
ಹಕ್ಕಿ ಕಥೆ - 28
Tuesday, January 4, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಹಕ್ಕಿ ಕಥೆ - 28
---------------------
ಮಕ್ಕಳೇ ನಮಸ್ತೇ....... ಹಕ್ಕಿ ಕಥೆಯ 28ನೇ ಸಂಚಿಕೆಗೆ ಸ್ವಾಗತ. ಹೊಸ ವರುಷ 2022ರ ಈ ಮೊದಲನೇ ಸಂಚಿಕೆಯಲ್ಲಿ ನಿಮಗೊಂದು ವಿಶೇಷವಾದ ಹಕ್ಕಿಯ ಪರಿಚಯ ಮಾಡೋಣ ಎಂದುಕೊಂಡಿದ್ದೇನೆ. ನಿಮ್ಮಲ್ಲಿ ಹಲವರು ಸಿಂಡ್ರೆಲ್ಲಾ ಎಂಬ ಕಾರ್ಟೂನ್ ನೋಡಿರಬಹುದು. ಆಕೆ ತನಗಿಂತಲೂ ಉದ್ದವಾದ ಗೌನ್ ಧರಿಸಿ ಡ್ಯಾನ್ಸ್ ಮಾಡುವುದನ್ನು ನೋಡಿರಬಹುದು. ಹಕ್ಕಿ ಪ್ರಪಂಚದಲ್ಲೂ ಹೀಗೆ ಉದ್ದವಾದ ಗರಿಗಳು ಇರುವ ಹಲವಾರು ಹಕ್ಕಿಗಳಿವೆ.
ಈ ಹಕ್ಕಿಯ ಬಾಲದಲ್ಲಿ ಎರಡು ವಿಶಿಷ್ಟವಾದ ಗರಿಗಳು ಇವೆ. ಈ ಗರಿಗಳು ಈ ಹಕ್ಕಿಯ ದೇಹದ ಎರಡರಷ್ಟು ಉದ್ದ ಇವೆ. ಕಡುನೀಲಿ ಅಥವಾ ಕಪ್ಪು ಬಣ್ಣ ಎನ್ನಬಹುದಾದ ತಲೆಯ ಭಾಗ, ತಲೆಯ ಮೇಲೆ ಸುಂದರವಾದ ಜುಟ್ಟು. ಮೈಪೂರ್ತಿ ಅಚ್ಚ ಬಿಳಿ ಬಣ್ಣ. ಆದರೆ ಈ ಗಾಂಭೀರ್ಯ ಮತ್ತು ಠೀವಿ ಇರುವುದು ಗಂಡು ಹಕ್ಕಿಗೆ ಮಾತ್ರ. ಈ ಉದ್ದನೆಯ ಬಿಳಿ ಬಣ್ಣದ ಬಾಲ ಕುಣಿಸುತ್ತಾ ಗಂಡು ಹಕ್ಕಿ ಹಾರಾಡುವುದನ್ನು ನೋಡುವುದು ಬಹಳ ಚಂದ
ಹೆಣ್ಣು ಹಕ್ಕಿ ಬಿಳಿ ಬಣ್ಣದ ಬದಲು ಕೇಸರಿ ಮಿಶ್ರಿತ ಕಂದು ಬಣ್ಣ ಇರುತ್ತದೆ. ಹೊಟ್ಟೆಯ ಭಾಗ ಮಾತ್ರ ಬಿಳಿ ಬಣ್ಣ ಇರುತ್ತದೆ. ಪೂರ್ಣ ವಯಸ್ಕನಾಗುವ ಮೊದಲು ಗಂಡು ಹಕ್ಕಿಯೂ ಕೇಸರಿ ಮಿಶ್ರಿತ ಕಂದು ಬಣ್ಣ ಹೊಂದಿದ್ದು, ಉದ್ದನೆಯ ಬಾಲವನ್ನೂ ಹೊಂದಿರುತ್ತದೆ.
ಗಂಡು ಹಕ್ಕಿಗೆ ಒಂದು ವಿಶಿಷ್ಟ ಸ್ವಭಾವ ಇದೆ. ಸಂಜೆ ಹೊತ್ತು ಎಲ್ಲಾದರೂ ನೀರಿನ ಮೂಲದ ಹತ್ತಿರ ಬಂದು ಹಲವಾರು ಬಾರಿ ನೀರಿನಲ್ಲಿ ಮುಳುಗಿ ಎದ್ದು ತನ್ನ ಬಣ್ಣ ಮಾಸದಂತೆ ಶುಚಿಯಾಗಿ ಇಟ್ಟುಕೊಳ್ಳುತ್ತದೆ. ಈ ಸ್ವಭಾವವನ್ನು ನೋಡುವ ಅವಕಾಶ ನನಗೂ ಒಮ್ಮೆ ಸಿಕ್ಕಿತ್ತು. ಉದ್ದ ಬಾಲದ ಈ ಪುಟ್ಟ ಹಕ್ಕಿ ಸಂಧ್ಯಾ ಸ್ನಾನ ಮಾಡುವುದನ್ನು ನೋಡುವುದೇ ಚಂದ.
ಹಿಂದಿಯಲ್ಲಿ ಸುಲ್ತಾನ್ ಬುಲ್ ಬುಲ್ ಎಂದೂ, ಕುಂದಾಪುರದ ಕನ್ನಡದಲ್ಲಿ ಹಟ್ಟಿಮುದ್ದ ಎಂದೂ ಅಚ್ಚ ಕನ್ನಡದಲ್ಲಿ ಬಾಲದಂಡೆ ಹಕ್ಕಿ ಎಂದೂ ಕರೆಯಲ್ಪಡುವ ಇದು ತನ್ನೆರಡು ಉದ್ದನೆಯ ಗರಿಗಳಿಂದಾಗಿ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತದೆ. ಭಾರತದಾದ್ಯಂತ ಕಾಣಸಿಗುವ ಈ ಹಕ್ಕಿ, ನೀರಿನ ಪ್ರದೇಶಗಳ ಸುತ್ತ ಬಿದಿರು ಮೆಳೆಗಳಲ್ಲಿ, ನೆರಳಿನ ತೋಟಗಳಲ್ಲಿ, ದನದ ಹಟ್ಟಿಯ ಸಮೀಪ ಹಟ್ಟಿತೊಳೆದ ನೀರು ಶೇಖರವಾಗುವ ತೊಟ್ಟಿಯ ಆಸುಪಾಸಿನ ಮರಗಳಲ್ಲಿ ಕುಳಿತು ನುಸಿ, ನೊಣ ಮೊದಲಾದ ಪುಟ್ಟ ಕೀಟಗಳನ್ನು ತಿನ್ನುತ್ತಾ ಖಂಡಿತಾ ಕಾಣಲು ಸಿಗುತ್ತದೆ. ಅದಕ್ಕಾಗಿಯೇ ಇದನ್ನು ಕುಂದಗನ್ನಡದಲ್ಲಿ ಹಟ್ಟಿ ಮುದ್ದ ಎಂದು ಕರೆಯುತ್ತಾರೆ. ಹಳ್ಳಿ ಪ್ರದೇಶದ ಮಕ್ಕಳಿಗೆ ಈ ಹಕ್ಕಿಯ ಪರಿಚಯ ಇದ್ದೇ ಇರುತ್ತದೆ. ಫೆಬ್ರವರಿಯಿಂದ ಜೂನ್ ನಡುವೆ ಪೊದೆಗಳಲ್ಲಿ ಬಟ್ಟಲಿನಾಕಾರದ ಗೂಡು ಕಟ್ಟಿ 3-5 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಹೆಚ್ಚಾಗಿ ಹೆಣ್ಣು ಹಕ್ಕಿಯೇ ಮರಿಗಳ ಪೋಷಣೆ ಮಾಡುತ್ತದೆ. ಮಳೆಗಾಲದಲ್ಲಿ ಇದು ಕಾಣಲು ಸಿಗುವುದು ಸ್ವಲ್ಪ ವಿರಳ. ಕರಾವಳಿ ಜಿಲ್ಲೆಗಳಲ್ಲಿ ಇರುವ ಒಂದು ಸಮುದಾಯದ ಹೋಳಿ ಹಬ್ಬಕ್ಕೂ ಈ ಹಕ್ಕಿಗೂ ಒಂದು ವಿಶಿಷ್ಟ ನಂಟು ಇದೆ. ಹೋಳಿ ಹುಣ್ಣಿಮೆಯ ದಿನ ಗುಮಟೆ ನೃತ್ಯ ಮಾಡುವಾಗ ಈ ಹಕ್ಕಿಯ ಉದ್ದನೆಯ ಗರಿಯನ್ನು ಈ ಸಮುದಾಯ ದವರು ತಲೆಯ ಮುಂಡಾಸಿನಲ್ಲಿ ಧರಿಸುತ್ತಾರಂತೆ. ಅದಕ್ಕಾಗಿಯೇ ಈ ಹಕ್ಕಿಯ ಗರಿಯನ್ನು ಕೀಳುತ್ತಾರೆ ಎಂದು ನನ್ನ ಸ್ನೇಹಿತರೊಬ್ಬರು ಹೇಳಿದ್ದರು. ಇದರ ಸರಿ ತಪ್ಪುಗಳ ಬಗ್ಗೆ ನಾನೇನೂ ಹೇಳುವುದಿಲ್ಲ. ಆ ಬಗ್ಗೆ ನೀವೇ ಯೋಚಿಸಿ. ಸುಂದರ ಬಾಲದ ಈ ಹಕ್ಕಿ ಪ್ರಕೃತಿಯ ವಿಶೇಷಗಳಲ್ಲಿ ಒಂದು ಎಂಬುದು ಸತ್ಯ.
ಮುಂದಿನ ವಾರ ಇನ್ನೊಂದು ಹಕ್ಕಿಯ ಪರಿಚಯದೊಂದಿಗೆ ಮತ್ತೆ ಸಿಗೋಣ.
ಕನ್ನಡ ಹೆಸರು: ಬಾಲದಂಡೆ ಹಕ್ಕಿ, ಹಟ್ಟಿ ಮುದ್ದ, ರಾಜ ಹಕ್ಕಿ
ಇಂಗ್ಲೀಷ್ ಹೆಸರು: Indian Paradise Flycatcher
ವೈಜ್ಞಾನಿಕ ಹೆಸರು: Terpsiphone paradisi
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*********************************************