-->
ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಮಕ್ಕಳ ಜಗಲಿಯಲ್ಲಿ
ಸ್ಪೂರ್ತಿಯ ಮಾತುಗಳು

                       ಉತ್ತರದಾಯಿತ್ವ
                   ---------------------------
         ಉತ್ತರದಾಯಿತ್ವವೆಂದರೆ ಜವಾಬ್ದಾರಿ ಅಥವಾ ಹೊಣೆಗಾರಿಕೆ ಎಂದರ್ಥ. ಈ ಲೇಖನದಲ್ಲಿ ನಾನು ಪಾಲಕರು ಮತ್ತು ಮಕ್ಕಳ ಪರಸ್ಪರ ಉತ್ತರದಾಯಿತ್ವದ ಕುರಿತಾಗಿ ಕಿವಿಮಾತೊಂದನ್ನು ಹೇಳಹೊರಟಿರುವೆನು. 
          ಹೆತ್ತವರು ಮಕ್ಕಳ ಬಗ್ಗೆ ಹತ್ತಾರು ಅಪೇಕ್ಷೆಗಳನ್ನು ಇಟ್ಟಿರುವರು. ಅವರ ಹಸನಾದ ಬದುಕನ್ನು ಕನಸುಕಾಣುವುದು ಹೆತ್ತವರ ತಪ್ಪಲ್ಲ. ಆದರೆ ಆ ಕನಸುಗಳ ಸಾಧನೆಗೆ ಹಟತೊಟ್ಟು ಪಾಲಕರು ಮಕ್ಕಳನ್ನು ಯಾವುದೋ ವಿಚಾರಗಳ ಸುತ್ತ ಬಂಧಿಸಿಡುತ್ತಾರಲ್ಲವೇ? ಅದು ತಪ್ಪು. ಈ ಬಂಧನದಿಂದ ಮಕ್ಕಳು ಹೊರಬರಲಾಗದಂತೆ ಗಟ್ಟಿಯಾದ ಭಾವನಾತ್ಮಕ ಆವರಣವೇ ಹೆತ್ತವರಿಂದ ನಿರ್ಮಾಣಗೊಂಡಿರುತ್ತದೆ. ಹೆತ್ತವರ ನಿರೀಕ್ಷೆಯ ಕಲ್ಪನೆಯೊಳಗೆ ಬಂಧಿತರಾದ ಮಕ್ಕಳು ಅವರ ಭಾವನಾ ಲೋಕ ಮತ್ತು ಅಪೇಕ್ಷೆಗಳ ಜಗತ್ತಿನಲ್ಲಿ ವಿಹರಿಸಲಾಗದೆ ತೀವ್ರವಾಗಿ ದುಗುಡಗೊಂಡು ಒದ್ದಾಡುತ್ತಾರೆ. ಬಹುತೇಕ ಮಕ್ಕಳು ಸ್ವಯೋಚಿತ ಗುರಿ ಮತ್ತು ಧ್ಯೇಯಗಳನ್ನು ಹೊಂದಿರುತ್ತಾರೆ; ಅವುಗಳನ್ನೇ ಸಾಧಿಸುವ ಉತ್ಕಟವಾದ ಆಸೆಯನ್ನು ಹೊಂದಿರುತ್ತಾರೆ. ಅಂತಹ ಮಕ್ಕಳು ಪಾಲಕರಿಂದ ನಿರ್ಧಾರಗೊಂಡ ಗುರಿ ಮತ್ತು ಉದ್ದೇಶಗಳನ್ನು ತಿರಸ್ಕರಿಸಲೂ ಆಗದೇ ಸ್ವೀಕರಿಸಲೂ ಆಗದೇ ತೊಳಲಾಡುತ್ತಾರೆ. ಈ ತೊಳಲಾಟ ಅವರ ಬದುಕನ್ನು ಮುರುಟುಗೊಳಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. 
         ಹೆತ್ತವರ ನೀತಿ ಮತ್ತು ಧೋರಣೆಗಳನ್ನು ಬದಲಾಯಿಸಿ ತಮ್ಮ ದಾರಿಯಲ್ಲೇ ಚಿಂತನೆ ಮಾಡಲು ಪ್ರೇರೇಪಿಸ ಬಲ್ಲ ಮಕ್ಕಳೂ ಇರುತ್ತಾರೆ. ಅವರು ಹೆತ್ತವರ ಬಂಧನದಿಂದ ಮುಕ್ತರಾಗಿ ಅರಳುತ್ತಾರೆ. ಉದ್ದೇಶಿತ ಸಾಧನೆಯ ಶಿಖರವನ್ನೇರಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಎಲ್ಲರ ಬೆಂಬಲ ಗಳಿಸಲು ಹಿಂದೆ ಮುಂದೆ ನೋಡುವುದಿಲ್ಲ. ಇನ್ನೂ ಕೆಲವರು ಒಲ್ಲದ ಮನಸ್ಸಿನಿಂದ ಹೆತ್ತವರ ಗುರಿ ಮತ್ತು ಉದ್ದೇಶಗಳ ಜೊತೆಗೆ ರಾಜಿ ಮಾಡಿ ತಮ್ಮತನವನ್ನು ಕಳೆದುಕೊಳ್ಳುತ್ತಾರೆ. ಹೀಗೆ ಭವಿತವ್ಯದ ಬಗ್ಗೆ ಮೂರು ತೆರನಾದ ಮನೋಸ್ಥಿತಿಯ ಮಕ್ಖಳು ಮತ್ತು ಪಾಲಕರು ಸಮಾಜದಲ್ಲಿದ್ದಾರೆ. ಮಕ್ಕಳ ಉದ್ದೇಶಗಳನ್ನು ದಂಶಿಸುವ ಒಂದು ವರ್ಗವಿದ್ದರೆ ಇನ್ನೊಂದು ವರ್ಗ ಮಕ್ಕಳೊಂದಿಗೆ ರಾಜಿಯಾಗುತ್ತದೆ. ಮತ್ತೊಂದು ವರ್ಗ ಮಕ್ಕಳ ಮೇಲೇ ತಮ್ಮತನವನ್ನು ಹೇರಿ ಸೋತರೂ ಗೆದ್ದಂತೆ ವಿಜೃಂಭಿಸುತ್ತಾರೆ. ಈ ಮೂರೂ ತೆರನಾದ ಪಾಲಕರು ಮಕ್ಕಳ ಹಿತಸಾಧನೆಗಳಿಗೆ ಮಾರಕರೇ ಆಗಿರುತ್ತಾರೆ ಎಂದರೆ ನನ್ನನ್ನು ಕುಟುಕದಿರಿ.
         ಪ್ರತಿಯೊಬ್ಬರಲ್ಲೂ ಅವರದೇ ಆದ ಮನೋವೇಗ ಮತ್ತು ಮಾನಸಿಕ ಸಂಕಲ್ಪಗಳಿರುತ್ತವೆ. ಅವುಗಳು ಯಾವುದೇ ಕಾರಣದಿಂದಲೂ ಅದುಮಲ್ಪಡಬಾರದು. ಅದುಮಿದರೆ ಚೇತರಿಕೆ ನಿಧಾನವಾಗುತ್ತದೆ, ಕೆಲವೊಮ್ಮೆ ಚೇತರಿಕೆ ನಾಶವೂ ಆಗುತ್ತದೆ. ಮನಸ್ಸಿನ ಭಾವನೆಗಳ ವಿರುದ್ಧ ಕಿರಿಯರಿಗೆ ಆಘಾತವಾದರೆ ಅವರು ಜೀರ್ಣಿಸಲಾರರು. ಹಿರಿಯರಿಗೆ ಅನುಭವ ಶಕ್ತಿಯಿರುವುದರಿಂದ ತಮ್ಮ ಮನಸ್ಸಿಗೆ ವಿರುದ್ಧವಾದುದೆದುರಾದರೂ ಸಹಿಸಲು ಹಿರಿಯರಿಗೆ ಕಷ್ಟವಾಗುವುದಿಲ್ಲ. ಮಕ್ಕಳ ಮೇಲೆ ಹೆತ್ತವರ ನಿರ್ಧಾರಗಳ ಹೇರಿಕೆ ಖಂಡಿತವಾಗಿಯೂ ಸಲ್ಲದು.
ಮಕ್ಕಳ ಮನವರಿತು, ಅವರ ಆಸೆ ಆಕಾಂಕ್ಷೆಗಳನ್ನು ತಿಳಿದು ಅವರ ಯೋಚನಾ ಪಥದಲ್ಲಿಯೇ ಸಾಗಿ ಮಕ್ಕಳು ಮೊದಲಿಗರಾಗಿ ಹೊರ ಹೊಮ್ಮಲು ಹೆತ್ತವರು ವಿಶಾಲಹೃದಯವಂತರಾಗಬೇಕು. ಇನ್ನೊಬ್ಬರ ಮನೋಸ್ಥಿತಿಗೆ ಒಗ್ಗಲು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ ಮಕ್ಕಳ ಮೇಲೆ ಹೆತ್ತವರ ಚಿಂತನೆಗಳ, ಆಸೆ ಆಶಯಗಳ ಹೇರಿಕೆ ಬೇಡ. ಮಕ್ಕಳೂ ಹೆತ್ತವರನ್ನು ಒಲಿಸಿಕೊಳ್ಳುವ ಹೃದಯವನ್ನು ಹೊಂದಿರಬೇಕು. ಅವರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಧಿಕ್ಕರಿಸುವಂತಾಗಬಾರದು. ಕೊಡು ಕೊಳ್ಳುವ ಗುಣ ಹೆತ್ತವರ ಮತ್ತು ಮಕ್ಕಳ ಉತ್ತರದಾಯಿತ್ವವಾಗಿದೆ ಎಂಬುದು ಸದಾ ನಮ್ಮ ಸ್ಮರಣೆಯೊಳಗಿರಲಿ.
.............................ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
****************************************

Ads on article

Advertise in articles 1

advertising articles 2

Advertise under the article