-->
ಬದಲಾಗೋಣವೇ ಪ್ಲೀಸ್ : ಸಂಚಿಕೆ - 27

ಬದಲಾಗೋಣವೇ ಪ್ಲೀಸ್ : ಸಂಚಿಕೆ - 27

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು


        ಬದಲಾಗೋಣವೇ ಪ್ಲೀಸ್ - 27


           ನೀವಿನ್ನೂ ಸರಕಾರ ಕಟ್ಟಿಲ್ಲವೇ.... 
                      ಕೂಡಲೇ ಕಟ್ಟಿ.....
                 ------------------------------
        ನೋಡು ನೋಡುತ್ತಿದ್ದಂತೆ 2021 ರ ಇಸವಿ ಇತಿಹಾಸದ ಪುಟ ಸೇರಿದೆ. 2022ನೇ ಇಸವಿ ಇತಿಹಾಸದ ಪುಟ ಸೇರುವ ಮುನ್ನ ಏನಾದರೂ ನೆನಪಿಡುವ ಕೆಲಸ ಮಾಡಬೇಕಲ್ಲವೇ...! ಸ್ವಚ್ಛ ಸರಕಾರ ನೀಡೋಣವೇ....
       ನನ್ನ ಕನಸಿನ ಸರಕಾರವು ಭ್ರಷ್ಟಾಚಾರ ರಹಿತ, ಆಡಂಬರ ರಹಿತ , ಸ್ವಾರ್ಥರಹಿತ , ನಿರಂಕುಶ ರಹಿತವಾಗಿದ್ದು ಎಲ್ಲರೂ ಎಲ್ಲವೂ ಮೆಚ್ಚುವಂತಿರಬೇಕು. ಅದು ಆರೋಗ್ಯಪೂರ್ಣ ಸುವೇಗದ ಸುಸ್ಥಿರ ಸುಲಲಿತ ಸ್ವತಂತ್ರ ಸಾಧನೆಯ ಜನಪ್ರಿಯ ಸರಕಾರವಾಗಿರಬೇಕೆಂಬುದು ಮನದಾಶೆಯಾಗಿದೆ. ನನ್ನ ಬದುಕಿನಲ್ಲಿ ಈ ವರೆಗೆ ಕಟ್ಟಲಾಗದ ಸರಕಾರವನ್ನು 2022ನೇ ಇಸವಿಯಲ್ಲದರೂ ಕಟ್ಟಬೇಕು ಎಂಬುದು ನನ್ನ ಆಶೆಯಾಗಿದೆ. ನನ್ನ ಬಹುದಿನದ ಕನಸು ನನಸಾಗಿಸುವತ್ತ ಹೆಜ್ಜೆ ಹಾಕುತ್ತಿದ್ದೇನೆ. 
         ಆಶ್ಚರ್ಯ ಪಟ್ಟೀರಾ ....... ನಾ ಹೇಳ ಹೊರಟಿರುವುದು ರಾಜಕೀಯ ಸರಕಾರವಲ್ಲ. ಅದು ನಾನು ನನ್ನೊಳಗೆ ಕಟ್ಟಬೇಕಾಗಿರುವ ಸರಕಾರ. ಅದು ನನ್ನೊಳಗಿನ ಆಡಳಿತ ಹಾಗೂ ವಿರೋಧ ಪಕ್ಷಗಳು ಪಕ್ಷಭೇದ ಮರೆತು ಸಕಾರತ್ಮಕ ಆಡಳಿತ ಕೊಡುವ ಸಮಸ್ಥಿತಿಯ ಸರಕಾರದ ಬಗ್ಗೆ. ನನ್ನ ದೇಹಕ್ಕೆ ಹಾಗೂ ಬದುಕಿನ ಭಾಂಧವ್ಯಕ್ಕೆ ಒಂದು ಶ್ರೇಷ್ಠ ಸರಕಾರದ ಅವಶ್ಯಕತೆಯಿದೆ. ಅದಕ್ಕಾಗಿ ಅಲ್ಲಿ ಸಂವಿಧಾನ, ರಾಷ್ಟ್ರಪತಿ, ಪ್ರಧಾನ ಮಂತ್ರಿ , ಮಂತ್ರಿಮಂಡಲ, ಅಧಿಕಾರಿ ವರ್ಗ , ಶಾಸಕಾಂಗ , ಕಾರ್ಯಾಂಗ, ನ್ಯಾಯಾಂಗ..... ಹೀಗೆ ಎಲ್ಲವೂ ಸಮರ್ಪಕವಾಗಿ ಕೆಲಸ ಮಾಡುವ ಅಗತ್ಯತೆ ಇದೆ. ಎಲ್ಲವನ್ನು ನ್ಯಾಯಯುತವಾಗಿ ಬಳಸಿ ಬದುಕಿನ ಸರಕಾರವನ್ನು ನಡೆಸಬೇಕಾಗಿದೆ. ನನ್ನನ್ನೇ ನಂಬಿರುವ ಲಕ್ಷಾಂತರ ಜೀವಕೋಶಗಳೆಂಬ ಪ್ರಜೆಗಳಿದ್ದಾರೆ. ಅವರನ್ನು ರಕ್ಷಿಸಿ ಬೆಳಸುವುದು ನನ್ನ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನನ್ನ ಸರಕಾರದ ಬಗ್ಗೆ ತಿಳಿಯೋಣ.
         ಇಲ್ಲಿ ಬದುಕಿನ ರೀತಿ ನೀತಿಗಳೇ ಸಂವಿಧಾನ. ಸಂವಿಧಾನವೇ ಪರಮ ಶ್ರೇಷ್ಠ. ಪ್ರತಿಯೊಬ್ಬರು ಬದುಕಿನ ಸಂವಿಧಾನಕ್ಕೆ ಬೆಲೆ ಕೊಡಲೇಬೇಕು. ಹಾಗಾಗಿ ಬದುಕಿನ ರೀತಿ ನೀತಿಗಳು ಉತ್ಕೃಷ್ಟವಾಗಿಡುತ್ತಿದ್ದೇನೆ. ಬದುಕಿನ ತಪ್ಪು ಒಪ್ಪುಗಳನ್ನು ನಿರ್ಣಯಿಸಿ ಸ್ಪಷ್ಟವಾಗಿ ನಿರ್ಧಾರ ಕೊಡುವ ಪ್ರಜ್ಞೆಯೇ ಸುಪ್ರಿಂ ಕೋರ್ಟ್. ಪ್ರಜ್ಞೆ ಕೊಡುವ ತೀರ್ಪೆ ಅಂತಿಮ. ಹಾಗಾಗಿ ಧನಾತ್ಮಕ ಪ್ರಜ್ಞೆಗೆ ಸಿದ್ಧನಾಗಿದ್ದೇನೆ. ಇಡೀ ದೇಹ ಹಾಗೂ ಅಂಗಾಂಗಗಳನ್ನು ಸಮನ್ವಯಗೊಳಿಸಿ ಆರೋಗ್ಯಕರ ಪ್ರಗತಿಯತ್ತ ಮುನ್ನಡೆಸುವ ಪ್ರಧಾನಮಂತ್ರಿಯೇ ಮೆದುಳು. ಹಾಗಾಗಿ ಗೊಂದಲ ರಹಿತವಾಗಿ ಮೆದುಳನ್ನಿಡಲು ನಿರ್ಧರಿಸಿದ್ದೇನೆ. ಸುತ್ತಲ ಜಗವನ್ನು ವೀಕ್ಷಿಸಿ ನಮ್ಮ ದೇಹದ ದೈಹಿಕ ಹಾಗೂ ಮಾನಸಿಕ ರಕ್ಷಣೆಯನ್ನು ಮಾಡುವ ಕಣ್ಣುಗಳೇ ಗೃಹ ಮಂತ್ರಿ. ನಾವು ಹೇಗೆ ಮತ್ತು ಯಾವಾಗ ಮಾತಾಡಬೇಕೆಂದು ನೋಡುವ ನಾಲಗೆಯೇ ವಾರ್ತಾ ಮತ್ತು ಪ್ರಸಾರ ಇಲಾಖಾ ಮಂತ್ರಿ. ಹೊರಗಿನ ಶಬ್ದಗಳನ್ನು ಆಲಿಸಿ ಸೂಕ್ತ ಸ್ಪಂದನೆ ನೀಡುವ ಕಿವಿಗಳೇ ವಿದೇಶಾಂಗ ಮಂತ್ರಿ. ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುವ ಕೈಗಳೇ ಸಮಾಜ ಕಲ್ಯಾಣ ಇಲಾಖಾ ಮಂತ್ರಿ . ಸದಾ ಆಮ್ಲಜನಕ ನೀಡಿ ದೇಹವನ್ನು ರಕ್ಷಿಸುವ ಮೂಗೇ ರಕ್ಷಣಾ ಮಂತ್ರಿ , ಕಾಲುಗಳೇ ಸಾರಿಗೆ ಮಂತ್ರಿ , ಜಠರವೇ ಆರೋಗ್ಯ ಮಂತ್ರಿ , ಹೃದಯವೇ ಶಿಕ್ಷಣ ಮಂತ್ರಿ , ವಿಸರ್ಜನಾಂಗಗಳೇ ಸ್ವಚ್ಛತಾ ಮಂತ್ರಿ , ಜೀರ್ಣಾಂಗಗಳೇ ಕೈಗಾರಿಕ ಮಂತ್ರಿ ......ಹೀಗೆಯೇ ಪ್ರತಿಯೊಂದು ಅಂಗಗಳನ್ನು ಮಂತ್ರಿಗಳನ್ನಾಗಿ ಕಲ್ಪಿಸಿದರೆ ಅದುವೇ ದೇಹದ ಸರಕಾರ.
        ಅಬ್ಬಾ ಇಂಥಹ ಶ್ರೇಷ್ಠ ಮಂತ್ರಿಗಳ ನ್ನೊಳಗೊಂಡ ಮಂತ್ರಿಮಂಡಲವು ತನ್ನ ತನ್ನ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಶ್ರೇಷ್ಠ ಸರಕಾರ ಮೂಡಿಬರಲು ಸಾಧ್ಯ. ಸಂದರ್ಭಕ್ಕನುಸಾರ ಹುಟ್ಟುವ ಅನಿರೀಕ್ಷಿತ ಸಮಸ್ಯೆಗಳು ಹಾಗೂ ಸವಾಲುಗಳು , ಬಾಹ್ಯ ವಿಚಾರಗಳೆಂಬ ನೇತ್ಯಾತ್ಮಕ ವಿರೋಧ ಪಕ್ಷಗಳು ಆಗಾಗ ಸರಕಾರ ನಡೆಸಲು ಅಡ್ಡಿ ಬರುವುದುಂಟು. ಆದರೆ ಸಮರ್ಥ ಆಡಳಿತದಿಂದ ಅವುಗಳನ್ನು ಎದುರಿಸಿ ಮಾದರಿ ಹಾಗೂ ನನ್ನಿಂದ ಆಗುವ ಮಿತಿಯ ಅತ್ಯುತ್ತಮ ಸರಕಾರ ನೀಡಲು ನಿರ್ಧರಿಸಿದ್ದೇನೆ. ನಾನಂತೂ ನನ್ನ ಬದುಕಿಗಾಗಿ ಸುಭದ್ರ ಸರಕಾರದ ರಚನೆ ಮಾಡಿದ್ದೇನೆ. ಹಾಗೂ ಶ್ರೇಷ್ಠ ನಿರ್ವಹಣೆಗೆ ಪಣ ತೊಟ್ಟಿದ್ದೇನೆ. ನಿಮ್ಮ ಸರಕಾರ ರಚನೆಯಾಗಿದ್ದರೆ ತುಂಬು ಸಂತಸ. ಇನ್ನೂ ರಚನೆಯಾಗದಿದ್ದಲ್ಲಿ ಇಂದೇ ಸೂಕ್ತ ಸಂವಿಧಾನ ಹಾಗೂ ಸರಕಾರ ರಚಿಸಿ.. ಸುಭದ್ರ ನ್ಯಾಯಯುತ ಜನಪ್ರಿಯ ಆಡಳಿತ ನೀಡಿರಿ. ಈ ಬದಲಾವಣೆಗೆ ಯಾರನ್ನೂ ಕಾಯದೇ ನಾವೇ ಬದಲಾಗೋಣ .... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article