-->
ಇಂದು ಗಣರಾಜ್ಯೋತ್ಸವ : ಲೇಖನ

ಇಂದು ಗಣರಾಜ್ಯೋತ್ಸವ : ಲೇಖನ


                     ಇಂದು ಗಣರಾಜ್ಯೋತ್ಸವ
             -----------------------------------
     ಹೌದು , ಇಂದು ಜನವರಿ 26, ನಾವು - ನಮ್ಮ ದೇಶದ 73 ನೇ ಗಣರಾಜ್ಯೋತ್ಸವದ ದಿನಾಚರಣೆಯಲ್ಲಿದ್ದೇವೆ.
        ಆಂಗ್ಲರ ಆಳ್ವಿಕೆಯಿಂದ ನಮ್ಮ ದೇಶವು 1947 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ , 1950 ಜನವರಿ 26 ರಂದು ಸಂವಿಧಾನವನ್ನು ಸಮ್ಮತಿಸಿ , ಅನ್ವಯಿಸಿಕೊಂಡು ಗಣರಾಜ್ಯವೆನಿಸಿಕೊಂಡಿತು .
       ಅಲ್ಲಿಂದ ನಾವು ಪ್ರತಿವರ್ಷ ಜನವರಿ 26 ರಂದು ಅತ್ಯಂತ ಸಡಗರ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.
        ಭಾರತದ ಪ್ರಜೆಗಳಾದ ನಮ್ಮನ್ನು ಆಳುವಂತಹ - ಶಾಸಕಾಂಗವಾಗಲಿ , ನ್ಯಾಯವನ್ನು ಒದಗಿಸುವ – ನ್ಯಾಯಾಂಗವಾಗಲಿ ಮತ್ತು ಪ್ರಜೆಗಳಿಗಾಗಿ ಕೆಲಸ ಮಾಡುವ ಕಾರ್ಯಾಂಗವಾಗಲಿ ಅದು ಹೇಗಿರಬೇಕು ? ಯಾವೆಲ್ಲ ನೀತಿ - ನಿಯಮಗಳನ್ನು , ಕಾನೂನುಗಳನ್ನು ಪಾಲಿಸಬೇಕು ಎಂಬ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ  - ನಮ್ಮ ದೇಶದ ಮೂಲಭೂತ ಕಾನೂನೇ – ಸಂವಿಧಾನ.
        ನಮ್ಮ ದೇಶವು ಸುದೀರ್ಘ ಸ್ವಾತಂತ್ರ್ಯ ಹೋರಾಟದ ಫಲ ಮತ್ತು ಅನೇಕರ ತ್ಯಾಗ ಬಲಿದಾನಗಳ ನಂತರ ನಮ್ಮ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತೇನೋ ನಿಜ ಆದರೆ ಅದು ಅಪೂರ್ಣವಾಗಿತ್ತು. ಆ ಸಮಯದಲ್ಲಿ ನಮ್ಮ ದೇಶವು ಅನೇಕ ಭಾಗಗಳಾಗಿ ವಿಭಜಿಸಲ್ಪಟ್ಟಿತು , ಇದು ದೊಡ್ಡ ಸವಾಲಾಗಿತ್ತು. ಕಾರಣ ನಮ್ಮ ದೇಶಕ್ಕೆ ತನ್ನದೇ ಆದ ಯಾವುದೇ ಸಂವಿಧಾನ ಇರಲಿಲ್ಲ. 
      ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾದ ಡಾ. ಬಾಬುರಾಜೇಂದ್ರ ಪ್ರಸಾದ್ ಹಾಗೂ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಡಾ || ಬಿ.ಆರ್ ಅಂಬೇಡ್ಕರ್ ಮತ್ತು ಹಲವಾರು ಸದಸ್ಯರುಗಳ ಪರಿಶ್ರಮದ ಫಲವಾಗಿ , ನವೆಂಬರ್ 26 , 1949 ರಂದು ಸಂವಿಧಾನದ ರಚನೆಯು ಪೂರ್ಣಗೊಂಡಿತು. ಇದನ್ನು ಜನವರಿ 26 , 1950 ರಂದು ದೇಶಾದ್ಯಂತ ಜಾರಿಗೆ ತರಲಾಯಿತು. ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆ ದಿನವೇ ಗಣರಾಜ್ಯೋತ್ಸವ ಅಥವಾ ಗಣತಂತ್ರ ದಿನ.
      ಭಾರತೀಯ ಪ್ರಜೆಗಳಾದ ನಾವು, ನಮ್ಮ ದೇಶದ ರಕ್ಷಣೆಯ ಸಂಪೂರ್ಣ ಜವಾಬ್ದಾರರು ಎಂಬ ದೃಢಸಂಕಲ್ಪ ಮೊಳಗಿತು. ನಮಗೆ, ನಮ್ಮಿಂದ, ನಮಗೋಸ್ಕರ ಇರುವ ಸರಕಾರದ ರಚನೆಯಾಯಿತು. ಸರಕಾರ ಏನು ಮಾಡುತ್ತಿದೆ, ಸಂವಿಧಾನದ ಆಶಯಕ್ಕೆ ತಕ್ಕಂತೆ ಅದರ ಕಾರ್ಯದ ಬಗ್ಗೆ ಸದಾ ಗಮನಹರಿಸುತ್ತಾ ಜೊತೆಗೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲ ಬದ್ಧರಾಗಿರಬೇಕು.  
     ನಮ್ಮ ದೇಶಕ್ಕೆ ಭಾವೈಕ್ಯತೆಯೇ ಜೀವಧಾರೆ ಇದ್ದಂತೆ , ನಮ್ಮ ದೇಶದ ಸಮೃದ್ಧವಾದ ಪ್ರಕೃತಿ ಮತ್ತು ಸಂಸ್ಕೃತಿಯ ಜೊತೆಗೆ ವೀರ - ಧೀರರ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
     ಸೌಹಾರ್ದತೆ , ಶಾಂತಿ , ಸಹಿಷ್ಣುತೆ , ಸಮಾನತೆ ಇವು ದೇಶವನ್ನು ಭದ್ರಪಡಿಸುವ ಮೌಲ್ಯವಾಗಿದೆ. ನಾವೆಲ್ಲರೂ ನಮ್ಮ ಜವಾಬ್ದಾರಿಯನ್ನು ಅರಿತು ವೈಯಕ್ತಿಕವಾಗಿ ಮತ್ತು ಸಾಂಘಿಕವಾಗಿ ಕೆಲಸ ಮಾಡುವ ಮೂಲಕ ದೇಶದ ಪ್ರಗತಿಗೆ ಪ್ರೇರಕರಾಗೋಣ.  
        ಭಾರತೀಯರಾದ ನಾವು ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ದೇಶವನ್ನು ಕಾಪಾಡುವ ಭೂ ಸೇನೆ, ವಾಯು ಸೇನೆ, ಹಾಗೂ ನೌಕಾ ಸೇನೆಯ ಎಲ್ಲಾ ಸೈನಿಕರಿಗೂ , ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲಾ ವಿಜ್ಞಾನಿಗಳಿಗೂ , ತಂತ್ರಜ್ಞರಿಗೆ , ದೇಶದ ಬೆನ್ನೆಲುಬಾದ ರೈತ ವರ್ಗಕ್ಕೆ , ಕರೋನದಂತಹ ಮಹಾಮಾರಿ ವಿರುದ್ಧ ಸದಾ ಶ್ರಮಿಸುತ್ತಿರುವ ಎಲ್ಲಾ ಶ್ರಮಿಕರಿಗೆ , ಭವ್ಯ ಸಮಾಜದ ನಿರ್ಮಾತೃ ಶಿಕ್ಷಕರಿಗೆ ನಾವು ಈ ಸಂದರ್ಭದಲ್ಲಿ ಋಣಿಯಾಗಿರುತ್ತಾ , ನಮ್ಮ ದೇಶದ ಅಭಿವೃದ್ಧಿಯ ಪ್ರತೀಕಗಳನ್ನು ಗೌರವಿಸಿ , ನಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸೋಣ. ದೇಶ ಕಟ್ಟಿದ ಮತ್ತು ಕಟ್ಟುತ್ತಿರುವ ಎಲ್ಲಾ ಹಿರಿಯ - ಕಿರಿಯ ಮನಸ್ಸುಗಳಿಗೆ ವಂದಿಸಿ ಹಕ್ಕುಗಳಿಗಾಗಿ ಹೋರಾಡುವ ಮನಸ್ಸುಗಳು, ಒಂದಿಷ್ಟಾದರೂ ಕರ್ತವ್ಯದ ಕಡೆಗೆ ಗಮನ ನೀಡಿದರೆ ಈ ಗಣರಾಜ್ಯೋತ್ಸವದ ಜೊತೆಗೆ ಸಂವಿಧಾನದ ಆಶಯಕ್ಕೆ ಆಶ್ರಯ ನೀಡಿದಂತಾಗುತ್ತದೆ".
(ಚಿತ್ರಗಳು : ಅಂತರ್ಜಾಲ ಕೃಪೆ)  
..........................ರಮೇಶ ನಾಯ್ಕಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ಸರಕಾರಿ ಪ್ರೌಢಶಾಲೆ ದರೆಗುಡ್ಡೆ 
ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 94488 87713
********************************************

Ads on article

Advertise in articles 1

advertising articles 2

Advertise under the article