-->
ವಸುಧೇಂದ್ರರ ಏವರೆಸ್ಟ್  ಪುಸ್ತಕದ ಓದು - ಒಂದು ಅನುಭವ : ವಸಂತ ಕಜೆ

ವಸುಧೇಂದ್ರರ ಏವರೆಸ್ಟ್ ಪುಸ್ತಕದ ಓದು - ಒಂದು ಅನುಭವ : ವಸಂತ ಕಜೆ


                  ವಸುಧೇಂದ್ರರ ಏವರೆಸ್ಟ್ 
           ಪುಸ್ತಕದ ಓದು - ಒಂದು ಅನುಭವ.
                   ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವುದು ಹೇಗೆ....? ಓದುವುದು ಜನ್ಮಜಾತ ಅಭ್ಯಾಸವೇ.. ಬೆಳೆಸಿಕೊಳ್ಳಬಹುದಾದದ್ದೇ......? ಎಂಬುದು ನನ್ನ ಬೆಳೆಯುತ್ತಿರುವ ಮಕ್ಕಳನ್ನು ಪರಿಗಣಿಸಿ ನಾನು ಚಿಂತಿಸುತ್ತಿರುವ ವಿಚಾರ. ನನ್ನ ಮಗ ಸದ್ಯಕ್ಕೆ ಒಂಬತ್ತು ವರ್ಷದವ. ರಾಮಾಯಣ ಮಹಾಭಾರತ ಚಿತ್ರಕಥೆಗಳನ್ನು ಸಾಕಷ್ಟು ಓದಿದ್ದಾನೆ. ಆದರೆ ಈ ಅಭ್ಯಾಸವನ್ನು ಉಳಿಸಿಕೊಳ್ಳಲು, ನಿಧಾನವಾಗಿ ಪ್ರೌಢಪುಸ್ತಕಗಳನ್ನೂ ಓದುವಂತೆ ಭಡ್ತಿ ಪಡೆಯಲು ನಾನೇನು ಮಾಡಬೇಕು ಎಂದು ದಾರಿ ಹುಡುಕುತ್ತಿದ್ದೇನೆ. ಅವನು ಇತ್ತೀಚೆಗೆ ತೇಜಸ್ವಿಯವರ ಬೇಟೆ ಸಾಹಿತ್ಯದ ಎರಡು ಪುಸ್ತಕಗಳನ್ನು ಹೆಚ್ಚುಕಮ್ಮಿ ಇಡಿಯಾಗಿ ಓದಿದ್ದು ನನಗೆ ಅತೀವ ಸಂತಸ ಉಂಟುಮಾಡಿದೆ. ಗಂಡುಮಕ್ಕಳಿಗೆ ಗನ್ನು, ಬೇಟೆ, ಕೊಲೆ ಇತ್ಯಾದಿಗಳು ಸಹಜಾಸಕ್ತಿಯ ವಿಷಯಗಳಾದ್ದರಿಂದ ಅವನಿಗೆ ಮೃಗಯಾ ಸಾಹಿತ್ಯ ಹಿಡಿಸಿದೆ. ಸಾಹಸವೂ ಅವನಿಗೆ ಬಹಳ ಇಷ್ಟ - ಮಾಡುವುದು, ತಿಳಿಯುವುದು - ಎರಡೂ. ಹೆಚ್ಚಿನೆಲ್ಲ ಮಕ್ಕಳಿಗೂ ಹೀಗೇ ಇರುತ್ತದೆ. ಮುಖ್ಯವಾಗಿ ಗಂಡುಮಕ್ಕಳಿಗೆ.
       ಪರ್ವತಾರೋಹಣದ ಬಗ್ಗೆ ನಾನು ಅವನೊಂದಿಗೆ ಆಗಾಗ್ಯೆ ಚರ್ಚಿಸಿದ್ದೇನೆ. ಸುಮಾರು ಒಂದು ವರ್ಷ ಹಿಂದೆ ನಾವು ಒಟ್ಟಾಗಿ “ವರ್ಟಿಕಲ್ ಲಿಮಿಟ್” ಚಿತ್ರ ನೋಡಿದ್ದೆವು. ಅದು ಅವನಿಗೆ ಬಹಳ ಚೆನ್ನಾಗಿ ಅರ್ಥವಾಗಿತ್ತು. ಅದಕ್ಕೆ ಬೇಕಾದ ಪೂರಕವಿಚಾರಗಳನ್ನು - ಆಕ್ಸಿಜನ್ ಕೊರತೆಯ ಸಮಸ್ಯೆಗಳು - ಇತ್ಯಾದಿಗಳನ್ನು ನಾನು ಅವನಿಗೆ ಆಗಲೇ ವಿವರಿಸಿದ್ದೆ. ಈಗೆರಡು ವಾರಗಳ ಹಿಂದೆ ವಸುಧೇಂದ್ರ ಅನುವಾದಿತ ‘ಎವರೆಸ್ಟ್’ (Into thin air - John kraukar) ಪುಸ್ತಕವನ್ನು ಓದಿ ಹೇಳುವ ಪ್ರಯೋಗ ಮಾಡಿದೆ. ನಾನೂ ಪುಸ್ತಕ ಓದಿರಲಿಲ್ಲ. ನನಗೂ ಓದಿದಂತೆ ಆಗಿ ಒಂದು ಓದಿನಿಂದ ಇಮ್ಮಡಿ ಲಾಭವಾಯಿತು.
       ಈ ಅನುಭವ ಬಹಳ ಸ್ಮರಣೀಯವಾಯಿತು. ಇಡಿಯ ದಿನದಲ್ಲಿ ಸಮಯ ಸಿಕ್ಕಿದಾಗಲೆಲ್ಲ ಹತ್ತು ನಿಮಿಷ, ಅರ್ಧಗಂಟೆ - ಹೀಗೆ ತುಂಡುತುಂಡಾಗಿ ನಾಲ್ಕೈದು ಬಾರಿಯಂತೆ ಒಂದು ವಾರಕಾಲ ಓದಿ ಮುಗಿಸಿದೆವು. ಪುಸ್ತಕ ನಿಧಾನವಾಗಿ ವಿವರವಾಗಿ ಸಾಗುತ್ತದೆ. ಆರಂಭದಲ್ಲಿನ ಎವರೆಸ್ಟ್ ರೋಹಣದ ಹಣಕಾಸಿನ ಕೆಲವಿವರಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ (ಮಧ್ಯೆ ಅರ್ಧಪುಟದಷ್ಟಿರುವ ಅವನ ವಯಸ್ಸಿನ ಮೀರಿದ ಟೆಕ್ಸ್ಟ್) ಬಿಟ್ಟರೆ ಬಾಕಿ ಎಲ್ಲವನ್ನೂ ಅವನು ಆಸಕ್ತಿಯಿಂದ ಕೇಳಿಸಿಕೊಂಡ. ದುರಂತದ ಘಟನೆಗಳು ಕೊನೆಯ 50-75 ಪುಟಗಳಷ್ಟು ಇವೆ. ಜಾನ್ ಕ್ರೌಕರ್ ತುಂಬಾ ಪ್ರಾಮಾಣಿಕವಾಗಿ ಬರೆದಿದ್ದಾನೆ ಎಂದು ನನಗನಿಸಿತು. ಕೆಲವೊಮ್ಮೆ ಇತರರಿಗೆ ತಾನು ಸಹಾಯ ಮಾಡಿರಬೇಕಿತ್ತು ಎಂದು ಅನಿಸಿದ್ದನ್ನೂ ಅವನು ಮುಚ್ಚುಮರೆಯಿಲ್ಲದೆ ಹೇಳಿದ್ದಾನೆ. ಈ ದುರಂತದಲ್ಲಿ ಬದುಕುಳಿದು, ಅದರ ಬಗ್ಗೆ ಬರೆದು ವರ್ಷಗಟ್ಟಲೆ ಕಾಲ ಅದೆಷ್ಟು ತೀವ್ರ ಮಾನಸಿಕ ತುಮುಲ ಅನುಭವಿಸಬೇಕಾಯಿತು ಎಂದೆಲ್ಲ ಬರೆದದ್ದನ್ನು ಓದಿದರೆ ಈ ಆರೋಹಣವೂ ಅದರ ಪಶ್ಚಾತ್ಪರಿಣಾಮಗಳೂ ಅವನಿಗೆ ಅದೆಷ್ಟು ತೀವ್ರತರ ಒತ್ತಡ ಉಂಟು ಮಾಡಿರಬಹುದೆಂದು ನಮಗೆ ಆಶ್ಚರ್ಯವಾಗುತ್ತದೆ.
       ನಾನು ಮತ್ತು ಪ್ರಚೇತನಂತೂ ಜಾನ್, ರಾಬ್ ಹಾಲ್, ಫಿಷರ್, ಬೆಕ್ ವೆದರ್ಸ್, ಯಸುಕೋ ನಂಬಾ ಇವರೆಲ್ಲರೊಂದಿಗೆ ಒಂದುವಾರ ಕಾಲ ಸ್ವತಃ ಪ್ರವಾಸ ಮಾಡಿದಂತೆ ಒಟ್ಟಿಗೇ ಇದ್ದು, ಕೊನೆಕೊನೆಗೆ ಅವರ ಬಗ್ಗೆಯೇ ಚರ್ಚಿಸುತ್ತ ಇದ್ದುದರಿಂದ ಅವರೆಲ್ಲ ನಮಗೆ ತಿಳಿದವರೇ ಎಂಬಷ್ಟರಮಟ್ಟಿಗೆ ಪರಿಚಿತರಾಗಿಬಿಟ್ಟೆವು. ಆ ನಮ್ಮ ಸ್ನೇಹಿತರೆಲ್ಲ ಒಬ್ಬೊಬ್ಬರಾಗಿ ಸಾಯುತ್ತಾ ಬಂದರು. ರಾಬ್ ಹಾಲ್ ತನ್ನ ತಂಡದ ಸದಸ್ಯನೊಬ್ಬನ ಎವರೆಸ್ಟ್ ಕನಸನ್ನು ಈಡೇರಿಸಬೇಕೆಂಬ (ಮತ್ತು ಸಹಜವಾಗಿ ತನ್ನ ವ್ಯವಹಾರ ಯಶಸ್ವಿಗೊಳಿಸಬೇಕೆಂಬ) ಉದ್ದೇಶಕ್ಕಾಗಿ ತಾನು ಸಶಕ್ತನಾಗಿ ಬದುಕಿ ಬರುವ ಎಲ್ಲ ಸಾಧ್ಯತೆಗಳಿದ್ದರೂ ಕೊನೆಗೆ ಸಾಯುವುದು ನಮ್ಮನ್ನು ತೀವ್ರವಾಗಿ ಕಾಡುತ್ತದೆ. ನಾವಿಬ್ಬರಂತು ಇದನ್ನು ಬಹಳ ಚರ್ಚೆಮಾಡಿದೆವು. ಅವನ ಹೀರೋಯಿಸಂನ್ನು, ಒಳ್ಳೆಯತನವನ್ನು ಕೊಂಡಾಡಿದೆವು. ಅವನು ಕೊನೆಯ ಬಾರಿ ವಾಕಿಟಾಕಿಯಲ್ಲಿ ಮಾತನಾಡಿದಾಗ, ಆಮೇಲೆ ಸಂಪರ್ಕ ಸಿಗದಾಗ ನಮ್ಮ ಅವನ ಮಧ್ಯೆ ಇದ್ದ ಒಂದು ಕೊನೆಯ ಕೊಂಡಿ ಕಡಿದುಹೋದಂತೆ ಅನಿಸಿಬಿಡುತ್ತದೆ. ಯಸುಕೋ ‘ನನ್ನನ್ನು ಸಾಯಲು ಬಿಡಬೇಡಿ’ ಎಂದು ಕೊನೆಯ ಬಾರಿಗೆ ಕೋರಿಕೊಳ್ಳುವುದು, ಬೆಕ್ ಒಂದು ದಿನ ಹಿಮದಲ್ಲಿ ಕೋಮಾದಲ್ಲಿದ್ದು ಮತ್ತೆ ತಾನೇ ಎದ್ದು ಬರುವುದು - ಇವೆಲ್ಲ ನಮ್ಮ ಯೋಚನೆಗೆ, ಮಾತುಕತೆಗೆ ಎಷ್ಟೊಂದು ಆಹಾರ ಕೊಡುತ್ತವೆಂದರೆ - ನೀವೇ ನಿಮ್ಮ ಮಕ್ಕಳೊಂದಿಗೆ ಅನುಭವಿಸಬೇಕು. 
            ಎವರೆಸ್ಟ್ ಹತ್ತುವಂತಹ ನಿಷ್ಪ್ರಯೋಜಕ 
(I climb, because it is there) ಎನ್ನುವಂತಹ ಕೆಲಸಕ್ಕೆ ಮನುಷ್ಯ ಕೈಹಾಕುವುದೇಕೆ...? ಇದು ನಮ್ಮ ವಿಕಾಸಕ್ಕೆ ಹೇಗೆ ತಳುಕುಹಾಕಿದೆ....? ನಾವೇಕೆ ನಮ್ಮ ಸಾಮರ್ಥ್ಯದ ಮಿತಿಯನ್ನು ಪ್ರತಿಯೊಂದರಲ್ಲೂ ಮುಟ್ಟಲು ಮತ್ತು ಮೀರಲು ಪ್ರಯತ್ನಿಸುತ್ತೇವೆ....? (ಉದಾ: ತೋಟದಲ್ಲಿ ಬೇರೆ ಬೇರೆ ಅಗಲ - ಆಳಗಳ ಚರಂಡಿ ಹಾರುವಾಗಲೂ) ಎವರೆಸ್ಟ್ ಹತ್ತುವುದು ಅದರ ಒಂದು (ಕೇವಲ ಒಂದು) ಸಾಂಕೇತಿಕ, ಪ್ರತೀಕ ಮಾತ್ರ ಹೇಗೆ ಆಗಿದೆ...? ಇದರಂತೆ ಮನುಷ್ಯ ಬೇರೆಷ್ಟು ಹುಚ್ಚುತನಗಳನ್ನು ಮಾಡಿದ್ದಾನೆ?(Wing walking ನಂತಹವು - ಇದನ್ನು ನಾನು ಅವನೊಡನೇ ಆ ಮೊದಲೇ ಚರ್ಚಿಸಿದ್ದೆ) ; ಎವರೆಸ್ಟ್ ಹತ್ತುವ ಬ್ಯುಸಿನೆಸ್ ನಿಂದ ಹೇಗೆ ಅಲ್ಲಿನ ಜನಜೀವನ, ಪ್ರಕೃತಿ ಅಸ್ತವ್ಯಸ್ತಗೊಂಡಿದೆ...? ಈಗಿನ ಆಧುನಿಕ ಪರಿಕರಗಳೊಂದಿಗೆ ಹತ್ತುವುದಕ್ಕೂ ಹಿಂದೆ 1900 ಇಸವಿಯಲ್ಲಿ ಹತ್ತುವ ವಿಫಲಯತ್ನ ಮಾಡುತ್ತಿದ್ದವರ, ಯಶಸ್ವಿಯಾದ ಎಡ್ಮಂಡ್-ತೇನ್ಸಿಂಗ್ ಅವರ ಸಾಹಸಕ್ಕೂ ಫಲಿತ ಒಂದೇ ಆಗಿದ್ದರೂ ಸಾಹಸ ಪ್ರಮಾಣ ವ್ಯತ್ಯಾಸ ಎಷ್ಟೊಂದು ಅಗಾಧವಾಗಿದೆ ಮತ್ತು ಅತುಲ್ಯವಾಗಿವೆ.....? ಮನುಷ್ಯ ಸರ್ವೈವಲ್ ಪ್ರಶ್ನೆ ಬಂದಾಗ ಹೇಗೆ ಸ್ವಾರ್ಥಿಯಾಗುತ್ತಾನೆ....? ಆದರೂ ಅಂತಹ ಸ್ವಾರ್ಥ ತಪ್ಪೆಂದು ಹೇಳಲಾಗದಲ್ಲವೆ? ಎಂಬಿತ್ಯಾದಿ ನೂರಾರು ವಿಷಯಗಳನ್ನು ಅಲ್ಲಲ್ಲಿ ಪುಸ್ತಕದುದ್ದಕ್ಕೂ ಕನೆಕ್ಟ್ ಮಾಡುತ್ತ, ಅವನೊಂದಿಗೆ ಚರ್ಚಿಸುತ್ತ ಬಂದೆ. (ಇದು ಅತಿಯಾಗಲಿಲ್ಲವೆ ಎಂದು ಪಕ್ಕನೆ ಈ ಲೇಖನವನ್ನೋದುವ ನೀವು ಕೇಳುವ ಸಾಧ್ಯತೆಯಿದೆ. ನಾನು ಕಳೆದ ನಾಲ್ಕು-ಐದು ವರ್ಷಗಳಿಂದ ಪ್ರತಿದಿನ ಅವನೊಂದಿಗೆ ಸಾವಿರಾರು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ಬ್ರಿಕ್ ಬೈಬ್ರಿಕ್ ಇವನ್ನೆಲ್ಲ ಕಟ್ಟುತ್ತ ಬಂದಿದ್ದೇನೆ. ಒಂದೇ ಪುಸ್ತಕವನ್ನೋದಿ ಹೀಗೆಲ್ಲ ಮಕ್ಕಳೊಂದಿಗೆ ಮಾತನಾಡುವುದು ಸಾಧ್ಯವಿಲ್ಲ). ಮಕ್ಕಳಿಗೆ ವಿವರಿಸುವಾಗ ಅವರಲ್ಲಿ ಸಂಶಯವುಳಿಯದಂತೆ (ಸಂಶಯವೆಂದರೆ ಬರಿಯ factual ವಿಷಯಗಳ ಬಗ್ಗೆ ಅಲ್ಲ, ಅವರ ಮನಸ್ಸಿಗೆ ಸಮಾಧಾನ ಸಿಗುವಂತೆ ಕೊರತೆಯುಂಟಾಗದಂತೆ ವಿಷಯಗಳನ್ನು, ಚಿತ್ರವನ್ನು ಸಂಪೂರ್ಣಗೊಳಿಸಬೇಕಲ್ಲ - ಅದು) ವಿವರಿಸುವುದು ನನಗೆ ಬಹಳ ರಂಜನೀಯ ಅನುಭವ. ನಾನು ಅರ್ಥಮಾಡಿಕೊಂಡರಷ್ಟೇ ಅವರಿಗೆ ತಿಳಿಸಬಹುದಷ್ಟೆ? ಇದು ನನ್ನ ಅರ್ಥಗಾರಿಕೆಯನ್ನು ಸರಿಗೊಳಿಸುತ್ತದೆ.
        ಪುಸ್ತಕದ ಓದಿನ ಬಳಿಕ ನಾವು ಇದೇ ಘಟನೆಯ ಬಗೆಗಿನ ಸಿನಿಮಾವನ್ನೂ ನೋಡಿದೆವು. ಪುಸ್ತಕಕ್ಕೂ ಸಿನಿಮಾಕ್ಕೂ ಇರುವ ವ್ಯತ್ಯಾಸ ಇವನ್ನೆಲ್ಲ ಹೇಳಿ, ಪುಸ್ತಕದಲ್ಲಿ ಓದಿದ ಕಥೆಯನ್ನೇ ನಿರೀಕ್ಷಿಸಬೇಡ ಎಂದು ಹೇಳಿದ್ದೆ. ಸಿನಿಮಾ ನೋಡುವುದು ನನಗೆ ಪುಸ್ತಕದಷ್ಟು ಕನೆಕ್ಟ್ ಆಗಲಿಲ್ಲ. ಮುಖ್ಯವಾಗಿ ಅದರಲ್ಲಿ ಜಾನ್ ನನ್ನು ಸ್ವಲ್ಪ ಕೆಟ್ಟದಾಗಿ ಚಿತ್ರಿಸಿದಂತೆ ಅನಿಸಿತು. ಆದರೂ ವಿಶ್ಯುವಲ್ಸ್ ನಲ್ಲಿ ಪ್ರಚೇತನಿಗೆ ಎವರೆಸ್ಟ್ ನಿಜವಾಗಿಯೂ ಎಷ್ಟು ಕಷ್ಟಕರವಾಗಿದೆ ಎಂಬ ಚಿತ್ರಣ ಇನ್ನಷ್ಟು ಸ್ಪಷ್ಟವಾಗಿ ಸಿಕ್ಕಿತು. (ಸಿನಿಮಾ ಶೂಟಿಂಗ್ ಹಿಮಾಲಯದಲ್ಲಿ ನಡೆದೇ ಇಲ್ಲ - ಅದನ್ನೂ ಹೇಳಿದ್ದೆ). 
       ಒಟ್ಟಿನಲ್ಲಿ ಇದೊಂದು ಅದ್ಭುತ ಅನುಭವ. ನಿಮ್ಮ ಮಕ್ಕಳೊಂದಿಗೆ ಇದನ್ನು ಪುನರಾವರ್ತಿಸಿಕೊಳ್ಳುವುದು ಸಾಧ್ಯ, ಆದರೆ ಅಷ್ಟೊಂದು ಸುಲಭವಲ್ಲ. ಪ್ರತಿದಿನ ಒಂದೊಂದು ವಿಷಯದ ಬಗ್ಗೆ ನಾನು ಪ್ರಚೇತನೊಂದಿಗೆ ಚರ್ಚಿಸುತ್ತ ಬಂದಿದ್ದೇನೆ. ವಿಷಯ ಯಾವುದಾದರೂ ಆಗಬಹುದು, ಆದರೆ ಅವರೊಂದಿಗೆ ಮೊದಲಾಗಿ ಕನೆಕ್ಟ್ ಆಗಲು ಕಲಿಯಬೇಕು. ನಾನಂತೂ Electric Transformer, ಎಕೆ 47 ರೈಫಲ್, ಸೆಂಟ್ರಿಫ್ಯುಗಲ್ ಪಂಪ್, ಮನುಷ್ಯನ ಹೃದಯ, ಕಶೇರುಕ, ಅಕಶೇರುಕ, ವರ್ಲ್ಡ್ ವಾರ್, ಅಟಮ್ ಬಾಂಬ್, ಡೈನೋಸಾರ್, ಭೂಖಂಡಗಳ ಅಲೆತ - ಹೀಗೆ Everything under sun - ಅಕ್ಷರಶಃ ದಿನಕ್ಕೆ ಒಂದರಂತೆ ವಿಷಯವನ್ನು ಆಯ್ದು ಮಕ್ಕಳೊಂದಿಗೆ ನಾವು ಚರ್ಚಿಸಬೇಕು. ಇದು ಅಷ್ಟೊಂದು ಸುಲಭವಿಲ್ಲ. ಪಂಪ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಸಲು ನೀವು ಸ್ಟ್ರಾ ಹೇಗೆ ಜ್ಯೂಸ್ ಎಳೆಯುತ್ತದೆ ಎಂಬುದನ್ನು ತಿಳಿಸಬೇಕು. ಪಂಪ್ ಒಮ್ಮೊಮ್ಮೆ ನೀರು ಎಳೆಯದಾದಾಗ ನಾವೇಕೆ ಕೊಡಪಾನದಲ್ಲಿ ನೀರು ತುಂಬಿಸುತ್ತೇವೆ ಎಂದು ಮತ್ತೆ ಜ್ಯೂಸ್, ಸ್ಟ್ರಾ ಮೂಲಕ ತಿಳಿಸಬೇಕು. ಸ್ಟ್ರಾದಲ್ಲಿ ಒಂದು ತೂತು ಜ್ಯೂಸಿನ ಲೆವೆಲ್ ಗಿಂತ ಮೇಲಿದ್ದರೆ ಅದು ಏಕೆ ನೀರು ಎಳೆಯದು ಎಂಬುದನ್ನು ಹೇಳಬೇಕು. ಹೀಗೆ ಊರೆಲ್ಲ ಸುತ್ತು ಹಾಕಿ ವ್ಯಾಕ್ಯೂಮ್ ಎಂಬ ಶಬ್ದ ಬಳಸದೆ ವ್ಯಾಕ್ಯೂಮ್ ನ ತತ್ವವನ್ನು ತಿಳಿಸಬೇಕು. ಟ್ರಾನ್ಸ್ ಪಾರ್ಮರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಲು ಹೇಗೆ ರಾಷ್ಟ್ರೀಯ ಹೆದ್ದಾರಿ-ರಾಜ್ಯ ಹೆದ್ದಾರಿ-ಡಾಮರು ರಸ್ತೆ-ಕಾಲು ದಾರಿಗಳಾಗಿ ಒಡೆಯುತ್ತದೆ ಎಂಬುದನ್ನು ತಿಳಿಸಬೇಕು (ವೋಲ್ಟೇಜ್ ಬಗ್ಗೆ ಮಾತನಾಡಲೇಬಾರದು). ಅಂದರೆ ಮಕ್ಕಳಿಗೆ ಹೇಳಬೇಕಿದ್ದರೆ ನಾವು ಮೊದಲಾಗಿ ವಿಷಯವಸ್ತುಗಳ ‘ತತ್ವ’ವನ್ನು ಅರ್ಥಮಾಡಿಕೊಳ್ಳಬೇಕು. ಇದು ಬಹಳ ಇಂಟರೆಸ್ಟಿಂಗ್ ಛಾಲೆಂಜ್. ನನಗೆ ನಿಜಕ್ಕೂ ಸೆಂಟ್ರಿಫ್ಯುಗಲ್ ಪಂಪ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದೇ ಇರಲಿಲ್ಲ. ಅವನಿಗೆ ವಿವರಿಸಲೆಂದು ಓದಿದಾಗ ತಿಳಿಯಿತು. ಕೋಳಿಯನ್ನು ಕಡಿಯುವ ಮೊದಲು ಪುಕ್ಕ ತೆಗೆಯಲು ಒಂದು ಮೆಶಿನ್ ಒಳಗೆ ಹಾಕಿ ಗಿರಗಿರ ತಿರುಗಿಸುತ್ತಾರೆ, ಆಗ ಅದರ ಮೈ ಹೊರಗೋಡೆಗೆ ಉಜ್ಜಿ ಪುಕ್ಕ ಉದುರುತ್ತದೆ ಎಂದು ನಾನು ಅವನಿಗೊಮ್ಮೆ ವಿವರಿಸಿದೆ. ‘ಹಾ! ಸೆಂಟ್ರಿಫ್ಯುಗಲ್ ಫೋರ್ಸ್’ ಎಂದು ಅವನಂದ. ನನಗೆ ಜಗತ್ತನ್ನೇ ಗೆದ್ದಷ್ಟು ಆನಂದವಾಯಿತು! ಅದು ಅನಿರ್ವಚನೀಯ.         
.............................................ವಸಂತ ಕಜೆ
ಕಜೆ ವೃಕ್ಷಾಲಯ
ಅಂಚೆ ಮಂಚಿ
ಪಿನ್ 574323
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article