
ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 24
Saturday, January 1, 2022
Edit
ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 24
ಹದಿನಾರರ ಹರೆಯ. ಮನಸ್ಸು ಹುಚ್ಚು ಕೋಡಿಯಾಗಿ ಹರಿಯುವ ಪ್ರಾಯ. ಕನಸು ಕಾಣುವ ಈ ವಯಸ್ಸಿನಲ್ಲಿ ಜವಾಬ್ದಾರಿಯ ದಿರಸು ಹಾಕಿಕೊಂಡು ಹೊರಟ ಈ ಸರದಾರ. ಹಾಕಿಕೊಂಡು ಹೊರಟ ಆ ದಿರಿಸಾದರೂ ಯಾವುದು ಗೊತ್ತೇ... ನಿಲುವಂಗಿ ಜಟ್ಟಿ ಚಲ್ಲಣ, ಕೈಯಲ್ಲಿ ಖಡ್ಗ, ಶಿರಕ್ಕೆ ಶಿರಸ್ತ್ರಾಣ. ಅಬ್ಬಬ್ಬಾ !!! ಎಂತಹ ಎದೆಗಾರಿಕೆ. ವೈರಿಗಳ ಸಂಚನ್ನು ಕೊರೆಯುವ ಮಿಂಚು ಕಣ್ಗಳಲಿ. ಆಜಾನುಬಾಹು ದೇಹದ ಹೃದಯದೊಳಗೆ ಉಕ್ಕಿನಂತಹ ನಿರ್ಧಾರ. ಮದುವೆಯಾಗಿ ಮನೆ ಕಟ್ಟುವುದಲ್ಲ, ಯುದ್ಧ ರಮೆಯನ್ನು ಆಲಂಗಿಸಿ, ಶತ್ರುಗಳನ್ನು ಸದೆಬಡಿದು ದೇಶ ಕಟ್ಟುವುದು. ದೇಶವೆಂದರೆ ಬರಿಯ ದೇಶವಲ್ಲ: ಪ್ರದೇಶವಲ್ಲ. ಕೋಟೆಕೊತ್ತಲಗಳು, ಶ್ರದ್ಧಾ ಕೇಂದ್ರವಾದ ದೇವಾಲಯಗಳು. ದೇಶಕ್ಕೊಂದು ಅರ್ಥಕೊಡುವ ರಾಷ್ಟ್ರಪ್ರೇಮಿ ಪ್ರಜೆಗಳು. ತನ್ನ ಹದಿನಾರನೆಯ ವಯಸ್ಸಿನಿಂದ ತೊಡಗಿ ಐವತ್ತರ ವಯಸ್ಸಿನವರೆಗೆ ಅಷ್ಟು ದಿನಗಳನ್ನು ಕಳೆದದ್ದು ಯುದ್ಧ ಭೂಮಿಯಲ್ಲಿ. ಯುದ್ಧ ನಡೆದದ್ದಾದರೂ ಎಲ್ಲಿ? ಕೋಟೆಗಳಲ್ಲಿ. ಯುದ್ಧವಾದರೂ ಯಾವ ಬಗೆಯದು. ಈ ಹಿಂದೆ ಕೇಳರಿಯದ, ಕಂಡರಿಯದ ಬೇರೆಯೇ ಬಗೆಯದು!! ಅದುವೇ ಗೆರಿಲ್ಲಾ ತಂತ್ರ.!!! ಶತ್ರು ಪಡೆಯು ಪ್ರಬಲವಾಗಿದೆ ಎಂದು ತಿಳಿದಾಗ ಈತ ಇತರ ತಂತ್ರಗಳನ್ನು ಬಳಸಿ ಅವರನ್ನು ಸೋಲಿಸುತ್ತಿದ್ದ. ಯುದ್ಧಕ್ಕೆ ಸಾಮಗ್ರಿಗಳನ್ನು ಸರಬರಾಜು ಮಾಡುವ ದಾರಿಗಳನ್ನು ಮುಚ್ಚಿಸುತ್ತಿದ್ದ. ಕೆಲವೊಮ್ಮೆ ವೈರಿಗಳಿಗೆ ಮಾನಸಿಕ ಒತ್ತಡದ ತಂತ್ರಗಳನ್ನು ಪ್ರಯೋಗಿಸುತ್ತಿದ್ದ. ಇನ್ನು ಕೆಲವೊಮ್ಮೆ ಶತ್ರು ರಾಜರುಗಳ ಹೆಣ್ಣುಮಕ್ಕಳನ್ನು ವಿವಾಹವಾಗಿ ಹೊಸ ಸಂಬಂಧ ಹೆಣೆದುಕೊಂಡು ಯುದ್ಧಕ್ಕೆ ವಿರಾಮ ಹಾಡುತ್ತಿದ್ದ. ಮತ್ತೆ ಕೆಲವು ಸಂದರ್ಭಗಳಲ್ಲಿ ಅವರ ಪ್ರದೇಶವನ್ನು ಅವರಿಗೆ ಬಿಟ್ಟುಕೊಟ್ಟು ಸ್ವಾಯತ್ತವಾಗಿ ಆದರೆ ತನ್ನ ಅಧಿಪತ್ಯದೊಳಗಿರುವ ಹಾಗೆ ನೋಡಿಕೊಳ್ಳುತ್ತಿದ್ದ.
ಕೋಟಿ ಮುರಿದು ಕೋಟೆ ಕಟ್ಟಿದ ಕೋಟಿಗೊಬ್ಬ ಅರಿಕೇಸರಿ ಈತ. ವೈರಿಗಳಿಗೆ ಸಿಂಹಸ್ವಪ್ನ. ಪ್ರಜೆಗಳಿಗೆ ಮಾನವೀಯತೆಯ ಸಾಕಾರಮೂರ್ತಿ. ಯುದ್ಧ ಮಾಡಿ ಗೆದ್ದುಕೊಂಡದ್ದನ್ನು ಮತ್ತೆ ಕೆಲವೇ ದಿನಗಳಲ್ಲಿ ಗೌರವದಿಂದ ಉಡುಗೊರೆಯಾಗಿ ಕೊಡುವ ಹೃದಯ ಶ್ರೀಮಂತ.
ಈ ಸಿಂಹದಮರಿ ಹುಟ್ಟಿದ್ದು ಶಿವನೇರಿ ದುರ್ಗದಲ್ಲಿ. ಶಹಜಿ ಭೊಂಸ್ಲೆ ಮತ್ತು ಜೀಜಾಬಾಯಿ ಆ ಪುಣ್ಯವಂತ ತಂದೆ-ತಾಯಿಗಳು. ತಂದೆಯ ಸ್ವಾಮಿನಿಷ್ಠೆ ಬದಲಾಗುತ್ತಿತ್ತು. ಆಗಾಗ ಮೊಘಲರ ಆಕ್ರಮಣವಾಗುತ್ತಿತ್ತು. ಬಿಜಾಪುರದ ಸುಲ್ತಾನರಿಂದ ಬಳುವಳಿಯಾಗಿ ಸಿಕ್ಕಿದ ಕೋಟೆಯಲ್ಲಿ ನೆಲೆ ಕಂಡರು.
ಈ ಅರಿಕೇಸರಿ ತನ್ನ 16ನೇ ವಯಸ್ಸಿನಲ್ಲಿ ತೋರಣ ಕೋಟೆಯನ್ನು ಗೆದ್ದ. ಅಲ್ಲಿ ಸಂಪಾದಿಸಿದ ಸಂಪತ್ತಿನಿಂದ ರಾಯಗಡ ಕೋಟೆಯನ್ನು ನಿರ್ಮಿಸಿದ. ತದನಂತರ ಪುರಂದರ, ಕೊಂಡಾಣ ಮುಂತಾದ ಕೋಟೆಗಳನ್ನು ವಶಪಡಿಸಿಕೊಂಡ. ಪ್ರವಾಹದೋಪಾದಿಯಲ್ಲಿ ಸಾಗುತ್ತಿದ್ದ ಇವನ ಆಕ್ರಮಣವನ್ನು ತಡೆಗಟ್ಟಲು ಈತನ ತಂದೆಯನ್ನು ಸೆರೆಹಿಡಿಯಲಾಯಿತು. ಆರು ವರ್ಷಗಳ ಕಾಲ ಮಾತ್ರ ಆತ ಯುದ್ಧ ಸನ್ಯಾಸ ಮಾಡಿದ್ದ ಎನ್ನಬಹುದು. ಮತ್ತೆ ಆರಂಭಿಸಿದ ದಿಗ್ವಿಜಯ ಯಾತ್ರೆ ಹಿಂದೂ ಸಾಮ್ರಾಜ್ಯ ನಾಲ್ಕು ದಿಕ್ಕುಗಳಿಗೆ ವಿಸ್ತರಿಸುವಲ್ಲಿ ತನಕ ನಿಲ್ಲಲಿಲ್ಲ.
ಫಜಲ್ ಖಾನನ ಜೊತೆಯಲ್ಲಿ ದೀರ್ಘಕಾಲ ಸಂಘರ್ಷ. ಕೊನೆಗಾಣುವುದು ತೋರದಿದ್ದಾಗ ಮತ್ತೊಂದು ತಂತ್ರ. ಪ್ರತಾಪ ಗಡದ ತಪ್ಪಲಲ್ಲಿ ಇಬ್ಬರ ಭೇಟಿ. ಇಬ್ಬರು ಒಂದು ಖಡ್ಗ ಹಾಗೂ ಒಬ್ಬ ಆಳಿನ ಜೊತೆ ಬರಲು ತೀರ್ಮಾನ. ಆದರೆ ಈತ ದೂರದರ್ಶಿ. ನಿಲುವಂಗಿ ಒಳಗೆ ರಕ್ಷಾಕವಚ ತೊಟ್ಟು, ತೋಳಲ್ಲಿ ಹುಲಿ ನಖ ಎಂಬ ಪುಟ್ಟ ಆಯುಧವನ್ನು ಗುಪ್ತವಾಗಿ ಇಟ್ಟುಕೊಂಡು ಭೇಟಿಯಾದ.
ವೈರಿಯನ್ನು ಇರಿದು ಶತ್ರು ತಾಣಕ್ಕೆ ಮುತ್ತಿಗೆ ಹಾಕಲು ಕುಶಾಲತೋಪು ಸಿಡಿಸಿ ಸೂಚನೆ ಇತ್ತ. ಯುದ್ಧದ ನಂತರ ಸಿಂಹಾವಲೋಕನ, ವಿಮರ್ಶೆ ಮಾಡಿ, ಅಧಿಕಾರಿಗಳನ್ನು ಸೈನಿಕರನ್ನು ಧನಕನಕ, ಆಹಾರ, ಉಡುಗೊರೆಯೊಂದಿಗೆ ಬಂಧಮುಕ್ತಗೊಳಿಸಿದ. ತನ್ನ ಪನ್ಹಾಲಾ ಕೋಟೆಯನ್ನು ವೈರಿಗಳು ಆಂಗ್ಲರೊಂದಿಗೆ ದಿಗ್ಬಂಧನಗೊಳಿಸಿ ಅವರ ಬಾವುಟ ಹಾರಿಸಿದಾಗ ಕ್ರುದ್ಧನಾಗಿ ರಾಜಪುರದಲ್ಲಿ ಇದ್ದ ಇಂಗ್ಲಿಷರ ಕಾರ್ಖಾನೆಗಳನ್ನು ಸುಟ್ಟುಹಾಕಿದ. ಆತನ ಸಹಾಯಕ ಬಾಜಿಪ್ರಭು ದೇಶಪಾಂಡೆ ವೀರಾವೇಶದಿಂದ ಹೋರಾಡಿ ವೀರ ಮರಣವನ್ನು ಪಡೆದಾಗ ಆತನ ಹೆಸರಿನಲ್ಲಿ ಗೋಡ್ಕಿಂಡಿಯನ್ನು ಪಾವನ ಕಿಂಡಿ ಎಂಬ ಮರುನಾಮಕರಣ ಮಾಡಿ ಗೌರವವನ್ನು ಸೂಚಿಸಿದ.
ಔರಂಗಜೇಬನೊಂದಿಗೆ ಹೋರಾಡಿ 300 ಸಾವಿರ ಸುವರ್ಣ ನಾಣ್ಯಗಳನ್ನು 200 ಕುದುರೆ ಕಾಲಾಳುಗಳನ್ನು ಸಂಪಾದಿಸಿಕೊಂಡ. ಮತ್ತೊಂದು ಯುದ್ಧದಲ್ಲಿ ಔರಂಗಜೇಬ ಈತನನ್ನು ಸೆರೆಹಿಡಿದ. ಆದರೆ ಸ್ವಾತಂತ್ರ್ಯ ಪ್ರೇಮಿ ಆಗ್ರಾದಿಂದ ತಪ್ಪಿಸಿಕೊಂಡು ಕೇವಲ ನಾಲ್ಕು ತಿಂಗಳಲ್ಲೇ ಕಳೆದುಕೊಂಡದ್ದನ್ನು ಮರುಗಳಿಸಿದ. ತನ್ನನ್ನು ಅವಮಾನದ ಕೂಪಕ್ಕೆ ತಳ್ಳಿದ ಅವರಿಂದಲೇ ರಾಜ ಎನ್ನುವ ಬಿರುದನ್ನು ಅಲಂಕರಿಸಿಕೊಂಡ. ಅಪಾರ ಸಂಪತ್ತಿಗೆ ಒಡೆಯನಾದ ಬಳಿಕ ಪಟ್ಟಾಭಿಷೇಕದ ಕಡೆಗೆ ಯೋಚಿಸಿದ. ವೈದಿಕ ಸಮುದಾಯ ಅನೇಕ ರೀತಿಯಲ್ಲಿ ಅಡ್ಡಿಯುಂಟು ಮಾಡಿದಾಗ ಪರಿಹಾರ ಹುಡುಕುತ್ತಾ ಹೋದ. ದ್ವಿಜನಾಗಲು ಜನಿವಾರ ಹಾಕಿಕೊಂಡ. ತನ್ನಿಂದಾದ ಸಾವು-ನೋವುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು, ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಅನೇಕ ಜೀವ ಹಾನಿಗಳನ್ನು ಮಾಡಿದ ಪಾಪ ತೊಳೆಯಲು ಸಪ್ತ ಲೋಹಗಳೊಂದಿಗೆ ತುಲಾಭಾರ ಮಾಡಿಕೊಂಡ.
ರಾಯಗಡ ಕೋಟೆ ಯಲ್ಲಿ ಸಂಭ್ರಮ ಉತ್ಸವಗಳ ನಡುವೆ ಸ್ವರಾಜ್ಯದ ಛತ್ರಪತಿಯಾಗಿ, ಸಪ್ತ ನದಿಗಳ ಜಲವನ್ನು ಚಿನ್ನದ ಕಲಶದಲ್ಲಿ ತುಂಬಿ, ವೈದಿಕ ಮಂತ್ರಘೋಷಗಳ ನಡುವೆ, 50000 ವೀಕ್ಷಕರ ಸಮಕ್ಷಮದಲ್ಲಿ ಪಟ್ಟಾಭಿಷೇಕ ನಡೆಯಿತು. ಛತ್ರಪತಿ, ಶತ ಕರ್ತ, ಹೈಮ್ಧವ ಧರ್ಮೋದ್ಧಾರಕ ಎಂಬ ಬಿರುದು ಬಾವಲಿಗಳ ಗರಿ ಮಕುಟಕ್ಕೆ ಭೂಷಣಪ್ರಾಯವಾಗಿ ಸೇರಿಕೊಂಡಿತ್ತು.
ಅಲ್ಲಿಂದ ನಂತರ ದಕ್ಷಿಣ ಭಾರತ ದಂಡ ಯಾತ್ರೆ. ಮೊತ್ತಮೊದಲ ಬೃಹತ್ ಹಿಂದೂ ರಾಜ್ಯದ ಉದಯ. ಮಂತ್ರಿಗಳ ಅಷ್ಟಪ್ರಧಾನ ಮಂಡಲ. ಪ್ರಬಲ ಧಾರ್ಮಿಕ ಸಂಹಿತೆ, ಯುದ್ಧ ಸಂಹಿತೆ, ಉನ್ನತ ಚಾರಿತ್ರ್ಯ ನಿರ್ಮಾಣ. ನ್ಯಾಯಾಲಯದಲ್ಲಿ ಪರ್ಷಿಯನ್ ಭಾಷೆಗೆ ತಿಲಾಂಜಲಿಯಿತ್ತು ಸಂಸ್ಕೃತಕ್ಕೆ ಮನ್ನಣೆ. ಸಂಸ್ಕೃತದಲ್ಲಿ ರಾಜ ಅಂಕಿತ, ಶಬ್ದಕೋಶ, ರಾಜ್ಯ ವ್ಯವಹಾರ ಕೋಶಗಳ ರಚನೆ. ಅಪ್ಪಟ ಹಿಂದೂವಾದರೂ ಪರಧರ್ಮ ಸಹಿಷ್ಣು. ಛತ್ರಪತಿ ಇಲ್ಲದೇ ಇರುತ್ತಿದ್ದರೆ ಈಗಿನ ಕಾಶಿಯ ಸಂಸ್ಕೃತಿ ಪೂರ್ತಿ ನಾಶ ವಾಗಿರುತ್ತಿತ್ತು. ಮಥುರಾ ಮಸೀದಿಯಾಗಿ ಇರುತ್ತಿತ್ತು. ಸವಕಲು ರಾಜಕೀಯ ಸಂಪ್ರದಾಯಗಳನ್ನು ಮುರಿದು ನವೀನ ದೇಸಿ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿದ ರಾಷ್ಟ್ರೀಯವಾದಿ ಎಂದು ಸ್ವಾತಂತ್ರ್ಯ ಚಳವಳಿಕಾರರು ಆತನನ್ನು ಹಿಂದೂ ನಾಯಕನನ್ನಾಗಿ ವೈಭವೀಕರಿಸಿದರು. ಸ್ವಾತಂತ್ರ್ಯ ಪ್ರೇಮಕ್ಕೆ ಒಂದು ಪ್ರತಿಮೆಯಾಗಿ, ಸ್ವಾತಂತ್ರ್ಯ ಚಳವಳಿಗೆ ಒಂದು ಪ್ರೇರಣೆಯಾಗಿ ಛತ್ರಪತಿ ಎಂಬ ಅಭಿನವ ಸೂರ್ಯ ಅಸ್ತಂಗತನಾದ.
ತಾಯಿಯಿಂದ ದೇಶಪ್ರೇಮದ, ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿಕೊಂಡ ಧೀರನಿಂದ ಅದು ಮತ್ತಷ್ಟು ಉಜ್ವಲ ಗೊಳ್ಳುತ್ತಾ ಗಗನಮುಖಿಯಾಗಿ, ವಿಶ್ವವ್ಯಾಪಿಯಾಗಿ ಪ್ರಕಾಶಿಸುತ್ತಾ ಇದೆ.
ಕಾಯಕ್ಕೆ ಅಳಿವುಂಟು
ನಿನ್ನ ಕೀರುತಿ ಗಲ್ಲ
ಹುಟ್ಟಿ ಬರಬಾರದೇ
ಮತ್ತೊಮ್ಮೆ ಮಲ್ಲ
ಇಂಥವರು ನಿಮ್ಮೊಳಗಿಲ್ಲವೇ .................?
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
Mob: +91 99016 38372
*******************************************