-->
ಭೂಮಿಯ ಮೇಲೆ ಜೇನುಹುಳುಗಳ ಪ್ರಾಮುಖ್ಯತೆ

ಭೂಮಿಯ ಮೇಲೆ ಜೇನುಹುಳುಗಳ ಪ್ರಾಮುಖ್ಯತೆ


                        ಭೂಮಿಯ ಮೇಲೆ 
                ಜೇನುಹುಳುಗಳ ಪ್ರಾಮುಖ್ಯತೆ.
        ಬಾಲ್ಯದಿಂದಲೂ ನನ್ನದು ಮೂಲತಃ ಜೇನು ಕೀಳುವುದೇ ಕೆಲಸ ಆಗಿತ್ತು. ಐದಾರನೇ ವಯಸ್ಸಿನಿಂದಲೇ ಆರಂಭವಾದ ಈ ಅಭ್ಯಾಸ ಇಲ್ಲಿಯವರೆಗೆ ನಾನು ಕನಿಷ್ಟ ಸುಮಾರು ಹತ್ತುಸಾವಿರ ಜೇನು ಬಿಡಿಸಿರಬಹುದು. ಆ ಅನುಭವದ ಹಿನ್ನೆಲೆಯಲ್ಲಿ ಈ ಅಖಂಡ ಭೂ ಪ್ರದೇಶದ ಮೇಲೆ ಜೇನುಹುಳಗಳು ಭೂಮಿಯ ಮೇಲೆ ಇರದಿದ್ದರೆ ಏನಾಗುತ್ತಿತ್ತು?ಜೇನುಹುಳಗಳಿಗೂ ಮತ್ತು ಈ ಭೂಮಿಯ ಜೀವರಾಶಿಗಳ ಆಹಾರದ ಮೇಲಿನ ಸಂಬಂಧ ಹೇಗಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ..
         ಜೇನುಹುಳುಗಳು ಸುಮಾರು 6000 ವರ್ಷಗಳ ಹಿಂದೆ ಉಗಮ ಆಗಿರಬಹುದು. ಮನುಷ್ಯನ ಉಗಮಕ್ಕಿಂತಲೂ ಮೊದಲೇ ಜೇನುನೊಣಗಳು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದವು. ಜೇನುತುಪ್ಪ ಭೂಮಿಯ ಮೇಲಿನ ಕೀಟಗಳು ತಯಾರಿಸುವ ಅದ್ಭುತ ವಸ್ತು ಅಂತಾನೇ ಹೇಳಬಹುದು. ಇದರಲ್ಲಿರುವ ವ್ಯಾಪಕ ಔಷಧೀಗುಣಗಳು ಬಹಶಃ ಮಾನವ ನಿರ್ಮಿತ ಯಾವದ್ರವದಲ್ಲೂ ಇಲ್ಲ. ಆದ್ದರಿಂದನೇ ಈ ಆಂಗ್ಲ ಮೆಡಿಸಿನ್ ಬರುವ ಮುನ್ನ ಪ್ರತಿಮನೆಯಲ್ಲೂ ಜೇನುತುಪ್ಪ ಅಗತ್ಯ ಮತ್ತು ಕಡ್ಡಾಯವಸ್ತು ಆಗಿಯೂ, ಶಾಸ್ತ್ರವೆಂಬಂತೆ ಒಂದೆರಡು ಹನಿಯಷ್ಟಾದರೂ ಇದ್ದೇ ಇರುತ್ತಿತ್ತು. ಕೇವಲ ಭಾರತದಲ್ಲಿ ಅಷ್ಟೆ ಅಲ್ಲ ಪ್ರಾಚೀನ ಈಜಿಪ್ಟ್, ಸುಮೇರಿಯನ್ನರು ಹೀಗೆ ಹಲವು ನಾಗರೀಕತೆಯ ಆರಂಭದಿಂದಲೂ ಇದನ್ನು ಬಳಸುತ್ತಾ ಬಂದಿದ್ದಾರೆ. ಅಧ್ಯಯನದ ಪ್ರಕಾರ ಇತಿಹಾಸ ನೋಡಿದರೆ ಪುರಾತತ್ವಶಾಸ್ತ್ರಜ್ಞರು ಪ್ರಾಚೀನ ಈಜಿಪ್ಟಿನ ಸಮಾಧಿಯಲ್ಲಿನ ಫೇರೋಗಳ ಗೋರಿಗಳಲ್ಲಿ ಜೇನುತುಪ್ಪದ ಮುಚ್ಚಿದ ಜಾಡಿಗಳನ್ನು ಪತ್ತೆಹಚ್ಚಿದ್ದಾರೆ. ಆ ಎಲ್ಲಾ ಜೇನುತುಪ್ಪದ ಜಾಡಿಗಳೊಂದಿಗೆ ಅವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೂ ಬಹುಶಃ ಇನ್ನಿತರ ವಸ್ತುಗಳಿಗಿಂತ ಇದು ಅಮೂಲ್ಯವಾದದು ಮತ್ತು ಪುನರ್ಜನ್ಮ ಇದ್ದರೆ ಅವರಿಗೆ ಅದು ಸಿಹಿಯ ಸಂಕೇತ ಮತ್ತು ಪದಾರ್ಥವಾಗಿ ಇಟ್ಟಿರಬಹುದು. ಅದೇನೇ ಇದ್ದರೂ ಅತ್ಯಅಮೂಲ್ಯವಾದ ವಸ್ತುಗಳ ಪೈಕಿ ಒಂದಾಗಿದ್ದರಿಂದಲೇ ಅದನ್ನು ಹಾಗೆ ಅವರು ಇಟ್ಟಿರಬಹುದು.
       ಶೇ.30% ಸುಮೇರಿಯನ್ನರ ವೈದ್ಯಕೀಯ ಚಿಕಿತ್ಸೆಗಳಲ್ಲಿ ಜೇನು ತುಪ್ಪದ ಬಳಕೆಯಿತ್ತು. ಭಾರತದಲ್ಲಿ, ಜೇನುತುಪ್ಪವು, ಪುರಾತನ, ಪ್ರಾಚೀನ ಸಾಂಪ್ರದಾಯಿಕ ಔಷಧಗಳಾದ ಸಿದ್ಧ ಮತ್ತು ಆಯುರ್ವೇದದ ಪ್ರಮುಖ ಭಾಗವಾಗಿದೆ. ಹಲವಾರು ಸಂಸ್ಕೃತಿಗಳು ಕೂಡ, ವಿವಿಧ ಔಷದೀಯ ಉದ್ದೇಶಗಳಿಗಾಗಿ ಜೇನುತುಪ್ಪವನ್ನು ಬಳಸಿಕೊಂಡಿವೆ.
         ಜೇನುತುಪ್ಪವು ಇಂದು ವೈದ್ಯಕೀಯ ಸಮುದಾಯದ ವೈಜ್ಞಾನಿಕ ಸಂಶೋಧನೆಯ ಕೇಂದ್ರಬಿಂದುವಾಗಿದೆ. ನಮ್ಮ ಪೂರ್ವಜರು ಈಗಾಗಲೇ ನಿತ್ಯಜೀವನದಲ್ಲಿ ಅನ್ವಯಿಸಿಕೊಂಡ ಜೇನುತುಪ್ಪದ ಹಲವು ಉಪಯೋಗಗಳನ್ನು ಇದು ತನಿಖೆ ಮಾಡಿ ದೃಢಪಡಿಸಿದೆ. ಬಹುಶಃ ಭಾರತೀಯರಷ್ಟು ಆಳವಾಗಿ, ಜೇನುತುಪ್ಪದ ಪ್ರಯೋಜನಗಳನ್ನು ಯಾರೂ ಅನ್ವೇಷಣೆ ಮಾಡಿಲ್ಲವೇನೋ..? ಜೇನುತುಪ್ಪವನ್ನು ಮನುಕುಲಕ್ಕೆ ಪ್ರಕೃತಿಯ ಉಡುಗೊರೆಯೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಅಡುಗೆ ಮನೆಯಲ್ಲಿಯೂ ಜೇನುತುಪ್ಪ ಅಗತ್ಯವಾದ ಪದಾರ್ಥವೆಂದು ಇಂದಿಗೂ ಆಚರಣೆಯಲ್ಲಿದೆ. ಜೇನುತುಪ್ಪವು ಪೂರ್ವಸಿದ್ಧ ಆಹಾರವಾಗಿಯೂ ಹಾಗೂ ಮನುಷ್ಯರು ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಆಯುರ್ವೇದ ಮತ್ತು ಸಿದ್ಧ ಎರಡರಲ್ಲೂ ಔಷಧಗಳ ಮಾಧ್ಯಮವಾಗಿರುವುದು ಜೇನುತುಪ್ಪದ ಒಂದು ವಿಶೇಷ. ಜೇನುತುಪ್ಪದೊಂದಿಗೆ ಇತರ ಔಷಧಿಗಳನ್ನು ಬೆರೆಸಿದಾಗ, ಔಷಧಿಗಳನ್ನು ದೇಹವು ಸುಲಭವಾಗಿ ಮತ್ತು ಶೀಘ್ರವಾಗಿ ಹೀರಿಕೊಳ್ಳುತ್ತದೆ ಹಾಗೂ ರಕ್ತದ ಪರಿಚಲನೆಯ ಮೂಲಕ ನರವ್ಯವಸ್ಥೆಯಲ್ಲಿ ಹರಡುತ್ತವೆ. ಜೇನುತುಪ್ಪವು, ಔಷಧಿಯ ಶಕ್ತಿಯನ್ನು ಕಾಪಾಡುತ್ತದೆ ಹಾಗೂ ಅದರ ಪರಿಣಾಮಕಾರಿತ್ವವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕೇ ಕೆಲವು ಆಯುರ್ವೇದ ಔಷಧಿ ಮತ್ತು ಮೂಲಿಕೆಗಳನ್ನು ಜೇನುತುಪ್ಪದ ಕಾಂಬಿನೇಷನ್ನೊಂದಿಗೆ ತೆಗೆದುಕೊಳ್ಳಲು ಹೇಳುವುದು. ನೈಸರ್ಗಿಕ ಜೇನು ಬಹುಪರಿಣಾಮಕಾರಿಯಾಗಿದೆ. ಆಹಾರದಿಂದ-ಹರಡುವ ರೋಗಗಳ ವ್ಯಾಧಿಜನಕಗಳನ್ನು (pathogens), ವೈದ್ಯಕೀಯ-ದರ್ಜೆಯ ಜೇನುತುಪ್ಪವು ನಾಶಪಡಿಸಬಹುದು ಎಂದು ವೈದ್ಯಕೀಯ ಸಂಶೋಧನೆಯು ತೋರಿಸಿದೆ. ಪ್ರತಿಜೀವಕಗಳಿಗೆ (antibiotics) ಪ್ರತಿರೋಧವನ್ನು ವೃದ್ಧಿಪಡಿಸಿಕೊಂಡಿರುವ ಬ್ಯಾಕ್ಟೀರಿಯಾದ ತಳಿಗಳನ್ನು ಎದುರಿಸುವಲ್ಲಿ ಜೇನುತುಪ್ಪದ ಪ್ರಯೋಗವು ಭರವಸೆಯನ್ನು ತೋರಿಸಿದೆ. ಹಲವು ರೋಗಗಳಿಗೆ ಜೇನುತುಪ್ಪವು ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆಯು ಮನದಟ್ಟು ಮಾಡಿಸಿದೆ. ಹೀಗೆ ಜೇನುತುಪ್ಪವನ್ನು ಆರೋಗ್ಯ, ಔಷಧೀಯ ನೂರಾರು ಉಪಯೋಗಗಳನ್ನು ಪಟ್ಟಿಮಾಡಬಹುದು. ಕಣ್ಣಿನ ಚಿಕಿತ್ಸೆ, ಚರ್ಮ ಖಾಯಿಲೆಗಳು, ವಾತ ಪಿತ್ತ, ಕಫ, ಮಲಬದ್ದತೆ, ಹೃದಯರೋಗಗಳೂ ಮತ್ತು ಕ್ಯಾನ್ಸರ್ ನಂತಹ ಖಾಯಿಲೆಗಳವರೆಗೆ, ಅಪಾಯಕಾರಿ ಕ್ರಿಮಿ ಕೀಟಗಳು ಕಚ್ಚಿದಾಗಲೂ ಇದನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ಔಷಧಿಯಾಗಿ ಯಾವುದೇ ಅಡ್ಡಪರಿಣಾಮ ಇಲ್ಲದೇ ಆಗ ತಾನೇ ಜನಿಸಿದ ಮಗುವಿನಿಂದ ಮುದುಕರವರೆಗೆ ಔಷಧೀಯವಾಗಿ ಬಳಸುವ ಕೆಲವು ನಿಯಮಗಳ ಷರತ್ತುಗಳಿಗೊಳಪಟ್ಟು ವಿಶ್ವದಾದ್ಯಂತ ಹೆಚ್ಚು ವಿಶ್ವಾಸದಿಂದ ಬಳಸಲ್ಪಡುತ್ತಿರುವ ಪಾರಂಪರಿಕ ಔಷದವೇ ಈ ಜೇನುತುಪ್ಪ.
          ದಟ್ಟವಾದ ಪರ್ವತ ಕಾಡುಗಳಿಂದ ಸಂಗ್ರಹಿಸಲ್ಪಟ್ಟ ಜೇನುತುಪ್ಪವು - ಮಲೈಥೆನ್ (malaithen) ಅಥವಾ ಪರ್ವತ ಜೇನು ಎಂದು ಕರೆಯುಲ್ಪಡುವ ಇದು, ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಯ ಜೇನುತುಪ್ಪವು, ಜೇನುನೊಣಗಳು ವೈವಿಧ್ಯಮಯ ಗಿಡಮರಗಳು , ಎಲ್ಲಾ ರೀತಿಯ ಹೂವುಗಳ ಮಕರಂದವನ್ನು ಸಂಗ್ರಹಿಸಿರುವುದರಿಂದ ಈ ಜೇನುತುಪ್ಪ ಹೆಚ್ಚು ಔಷಧೀಯ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಇಂದಿಗೂ ಬಳಕೆಯಲ್ಲಿರುವ ಇದರ ಬಳಕೆ ಎಲ್ಲಾ ಪ್ರದೇಶದಲ್ಲೂ ಸಿಕ್ಕುವ ಜೇನುತುಪ್ಪದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.

        ಜೀವರಾಶಿಗಳ ಆಹಾರದ ಮೇಲೆ ಜೇನು     
                     ಹುಳುಗಳ ಸಂಬಂಧ:
    ನಿಮಗೆ ಗೊತ್ತಿರಬಹುದು. ಮೊದಲಿದ್ದಷ್ಟು ಜೇನುಗಳು ಈಗ ಇಲ್ಲ. ಜೇನುನೊಣಗಳಿಂದಲೇ ನೈಸರ್ಗಿಕವಾಗಿ ಹೂವಿನಿಂದ ಹೂವಿಗೆ ಮಕರಂದ ಹೀರಲು ಹೋಗುವ ಪ್ರಕ್ರಿಯೆಯೇ ಪರಾಗಸ್ಪರ್ಶ. ಈ ಪರಾಗಸ್ಪರ್ಶ ಕ್ರಿಯೆ ನೈಸರ್ಗಿಕವಾಗಿ ಆಗುವುದರಿಂದಲೇ ರೈತರ ಬೆಳೆಗಳ ಇಳುವರಿ ಹೆಚ್ಚಾಗುವುದು. ಇದನ್ನು ಜೇನು ಸಾಕಾಣಿಕೆ ಮಾಡಿರುವ ತೋಟಗಳ ಸುತ್ತಮುತ್ತ ಅಲ್ಲಿನ ತೆಂಗು,ಅಡಿಕೆ ಹುಣಸೇಮರಗಳೂ ಸೇರಿದಂತೆ ಹೆಚ್ಚು ಇಳುವರಿ ಕಂಡಿದ್ದಾರೆ. ಇದಕ್ಕೆ ಕಾರಣ ಜೇನು ಹುಳಗಳೇ ಎಂದು ಅನೇಕ ಪ್ರಯೋಗಗಳೂ ಸಾಬೀತು ಪಡಿಸಿವೆ ಕೂಡ. ಎಲ್ಲಾ ಸಸ್ಯಗಳಲ್ಲಿ ಬೀಜಕಟ್ಟಿ ಕಾಳು ಆಗುವ ಪ್ರಕ್ರಿಯೆಯಲ್ಲಿ ಜೇನಿನ ಪಾತ್ರ ಬಹು ಮುಖ್ಯವಾದುದು. ಈ ಸ್ಥಾನವನ್ನು ಇತರ ಜನಗಳಾಗಲೀ ಯಂತ್ರಗಳಾಗಲಿ ತುಂಬಲು ಅಸಾಧ್ಯ. ಜೇನುಹುಳಗಳೆಂಬ ಕೀಟಗಳು ಇರುವುದರಿಂದಲೇ ಇಂದಿಗೂ ಸಕಲ ಜೀವರಾಶಿಗೆ ಆಹಾರ ಉತ್ಪಾದನೆ ಆಗುತ್ತಿದೆ. ಪ್ರಕೃತಿಯಲ್ಲಿ ಎಲ್ಲವೂ ಪೂರಕ ಸಂಬಂಧ ಹೊಂದಿವೆ. ಜಗತ್ತಿನಲ್ಲಿ ಸುಮಾರು 25,000 ಬಗೆಯ ಜೇನು ಹುಳುಗಳು ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ. ದುರದೃಷ್ಟವಶಾತ್, ಮನುಷ್ಯನ ಅತೀ ಶೋಷಣೆ ಮತ್ತು ಬೆಂಕಿಯದಾಳಿಗೆ ಇವುಗಳಲ್ಲಿ ಅನೇಕ ಜಾತಿಯ ಹುಳುಗಳು ಅಪಾಯದ ಅಂಚಿನಲ್ಲಿದೆ. ಉತ್ಪಾದನೆಯಲ್ಲಿ ಸ್ಪರ್ಧೆಗೆ ಇಳಿದು ಅತಿಯಾಸೆಗೆ ಬಿದ್ದ ಮಾನವ ಯಾವು ಯಾವೋ ಅಪಾಯಕಾರಿ ಕೀಟನಾಶಕಗಳನ್ನು ಬೆಳೆಗಳ ಮೇಲೆ ಸಿಂಪಡಣೆ ಮಾಡಿದ. ಸಹಜವಾಗಿ ಮಕರಂದಕ್ಕಾಗಿ ಬೆಳೆಗಳ ಹೂಗಳ ಮೇಲೆ ಕುಳಿತ ಜೇನುನೊಣಗಳು ಮಾನವನು ಸಿಂಪಡಣೆ ಮಾಡಿದ ಕೀಟನಾಶಕಕ್ಕೆ ಗರಿಷ್ಠ ಪ್ರಮಾಣದಲ್ಲಿ ಎಲ್ಲಾ ಪ್ರಭೇದದ ಜೇನು ಸಂತತಿ ಬಲಿಯಾಗುತ್ತಿದ್ದಾವೆ. ಇನ್ನೂ ಜೇನುತುಪ್ಪ ತೆಗೆಯುವ ಸಂದರ್ಭದಲ್ಲಿ ಹುಳುಗಳ ಸುಟ್ಟು ಜೇನು ಕದ್ದುತರುತ್ತಿರುವುದೂ ಕೂಡ ಜೇನುಹುಳುಗಳ ಸಂತತಿ ಕಡಿಮೆಯಾಗಲು ಮತ್ತೊಂದು ಕಾರಣ. ಹಾಗೇ ಜೇನುಹುಳಗಳಿಗೆ ಕಾಡುವ ಕೆಲವು ವೈರಸ್ ಗಳ ಕಾರಣದಿಂದ ಸಂತಾನೋತ್ಪತ್ತಿ ಮಾಡಲು ಅಸಮರ್ಥವಾಗಿ ಜೇನಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲು ಕಾರಣ.
        ಮಾರುಕಟ್ಟೆಯಲ್ಲಿ ದೊರಕುವ ಶೇ. 80% ಆಹಾರ ಪದಾರ್ಥಗಳು, ಜೇನಿನಿಂದಾದ ಬೀಜ-ಪರಾಗಸ್ಪರ್ಶದ ಪರಿಣಾಮವಾಗಿ ದೊರಕುವುದು. ಮಾನವರು ಜೇನುತುಪ್ಪವನ್ನು ಕ್ರಿ.ಪೂ. 6000 ದಿಂದ ಸಂಗ್ರಹಣೆ ಮಾಡುತ್ತಿದ್ದರೆಂಬುವುದು ಕೆಲವು ದಾಖಲೆಗಳಲ್ಲಿ ಓದಬಹುದು. ಸ್ಪೇನ್ ದೇಶದ ವೇಲೆನ್ಸಿಯಾದಲ್ಲಿನ (Valencia) Cave of the Spider ಎಂಬ ಗುಹೆಯಲ್ಲಿ ಇದನ್ನು ಚಿತ್ರಿಸಲಾಗಿದೆ. ಜೇನುಹುಳುಗಳು 500 ಗ್ರಾಂ ಜೇನುತುಪ್ಪವನ್ನು ಉತ್ಪಾದಿಸಲು, ಮಕರಂದಕ್ಕಾಗಿ ಸುಮಾರು 10 ದಶಲಕ್ಷ ಬಾರಿ ಹಾರಾಟವನ್ನು ಮಾಡುತ್ತವೆ. ಇದು ಪ್ರಪಂಚವನ್ನು ಒಂದು ಬಾರಿ ಸುತ್ತುವುದಕ್ಕೆ ಸಮನಾಗಿರುತ್ತದೆ. ಜೇನುಹುಳುಗಳು ಈ ಜಗತ್ತಿನಿಂದ ಮಾಯ ಆದರೆ ಇಡೀ ಜೀವ ಸಂಕುಲ ಗರಿಷ್ಠ ನಾಲ್ಕಾರು ವರ್ಷಗಳವರೆಗೆ ಬದುಕಿರಬಹುದು. ಕೆಲವು ಸಸ್ಯಗಳಿಂದ ಲಕ್ಷ ಲಕ್ಷ ಬೀಜೋತ್ಪನ್ನವಾದರೂ, ಎಷ್ಟೇ ಮಳೆ ಬಂದರೂ 0.0001% ರಷ್ಟೂ ಸಸ್ಯಗಳೂ ಹುಟ್ಟಿಬೆಳೆಯುತ್ತಿಲ್ಲ. ಇನ್ನೂ ಈ ಜೇನು ನೊಣಗಳು ಭೂಮಿಯಿಂದ ಮಾಯ ಆದರೆ ಕಾಲ ಕ್ರಮೇಣ ಆಹಾರ ಇಲ್ಲದೇ ಎಲ್ಲಾ ಜೀವ ಸಂಕುಲ ಸಾಯುತ್ತವೆ. ಹಾಗೇ ಭೂಮಿಯ ಶ್ವಾಸಗಳಾದ ಅರಣ್ಯಗಳಿಗೆ ಕುತ್ತು ಬಂದು ಸರ್ವನಾಶ ಆಗಿ ಭೂಮಿಯೂ ಇತರಗ್ರಹಗಳಂತೆ ಬರಡಾಗುವ ಅಪಾಯಕಾರಿಯೂ ಇದೆ.
       ಲೇಖನ ಮುಗಿಸುವ ಮುನ್ನ ಈ ಜೇನುಹುಳುಗಳು ಸಂಗ್ರಹಿಸಿದ ಜೇನಿನ ಸಿಹಿ ಎಲ್ಲರಿಗೂ ಗೊತ್ತಿದೆ. ಆದರೆ ಜೇನುನೊಣಗಳು ಈ ಪರಿಸರ ಮತ್ತು ಭೂಮಿಗೆ ಯಾಕೆ ಬೇಕು......? ಇವುಗಳ ಮಹತ್ವ ಏನು......? ಎಂಬುದನ್ನು ಎಲ್ಲರಿಗೂ ಅರ್ಥಮಾಡಿಸುವ ಮತ್ತು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಅತೀ ತುರ್ತಾಗಿ ಆಗಬೇಕಿದೆ. ಗಿಡಮರಗಳ ಸಂರಕ್ಷಣೆಯಷ್ಟೇ ಮುಖ್ಯವಾಗಿ ಜೇನುನೊಣಗಳ ಪಾತ್ರವೂ ಬಹುಮುಖ್ಯ ಎಂಬುದನ್ನು ಸಾರಿ ಹೇಳಲು ಪ್ರಾಥಮಿಕ , ಮಾಧ್ಯಮಿಕ ಶಿಕ್ಷಣದಲ್ಲಿ ಪಠ್ಯ ಅಳವಡಿಸುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು, ಪರಿಸರ ತಜ್ಞರೂ ಮತ್ತು ರಾಜಕೀಯ ನೇತಾರರು ಪರಸರದಲ್ಲಿ ಜೇನುಹುಳಗಳ ಪ್ರಾಮುಖ್ಯತೆ ಅರಿತು ಅವುಗಳ ಸಂತತಿಗೆ ಧಕ್ಕೆ ಬರದಂತೆ ನಿಯಮ ರೂಪಿಸಲು ಕಾರ್ಯಪ್ರವೃತ್ತರಾಗುವ ಅವಸರವೂ ಇದೆ. ಸದಾ ಜೇನುಗಳನ್ನು ಶೋಷಿಸುತ್ತಿದ್ದ ನನಗೆ ಅವುಗಳು ಜಗತ್ತಿಗೆ ಯಾಕೆ ಬೇಕು ಎನ್ನುವುದರ ಪ್ರಾಮುಖ್ಯತೆಯ ಅರಿವು ನನಗಾದಮೇಲೆ ನಾನು ಜೇನಿನ ಮೇಲೆ ಮಾಡುತಿದ್ದ ಶೋಷಣೆ 99%ಕಡಿಮೆ ಮಾಡಿದ್ದೇನೆ. ನನ್ನೊಬ್ಬನ ಬಾಯಿಸಿಹಿಗೆ ನಾಳೆ ನಮ್ಮ ಮಕ್ಕಳು ಮೊಮ್ಮಕ್ಕಳ ಬಾಯಿಗೆ ಮಣ್ಣುಬೀಳಬಾರದು ಎಂಬ ಆಶಯ ನನ್ನದು. ಪ್ರಕೃತಿಯಲ್ಲಿ ಜೇನುನೊಣಗಳು ಮಾಡುವ ಕುಸುರಿ ಕೆಲಸವನ್ನು ಬೇರೆಯಾರೂ ಮಾಡಲು ಅಸಾಧ್ಯವಾಗಿರುವುದರಿಂದ ಜೇನುಹುಳುಗಳು ಬೇಕೇ ಬೇಕು. ಜೇನುಹುಳಗಳ ನಾಶಮಾಡೋದು ಬಂಗಾರದ ಮೊಟ್ಟೆ ಇಡುವ ಕೋಳಿಗೆ ಮಸಾಲೆ ಅರೆದಂತೆ. ಜೇನುಹುಳುಗಳು ಉಳಿಯಲಿ ನಮ್ಮ ಮುಂದಿನ ತಲೆಮಾರಿಗೂ ತುತ್ತು ಅನ್ನ ಸಿಗುವಂತಾಗಿ, ಸಿಹಿ ಜೀವನವೂ ಅವರದಾಗಲಿ..
......................................ನಾಗೆಂದ್ರ ಬಂಜಗೆರೆ.
ಶಿಕ್ಷಕರು.
ಸ ಹಿ ಪ್ರಾ ಶಾಲೆ, ತುಮಟಿ 
ಸಂಡೂರು ತಾಲೂಕು ಬಳ್ಳಾರಿ
9902912684.
*********************************************

Ads on article

Advertise in articles 1

advertising articles 2

Advertise under the article