-->
ಸ್ಪೂರ್ತಿಯ ಮಾತುಗಳು : ರಮೇಶ್ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ್ ಎಂ. ಬಾಯಾರು


                        ಬೆಳಕಿನ ಆದರ್ಶ
                  -----------------------
         ದೀಪವು ಬೆಳಕಿನ ಮೂಲ. ದೀಪವಿಲ್ಲದ ಬಾಳ್ವೆ ಅಸಹನೀಯ. ಹಗಲು ಸೂರ್ಯನ ಬೆಳಕು ಎಲ್ಲ ಜೀವಿಗಳಿಗೆ ಮತ್ತು ಸಸ್ಯಗಳಿಗೆ ಚೇತೋಹಾರಿಯಾಗಿದೆ. ಸಸ್ಯಗಳು ನಮಗೆ ಒದಗಿಸುವ ಆಹಾರಕ್ಕೂ ಸೂರ್ಯನ ಶಾಖ ಅತೀ ಅಗತ್ಯ. ಹಾಗಾಗಿ ಬೆಳಕಿರದಿದ್ದರೆ ಆಹಾರವಿರದಲ್ಲವೇ...? ಗಾಳಿಯ ಚಲನೆ, ಜಲಮೂಲವಾದ ಮಳೆಯ ಅವತರಣ ಮುಂತಾದುವುಗಳ ಮೇಲೆ ಸೂರ್ಯನೇ ನಿಯಂತ್ರಣವುಳ್ಳವನು. ಜಗದಗಲಕ್ಕೂ ಸೂರ್ಯನ ಬೆಳಕು ಸಮಾನವಾಗಿ ಹಂಚಿಕೆಯಾಗುತ್ತದೆ. ಸೂರ್ಯನು ತನ್ನ ಬೆಳಕನ್ನು ಯಾವುದೇ ಒಂದು ವಿಭಾಗಕ್ಕೆ ಮೀಸಲಾಗಿಡುವುದಿಲ್ಲ. ಅಂತಹ ಆದರ್ಶ ಮತ್ತು ಉದಾರತೆ ಸೂರ್ಯನದು. ಆತ ಸೂಸುವ ಕಿರಣಗಳೂ ನೇರವಾಗಿರುತ್ತವೆ. ಎಲ್ಲೂ ವಕ್ರತೆಯಿರದ ಕಿರಣಗಳವು. ವಕ್ರವಾಗಿರದೆ ಜಗತ್ತಿಗೇ ಬೆಳಕು ನೀಡಿ ಎಲ್ಲರನ್ನೂ ಎಲ್ಲವನ್ನೂ ಬೆಳಗಿಸಬೇಕೆಂಬ ಆದರ್ಶ ನೇಸರನದು. ಜಾತಿ - ಮತ, ಬಡವ - ಬಲ್ಲಿದ, ಆ ವರ್ಣ- ಈ ವರ್ಣ, ಏರು –ಪೇರು ಇದಾವುದನ್ನೂ ನೋಡದ ಸಮಾನತೆಯ ಹರಿಕಾರ ಸೂರ್ಯ. ತನ್ನ ಕೆಲಸಕ್ಕೆ ಸೂರ್ಯನಿಗೆ ಸಿಗುವ ಪ್ರತಿಫಲ ಶೂನ್ಯ ಮತ್ತು ನಿಂದನೆಯೇ ಅಧಿಕ. ಸೂರ್ಯ ಕಿರಣಗಳು ಉತ್ತಮ ಉದ್ದೇಶದಿಂದಲೇ ಖಾರವಾಗುತ್ತವೆ. ಭೂಮಿಯ ಮೇಲಿರುವ ರೋಗಾಣುಗಳು ಸಾಯಲು ಬಿಸಿಲು ಝಳಗೊಳ್ಳಲೇಬೇಕು. ನೀರು ಆವಿಯಾಗಿ ಮೋಡವಾಗಲು ಮತ್ತು ಮಳೆ ಬರಲು ಸೂರ್ಯಕಿರಣ ಪ್ರಖರವಾಗಲೇ ಬೇಕು. ಆದರೆ ನಾವು, “ಅಯ್ಯೋ ಸೂರ್ಯನ ಶಾಖವೇ” ಎಂದು ನಿಂದಿಸುತ್ತೇವೆ. ಅವನ ಪ್ರಖರತೆ ನಮಗೆ ತೀವ್ರವಾಗಿ ಅನುಭವಕ್ಕೆ ಬರುವಂತೆ ನಿಸರ್ಗವನ್ನು ಹಾಳು ಮಾಡಿರುವುದು ನಾವೇ ತಾನೇ? ಓಝೋನ್ ಪದರ ದುರ್ಬಲವಾಗಲು ನಾವೇ ಕಾರಣರಾದರೂ ನಾವು ಬೈಯುವುದು ಉಪಕಾರಿಯಾದ ಸೂರ್ಯನನ್ನು ತಾನೇ? ನಿಜವಾಗಿಯೂ ನಾವು ನಮ್ಮನ್ನು ಬೈಯಬೇಕಲ್ಲವೇ? ನೇಸರನ ವಕ್ರರಾಹಿತ್ಯ ಗುಣ ನಮ್ಮಲ್ಲಿ ಬಲವಾಗಬೇಕು. ಅವನ ಸಮಾನತಾ ಸಿದ್ಧಾಂತ ನಮ್ಮ ಬದುಕಾಗಬೇಕು. ಸೂರ್ಯನ ಲೋಕೋಪಕಾರೀ ಆದರ್ಶ ನಮ್ಮಲ್ಲಿ ನೆಲೆಯಾಗಬೇಕು.
          ರಾತ್ರಿಯ ಬೆಳಕಿನ ಮೂಲ ಚಂದ್ರನಾದರೂ ಆತ ಪಕ್ಷಪಾತಿ. ಶುಕ್ಲ ಪಕ್ಷದಲ್ಲಿ ಮಾತ್ರ ಕಾಣಿಸಿಕೊಳ್ಳುವ ಆತ ನಮಗೆ ಬೇಕಷ್ಟು ಬೆಳಕನ್ನು ಆ ಪಕ್ಷದಲ್ಲೂ ನೀಡಲಾರ, ಪೂರ್ಣಚಂದ್ರನ ಬೆಳಕಿದ್ದರೂ ಅದು ಮಂದ. ಅದಕ್ಕಾಗಿ ನಾವು ಕೃತಕ ದೀಪಗಳನ್ನು ಹಚ್ಚುತ್ತೇವೆ. ಹಿಂದೆ ಎಣ್ಣೆ ದೀಪಗಳು ಮಾತ್ರವೇ ಇದ್ದುವು. ಇಂದು ಜಗಮಗಿಸುವ ವಿದ್ಯುತ್ ಬಲ್ಬುಗಳನ್ನೂ ಬೇಕಾ ಬಿಟ್ಟಿಯಾಗಿ ಬಳಸುವೆವು. ಎಣ್ಣೆಯ ದೀಪ ಮೇಲ್ಮುಖವಾಗಿ ಉರಿದುಕೊಂಡು ತನ್ನ ನೇರ ಬೆಳಕನ್ನು ಎಲ್ಲರಿಗೂ ಸಿಗುವಂತೆ ಮಾಡುತ್ತದೆ. ತನ್ನ ಬುಡ ಕತ್ತಲಾದರೂ ಅಡ್ಡಿಯಿಲ್ಲ ಎಂಬ ದೀಪದ ನಿಸ್ವಾರ್ಥ ಭಾವನೆ ನಮಗೆ ಆದರ್ಶ. ಬಹಳ ದೂರದಲ್ಲಿರುವವರಿಗೂ ತನ್ನಿಂದ ಉಪಕಾರವಾಗಬೇಕೆಂಬ ದೀಪದ ಧ್ಯೇಯ ಅನುಸರಣೀಯ. ಬೆಳಕನ್ನು ನಿಸ್ವಾರ್ಥವಾಗಿ ವಿದ್ಯುತ್ ಬಲ್ಬುಗಳೂ ನೀಡುತ್ತವೆ. ಯಾವುದೇ ಹಮ್ಮು ಬಿಮ್ಮಿರದೆ ಸದಾ ಜನರೊಳಿತಿಗಾಗಿ ಬದ್ಧವಾಗಿರುವ ಎಲ್ಲ ದೀಪಗಳೂ ನಮ್ಮ ಬದುಕಿಗೆ ಪ್ರೇರಣಾದಾಯಿ. ಬದುಕು ಹೀಗಿದ್ದರೆ ಅಂದ ಎಂದು ಸಾರುವ ದೀಪಗಳನ್ನು ನಮ್ಮ ಬದುಕಿನ ದರ್ಶನವನ್ನಾಗಿರಿಸಿಕೊಳ್ಳೋಣ.
.............................ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
******************************************


Ads on article

Advertise in articles 1

advertising articles 2

Advertise under the article