೆಳಿಗ್ಗೆ , ಕಣ ಗಟ್ಟಿಮಾಡಲು , ದನ ಇರುವವರೆಲ್ಲ ಬಂದು , ದನಗಳಿಂದ ತುಳಿಸಿ ಗಟ್ಟಿ ಮಾಡುತ್ತಿದ್ದರು. ನಂತರ ಅದನ್ನು ಸೆಗಣಿಯಿಂದ ಸಾರಿಸಿ ಒಣಗಲು ಬಿಡುವರು. ಹೀಗೆ ಮುಯ್ಯಿ ಆಳು ಪದ್ಧತಿಯಿಂದ ಕೆಲಸಗಾರರು ಇಲ್ಲ ಎನ್ನುವ ಭಾವನೆ ಬರುತ್ತಿರಲಿಲ್ಲ.
ಕೆಲವರು ರಾಗಿ ತೆನೆಯನ್ನು ಕತ್ತರಿಸಿ ಡಾಂಬರು ರಸ್ತೆ ಮೇಲೆ ಹಾಕುವರು. ಅದರ ಮೇಲೆ ವಾಹನಗಳು ಓಡಾಡುವುದರಿಂದ ಧಾನ್ಯಗಳು ಅದರ ಒಟ್ಟಿನಿಂದ ಬೇರ್ಪಡುವುದು. ಸಂಜೆ ಅದನ್ನು ತೆಗೆದು ಗಾಳಿಗೆ ಎದುರಾಗಿ ತೂರಿ ಕಸಕಡ್ಡಿ ಬೇರ್ಪಡಿಸುವರು. ಆದರೆ ವಾಹನದ ಚಕ್ರಕ್ಕೆ ಅಂಟಿದ ಹೊಲಸು ದಾನ್ಯಗಳಲ್ಲಿ ಸೇರುವ ಸಂಭವವಿತ್ತು. ನಂತರ ಬೆಳೆ ಕತ್ತರಿಸುವ ಮತ್ತು ಬೆಳೆಯನ್ನು ಸ್ವಚ್ಛಗೊಳಿಸುವ ಯಂತ್ರ ಬಂದಮೇಲೆ ಕಣ ಮಾಡುವ ಸಂಭ್ರಮ ಇಲ್ಲದಂತಾಯಿತು.
ಈ ಘಟನೆಯನ್ನು ಓದಿದ ಮೇಲೆ, ಮಕ್ಕಳೇ , ನಮ್ಮ ಹಿರಿಯರು ಹೇಗೆ ಕೆಲಸವನ್ನು ಸಂಭ್ರಮದಿಂದ ಮಾಡುತ್ತಿದ್ದರು ಅನ್ನುವುದು ತಿಳಿಯುತ್ತದೆ. ನಮ್ಮ ಹಿರಿಯರಲ್ಲಿ ಸರಳ ಜೀವನ , ಸಂಭ್ರಮದ ದುಡಿಮೆ ಇತ್ತು. ಮನಸ್ಸು ಶಾಂತವಾಗಿತ್ತು. ಹಾಗಾಗಿ ಜೀವನಶೈಲಿಯ ಕಾಯಿಲೆಗಳಾದ ಹೃದ್ರೋಗ , ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಇರಲಿಲ್ಲ.
ಈ ರೀತಿಯ ಅನೇಕ ಪದ್ಧತಿಗಳು ಇದ್ದು ಇವು ಸಮಾಜವನ್ನು ಬೆಳೆಸಿಕೊಂಡು ಬಂದಿವೆ. ನಮ್ಮ ಹಿರಿಯರು ಒಬ್ಬರಿಗೊಬ್ಬರು ಸಹಕಾರ ಮನೋಭಾವದಿಂದ ಬದುಕುತ್ತಿದ್ದರೆನ್ನುವುದು ಇಲ್ಲಿ ತಿಳಿಯುತ್ತದೆ. ಮುಯ್ಯಾಳು ಪದ್ಧತಿ - ಇಂದಿನ ನಮ್ಮ ಸಮಾಜಕ್ಕೆ ನೀಡುವ ಸಹಕಾರ ಜೀವನದ , ಮಾರ್ಗದರ್ಶನ ಎಂದರೆ ತಪ್ಪಾಗಲಾರದು , ನಾವು ಕೂಡ ಊರಿನ , ಸಮಾಜದ ಅಭಿವೃದ್ಧಿಗೆ ಸಹಕಾರದಿಂದ ದುಡಿದರೆ ಪ್ರತಿ ಕೆಲಸದಲ್ಲೂ ಸಂಭ್ರಮವನ್ನು ಕಾಣಬಹುದು.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************