-->
ಜೀವನ ಸಂಭ್ರಮ - ಸಂಚಿಕೆ : 14

ಜೀವನ ಸಂಭ್ರಮ - ಸಂಚಿಕೆ : 14

             
                       ಮೊಬೈಲ್ ಗೀಳು
                    ..….........................
        ಒಂದು ನಗರದ ಬಾಡಿಗೆ ಮನೆಯಲ್ಲಿ ಲೋಕೇಶ ವಾಸವಾಗಿದ್ದನು. ಇವನು ಸರ್ಕಾರಿ ಅಧಿಕಾರಿ. ಇವನ ಪತ್ನಿ ಲಲಿತ, ಸ್ಥೂಲಕಾಯ, ರಕ್ತದೊತ್ತಡ ಸಮಸ್ಯೆ ಬೇರೆ ಇತ್ತು. ಪತ್ನಿಗೆ ಟಿವಿ, ಮೊಬೈಲ್ ಎಂದರಾಯ್ತು ಪಂಚಪ್ರಾಣ. ಇದನ್ನು ಬಳಸ ಬೇಕಾದರೆ ಸಮಯದ ಅರಿವೇ ಇಲ್ಲ. ಬೆಳಗ್ಗೆ ಪತಿ ಬೇಗನೆ ಎದ್ದು, ವಾಯುವಿಹಾರಕ್ಕೆ ಹೋಗಿ ಬರುವ ವೇಳೆಗೆ , ಹಾಸಿಗೆಯಿಂದ ಎದ್ದೇಳುವುದು ವಾಡಿಕೆ. ನಂತರ ಗಡಿಬಿಡಿಯಲ್ಲಿ ತುರ್ತಾಗಿ ತಿಂಡಿ ಮಾಡುವುದು. ತಿಂಡಿ ಮಾಡುವಾಗಲೂ ಮೊಬೈಲ್ ಕಿವಿಯಲ್ಲಿ ಇರಬೇಕು, ಮಾತನಾಡುತ್ತಲೇ ಇರಬೇಕು. ಊಟ - ತಿಂಡಿ ಮಾಡಿದ ತಟ್ಟೆಯ ಕತೆ - ಅಷ್ಟೇ. ಸಂಜೆ ಸಮಾಧಾನವಾಗಿದ್ದರೆ ತಟ್ಟೆ , ಲೋಟ ಮತ್ತು ಪಾತ್ರೆ ಶುಚಿ. ಇಲ್ಲದಿದ್ದರೆ ಇಲ್ಲ. ಮಾಲ್ ಗೆ ಮನೆಬಳಕೆ ಸಾಮಗ್ರಿಗಳು ತರಲು ಹೋದರೆ , ದಿನಬಳಕೆ ಸಾಮಾಗ್ರಿಗಿಂತ ಆಕರ್ಷಕವಾದ, ಬೇಡದ ವಸ್ತುಗಳೇ ಬೇಕು. ಮೊಬೈಲ್ , ಟಿವಿಯಲ್ಲಿ ಏನೇನು ಪ್ರಕಟಣೆ ಬರುತ್ತೋ ಅದೆಲ್ಲ ಬೇಕು. ತಂದ ಸಾಮಗ್ರಿಗಳನ್ನು ಸುಂದರವಾಗಿ ಜೋಡಿಸಲು ಪುರುಸೊತ್ತಿಲ್ಲ. ಇನ್ನು ನೆಲ ಸ್ವಚ್ಚ ಮಾಡುವುದು ಅಪರೂಪ. ಬಟ್ಟೆ ತೊಳೆಯೋದಕ್ಕೆ ವಾಷಿಂಗ್ ಮಿಷನ್ ಇದ್ದರೂ ಸಮಯ ಸಿಕ್ಕವುದಿಲ್ಲ. ಇದನ್ನೇನಾದರೂ ಪತಿ ಪ್ರಶ್ನಿಸಿದರೆ ಜಗಳ ರಾದ್ಧಾಂತ. ತನ್ನ ತಪ್ಪನ್ನು ಪದೇ ಪದೇ ಹೇಳಿ ಅದರಲ್ಲಿರುವ ತಪ್ಪನ್ನು ಮಗನಿಗೋ ಪತಿಗೋ ಹೊರಿಸುವುದು , ನನಗೆ ಬಿಪಿ ಜಾಸ್ತಿ ಆಯ್ತು ಎಂದು ಗೋಳಿಡುವುದು ಮಾಮೂಲಿ. ಹೊರಗಿನವರು ಮನೆಗೆ ಬಂದರೆ ಅವರಿಗೆ ತನ್ನ ಬಿಪಿ , ಆಯಾಸದ ಕಥೆಯನ್ನು ವರ್ಣರಂಜಿತವಾಗಿ ಹೇಳಿ ಕನಿಕರ ಬರುವಂತೆ ಮಾಡುತ್ತಾಳೆ.  
         ಈಕೆಯ ತಾಯಿ ತನ್ನ ಸೊಸೆಯರ ತಪ್ಪನ್ನು ಗುರುತಿಸಿ , ತಕ್ಷಣ ಮಗಳಿಗೆ ಮೊಬೈಲ್ ನಲ್ಲಿ ಹೇಳಿ ಸಮಾಧಾನ ಪಟ್ಟುಕೊಳ್ಳುವುದು. ಸಂಬಂಧಿಗಳಿಗೆ ಸರದಿಯಂತೆ ಫೋನ್ ಮಾಡಿ , ಇವರ ತಪ್ಪುಗಳನ್ನು ಅವರಿಗೆ, ಅವರ ತಪ್ಪುಗಳನ್ನು ಇವರಿಗೆ ಹೇಳುವುದು. ಇದಲ್ಲದೆ ತನ್ನ ಬಗ್ಗೆ ಯಾರು ಏನು ಹೇಳಿದರು ಎಂದು ಅನುಮಾನ ಬೇರೆ. ಅವರೇನಾದರೂ ಹೊಗಳಿದರೆ ಸಂತೋಷ , ತೆಗಳಿದರೆ ಅವರ ತಪ್ಪುಗಳನ್ನು ಇನ್ನೊಬ್ಬರಿಗೆ ವರದಿ. ಹೀಗೆ ನಕಾರಾತ್ಮಕ ಕೆಲಸದಲ್ಲಿ ತೊಡಗಿರುವಾಗ ಮನೆ ಸಾಮಾನುಗಳ ಜೋಡಣೆ, ಶುಚಿಯಾಗಿಡಲು, ಅಂದವಾಗಿಡಲು ಪುರುಸೊತ್ತಿಲ್ಲ , ಜೊತೆಗೆ ಮನಸ್ಸನ್ನೂ ಕೂಡಾ.....!!! 
          ಈ ಘಟನೆ ಓದಿದ ನಂತರ ಕಲಿಯಬೇಕಾದದ್ದು ಏನು....? 
     ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವುದು ಮಾನವನ ಸುಖಕ್ಕಾಗಿ. ಅದು ನಮ್ಮನ್ನು ಆಳಬಾರದು. ಅದು ನಮ್ಮ ಸೇವಕನೇ ಆಗಿರಬೇಕು. ನಮಗೆ ಸಹಾಯ ಮಾಡಬೇಕು. ಅದು ನಮ್ಮ ಗುರಿ ಸಾಧನೆಗೆ, ಸಂತೋಷದ ಜೀವನಕ್ಕೆ , ಅಡ್ಡಿಬರಬಾರದು. ಹಾಗಾದರೆ ಇದನ್ನು ಹೇಗೆ ಬಳಸಬೇಕು
       ಮೊಬೈಲ್ ,ಟಿವಿಯಲ್ಲಿ ಬರುವುದೆಲ್ಲ ಸತ್ಯವಲ್ಲ. ಆಯ್ಕೆ ನಮ್ಮ ಕೈಯಲ್ಲಿದೆ. ನಮ್ಮ ಜೀವನಕ್ಕೆ, ಬುದ್ಧಿಗೆ, ಜ್ಞಾನಕ್ಕೆ ಅಗತ್ಯವಾದುದನ್ನು ಆಯ್ಕೆಮಾಡಿಕೊಳ್ಳಬೇಕು. ಅದನ್ನು ಬರೆದವರಾರು , ಹೇಳುವವರಾರು , ಅವರ ಸಾಧನೆ ಏನು, ಎನ್ನುವುದರ ಆಧಾರದ ಮೇಲೆ ಆಯ್ಕೆಮಾಡಿಕೊಳ್ಳಬೇಕು. ಬೇಡದ ಆಕರ್ಷಕ , ನಕಾರಾತ್ಮಕ ಅಂಶಗಳ ಕಡೆ ಗಮನ ನೀಡಬಾರದು.       
      ದೈನಂದಿನ ಗುರಿಗಳು ಜೊತೆಗೆ, ಪ್ರತಿದಿನ ಮಾಡಲೇಬೇಕಾದ ಒಳ್ಳೆಯ ಕೆಲಸಗಳ ಪಟ್ಟಿಯನ್ನು ಮಾಡಿಕೊಳ್ಳಬೇಕು. ಅದೇ ದಿನ ಆ ಕೆಲಸಗಳನ್ನು ಮಾಡಿ ಮುಗಿಸಬೇಕು.
        ಮೊಬೈಲ್ , ಟಿವಿ ಬಳಕೆಗೆ ಸಮಯ ನಿಗದಿ ಮಾಡಬೇಕು. ಅದೇ ಸಮಯದಲ್ಲಿ ಬಳಸಬೇಕು.
      ನಮ್ಮ ಪರಿಸರದಲ್ಲಿ ಶೇಕಡ 92ರಷ್ಟು ನಕಾರಾತ್ಮಕ ಅಂಶಗಳು ತುಂಬಿದ್ದು, ನಮ್ಮ ಮೇಲೆ ಪ್ರಭಾವ ಬೀರುವುದರಿಂದ ನಾವು ಒಳ್ಳೆಯದನ್ನೇ, ಸುಂದರವಾದುದನ್ನೇ, ಕೇಳಬೇಕು, ನೋಡಬೇಕು ಮತ್ತು ಮಾತನಾಡಬೇಕು.
        ಇನ್ನೊಬ್ಬರ ತಪ್ಪನ್ನು ಗುರುತಿಸದೆ ಒಳ್ಳೆಯದನ್ನು ಗುರುತಿಸಿ ಅಭಿನಂದಿಸಬೇಕು , ಇದರಿಂದ ಇಬ್ಬರಿಗೂ ಸಂತೋಷ ಹಾಗೂ ಸಂಬಂಧ ಗಟ್ಟಿಯಾಗುತ್ತದೆ.
          ಈ ಕ್ರಮಗಳನ್ನು ಅನುಸರಿಸಿದರೆ ನಾವು ನಮ್ಮ ಗುರಿ ತಲುಪಿ, ಸಂಭ್ರಮದ ಜೀವನ ನಡೆಸಬಹುದು. ಸುಖಕರವಾದ , ಸಂತೋಷ ಭರಿತ ಬದುಕಿಗೆ ಎಲ್ಲರೂ ಪ್ರೇರಕರಾಗೋಣ....!
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article