-->
ಬದಲಾಗೋಣವೇ ಪ್ಲೀಸ್..! : ಸಂಚಿಕೆ -30

ಬದಲಾಗೋಣವೇ ಪ್ಲೀಸ್..! : ಸಂಚಿಕೆ -30

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    

ಬದಲಾಗೋಣವೇ ಪ್ಲೀಸ್ - 30


                 ಮಸಣದ ಮಾವಿನ ಮರ.....
               -------------------------------
       ನಾನು ತುಂಬಾ ನಿರಾಶನಾಗಿದ್ದೇನೆ. ನನ್ನವರಿಗೆ ನಾನು ಭಾರವೋ.... ನನಗೆ ನಾನು ಭಾರವೋ ... ನನಗೆ ನನ್ನವರು ಭಾರವೋ... ಗೊತ್ತಾಗುತ್ತಿಲ್ಲ. ನೀರಿನಿಂದ ತೆಗೆದ ಮೀನಿನಂತಾಗಿದೆ ಬದುಕು . ಉಸಿರಾಡಲು ಕಷ್ಟವಾಗುತ್ತಿದೆ. ಮನವಿಂದು ಎಲ್ಲಾ ಬಿಟ್ಟು ನಿರುಮ್ಮಳವಾಗಬೇಕೆಂದು ಬಯಸಿದೆ. ನನ್ನ ಸುತ್ತಲ ಪರಿಸರವೇ ಬರಡಾಗಿದೆ. ಯಾರಲ್ಲೂ ಪ್ರೀತಿ - ಪ್ರೇಮದ ಒರತೆ ಕಾಣುತ್ತಿಲ್ಲ. ಪರಸ್ಪರ ಸಹಾಯ ಗುಣ ಮರೆಯಾಗಿದೆ. ಬದುಕಿನಲ್ಲಿ ಸೋಲೇ ಕಾಣುತಿದೆ. ಗೆಲುವು ಮರೆಯಾಗಿದೆ. ಸುಖ ಎಂಬುದು ಮರೀಚಿಕೆಯಾಗಿದೆ. ಅನಾಥ ಭಾವ ಬಂದಿದೆ. ಬದುಕಿಗೆ ಅಂತ್ಯ ಹಾಡಲೇ..... ಎಂದು ಪರಿತಪಿಸುವ ನೂರಾರು ಮಂದಿ ನಮಗೆ ಕಾಣಸಿಗುತ್ತಾರೆ. ಆಗ ನನಗೆಲ್ಲ ನೆನಪಾಗುವುದೇ ನಾನು ನೋಡಿದ ಮಸಣದ ಮಾವಿನ ಮರ.
          ಅದೊಂದು ಸ್ಫೂರ್ತಿ ತುಂಬುವ ಅದ್ಭುತ ಮರ. ಮಸಣದಲ್ಲಿ ಸದಾ ನೀರವ ಮೌನ. ನಗು ನೋಡದ ಬರಡು ಭೂಮಿ. ನೋವಿನಿಂದ ತುಂಬಿದ ನತದೃಷ್ಟ ಮಣ್ಣು. ಎಲ್ಲೆಲ್ಲೂ ಹೆಣದ ಘಾಟು ಮತ್ತು ಮೈ ಸುಡುವ ಬೆಂಕಿ. ನೋವು ತುಂಬಿದ ಮೌನಗೀತೆ. ಅನಾಥ ಪರಿಸರ. ಆ ಋಣಾತ್ಮಕ ಪರಿಸರದಲ್ಲಿ ಆಕಸ್ಮಿಕ ಬಿದ್ದ ಮಾವಿನ ಬೀಜವು ನಕಾರಾತ್ಮಕ ಪರಿಸರದಲ್ಲಿದ್ದರೂ ಮೊಳಕೆಯೊಡೆದು ತಾನೇ ಸ್ವತ: ಬೆಳೆದು ಬೃಹತ್ತಾಗಿ ಬೆಳೆದಿದೆ. ನೀರು ಉಣಿಸುವವರಿಲ್ಲದಿದ್ದರೂ ತನ್ನದೇ ಸ್ವಸಾಮರ್ಥ್ಯದಿಂದ ನೀರ ಹೀರಿ ಬೆಳೆದಿದೆ. ಗೊಬ್ಬರ ಕೊಡುವವರಿಲ್ಲ ಆದರೂ ಅಂಜದೇ ಬೆಳೆದಿದೆ. ಇವತ್ತು ಸಕಲ ಜೀವರಾಶಿಗಳಿಗೆ ಆಧಾರವಾಗಿದೆ. ಮಾವಿನ ಮಿಡಿಗೂ, ಕಾಯಿಗೋ , ಹಣ್ಣಿಗೂ ಆಸೆಪಟ್ಟು ಮರದಡಿ ಬರುವವರಿಗೆ ಲೆಕ್ಕವಿಲ್ಲ. ಅನಾಥ ಪರಿಸರವನ್ನು ದೂರದೇ ತಾನೇ ತನ್ನ ಪರಿಸರವನ್ನೇ ನಿರ್ಮಿಸಿ ನೂರಾರು ಪಶುಪಕ್ಷಿ ಕೀಟಗಳಿಗೆ ಆಸರೆಯಾಗಿ ಧನಾತ್ಮಕವಾಗಿ ಬೆಳೆದ ಮಸಣದ ಮಾವಿನ ಮರ ನಮಗೆಲ್ಲ ಮಾದರಿಯಾಗಬೇಕು.
        ಈ ಮಸಣದ ಪರಿಸರದಂತೆ ನಾವು ಕೂಡಾ ಕಠಿಣ ಪರಿಸರವನ್ನು ಕೆಲವೊಮ್ಮೆ ಎದುರಿಸಿರಬಹುದು. ಕ್ಷಣ ಕ್ಷಣದಲ್ಲೂ ಎದುರಿಸಿದ ಸೋಲು , ನಿತ್ಯ ಗೊಂದಲಗಳು , ನಿತ್ಯ ಜಗಳ , ನಿತ್ಯ ಜಿಗುಪ್ಸೆ , ನಿತ್ಯ ನೋವು ನಮ್ಮನ್ನು ಕಾಡುತ್ತಿರಬಹುದು. ಇದರಿಂದ ಬದುಕು ಬರಡಾಗಿ ನಿರುತ್ಸಾಹಭರಿತರಾಗಿ ಬದುಕುತ್ತಿರಬಹುದು. ಅಯ್ಯೋ ನನ್ನ ಬದುಕು ಹೀಗಾಯ್ತಲ್ಲಾ......!! ಎಂದು ಕೊರಗುವಾಗ ನಾವೆಲ್ಲ ನೆನಪು ಮಾಡಬೇಕಾದ್ದು ಮಸಣದಲ್ಲಿ ಬೆಳೆಯುವ ಮರಗಳನ್ನು. ಪರಿಸರ ಹೇಗೂ ಇರಲಿ. ನಾವು ಮಾತ್ರ ಧನಾತ್ಮಕವಾಗಿ ಬೆಳೆಯುವುದನ್ನು ಮತ್ತು ನಗುಮುಖದಿಂದ ಅರಳುವುದನ್ನು ಕಲಿಯಬೇಕು. ಪರಿಸರವನ್ನು ನಾವು ದೂರಿ ದೊಡ್ಡ ಜನರಾಗದೆ ನಮಗೆ ಬೇಕಾದ ಪರಿಸರವನ್ನು ನಾವೇ ನಿರ್ಮಿಸಿ ದೊಡ್ಡ ಜನರಾಗೋಣ. ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಧನಾತ್ಮಕವಾದ ಬದಲಾವಣೆಗಾಗಿ ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*********************************************Ads on article

Advertise in articles 1

advertising articles 2

Advertise under the article