-->
ಹಕ್ಕಿ ಕಥೆ - 32

ಹಕ್ಕಿ ಕಥೆ - 32

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ


                       ಹಕ್ಕಿ ಕಥೆ - 32
                    ------------------
        ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭ ಮಾಡಿದ ಮೇಲೆ ನನ್ನ ಹಾಗೆಯೇ ಪಕ್ಷಿವೀಕ್ಷಣೆ ಮತ್ತು ಪಕ್ಷಿಗಳ ಫೋಟೋ ತೆಗೆಯುವ ಹಲವಾರು ವ್ಯಕ್ತಿಗಳ ಪರಿಚಯ ಆಗಲು ಪ್ರಾರಂಭ ಆಯಿತು. ಹೀಗೆ ಪರಿಚಯ ಆದವರಲ್ಲಿ ಕಾರ್ಕಳದ ಗೆಳೆಯ ಶಿವಶಂಕರ್ ಕೂಡ ಒಬ್ಬರು. ಕಾರ್ಕಳದಲ್ಲೊಂದು ಸುಂದರ ಕೆರೆ ಇದೆ. ಅದರ ಹೆಸರು ಆನೆಕೆರೆ. ಕಾರ್ಕಳದ ಮೂಲಕ ಹೋಗುವಾಗಲೆಲ್ಲ ಆ ಕೆರೆಯನ್ನು ನೋಡುತ್ತ ಹೋಗುವುದು ನನ್ನ ಇಷ್ಟದ ಕೆಲಸ. ಸಮಯ ಸಿಕ್ಕರೆ ಆ ಕೆರೆಯ ಬದಿಯಲ್ಲಿ ನಿಂತು ಒಂದಷ್ಟು ಹೊತ್ತು ಹಕ್ಕಿಗಳನ್ನು ನೋಡುತ್ತ ಕುಳಿತರೆ ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ. ಹೀಗೇ ಒಮ್ಮೆ ಕುಳಿತು ಹಕ್ಕಿಗಳನ್ನು ನೋಡುತ್ತಿರುವಾಗ, ನೀರಿನ ಒಳಗೆ ಹಾವಿನಂಥ ಜೀವಿಯೊಂದು ಓಡಾಡಿದ ಹಾಗೆ ಅನಿಸಿತು. ಸ್ವಲ್ಪ ಮಾತ್ರ ತನ್ನ ಹೆಡೆಯನ್ನು ಮೇಲಕ್ಕೆ ಎತ್ತಿ ಮತ್ತೆ ನೀರಿನ ಒಳಗೆ ಹೋಗಿಬಿಡುತ್ತಿತ್ತು. ಕ್ಯಾಮರಾ ಹಿಡಿದುಕೊಂಡು ಅದರ ದಾರಿಯನ್ನೇ ಹಿಂಬಾಲಿಸಿದೆ. ಒಂದೆರಡು ಪೋಟೋ ಸಿಕ್ಕಿತು.
         ಸ್ವಲ್ಪ ಹೊತ್ತಿನಲ್ಲಿ ಆ ಜೀವಿ ಅಲ್ಲೇ ಇದ್ದ ಬೋಳು ಮರದ ಕೆಳಗಿನ ಗೆಲ್ಲಿನಲ್ಲಿ ಕುಳಿತಿತು. ಆಗಲೇ ನನಗೆ ತಿಳಿದದ್ದು ಅದೊಂದು ಹಕ್ಕಿ ಎಂದು. ಪಕ್ಕನೇ ನೋಡಲು ನೀರು ಕಾಗೆಯ ಹಾಗೆ ಇದ್ದರೂ ಕುತ್ತಿಗೆ ಮಾತ್ರ ತುಂಬಾ ಉದ್ದ. ಉದ್ದನೆಯ ಈಟಿಯಂಥ ಕೊಕ್ಕು, ಮರದಮೇಲೆ ಕುಳಿತ ಹಕ್ಕಿ ತನ್ನ ರೆಕ್ಕೆಗಳನ್ನು ಬಿಚ್ಚಿ ಬಿಸಿಲಿಗೆ ಒಣಗಿಸುತ್ತಾ ನಿಂತಿತು. ಕಾಲುಗಳನ್ನು ನೋಡಿದರೆ ಜಾಲಪಾದ. ನೀರಿನೊಳಗೆ ಮುಳುಗಿ ಮೀನುಗಳನ್ನು ಹಿಂಬಾಲಿಸಿ ಹಿಡಿಯುವ ತಾಕತ್ತು. ಅದರ ಉದ್ದನೆಯ ಕತ್ತು ಮತ್ತು ಕೊಕ್ಕು ಬಾಣದಂತೆ ನುಗ್ಗಿ ಮೀನು ಹಿಡಿಯಲು ಸಹಕಾರಿ.
            ಹಾವಿನಂತೆ ತನ್ನ ಕತ್ತನ್ನು ಮಾತ್ರ ನೀರಿನ ಮೇಲೆ ತಂದು ಈಜುವುದರಿಂದ ಇದರ ಕನ್ನಡ ಹೆಸರು ಹಾವಕ್ಕಿ. ಇಂಗ್ಲೀಷ್ ನಲ್ಲಿ snake bird. ಚೂಪಾದ ತುದಿ ಇದ್ದು ಯಾವುದರ ಮೇಲಾದರೂ ತಕ್ಷಣ ಎಸೆಯಬಹುದಾದ ವಸ್ತುವನ್ನು ಇಂಗ್ಲೀಷ್ ನಲ್ಲಿ DART ಎಂದು ಕರೆಯುತ್ತಾರೆ. ತನ್ನ ಚೂಪಾದ ಕೊಕ್ಕಿನಿಂದ ಬಾಣದಂತೆ ನುಗ್ಗಿ ಮೀನು ಹಿಡಿಯುವುದರಿಂದ ಇದಕ್ಕೆ DARTER ಎಂಬ ಹೆಸರೂ ಇದೆ. ಇದರ ಕುತ್ತಿಗೆಯ ಭಾಗದ ರಚನೆ ಇದಕ್ಕೆ ಜಾವೆಲಿನ್ ನಂತೆ ತಕ್ಷಣ ತನ್ನ ಕೊಕ್ಕು ಎಸೆದು ಮೀನು ಹಿಡಿಯಲು ಸಹಕಾರಿ. ಬಾರತದಾದ್ಯಂತ ಸಿಹಿನೀರಿನ ಕೆರೆಗಳಲ್ಲಿ ಈ ಹಕ್ಕಿ ನೋಡಲು ಸಿಗುತ್ತದೆ. ಕೆರೆಗಳ ಹತ್ತಿರ ನವೆಂಬರ್ ನಿಂದ ಫೆಬ್ರವರಿಯ ನಡುವೆ ಅಟ್ಟಳಿಗೆಯಂಥ ಗೂಡು ಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತದೆ. ಇತ್ತೀಚೆಗೆ ಕೆರೆಗಳ ಒತ್ತುವರಿ ಮತ್ತು ಗದ್ದೆಗಳನ್ನು ಮಣ್ಣಿನಿಂದ ತುಂಬಿ ಸೈಟ್ ಮಾಡಿ ಮನೆ ಕಟ್ಟಲು ಪ್ರಾರಂಭ ಮಾಡಿದಮೇಲೆ ಇವುಗಳ ಸಂಖ್ಯೆ ಕಡಿಮೆಯಾಗಿದೆ. ಸಿಹಿನೀರಿನ ಕೆರೆ ಅಥವಾ ನಿಧಾನವಾಗಿ ಹರಿಯುವ ನದಿ ಇರುವ ಕಡೆ ನೀವು ಈ ಹಕ್ಕಿಯನ್ನು ಖಂಡಿತಾ ನೋಡಬಹುದು.. 
ಹುಡುಕ್ತೀರಲ್ಲ........?
ಕನ್ನಡದ ಹೆಸರು: ಹಾವಕ್ಕಿ
ಇಂಗ್ಲೀಷ್ ಹೆಸರು: Darter or Snake-Bird
ವೈಜ್ಞಾನಿಕ ಹೆಸರು: (Anhinga melanogaster)
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಇನ್ನೊಂದು ಹಕ್ಕಿಯ ಪರಿಚಯದ ಜೊತೆ ಸಿಗೋಣ, ನಮಸ್ಕಾರ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*******************************************


Ads on article

Advertise in articles 1

advertising articles 2

Advertise under the article