
ಜೀವನ ಸಂಭ್ರಮ : ಸಂಚಿಕೆ -17
Thursday, January 6, 2022
Edit
ಜೀವನ ಸಂಭ್ರಮ : ಸಂಚಿಕೆ -17
ಪಾಪಣ್ಣ ಗೌಡ ಶಾಲೆ
----------------------------
ಇದು ಶಾಲೆಯ ಹೆಸರಲ್ಲ. ಶಾಲೆಯ ಹೆಸರು ಸರಕಾರಿ ಪ್ರೌಢಶಾಲೆ ಚಿಣ್ಯ, ನಾಗಮಂಗಲ ತಾಲೂಕು ,ಮಂಡ್ಯ ಜಿಲ್ಲೆಯಲ್ಲಿದೆ. ನಾನು ಓದಿದ ಪ್ರೌಢಶಾಲೆ ಅದು. ಮುಖ್ಯ ಶಿಕ್ಷಕರು ಪಾಪಣ್ಣ ಗೌಡ. ಈ ಶಾಲೆಯಲ್ಲಿ ಅವರು ಇರುವವರಿಗೂ ಪಾಪಣ್ಣಗೌಡ ಶಾಲೆಯಾಗಿತ್ತು. ಕಾರಣ ಅವರ ಶಿಸ್ತು , ಶ್ರದ್ಧೆ ಮತ್ತು ಪ್ರಾಮಾಣಿಕತೆ. ನನ್ನೂರಿನಲ್ಲಿ ನಾನು ಓದುವಾಗ ಪ್ರೌಢಶಾಲೆ ಇರಲಿಲ್ಲ. ನಾನು 9ನೇ ತರಗತಿ ಓದುವಾಗ ನನ್ನೂರಿನಲ್ಲಿ ಪ್ರೌಢಶಾಲೆ ಪ್ರಾರಂಭವಾಯಿತು. ಹಾಗಾಗಿ ಪಕ್ಕದ ಊರಾದ ಚಿಣ್ಯಕ್ಕೆ ಹೋಗಬೇಕಾಯಿತು. ಅದು ನನ್ನೂರಿನಿಂದ ಐದು ಕಿಲೋಮೀಟರ್ ದೂರದಲ್ಲಿತ್ತು. ನನ್ನೂರಿನಿಂದ ಅ ಊರಿಗೆ ವಾಹನ ಸೌಲಭ್ಯ ಇರಲಿಲ್ಲ. ನಡೆದುಕೊಂಡೇ ಹೋಗಬೇಕಿತ್ತು.
ಪಾಪಣ್ಣ ಗೌಡರದು ಸ್ವಂತ ಊರು ಮಾಣಿಕ್ಯನಹಳ್ಳಿ. ಮಾಣಿಕ್ಯನಹಳ್ಳಿ ಹಳ್ಳಿಯಿಂದ ಚಿಣ್ಯಕ್ಕೆ ಹತ್ತು ಕಿಲೋಮೀಟರ್ ದೂರ. ಬಸ್ಸು ಓಡಾಟದ ಅನುಕೂಲ ಇದ್ದರೂ ಅವರು ಶಾಲೆಯ ಪಕ್ಕನೆ ಮನೆ ಮಾಡಿಕೊಂಡಿದ್ದರು. ಅವರ ಮಕ್ಕಳೂ ಕೂಡಾ ಇದೇ ಶಾಲೆಯಲ್ಲಿ ಓದುತ್ತಿದ್ದರು.
ಶಾಲೆಯ ವಾತಾವರಣ ಅಷ್ಟು ಸ್ವಚ್ಛ. ತೋಟ ಸುಂದರವಾಗಿ ನಿರ್ಮಲವಾಗಿತ್ತು. ನಮ್ಮ ಮುಖ್ಯ ಶಿಕ್ಷಕರಿಗೆ ಕಸ ಕಣ್ಣಮುಂದೆ ಕಂಡರೆ ನಮಗ್ಯಾರಿಗೂ ಹೇಳುತ್ತಿರಲಿಲ್ಲ. ಅವರೇ ಅದನ್ನು ಎತ್ತಿ ಹಾಕುತ್ತಿದ್ದರು. ಹಾಗಾಗಿ ಶಾಲೆಯಲ್ಲಿ ನಮ್ಮ ಕಣ್ಣಿಗೆ ಕಸ ಕಂಡರೆ ಅವರಿಗಿಂತ ಮೊದಲೇ ನಾವು ಎತ್ತಿ ಹಾಕುತ್ತಿದ್ದೆವು. ಹಾಗಾಗಿ ಶಾಲೆ ಹಾಗೂ ಶಾಲಾ ಆವರಣ ಯಾವಾಗಲೂ ಸ್ವಚ್ಛ ಸುಂದರವಾಗಿತ್ತು.
ಈ ಶಾಲೆಯ ವಿಶೇಷವೇನೆಂದರೆ 10ನೇ ತರಗತಿಯ ವಿದ್ಯಾರ್ಥಿಗಳು ರಾತ್ರಿವೇಳೆಯಲ್ಲಿ ಶಾಲೆಯಲ್ಲಿ ಓದಬೇಕು. ವಿದ್ಯುತ್ ಹೋದರೆ ಅನುಕೂಲವಾಗಲೆಂದು ಪ್ರತಿಯೊಬ್ಬ ವಿದ್ಯಾರ್ಥಿ ಸೀಮೆ ಎಣ್ಣೆ ದೀಪ ಇಡಬೇಕಿತ್ತು. ದಿನಕ್ಕೊಬ್ಬರಂತೆ ಶಿಕ್ಷಕರು ರಾತ್ರಿವೇಳೆಯಲ್ಲಿ ಶಾಲೆಯಲ್ಲಿರಬೇಕು. ಶಿಕ್ಷಕರೆಲ್ಲ ಬೇರೆಬೇರೆ ಊರಿನವರಾದರೂ, ಅವರಿಗೆ ಹಂಚಿಕೆಯಾದ ದಿನ ಕಡ್ಡಾಯವಾಗಿ ರಾತ್ರಿ ಶಾಲೆಯಲ್ಲಿ ವಾಸ್ತವ್ಯ ಮಾಡಬೇಕಿತ್ತು. ಆ ದಿನ ಅವರು ಅವರ ಪಾಠದಲ್ಲಿ ಇರುವ ಕಠಿಣವಾದದ್ದನ್ನು ಪರಿಹಾರ ಮಾಡಬೇಕು. ಅದಕ್ಕಾಗಿ ರಾತ್ರಿ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ತರಗತಿ ನಡೆಸುತ್ತಿದ್ದರು. ವಿದ್ಯಾರ್ಥಿಗಳು ನಡುವೆ ಇದ್ದು ಸಮಸ್ಯೆ ಆಲಿಸಿ ಪರಿಹರಿಸಬೇಕು. ನಂತರ ರಾತ್ರಿ 9 ರಿಂದ ಹತ್ತು ಮೂವತ್ತರ ವರೆಗೆ ಓದಬೇಕು. ಹೆಣ್ಣುಮಕ್ಕಳಿಗೆ ಎರಡು ಕೊಠಡಿ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಎರಡು ಕೊಠಡಿ ಮೀಸಲಾಗಿದ್ದು , ಕೊಠಡಿಯಲ್ಲಿ ಬೆಂಚ್ ಗೆ ಇಬ್ಬರಂತೆ ಕುಳಿತು ಓದಬೇಕು. ಓದಿದ ನಂತರ ಅಲ್ಲೇ ಮಲಗಬೇಕು. ಓದುವಾಗ ಕಿಟಕಿ ತೆರೆದಿರಬೇಕು. ರಾತ್ರಿ ಹತ್ತರಿಂದ ಹತ್ತು ಮೂವತ್ತರ ಒಳಗೆ ನಮ್ಮ ಮುಖ್ಯಶಿಕ್ಷಕರು ಬಂದು ಪ್ರತಿ ಕಿಟಕಿಯಲ್ಲಿ ವಿದ್ಯಾರ್ಥಿಗಳನ್ನು ವೀಕ್ಷಿಸಿ ಹೋಗುತ್ತಿದ್ದರು. ಆ ಸಮಯದಲ್ಲಿ ಯಾರನ್ನು ಮಾತನಾಡಿಸುತ್ತಿರಲಿಲ್ಲ. ಯಾರಾದರೂ ಓದದೆ ನಿದ್ದೆ ಮಾಡುವುದು , ಹರಟೆ ಹೊಡೆಯುವುದನ್ನು ನೋಡಿದರೆ, ಅವರ ಹೆಸರನ್ನು ನೆನಪಿಟ್ಟುಕೊಂಡಿರುತ್ತಿದ್ದರು. ಬೆಳಗಿನ ಪ್ರಾರ್ಥನೆ , ದಿನಪತ್ರಿಕೆಯ ಮುಖ್ಯಾಂಶಗಳ ಓದಿನ ನಂತರ ಎಲ್ಲಾ ವಿದ್ಯಾರ್ಥಿಗಳ ಮುಂದೆ ರಾತ್ರಿ ನಿದ್ದೆ ಮಾಡುತ್ತಿದ್ದ, ಹರಟೆ ಹೊಡೆಯುತ್ತಿದ್ದ ವಿದ್ಯಾರ್ಥಿಗಳ ಹೆಸರುಗಳನ್ನು ಕರೆಯುವರು. ಅವರು ಕರೆಯುವ ಶೈಲಿಯಲ್ಲಿ ನಮಗೆ ಎಷ್ಟು ಶಿಕ್ಷೆ ಎಂದು ಖಾತ್ರಿ ಆಗುತ್ತಿತ್ತು. ಬಾರಪ್ಪ ಎಂದರೆ ಕಡಿಮೆ ಶಿಕ್ಷೆ , ಬಾರೋ ಎಂದರೆ ಸ್ವಲ್ಪ ಜಾಸ್ತಿ , ಬಾರಲೋ ಎಂದರೆ ಶಿಕ್ಷೆ ಜಾಸ್ತಿ ಇರುತ್ತಿತ್ತು. ಯಾರಾದರೂ ತರಗತಿಗೆ ಪೂರ್ವಾನುಮತಿ ಇಲ್ಲದೆ ತಪ್ಪಿಸಿಕೊಂಡರೆ , ಆ ವಿದ್ಯಾರ್ಥಿಗಳ ಜೊತೆ 10ನೇ ತರಗತಿಯಲ್ಲಿ ಓದದೆ ಹರಟೆ ಹೊಡೆಯುತ್ತಿದ್ದ ವಿದ್ಯಾರ್ಥಿಗಳು ಸೇರಿಕೊಂಡು ಸಂಜೆ ಕುಂಬಾರ ಗುಂಡಿಯಿಂದ ನೀರನ್ನು ತಲೆಯ ಮೇಲೆ ಹೊತ್ತು ತಂದು ತೋಟಕ್ಕೆ ಹಾಕಬೇಕು. ಕುಂಬಾರ ಗುಂಡಿ ಎಂದರೆ ನೀರು ತುಂಬಿರುವ ಚಿಕ್ಕ ಗುಂಡಿ.
ನಾವು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಶಾಲೆ ಬಿಟ್ಟು ಊರಿಗೆ ಹೋಗಿ , ಹೊಟ್ಟೆ ತುಂಬಾ ಊಟ ಮಾಡಿ, ನಂತರ ಒಂಬತ್ತು ಮೂವತ್ತಕ್ಕೆ ವಿಶೇಷ ತರಗತಿಗೆ ಹಾಜರಾಗಬೇಕಿತ್ತು. ಪುನಃ ಸಂಜೆ 4.30 ಕ್ಕೆ ಶಾಲೆ ಬಿಟ್ಟ ಮೇಲೆ ಊರಿಗೆ ಹೋಗಿ ರಾತ್ರಿ ಊಟ ಮಾಡಿ ಪುನಃ 7ಗಂಟೆಗೆ ಶಾಲೆಗೆ ಬರಬೇಕಿತ್ತು. ಹಾಗಾಗಿ ದಿನಕ್ಕೆ 20 ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾಗಿತ್ತು.
ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ ಮೇಲುಕೋಟೆ ಯದುಶೈಲ ಪ್ರೌಢಶಾಲೆಯಲ್ಲಿ ಇರುತ್ತಿತ್ತು. 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ ಮುಗಿಯುವವರೆಗೆ ಯಾತ್ರಿ ನಿವಾಸದಲ್ಲಿ ಕೊಠಡಿ ಕಾಯ್ದಿರಿಸಿ ವಸತಿ ವ್ಯವಸ್ಥೆ ಮಾಡುತ್ತಿದ್ದರು. ಪರೀಕ್ಷೆ ಮುಗಿಯುವವರೆಗೆ ಎಲ್ಲಾ ಶಿಕ್ಷಕರು ಅಲ್ಲೆ ಇರುತ್ತಿದ್ದರು. ಮಾರನೇ ದಿನ ಯಾವ ಪರೀಕ್ಷೆ ಇರುತ್ತೆ ಆ ಶಿಕ್ಷಕರು ಹಿಂದಿನ ರಾತ್ರಿ ಗಂಟೆ 10 ರ ವರೆಗೆ ಪಾಠ ಹೇಳಿಕೊಡುತ್ತಿದ್ದರು. ಮುಖ್ಯಶಿಕ್ಷಕರು ಪರೀಕ್ಷೆ ಮುಗಿಯುವವರೆಗೆ ನಮ್ಮ ಜೊತೆಯಲ್ಲಿ ಇರುತ್ತಿದ್ದರು. ಪ್ರತಿ ಬಾರಿ ನಮ್ಮ ಶಾಲೆ ಫಲಿತಾಂಶ, ಜಿಲ್ಲೆಯ ಫಲಿತಾಂಶದಲ್ಲಿ ಅಗ್ರಸ್ಥಾನದಲ್ಲಿ ಇರುತ್ತಿತ್ತು.
ಪಾಪಣ್ಣ ಗೌಡರು ಪ್ರತಿ ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟ ನಂತರ ತನ್ನೂರಿಗೆ ಹೋಗುತ್ತಿದ್ದರು. ಏಕೆಂದರೆ ತಾಯಿ ಊರಲ್ಲಿದ್ದರು. ಅವರ ಜೊತೆ ಶನಿವಾರ ಭಾನುವಾರ ಇದ್ದು ಸೋಮವಾರ ಬೆಳಗ್ಗೆ ಶಾಲಾ ಸಮಯಕ್ಕೆ ಹಾಜರಾಗುತ್ತಿದ್ದರು. ಇದು ಅವರ ವಾರದ ಕಾರ್ಯಕ್ರಮ ಆಗಿತ್ತು. ನಮ್ಮ ಎಸ್.ಎಸ್.ಎಲ್.ಸಿ ಫಲಿತಾಂಶ ಬರುವ ವೇಳಗೆ ಅವರಿಗೆ ವರ್ಗವಾಗಿತ್ತು.
ನಾನು ಶಿಕ್ಷಕ ವೃತ್ತಿಗೆ ಸೇರಿದ ಮೇಲೆ ನನ್ನ ಶಾಲೆಗೆ ಹೋಗಿ ನೋಡಿದಾಗ, ನಾನಿದ್ದ ಸ್ವಚ್ಛ ಸುಂದರ ಪರಿಸರ ಬದಲಾಗಿತ್ತು. ಈಗ ಅದು ಪಾಪಣ್ಣ ಗೌಡ ಶಾಲೆಯಲ್ಲ, ಸರ್ಕಾರಿ ಪದವಿಪೂರ್ವ ಕಾಲೇಜು ಆಗಿದೆ...!!!
ನಾನು ಮಾಣಿಕ್ಯನಹಳ್ಳಿ ಹುಡುಗಿಯನ್ನು ಮದುವೆಯಾಗಿದ್ಧೇನೆ. ನಾನು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮಂಗಳೂರಿನಲ್ಲಿ ಇದ್ದಿದ್ದರಿಂದ ಒಮ್ಮೆ ಮಾಣಿಕ್ಯನಹಳ್ಳಿಗೆ ಭಾನುವಾರ ಹೋಗಿದ್ದೆ. ಪಾಪಣ್ಣ ಗೌಡರು ನಿವೃತ್ತರಾಗಿದ್ದು, ಮೈಸೂರಿನಲ್ಲಿ ವಾಸವಾಗಿದ್ದಾರೆ. ಆದರೂ ಪ್ರತಿ ಭಾನುವಾರ ತನ್ನ ಊರಿಗೆ ಬರುವುದು ರೂಢಿ. ಈಗ ಅವರ ತಾಯಿ ಇಲ್ಲ. ಊರಿನ ಬಾಲಭೈರವೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ ದೇವಸ್ಥಾನವನ್ನು ಸುಂದರವಾಗಿ ಮಾಡಿಸಿದ್ದಾರೆ. ಆ ಕೆಲಸ ನಡೆಯುವಾಗ ಅವರನ್ನು ಭೇಟಿಮಾಡಿದ್ದೆ ಹಾಗೂ ಅವರ ಆಶೀರ್ವಾದ ಪಡೆದು ಬಂದೆ. ನಾನು ಶಿಕ್ಷಣ ಇಲಾಖೆಯ ಅಧಿಕಾರಿ ಆಗಿರುವುದನ್ನು ಕೇಳಿ ತುಂಬಾ ಸಂತೋಷಪಟ್ಟರು.
ಒಳ್ಳೆಯ ಶಿಕ್ಷಕ ಹೇಗೆ ಮಾದರಿ ಶಾಲೆ ಮಾಡಬಲ್ಲ ಎನ್ನುವುದಕ್ಕೆ ಈ ಘಟನೆ ಉದಾಹರಣೆ. ನಾನು ಇಂಥ ಶಿಕ್ಷಕರ ಅಡಿಯಲ್ಲಿ ಕಲಿಯಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಓರ್ವ ಪ್ರಾಮಾಣಿಕ ಶಿಸ್ತುಬದ್ಧ ಸೃಜನಶೀಲ ಶಿಕ್ಷಕನಿಂದ ಪಡೆದ ಶಿಕ್ಷಣ ನಮ್ಮ ಜೀವನವನ್ನು ಸುಂದರವಾಗಿಸುತ್ತದೆ. ಬದುಕಿನ ಸಂಭ್ರಮವನ್ನು ಗಳಿಸಲು ಸಾಧ್ಯವಾಗುತ್ತದೆ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************