
ಹಕ್ಕಿ ಕಥೆ : ಸಂಚಿಕೆ - 31
Tuesday, January 25, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಹಕ್ಕಿ ಕಥೆ - 31
----------------------
ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿ ಕಥೆಗೆ ಸ್ವಾಗತ........ ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಹಿಂದೆ ಭತ್ತದ ಗದ್ದೆಗಳು ಇರುತ್ತಿದ್ದವು. ಮುಖ್ಯ ರಸ್ತೆಯಿಂದ ನಮ್ಮ ಮನೆಗೆ ತಲುಪುವ ಸುಮಾರು ಒಂದು ಕಿಲೋಮೀಟರ್ ದೂರದ ವರೆಗೂ ಹಚ್ಚ ಹಸುರಿನ ವಾತಾವರಣ. ಆ ಭತ್ತದ ಗದ್ದೆಗಳ ನಡುವೆ ಒಂದು ದೊಡ್ಡ ಕೆರೆ, ಆ ದೊಡ್ಡ ಕೆರೆಯ ನಡುವೆ ಒಂದು ಬಂಡೆ ಕಲ್ಲು, ಆ ಕಪ್ಪು ಕಲ್ಲಿನ ಮೇಲೆ ಸುಣ್ಣ ಚೆಲ್ಲಿದಂತೆ ಬಿಳಿ ಬಿಳಿ ಕಲೆಗಳು ಮತ್ತು ಅದರ ಮೇಲೆ ಯಾರೋ ಕೆತ್ತಿ ಕೂರಿಸಿದಂತೆ ಒಂದು ಕಪ್ಪು ಹಕ್ಕಿ. ಪ್ರತಿದಿನ ನಾನು ನೋಡುತ್ತಿದ್ದ ಈ ಹಕ್ಕಿ ನನಗೆ ಬಹಳ ಕುತೂಹಲದ ವಸ್ತುವಾಗಿತ್ತು. ಶನಿವಾರ, ಭಾನುವಾರ ರಜಾದಿನಗಳಲ್ಲಿ ಅದೇ ಕೆರೆಯ ಇನ್ನೊಂದು ಬದಿಯ ಮೈದಾನದಲ್ಲಿ ಆಟಕ್ಕೆ ಹೋಗುವಾಗ, ಅದೇ ರಸ್ತೆಯಲ್ಲಿ ಸೈಕಲ್ ಬಿಡುವಾಗಲೆಲ್ಲ ಈ ಕಪ್ಪು ಹಕ್ಕಿಯನ್ನು ನೋಡದೇ ಮುಂದೆ ಹೋಗುತ್ತಿರಲಿಲ್ಲ. ಆ ಹಕ್ಕಿ ಹಗಲಿನಲ್ಲಿ ನೀರಿನ ಮೇಲೆ ಬಾತು ಕೋಳಿಯಂತೆ ಈಜುತ್ತಾ ಓಡಾಡುತ್ತಿರುತ್ತದೆ. ಕೆಲವೊಮ್ಮೆ ನೀರಿನ ಒಳಗೆ ಮುಳುಗಿ ಕೆಲವು ಸೆಕೆಂಡುಗಳ ಕಾಲ ಮಾಯವಾಗುತ್ತದೆ. ಮತ್ತೆ ಕೆರೆಯ ಇನ್ನೊಂದು ಭಾಗದಿಂದ ಪ್ರತ್ಯಕ್ಷವಾಗಿಬಿಡುತ್ತಿತ್ತು. ಹೀಗೆ ಕೆಲವು ಬಾರಿ ಮೇಲೆ ಬಂದಾಗ ಕಪ್ಪುಬಣ್ಣದ ಈ ಹಕ್ಕಿಯ ಬಾಯಿಯಲ್ಲೊಂದು ಬಿಳಿ ಬಣ್ಣದ ಮೀನು ಇರುತ್ತಿತ್ತು. ಆ ಮೀನನ್ನು ಇಡಿಯಾಗಿ ನುಂಗಿ ಮತ್ತೆ ಕೆರೆಯಲ್ಲಿ ಮುಳುಗುತ್ತಿತ್ತು. ಹೀಗೆ ಹೊಟ್ಟೆ ತುಂಬುವಷ್ಟು ಮೀನೂಟ ಮಾಡಿದ ನಂತರ ಕೆರೆಯ ನಡುವಿನ ಅದೇ ಕಪ್ಪುಬಂಡೆಯ ಮೇಲೆ ಕುಳಿತುಕೊಂಡು ತನ್ನ ಎರಡೂ ರೆಕ್ಕೆಗಳನ್ನು ಅಗಲವಾಗಿ ಹಿಡಿದು ಸೂರ್ಯನ ಬಿಸಿಲಿಗೆ ಮೈ ಒಡ್ಡಿ ನಿಂತುಬಿಡುತ್ತದೆ. ಮೈಯೆಲ್ಲ ಒಣಗಿದ ನಂತರ ತನ್ನ ಕೊಕ್ಕಿನಿಂದ ಗರಿಗಳನ್ನು ನಯವಾಗಿ ಬಾಚಿ ಸರಿಪಡಿಸಿಕೊಂಡು ಹಾರಿಬಿಡುತ್ತದೆ.
ಕೆಲವೊಮ್ಮೆ ನಿಧಾನವಾಗಿ ಹರಿಯುವ ನದಿಗಳಲ್ಲಿ, ಸರೋವರಗಳಲ್ಲಿ ಈ ಹಕ್ಕಿಗಳನ್ನು ನೋಡಿದ್ದೇನೆ. ನಮ್ಮ ಕರಾವಳಿ ಭಾಗದಲ್ಲಿ ಚಳಿಗಾಲ ಮುಗಿಯುವ ಈ ದಿನಗಳಲ್ಲಿ ಸಣ್ಣ ನೀರ ಹರಿವು (ತೋಡು) ಗಳಿಗೆ ಕಟ್ಟ ಎಂಬ ಪುಟ್ಟ ಅಣೆಕಟ್ಟನ್ನು ಕಟ್ಟುತ್ತಾರೆ. ಹಾಗೆ ಕಟ್ಟಿದ ಕಟ್ಟದ ನೀರಿನಲ್ಲೂ ಈ ಹಕ್ಕಿ ಕಾಣಲು ಸಿಗುತ್ತದೆ. ಕೆಲವೊಮ್ಮೆ ಒಂಟಿಯಾಗಿ ಕೆಲವೊಮ್ಮೆ ಗುಂಪಾಗಿ ವಾಸಿಸುವ ಈ ಹಕ್ಕಿ ಜುಲೈನಿಂದ ಸಪ್ಟೆಂಬರ್ ನಡುವೆ ಮಳೆಗಾಲದಲ್ಲಿ ಮರಗಳ ಮೇಲೆ ಕಡ್ಡಿಗಳಿಂದ ತಯಾರಿಸಿದ ಅಟ್ಟಳಿಗೆಯಂತಹ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿಮಾಡುತ್ತವೆ. ಒಂದೇ ಮರದ ಮೇಲೆ ಬೆಳ್ಳಕ್ಕಿಗಳ ಜೊತೆಗೆ ಗುಂಪುಗುಂಪಾಗಿ ಗೂಡುಮಾಡುತ್ತದೆ. ಜನನಿಬಿಡ ಪ್ರದೇಶಗಳಾದ ಮುಖ್ಯರಸ್ತೆಯ ಬಸ್ ಸ್ಟಾಂಡ್ ಹತ್ತಿರದ ಮರಗಳಲ್ಲೇ ಗುಂಪಾಗಿ ಗೂಡು ಮಾಡಿರುವುದನ್ನು ನಾನು ಹಲವು ಕಡೆ ನೋಡಿದ್ದೇನೆ. ರಾತ್ರಿ ಹೊತ್ತು ಅಲ್ಲಿ ಬೆಳಕು ಇರುವುದರಿಂದ ಬಹುಷಃ ರಕ್ಷಣೆ ಸಿಗುತ್ತದೆ ಎಂದು ಹಾಗೆ ಮಾಡುತ್ತಿರಬಹುದು.
ಈ ಹಕ್ಕಿಯನ್ನು ಸರಿಯಾಗಿ ನೋಡಿದರೆ ಇದಕ್ಕೆ ಕೆಲವು ವಿಶೇಷ ದೇಹದ ಭಾಗಗಳಿವೆ. ತುಸು ಉದ್ದನೆಯ ಕತ್ತು, ಕೊಕ್ಕರೆಗಳಿಗಿಂತ ಗಿಡ್ಡವಾದ ಆದರೆ ಮುಂದುಗಡೆ ಬಾಗಿದ ಕೊಕ್ಕು, ಉದ್ದನೆಯ ಬಾಲ, ಕಾಲಿನಲ್ಲಿ ಬಾತುಕೋಳಿಗಳಂತೆ ಜಾಲಪಾದ ಇರುತ್ತದೆ. ಇವುಗಳೆಲ್ಲ ನೀರಿನಲ್ಲಿ ಈಜಲು ಮತ್ತು ಮುಳುಗಲು, ನೀರಿನ ಒಳಗೆ ಮೀನನ್ನು ಹಿಂಬಾಲಿಸಿ ಹಿಡಿಯಲು ಸಹಕಾರಿ. ಆದರೆ ಒದ್ದೆಯಾದ ರೆಕ್ಕೆಗಳು ಭಾರವಾಗುವ ಕಾರಣ ತಕ್ಷಣ ಹಾರಿಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಈ ಹಕ್ಕಿಗಳು ನೀರಿನ ನಡುವಿನ ಬಂಡೆಗಳು ಅಥವಾ ತಗ್ಗಿನ ಮರಗಳಲ್ಲಿ ಕುಳಿತು ತಮ್ಮ ಗರಿಗಳನ್ನು ಒಣಗಿಸಿಕೊಂಡು ನಂತರ ಹಾರುತ್ತವೆ.
ಎಲ್ಲ ಹೇಳಿದ್ರಿ ಹಕ್ಕಿಯ ಹೆಸರನ್ನು ಮಾತ್ರ ಹೇಳಲಿಲ್ಲ ಅಂತ ಯೋಚಿಸ್ತಿದ್ದೀರಾ. ಬಹಳ ಜನರಿಗೆ ಈ ಹಕ್ಕಿಯ ಹೆಸರು ಗೊತ್ತಿರಲೇಬೇಕು
ಕನ್ನಡ ಹೆಸರು: ನೀರು ಕಾಗೆ ( ಪುಟ್ಟನೀರುಕಾಗೆ ಮತ್ತು ದೊಡ್ಡ ನೀರುಕಾಗೆ ಎಂಬ ಎರಡು ಪ್ರಬೇಧಗಳು ಇವೆ)
ಇಂಗ್ಲೀಷ್ ಹೆಸರು: Indian Cormorant
ವೈಜ್ಞಾನಿಕ ಹೆಸರು: Phalacrocorax fuscicollis
ಮುಂದಿನ ವಾರ ಇನ್ನೊಂದು ಹಕ್ಕಿಯ ಪರಿಚಯದ ಜೊತೆ ಸಿಗೋಣ, ನಮಸ್ಕಾರ
(ಛಾಯಾಚತ್ರ : ಅರವಿಂದ ಕುಡ್ಲ )
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************