ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 14
Saturday, January 1, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 14
ನಮಸ್ತೆ ಮಕ್ಕಳೇ,
ಹೇಗಿದ್ದೀರಿ? ಅದೇ ಸೂರ್ಯ ಅದೇ ಬಾನು..ಗಾಳಿ..ನೀರು..ಮತ್ತೆ ನಾವು ನೀವು ಎಲ್ಲರೂ... ಭಾವ ಬದಲಾದರೆ, ಆಲೋಚನೆಗಳು ಹೊಸತಾದರೆ ಅದೇ ಹೊಸತನ.
ಆದರೂ ನೆಪವಾಗಿಟ್ಟುಕೊಂಡು ನಮ್ಮನ್ನು ನಾವು ಬದಲಾವಣೆಗೆ ಒಡ್ಡಿಕೊಳ್ಳಲು ಬಯಸುವುದಾದರೆ, ಆ ಬದಲಾವಣೆ ನಿನ್ನೆಗಿಂತ ನಮ್ಮನ್ನು ಉತ್ತಮಗೊಳಿಸುವುದಾದರೆ ಸಂಭ್ರಮ ಸದಾ ಎಚ್ಚರಿಸಲಿ.
ಇದು ಮೂರು ಬೊಂಬೆಗಳ ಕಥೆ..
ರಾಜ ವಿಕ್ರಮಾದಿತ್ಯನ ಆಸ್ಥಾನ. ಪ್ರಜೆಗಳ ಸುಖ ದುಃಖಗಳನ್ನು ವಿಚಾರಿಸುತ್ತಿರುವಾಗ ಬೊಂಬೆ ತಯಾರಕನೊಬ್ಬ ನವರತ್ನಗಳಿಂದ ತಯಾರಿಸಿದ ಮೂರು ಬೊಂಬೆಗಳೊಂದಿಗೆ ಬಂದನು. ಮಹಾರಾಜ, ಈ ಬೊಂಬೆಗಳನ್ನು ತಾವು ತೆಗೆದುಕೊಳ್ಳಬೇಕು. ನನ್ನ ಬದುಕಿಗೊಂದು ದಾರಿ ತೋರಿಸಬೇಕೆಂದು ನಿವೇದಿಸುತ್ತಾನೆ. ರಾಜನು ಬೊಂಬೆ ತಯಾರಕನನ್ನು ಬರಮಾಡಿಕೊಂಡು ಅದರ ಬೆಲೆಯ ಬಗ್ಗೆ ಮತ್ತು ಬೊಂಬೆಗಳ ವಿಶೇಷತೆಗಳ ಬಗ್ಗೆ ವಿಚಾರಿಸುತ್ತಾನೆ. ಆಗ ಬೊಂಬೆ ತಯಾರಕನು ಒಂದೊಂದು ಬೊಂಬೆಗಳನ್ನು ರಾಜನಿಗೆ ಪರಿಚಯಿಸುತ್ತಾ ಅದರ ಮೌಲ್ಯವನ್ನು ತಿಳಿಸುತ್ತಾನೆ.
"ಮೊದಲನೆ ಬೊಂಬೆಯ ಒಂದು ಕಿವಿಯಲ್ಲಿ ದಾರ ಹಾಕಿದರೆ ಇನ್ನೊಂದು ಕಿವಿಯಿಂದ ಹೊರಬರುತ್ತದೆ. ಎರಡನೆಯ ಬೊಂಬೆಯ ಒಂದು ಕಿವಿಯಿಂದ ದಾರ ಹಾಕಿದರೆ ಬಾಯಿಯ ಮೂಲಕ ಹೊರಬರುತ್ತದೆ. ಮೂರನೆಯ ಬೊಂಬೆಯ ಕಿವಿಯಲ್ಲಿ ಹಾಕಿದ ದಾರ ಕಿವಿಯಿಂದಾಗಲಿ ಅಥವಾ ಬಾಯಿಯಿಂದಾಗಲೀ ಹೊರಬರುವುದಿಲ್ಲ.ಬದಲಾಗಿ ತಲೆಯಲ್ಲಿಯೇ ಸುತ್ತಿಕೊಳ್ಳುತ್ತದೆ."
ಹಾಗಾಗಿ ಮೊದಲನೆಯ ಬೊಂಬೆಗೆ ಒಂದು ಕಾಸು, ಎರಡನೆಯ ಬೊಂಬೆಗೆ ಎರಡು ಕಾಸು .. ಮೂರನೆಯ ಬೊಂಬೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೂ ಎರಡು ಸಾವಿರ ಚಿನ್ನದ ನಾಣ್ಯಗಳು" ಎಂದನು.
ಆಗ ರಾಜನು ಆಶ್ಚರ್ಯದಿಂದ, ಸ್ವಲ್ಪ ವಿಶೇಷತೆ ಇರುವ ಕಾರಣಕ್ಕೆ ಇಷ್ಟೊಂದು ಬೆಲೆಯೇ ? ಎಂದನು. ಆಗ ಮಹಾಕವಿ ಕಾಳಿದಾಸನು, ರಾಜನನ್ನು ಉದ್ದೇಶಿಸಿ ಮಾತನಾಡುತ್ತಾ ಹೀಗೆ ಹೇಳುತ್ತಾನೆ. ಮಹಾರಾಜರೇ, ಬೊಂಬೆಯಲ್ಲಿರುವ ಚಿನ್ನ ಬೆಳ್ಳಿ ನವರತ್ನಗಳಿಗೆ ಇಲ್ಲಿ ಬೆಲೆಯಿಲ್ಲ.
ಈ ಮೂರೂ ಬೊಂಬೆಗಳು , ನಮ್ಮ ನಡುವೆಯೇ ಇರುವ ಮೂರು ರೀತಿಯ ಜನವರ್ಗವನ್ನು ಸೂಚಿಸುತ್ತದೆ. ಮೊದಲನೆಯ ಬೊಂಬೆಯು , ಗುರು ಹಿರಿಯರು ಹೇಳಿದ ಜ್ಞಾನದ ಮಾತುಗಳನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಹೊರಬಿಡುವ ಜನರಿದ್ದಂತೆ. ಎರಡನೆಯ ಬೊಂಬೆಯು ತಾನು ಕೇಳಿದ ಬುದ್ಧಿ ಮಾತುಗಳನ್ನು ಬಾಯಿಂದ ಹೊರ ಬಿಡುವುದು ಅಂದರೆ ತಾನು ಇಟ್ಟುಕೊಳ್ಳದೆ ಉಳಿದವರಿಗೆ ಮಾತ್ರ ಹೇಳುವಂತಹ ಜನ. ಇನ್ನು ಮೂರನೆಯ ಬೊಂಂಬೆಯು ತಾನು ಕೇಳಿದ ಒಳ್ಳೆಯ ಮಾತುಗಳನ್ನು ಕಿವಿಯಲ್ಲಿಯಾಗಲಿ ಅಥವಾ ಬಾಯಿಯ ಮೂಲಕವಾಗಿ ಹೊರಬಿಡುವುದಿಲ್ಲ. ತಲೆಯಲ್ಲಿಯೇ ಇಟ್ಟುಕೊಂಡು ಅದರಂತೆ ನಡೆಯುವ ಜನರನ್ನು ಪ್ರತಿನಿಧಿಸುತ್ತದೆ' ಎಂದು ನುಡಿದನು.
ಕಾಳಿದಾಸನ ವಿಶ್ಲೇಷಣೆಯನ್ನು ಕೇಳಿದ ರಾಜನು ಅವನನ್ನು ಅಭಿನಂದಿಸಿ, ಬೊಂಬೆ ತಯಾರಕನನ್ನು ಸನ್ಮಾನಿಸುತ್ತಾನೆ.
ಮಕ್ಕಳೇ,ಕಥೆ ಚೆನ್ನಾಗಿದೆ ಅಲ್ವಾ? ನಿಮಗೆ ಯಾವ ಬೊಂಬೆ ಇಷ್ಟ ಆಯ್ತು..? ಯಾಕೆ ಇಷ್ಟ ಆಯ್ತು? ನಾವು ಯಾವ ಗೊಂಬೆಯ ಹಾಗೆ ವರ್ತಿಸುತ್ತಿದ್ದೇವೆ...? ಬರೆದು ಕಳಿಸ್ತೀರಲ್ಲಾ..? ಆರೋಗ್ಯ ಜೋಪಾನ..... ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************