
ಬದಲಾಗೋಣವೇ ಪ್ಲೀಸ್..! ; ಸಂಚಿಕೆ - 29
Wednesday, January 19, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್ - 29
ಲೋಕಜ್ಞಾನವೋ.... ಸ್ವಯಂ ಕಲ್ಪನೆಯೋ...
--------------------------------------------
ವಿದ್ಯುತ್ ಎಂಬುದು ಶಕ್ತಿ. ಸ್ವಿಚ್ ಅದುಮಿದಾಗ ವಯರ್ ಮೂಲಕ ಆ ಶಕ್ತಿ ಸಾಗಿ ಬಲ್ಬ್ ಉರಿದು ಪ್ರಕಾಶಿಸುತ್ತದೆ. ಸ್ವಿಚ್ ಹಾಕಿದ ಕೂಡಲೇ ಬಲ್ಬ್ ವರೆಗೆ ವಿದ್ಯುತ್ ಹೇಗೆ ಚಲಿಸುತ್ತದೆ ಎಂದು ಪ್ರತ್ಯಕ್ಷವಾಗಿ ನೋಡಲು ಯಾರಿಗೂ ಸಾಧ್ಯವಿಲ್ಲ. ಆದರೆ ಬಲ್ಬ್ ಉರಿಯುತ್ತಿರುವ ಸಾಕ್ಷಿಯಿಂದಾಗಿ ವಯರಿನಲ್ಲಿ ವಿದ್ಯುತ್ ಹರಿಯುತ್ತಿದೆ ಎಂದು ನಂಬುತ್ತೇವೆ. ಇದು ಲೋಕಜ್ಞಾನ. ಇದನ್ನು ನಾವು ವೈಯಕ್ತಿಕವಾಗಿ ನಂಬಿದರೂ ನಂಬದಿದ್ದರೂ ಇದು ಯಾವಾಗಲೂ ಸತ್ಯವಾಗಿರುತ್ತದೆ. ಹಾಗಾಗಿ ಸ್ವಯಂ ಕಲ್ಪನೆ ಸುಳ್ಳಾದರೂ ಲೋಕಪ್ರಜ್ಞೆ ಸುಳ್ಳಾಗದು.
ಇನ್ನೂ ಸರಳವಾಗಿ ಹೇಳಬಹುದಾದರೆ ಹಿರಿಯರು ಕಟ್ಟಿಕೊಟ್ಟ ಅನುಭವದ ಬುತ್ತಿಗಳಾದ ಗಾದೆಗಳು ಲೋಕಜ್ಞಾನದ ದಾರಿದೀಪಗಳು. ಅದರಲ್ಲಿ ಧರ್ಮಗ್ರಂಥಗಳ ಧಾರೆಯಿದೆ. ನೆಮ್ಮದಿಯ ಬದುಕಿಗೆ ನೆಲೆಯಿದೆ. ಯಾವುದೇ ವಿಚಾರವನ್ನು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ಲೋಕಜ್ಞಾನದ ಅರಿವು ಇದ್ದರೆ ಸ್ವಯಂ ಕಲ್ಪನೆಯ ದೋಷವನ್ನು ಅಳಿಸಬಹುದು.
ದೃಶ್ಯ -1 : ಬೆಕ್ಕು ತನ್ನ ಬಾಯಿಯಲ್ಲಿ ಮರಿಯೊಂದನ್ನು ಕಚ್ಚಿಕೊಂಡು ಓಡುತಿದೆ.
ಸ್ವಯಂ ಕಲ್ಪನೆ : ಬೆಕ್ಕು ತನ್ನ ಆಹಾರಕ್ಕಾಗಿ ಮರಿಯನ್ನೇ ಕೊಂದು ಓಡುತ್ತಿದೆ.
ಲೋಕಜ್ಞಾನ : ಬೆಕ್ಕು ಅಪಾಯದಲ್ಲಿರುವ ತನ್ನ ಮರಿಯ ರಕ್ಷಣೆಗಾಗಿ ಮರಿಯನ್ನು ಹಿಡಿದುಕೊಂಡು ಓಡುತ್ತಿದೆ. ಅದು ಎಂದೂ ತನ್ನ ಮರಿಗಳನ್ನು ತಿನ್ನದು.
ದೃಶ್ಯ - 2 : ಯುವ ಜನರ ಪ್ರೀತಿ
ಸ್ವಯಂ ಕಲ್ಪನೆ : ತನ್ನನ್ನು ಪ್ರೀತಿಸುವವರಿಗೆ ಅಧಿಕಾರ , ಅಂತಸ್ತು , ಆಸ್ತಿ , ಸಂಪತ್ತು , ದೇಹ ಸೌಂದರ್ಯ ಇವುಗಳಲ್ಲಿ ಯಾವುದಾದರೊಂದು ಇದ್ದರೂ ನೆಮ್ಮದಿಯ ಜೀವನ ನಡೆಸಬಹುದು.
ಲೋಕಜ್ಞಾನ : ತನ್ನನ್ನು ಪ್ರೀತಿಸುವವರಿಗೆ ಒಳ್ಳೆಯ ಗುಣ , ಕಾಳಜಿ , ನನ್ನವರೆಂಬ ಭಾವ ಇದ್ದರೆ ನೆಮ್ಮದಿಯ ಜೀವನ ನಡೆಸಬಹುದು.
ದೃಶ್ಯ - 3 : ಮಕ್ಕಳಿಗಾಗಿ ಹಗಲಿರುಳು ದುಡಿದು ಆಸ್ತಿ ಸಂಪತ್ತು ಕೂಡಿಡುವುದು.
ಸ್ವಯಂ ಕಲ್ಪನೆ : ಆಸ್ತಿ ಸಂಪತ್ತುಗಳಿದ್ದರೆ ವೃದ್ಯಾಪದಲ್ಲಿ ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಲೋಕ ಜ್ಞಾನ : ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿ ಮಾಡಿ
ದೃಶ್ಯ - 4 : ಈಚಲ ಮರದಡಿಯಲ್ಲಿ ಹಾಲು ಕುಡಿಯುತ್ತಿರುವ ವ್ಯಕ್ತಿ
ಸ್ವಯಂ ಕಲ್ಪನೆ : ಚಟಕ್ಕಾಗಿ ಶೇಂದಿ ಕುಡಿಯುತ್ತಿದ್ದಾನೆ. ಇವರ ಮನೆಯವರಿಗೆ ದೇವರೇ ಗತಿ.
ಲೋಕಜ್ಞಾನ : ಮುಖಭಾವ ನೋಡಿದಾಗ ಶೇಂದಿ ಕುಡಿಯುವಂತೆ ಕಾಣುತ್ತಿಲ್ಲ. ಬೆಳ್ಳಗಿರುವುದೆಲ್ಲ ಶೇಂದಿಯಲ್ಲ. ಹಾಲು ಕೂಡಾ ಆಗಿರಬಹುದು.
ಹೀಗೆ ನಾವು ದಿನನಿತ್ಯ ಹಲವಾರು ದೃಶ್ಯಗಳನ್ನು ಕಣ್ಣಾರೆ ನೋಡುತ್ತೇವೆ. ನಮ್ಮ ವೈಯಕ್ತಿಕ ಬದುಕಿನಲ್ಲೂ ಇಂತಹ ಅನೇಕ ಘಟನೆಗಳು ನಮ್ಮ ಬಂಧು- ಬಳಗ , ಗೆಳೆಯರು , ಮನೆಯ ಸದಸ್ಯರು , ನೆರೆಹೊರೆ ಮತ್ತು ಸಮಾಜದಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಲೋಕಜ್ಞಾನಕ್ಕಿಂತ ಸ್ವಯಂ ಕಲ್ಪನೆಗಳಿಂದ ನಮ್ಮ ಮೂಗಿನ ನೇರಕ್ಕೆ ಎಲ್ಲವನ್ನು ಅರ್ಥೈಸಿ ಎಲ್ಲವೂ ಗೊಂದಲಮಯವಾಗುವ ಸನ್ನಿವೇಶ ಎದುರಾಗಬಹುದು. ಇದು ಚಿಂತೆಯುಕ್ತ ವಿಚಾರಗಳಾಗಿ ನೆಮ್ಮದಿಯನ್ನು ಕದಡಬಹುದು. ವಿಶಾಲವಾಗಿ ಲೋಕಜ್ಞಾನದಿಂದ ನೋಡಿದರೆ ನೆಮ್ಮದಿಯಿಂದ ಬದುಕಬಹುದು. ನಮಗೆಲ್ಲರಿಗೂ ಸ್ವಯಂಕಲ್ಪನೆ ಬೇಕು ಆದರೆ ಅದು ಮಿತಿಮೀರಿದರೆ ವಿನಾಕಾರಣ ಸಂಕಟ ಪಡಬೇಕಾಗುತ್ತದೆ. ಸ್ವಯಂ ಕಲ್ಪನೆ ಎಂಬುದು ಯಾವಾಗಲೂ ಸತ್ಯವಾಗಿರಬೇಕಿಲ್ಲ. ಅದು ನಾವೇ ಕಲ್ಪಿಸಿಕೊಂಡ ಭ್ರಮೆಯ ಚಿತ್ರಣ ಕೂಡಾ ಆಗಿರಬಹುದು. ಹಾಗಾಗಿ ನಮ್ಮಲ್ಲಿ ಸ್ವಯಂ ಪ್ರಜ್ಞೆಯಿದ್ದರೆ ಸತ್ಯದ ಅರಿವಾಗುತ್ತದೆ ಹೊರತು ಸ್ವಯಂ ಕಲ್ಪನೆಯಿಂದಲ್ಲ. ಪಕ್ಷಿಗೆ ಗೂಡು ಎಂಬುದು ಅಗತ್ಯತೆ ಮಾತ್ರವೇ ಹೊರತು ಬದುಕಲ್ಲ. ಗೂಡೇ ಬದುಕಾದರೆ ಬದುಕಲು ಸಾಧ್ಯವಿಲ್ಲ. ಗೂಡಿನಿಂದ ಹೊರಬಂದರೆ ತಾನೆ ಪಕ್ಷಿಗೆ ಲೋಕದ ಪರಿಚಯವಾಗುವುದು. ಸ್ವಯಂ ಕಲ್ಪನೆಗೂಡಿನಂತೆ. ಅದರಿಂದ ಹೊರಬರಲು ಕೂಡಾ ಕಲಿತಿರಬೇಕು. ಚಳಿಗೆ ಆವರಿಸಿಕೊಳ್ಳಲು ಅವಕಾಶ ಕೊಟ್ಟಷ್ಟು ಮತ್ತಷ್ಟು ಆವರಿಸುತ್ತದೆ. ದೇಹದ ಸ್ಥಿರತೆ ಕಡಿಮೆಯಾಗಿ ದೇಹ ಕಂಪನ ಹೆಚ್ಚಾಗುತ್ತದೆ. ಸ್ವಯಂ ಕಲ್ಪನೆ ಕೂಡಾ ಚಳಿಯಂತೆ. ಅದರಿಂದ ನೆಮ್ಮದಿಯ ಬದುಕು ಕಂಪಿಸುತ್ತದೆ. ನಾವೆಲ್ಲರೂ ಬದುಕಿನಲ್ಲಿ ಸೂಕ್ಷ್ಮತೆ ಹೊಂದಿರಬೇಕು. ಅದು ಅತಿ ಅಥವಾ ಕಡಿಮೆಯಾಗಬಾರದು. ಸಾಂಬಾರಿಗೆ ಉಪ್ಪು ಹೆಚ್ಚಾದರೂ ಅಥವಾ ಕಡಿಮೆಯಾದರೂ ತಿನ್ನುವುದಕ್ಕಾಗುವುದಿಲ್ಲ. ರುಚಿಗೆ ತಕ್ಕಷ್ಟೇ ಇದ್ದರೆ ಮಾತ್ರ ಯೋಗ್ಯವೆನಿಸುವುದು. ಬದುಕಿನಲ್ಲೂ ಸ್ವಯಂಕಲ್ಪನೆ ಉಪ್ಪಿನಂತಿರಲಿ. ಲೋಕಜ್ಞಾನವು ಸದಾ ಇರಲಿ. ಮಿತಿಯಲ್ಲಿದ್ದರೆ ಮಾತ್ರ ನೆಮ್ಮದಿಯ ಮೇರೆ ದಾಟಿ ಸಂಭ್ರಮಿಸಬಹುದು. ಈ ಬದಲಾವಣೆಗೆ ಯಾರನ್ನೂ ಕಾಯದೇ ನಾವೇ ಬದಲಾಗೋಣ .... ಬದಲಾಗೋಣವೇ ಪ್ಲೀಸ್..! ಏನಂತೀರಿ...?
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
*********************************************