-->
ಜೀವನ ಸಂಭ್ರಮ : ಸಂಚಿಕೆ - 21

ಜೀವನ ಸಂಭ್ರಮ : ಸಂಚಿಕೆ - 21


ಜೀವನ ಸಂಭ್ರಮ : ಸಂಚಿಕೆ - 21

                  ಗುರುಮುಖೇನ ಶಿಕ್ಷಣ
              --------------------------
     ಮಕ್ಕಳೇ...... ನನ್ನ ಬಾಲ್ಯ ಜೀವನದ ಘಟನೆ ಹಾಗೂ ನನ್ನ ಮೇಲೆ ಪ್ರಭಾವ ಬೀರಿದ ಶಿಕ್ಷಕರ ಬಗ್ಗೆ ಹೇಳುತ್ತೇನೆ.....
       ನನಗೆ ವಿಜ್ಞಾನದ ಬಗ್ಗೆ ಆಸಕ್ತಿ ಬರಲು ಕಾರಣ ನನ್ನ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾದ ಶ್ರೀ ವೈ.ಎನ್. ರಾಮಸ್ವಾಮಿ ಅಯ್ಯಂಗಾರ್. ನಮಗೆ ಪ್ರೌಢಶಾಲೆಯಲ್ಲಿ ಅವರು ಪುಸ್ತಕ ಹಿಡಿದು ಪಾಠ ಮಾಡಲಿಲ್ಲ. ಪಠ್ಯದ ವಿಷಯಗಳನ್ನು ನಮಗೆ ಅರ್ಥ ಆಗುವಂತೆ ಹೇಳುತ್ತಿದ್ದರು. ಸಾಧ್ಯವಾದಾಗಲೆಲ್ಲ ವಿಜ್ಞಾನ ಪ್ರಯೋಗಗಳನ್ನು ಮಾಡಿ ತೋರಿಸುತ್ತಿದ್ದರು. ಒಮ್ಮೆ ಕಪ್ಪೆ ಕತ್ತರಿಸಿ ರಕ್ತ ಪರಿಚಲನೆ ಹಾಗೂ ಹೃದಯ ಬಡಿತವನ್ನು ತೋರಿಸಿದರು. ಅವರು ಪಾಠ ಮಾಡುತ್ತಿರ ಬೇಕಾದರೆ ನಮ್ಮ ಮನಸ್ಸು ಆ ಕಡೆ ಈ ಕಡೆ ಹೋಗುತ್ತಿರಲಿಲ್ಲ.
          ಗಣಿತ ಬೋಧಿಸುತ್ತಿದ್ದ ಶ್ರೀ ಡಿ.ಬಿ. ಜಗದೀಶ ಮೂರ್ತಿ ಅವರು ಅರ್ಥವಾಗಲಿಲ್ಲ ಎಂದರೆ ಸಾಕು ಹತ್ತು ಬಾರಿಯಾದರೂ ಹೇಳಿಕೊಡುತ್ತಿದ್ದರು. ಅವರು ಪ್ರೀತಿಯಿಂದ ಹಾಸ್ಯ ಮಾಡಿಕೊಂಡು ಹೇಳಿಕೊಡುತ್ತಿದ್ದರು. ನನಗೆ ಹಿಂದಿ ಅಕ್ಷರ ಹೇಳಿಕೊಟ್ಟು ನನ್ನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದ ಎನ್ ರಾಮಕೃಷ್ಣೇಗೌಡರು ನಾನು ಪ್ರೌಢಶಾಲೆಯಲ್ಲಿ ಓದುವಾಗ ಮಧ್ಯೆ...... ನಗರದ ಶಾಲೆಗೆ ಸೇರಬೇಕೆಂದು ಕೇಳಿದಾಗ, ನನಗೆ ಟಿ ಸಿ ಕೊಡಿಸಲಿಲ್ಲ. 
          ಒಂದು ಘಟನೆ ಹೇಳಬೇಕು. ನಾನು ಎಸ್.ಎಸ್.ಎಲ್.ಸಿ ಪರೀಕ್ಷೆ ಮೇಲುಕೋಟೆಯಲ್ಲಿ ಬರೆದಿದ್ದು. ಪರೀಕ್ಷೆಯ ಸಂದರ್ಭದಲ್ಲಿ , ಪರೀಕ್ಷೆಯ ಹಿಂದಿನ ದಿನ ಪರೀಕ್ಷೆಗೆ ಸಂಬಂಧಿಸಿದ ಮುಖ್ಯಾಂಶ ಗಳನ್ನು ರಾತ್ರಿ ಹತ್ತು ಗಂಟೆಯವರೆಗೂ ಆಯಾ ವಿಷಯದ ಶಿಕ್ಷಕರು ಮನನ ಮಾಡಿಸುತ್ತಿದ್ದರು. ಮಾರನೆಯ ದಿನ ಗಣಿತ ಪರೀಕ್ಷೆ ಇತ್ತು. ಹಿಂದಿನ ದಿನ ಶ್ರೀ ಡಿ.ಬಿ. ಜಗದೀಶ ಮೂರ್ತಿ ರವರು ಗಣಿತದಲ್ಲಿ ಮುಖ್ಯಾಂಶವನ್ನು ಹೇಳುತ್ತಿದ್ದರು. ನಾನು ಆ ದಿನ ಹಿಂದಿನ ಸಾಲಿನಲ್ಲಿ ಕುಳಿತಿದ್ದೆ. ನಿದ್ರೆ ಬಂದಿತ್ತು. ಇದನ್ನು ಹಿಂದಿ ಶಿಕ್ಷಕರಾದ ಶ್ರೀ ಎನ್ ರಾಮಕೃಷ್ಣ ಗೌಡರು ನೋಡಿದರು. ಕೂಡಲೆ ನನ್ನನ್ನು ಎಚ್ಚರಿಸಿ ಮುಖ ತೊಳೆದು ಬರಲು ತಿಳಿಸಿದರು. ಏನೋ ಚೆನ್ನಾಗಿ ಓದುತ್ತಾನೆ ಎಂದರೆ ನಿದ್ರೆ ಮಾಡುತ್ತಿದ್ದಾನೆ ಎಂದು ಗದರಿದರು. ಮಾರನೆ ದಿನ ಗಣಿತ ಪರೀಕ್ಷೆ ಆಯಿತು. ಪರೀಕ್ಷೆ ಬರೆದು ಹತ್ತು ನಿಮಿಷ ಮೊದಲೇ ಉತ್ತರ ಪತ್ರಿಕೆ ಕೊಟ್ಟು ಹೊರಬಂದಿದ್ದೆ. ಆಗ ಶ್ರೀ ಡಿ ಬಿ ಜಗದೀಶ್ ಮೂರ್ತಿಯವರು ಕರೆದು ಬುದ್ದಿವಾದ ತಿಳಿಸಿದರು. "ಏನೊ ನೀನು ಬುದ್ಧಿವಂತ ಎಂದು ಭಾವಿಸಿದರೆ ಹೀಗಾ ಬರುವುದು. ಉತ್ತರ ಪತ್ರಿಕೆ ಮತ್ತೊಮ್ಮೆ ನೋಡಿ ತಪ್ಪಿದ್ದರೆ ಸರಿಪಡಿಸಿ, ಯಾವುದಾದರೂ ಬಿಟ್ಟಿದ್ದರೆ, ಕೊನೆಯಲ್ಲಿ ನೆನಪಿಗೆ ಬಂದರೂ ಬರಬಹುದು" ಎಂದು ಹೇಳಿದ್ದು ಈಗಲೂ ಅವರ ಮೇಲೆ ಪೂಜ್ಯ ಭಾವನೆ ಬರುತ್ತದೆ.
       ನಾನು ಎಂ.ಇಡಿ ಮುಗಿದಮೇಲೆ ನನ್ನ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ನನ್ನ ಹೆಸರು ತಪ್ಪಾಗಿತ್ತು ಅದನ್ನು ಸರಿಪಡಿಸಲು ಶಾಲೆಗೆ ಹೋದಾಗ, ಶ್ರೀ ಎನ್ ರಾಮಕೃಷ್ಣೇಗೌಡ ರು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಾನು ಹೋದಾಗ ತಕ್ಷಣ ಪರಿಚಯ ಸಿಗಲಿಲ್ಲ. ನಾನೇ ಪರಿಚಯ ಮಾಡಿಕೊಂಡು ಅವರಿಗೆ ನೆನಪಿಸಿದೆ. ಅವರಿಗೆ ನೆನಪು ಬಂತು. ಈಗ ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದರು. ನಾನು ಎಂ.ಇಡಿ ಮೂರನೆ ರಾಂಕ್ ಬಂದಿದ್ದೇನೆಂದು ಹೇಳಿದಾಗ, ಆಗ ಅವರಿಗಾದ ಆನಂದ ವರ್ಣಿಸಲು ಸಾಧ್ಯವಿಲ್ಲ. ವಿಷಯ ನಿರ್ವಾಹಕರಿಗೆ ಹೆಸರು ತಿದ್ದುಪಡಿಗೆ ಸಂಬಂಧಿಸಿದಂತೆ ಪತ್ರ ಸಿದ್ಧಪಡಿಸಲು ತಿಳಿಸಿ, ನನ್ನ ಕೈಯನ್ನು ಅವರ ತೋಳಿನ ಸಂಧಿಯಲ್ಲಿ ಹಿಡಿದುಕೊಂಡು , ಎಲ್ಲಾ ತರಗತಿಗೂ ಕರೆದುಕೊಂಡು ಹೋಗಿ , ನನ್ನ ಶಿಷ್ಯ ಎಂ.ಇಡಿ ರಾಂಕ್ ಬಂದಿದ್ದಾನೆ ಎಂದು ಎಲ್ಲರಿಗೂ ತೋರಿಸಿ ಆನಂದಿಸಿದ್ದು ಮರೆಯಲು ಸಾಧ್ಯವಿಲ್ಲ.
       ನನಗೆ ಎಸ್.ಎಸ್.ಎಲ್.ಸಿ ಯಲ್ಲಿ ಅಧಿಕ ಅಂಕ ಬಂತು. ಗಣಿತದಲ್ಲಿ ಒಳ್ಳೆಯ ಅಂಕ ಇದ್ದುದರಿಂದ ನನ್ನ ದೂರದ ಸಂಬಂಧಿ ನನಗೆ ವಿಜ್ಞಾನ ಓದುವಂತೆ ಸಲಹೆ ನೀಡಿದರು. ಅದರಂತೆ ನಾನು ಪಿ.ಇ.ಎಸ್ ಕಾಲೇಜು ಮಂಡ್ಯದಲ್ಲಿ ಪಿಯುಸಿಗೆ ಸೇರಿದೆ. ನಾನು ಎಸ್.ಎಸ್.ಎಲ್.ಸಿ ಯವರಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಕಷ್ಟವಾಯಿತು. ಅಂತಹ ಸಂದರ್ಭದಲ್ಲಿ ಭೌತಶಾಸ್ತ್ರ ಬೋಧಿಸುತ್ತಿದ್ದ ಶ್ರೀಯುತ ರವಿಶಂಕರ್ ಸರ್ ಹಾಗೂ ಗಣಿತ ಬೋಧಿಸುತ್ತಿದ್ದ ಶಿವಣ್ಣ ಸರ್ ಆಂಗ್ಲಮಾಧ್ಯಮದಲ್ಲಿ ಬೋಧಿಸಿದ ರೀತಿಯಿಂದ ಚೆನ್ನಾಗಿ ಅರ್ಥವಾಗುತ್ತಿತ್ತು.
       ಪಿಯುಸಿ ಆದ ನಂತರ ಬಿ.ಎಸ್ಸಿ ಪದವಿ ಪಡೆಯಲು ನಾನು ಯುವರಾಜ ಕಾಲೇಜು ಮೈಸೂರಿಗೆ ಸೇರಿದೆ. ಅಲ್ಲಿ ನನಗೆ ಪ್ರಭಾವ ಬೀರಿದ ಶಿಕ್ಷಕರಲ್ಲಿ ಡಾಕ್ಟರ್ ಟಿ.ಮುನಿಯಪ್ಪ , ಶ್ರೀ ಪಾಂಡುರಂಗ ಮತ್ತು ಶ್ರೀಯುತ ನಂಜುಂಡಯ್ಯ ರವರು ಮುಖ್ಯರು. ನಾನು ಶಿಕ್ಷಕರ ವೃತ್ತಿ ಆಯ್ಕೆ ಮಾಡಲು ಮುನಿಯಪ್ಪರವರ ಪ್ರೀತಿ ಅವರು ಹೇಳಿದ ಮಾತು ಕಾರಣವಾಯಿತು. ಇದು ಸರ್ಕಾರಿ ಕಾಲೇಜು ಆದರೂ ಡಾಕ್ಟರ್ ಟಿ ಮುನಿಯಪ್ಪ ರವರು ಸಾಕಷ್ಟು ಭಾನುವಾರ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದರು. ದಪ್ಪ ದೇಹ. ದೇಹಕ್ಕೆ ಅನುಗುಣವಾದ ಧ್ವನಿ. ಇವರ ತರಗತಿಗೆ ಯಾರು ಗೈರುಹಾಜರಿ ಆಗುತ್ತಿರಲಿಲ್ಲ. ಇವರು ನೋಟ್ಸ್ ಹೇಳುತ್ತಾ ಚಿತ್ರ ಬರೆಯುತ್ತಿದ್ದರು. ನಮಗೆ ಪ್ರತ್ಯೇಕವಾಗಿ ಚಿತ್ರ ಬರೆದುಕೊಳ್ಳಲು ಅವಕಾಶವಿರುತ್ತಿರಲಿಲ್ಲ. ಆ ನೋಟ್ಸನ್ನು ಓದುತ್ತಿದ್ದರೆ ಹತ್ತು ಪುಸ್ತಕ ಓದಿ ನೋಟ್ಸ್ ಮಾಡಿದರೂ ಅದರ ಸಮ ಆಗುತ್ತಿರಲಿಲ್ಲ. ಒಮ್ಮೆ ಪ್ರಾಣಿಶಾಸ್ತ್ರ ಪ್ರಯೋಗಾಲಯದಲ್ಲಿ ಏಳನೇ ಕ್ರೇನಿಯಲ್ ನರವನ್ನು ಕಪ್ಪೆಯಲ್ಲಿ ಬಿಡಿಸಬೇಕಿತ್ತು. ನಾನು ಕನಿಷ್ಠ ಸಾಮಗ್ರಿಯೊಂದಿಗೆ ಪ್ರಯೋಗಾಲಯಕ್ಕೆ ಹೋಗಿದ್ದೆ. ಪ್ರಯೋಗಾಲಯದಲ್ಲಿ ಡಾ.ಟಿ ಮುನಿಯಪ್ಪ ಸರ್ ಮತ್ತು ನಾನು ಮಾತ್ರ ಅದನ್ನು ಬಿಡಿಸಿದ್ದು. ಆಗ ಅವರು ಹೇಳಿದ ಮಾತು "ಏನಯ್ಯ ನಾನು ಯಾವುದೇ ಕಷ್ಟ ಅಂದ್ರು ನೀನು ಸುಲಭವಾಗಿ ಮಾಡುತ್ತೀಯಾ ನೀನು ದಿನಾ ಕೋಳಿ ಕಟ್ ಮಾಡ್ತೀಯಾ ಎಂದರು. ನೀನು ಮಾಸ್ಟರ್ ಆದರೆ ಚಂದ ಕಣಯ್ಯ ಎಂದು ಹೇಳಿದರು. ಬಹುಶಃ ಅವರ ಆಶೀರ್ವಾದದಿಂದ ನಾನು ಶಿಕ್ಷಕ ವೃತ್ತಿಗೆ ಸೇರಿದೆ ಅನಿಸುತ್ತಿದೆ.
         ನಂತರ ನಾನು ಬಿ.ಎಡ್ ಮಾಡಲು ಸರ್ಕಾರಿ ಬಿ.ಎಡ್. ಕಾಲೇಜು ಮೈಸೂರಿಗೆ ಸೇರಿದೆ. ಅಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಶ್ರೀ ಮಹಮ್ಮದ್ ಬಶೀರ್ ಸರ್ , ಶ್ರೀ ರೇವಣ್ಣ ಸರ್ , ಶ್ರೀಮತಿ ಪಿ. ಶಾರದಮ್ಮ. ಶ್ರೀಮತಿ ಪಿ ಶಾರದಮ್ಮ ಮುಂದೆ ನನಗೆ ಡಿಡಿಪಿಐ ಆದರು. ಇವರು ಪಾಠ ಮಾಡುವ ವಿಧಾನವನ್ನು ನನ್ನಲ್ಲಿ ಮೈಗೂಡಿಸಿದರು. ನಂತರ ಎಂ.ಎಡ್. ಮಾಡಲು ಮಾನಸಗಂಗೋತ್ರಿ ಮೈಸೂರಿಗೆ ಸೇರಿದೆ. ಅಲ್ಲಿ ಮನಃಶಾಸ್ತ್ರ ಬೋಧಿಸುತ್ತಿದ್ದ ಮಂಜುನಾಥಯ್ಯ ಇವರು ಮಾಡುತ್ತಿದ್ದ ಪಾಠ ಅದ್ಭುತ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಶುರುವಾದರೆ ಯಾರೂ ಕಾಲೇಜಿಗೆ ಬರುತ್ತಿರಲಿಲ್ಲ. ನನಗೆ ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಇರಲಿಲ್ಲ. ನಾನೊಬ್ಬನೇ ಕಾಲೇಜಿಗೆ ಹೋದರೆ ನನ್ನನ್ನು ತಮ್ಮ ಮುಂದೆ ಕೂರಿಸಿಕೊಂಡು ಡಾಕ್ಟರ್ ಮಂಜುನಾಥಯ್ಯ. ಡಾಕ್ಟರ್ ಪಾರ್ವತಮ್ಮ ಮುಂತಾದವರು ನನಗೊಬ್ಬನಿಗೆ ಹೇಳಿಕೊಡುತ್ತಿದ್ದರು. ಬಹುಶಃ ಇವರ ಆಶೀರ್ವಾದದಿಂದ ನಾನು ಎಂ.ಇಡಿ. ಯಲ್ಲಿ ಮೂರನೇ ರಾಂಕ್ ಬರಲು ಸಾಧ್ಯವಾಯಿತು.
ಮಕ್ಕಳೇ ಈ ಘಟನೆಗಳಿಂದ ತಿಳಿಯಬೇಕಾದುದೇನೆಂದರೆ , ನಮಗೆ ಮಾಹಿತಿ ಪುಸ್ತಕದಲ್ಲಿದೆ ನಿಜ. ಮಾಹಿತಿಯನ್ನು ಶಿಕ್ಷಕರಿಂದ ಕೇಳುವಾಗ ಆಗುವ ಅನುಭವವೇ ಬೇರೆ. ಏಕೆಂದರೆ ಶಿಕ್ಷಕ ಒಂದು ಪಾಠ ಮಾಡಬೇಕಾದರೆ ಮನಸ್ಸಿನಲ್ಲಿ ಸುಮಾರು ನೂರುಪುಸ್ತಕದ ಜ್ಞಾನ ಇರುತ್ತದೆ. ಅಷ್ಟು ಪುಸ್ತಕ ಓದಲು ನಮಗೆ ಸಾಧ್ಯವಿಲ್ಲ. ಪಾಠದಲ್ಲಿ ಯಾವುದು ಕಷ್ಟ ಎನ್ನುವುದು ಶಿಕ್ಷಕರಿಗೆ ತಿಳಿದಿರುತ್ತದೆ. ಆ ಕಷ್ಟದ ಭಾಗವನ್ನು ತನ್ನ ಅನುಭವ ಸೇರಿಸಿ, ಘಟನೆಗಳೊಂದಿಗೆ, ಉದಾಹರಣೆಯೊಂದಿಗೆ ಮತ್ತು ಕಥೆಯನ್ನು ಬಳಸಿಕೊಂಡು ಸುಲಭ ಮಾಡುತ್ತಾರೆ. ಹಾಗಾಗಿ ನಾವು ಶಿಕ್ಷಕರ ಪಾಠವನ್ನು ಆಗಲಿ ಉತ್ತಮ ಜ್ಞಾನವಂತರ ಭಾಷಣವನ್ನಾಗಲಿ ತಪ್ಪಿಸಿಕೊಳ್ಳಬಾರದು. ಅವರು ನೀಡುವ ತಮ್ಮ ಅನುಭವ, ಘಟನೆ, ಉದಾಹರಣೆ ಮತ್ತು ಕಥೆ ಇವುಗಳಲ್ಲಿ ಯಾವುದಾದರೊಂದು ನಮ್ಮ ಜೀವನಕ್ಕೆ ದಾರಿದೀಪ ಆಗಬಹುದು. ಇದಕ್ಕಾಗಿ ಗುರುಮುಖೇನ ಶಿಕ್ಷಣ ಪಡೆಯುವುದು ಉತ್ತಮ.
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************* Ads on article

Advertise in articles 1

advertising articles 2

Advertise under the article