-->
ಅಕ್ಕನ ಪತ್ರ - 12

ಅಕ್ಕನ ಪತ್ರ - 12

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 12


ನಮಸ್ಕಾರ ನನ್ನ ಪ್ರೀತಿಯ ಪುಟಾಣಿ ಓದುಗ ಮಿತ್ರರಿಗೆ....      
        ಪ್ರತಿಯೊಂದು ಪತ್ರವನ್ನೂ ಓದುವ ನಿಮ್ಮ ಪ್ರೀತಿ, ಕುತೂಹಲ ನೀವು ಬರೆಯುವ ಉತ್ತರಗಳ ಸಾಲುಗಳಲ್ಲಿ ಅನಾವರಣಗೊಳ್ಳುತ್ತಿವೆ. ಜಗಲಿಯ ಹಿರಿಯ ಕಿರಿಯರ ಭಾವನೆಗಳ ಕೊಡು ಕೊಳ್ಳುವಿಕೆ ಮೌನವಾಗಿ ಗಾಢ ಬಾಂಧವ್ಯವನ್ನೂ ಬೆಳೆಸುತ್ತಿದೆ. ಇಂತಹ ಒಡನಾಟವೇ ಚಂದ ಅಲ್ವಾ..! ಎಲ್ಲೋ ಇರುವ ನಾವು ನೀವೆಲ್ಲಾ ಜಗಲಿಯಲ್ಲಿ ಒಂದಾಗಿ ಸಂಭ್ರಮಿಸುತ್ತಿದ್ದೇವೆ. ಕಲಿಯುತ್ತಾ ಬೆಳೆಯುತ್ತಿದ್ದೇವೆ.. ಬೆಳೆವ ಹಾದಿಯಲ್ಲಿ ಹಿರಿಯರ ನಡೆ ನುಡಿಗಳನ್ನು ಆದರ್ಶ ವಾಗಿಟ್ಟುಕೊಳ್ಳುತ್ತೇವೆ.
       ನಾನು ಕೇಳಿದ ಒಂದು ಕಥೆಯನ್ನು ನಿಮ್ಗೆ ಹೇಳ್ಬೇಕು. ಹಕ್ಕಿ ಕಥೆ. ಚೆನ್ನಾಗಿದೆ.‌ ಉತ್ತರ ಧ್ರುವದಲ್ಲಿ ತುಂಬಾ ಚಳಿ. ಅಬ್ಬಾ! ಚಳಿಗಾಲದಲ್ಲಿ ನೀರು ಮಂಜುಗಡ್ಡೆಯಾಗ್ತದೆ..! ಅಲ್ಲೊಂದು ಹಕ್ಕಿಗಳ ಸಂಸಾರ. ಚಳಿ ತೀವ್ರವಾದಾಗ ಪ್ರತಿ ವರ್ಷವೂ ಈ ಹಕ್ಕಿಗಳು ಭೂ ಪ್ರದೇಶಕ್ಕೆ ವಲಸೆ ಹೋಗ್ತವಂತೆ. ಅದೊಂದು ಚಳಿಗಾಲ. ಇನ್ನು ಅಲ್ಲಿ ಬದುಕುವುದು ಕಷ್ಟ ಅಂತಾ ಹಕ್ಕಿಗಳಿಗೆ ಗೊತ್ತಾಯ್ತು. ಮರುದಿನ ಎಲ್ಲರೂ ಬೆಚ್ಚಗಿನ ಪ್ರದೇಶಕ್ಕೆ ‌ಹೋಗುವುದೆಂದು ತೀರ್ಮಾನಿಸಿದ್ರು. ಆ ಬಳಗದಲ್ಲೊಂದು ಪುಟಾಣಿ ಹಕ್ಕಿ.ತುಂಬಾ ಹಠಮಾರಿ ಅದು! 'ನಾನು ಇಲ್ಲೇ ಉಳಿದುಕೊಳ್ತೇನೆ' ಅಂತಾ ಒಂದೇ ಸಮನೆ ಮೊಂಡುತನ ತೋರಿತು'. 'ನೀನು ಇಲ್ಲೇ ಇದ್ರೆ ಸತ್ತು ಹೋಗ್ತೀಯಾ.. ನಮ್ಮ ಜೊತೆ ಬಾ' ಎಂದು ಹಿರಿಯ ಹಕ್ಕಿಗಳು ಎಷ್ಟು ಕರೆದರೂ ಹಕ್ಕಿ ಮರಿ ಮಾತ್ರ ಹೊರಡಲೇ ಇಲ್ಲ.
       ಸರಿ. ಉಳಿದ ಹಕ್ಕಿಗಳು ಹೊರಟೇ ಬಿಟ್ಟವು. ಈ ನಮ್ಮ ಪುಟ್ಟ ಹಕ್ಕಿ ಎರಡು ದಿನ ಹೇಗೋ ಸುಧಾರಿಸಿಕೊಂಡಿತು. ಮೂರನೇ ದಿನ ಬಂದಾಗ, ಇನ್ನು ಇಲ್ಲಿ ಬದುಕೋದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡು ಹಾರುವ ಯೋಚನೆಯನ್ನು ಮಾಡಿತು. ಎಲ್ಲಿಗೆ ಹೋಗಬೇಕು , ಯಾವ ದಾರಿ..? ಏನೂ ಗೊತ್ತಾಗಲಿಲ್ಲ ಹಕ್ಕಿ ಮರಿಗೆ. ದೊಡ್ಡವರು ಇರ್ತಿದ್ರೆ ಮಾರ್ಗದರ್ಶನ ಮಾಡ್ತಾ ಇದ್ರು! ಸ್ವಲ್ಪ ದೂರ ಹಾರುತ್ತಾ ಹೋದಂತೆ ಮಂಜಿನ ಹನಿಗಳು ರೆಕ್ಕೆಯ ಮೇಲೆ ಬಿದ್ದು ಗಟ್ಟಿಯಾಗತೊಡಗಿತು. ರೆಕ್ಕೆ ಭಾರ ಆಯ್ತು. ಹಾರೋದಕ್ಕೆ ಕಷ್ಟ ಎನಿಸಿ, ಇನ್ನೇನು ಅಲ್ಲೇ ಬಿದ್ದು ಬಿಡ್ತೇನೆ ಅಂದುಕೊಳ್ಳುವಾಗ ತುಸು ದೂರದಲ್ಲಿ ಭೂ ಪ್ರದೇಶ ಕಾಣಿಸಿತು.
       ಗಟ್ಟಿ ಮನಸು ಮಾಡಿ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಹಕ್ಕಿ ಮರಿ ಜೋರಾಗಿ ಹಾರಿತು. ಎಲ್ಲೋ ಒಂದು ಕಡೆ ಬದುಕಿದರಾಯಿತು ಎಂದುಕೊಂಡು ಭೂಮಿಗೆ ಬಿದ್ದುಬಿಟ್ಟಿತು. ಅದು ಅಲ್ಲಿಯ ರೈತನೊಬ್ಬನ ಮನೆಯ ಹಿತ್ತಿಲು. ಪೂರ್ತಿ ಬೆಳಗಾಗಿರಲಿಲ್ಲ. ರೈತನ ಹೆಂಡತಿ ಹಟ್ಟಿಯನ್ನು ಸ್ವಚ್ಛಗೊಳಿಸಿ ಒಂದು ಬುಟ್ಟಿ ಸೆಗಣಿಯನ್ನು ತಂದು ಹಿತ್ತಲಲ್ಲಿ ಸುರಿದಳು. ಅದು ಈ‌ ಹಕ್ಕಿಯ ಮೇಲೆ ಬಿತ್ತು. ಮೊದಲೇ ಅರ್ಧ ಜೀವವಾಗಿದ್ದ ಹಕ್ಕಿಗೆ ಉಸಿರು ಕಟ್ಟಲಾರಂಭಿಸಿತು. ಹೇಗೋ ಕೊಕ್ಕಿನಿಂದ ಸ್ವಲ್ಪ ಜಾಗ ಮಾಡಿಕೊಂಡು ಹೊರಗೆ ಇಣುಕಿತು. ಅಬ್ಬಾ! ಕೊರೆಯುವ ಚಳಿಯಲ್ಲಿದ್ದ ಹಕ್ಕಿಗೆ ಸೆಗಣಿ ಬಿಸಿ ನೀಡಿತು. ಹಿತವಾದ ತಂಗಾಳಿ ಮನಸಿಗೆ ಮುದ ಕೊಟ್ಟಿತು. ಬಹಳ ಖುಷಿಯಿಂದ ಹಕ್ಕಿ ಮರಿ ಸಣ್ಣಗೆ ಹಾಡತೊಡಗಿತು. ಅದೆಲ್ಲಿತ್ತೋ. ರೈತನ ಮನೆಯ ಬೆಕ್ಕು ಈ ಧ್ವನಿಯನ್ನು ಕೇಳಿಸಿಕೊಂಡು ಹಕ್ಕಿಯ ಬಳಿ ಬಂತು. ಅದಾಗಲೇ ಪೂರ್ತಿ ಬೆಳಗಾಗಿತ್ತು. ಸೆಗಣಿಯಿಂದ ಹಕ್ಕಿಮರಿಯನ್ನು ಹೊರತೆಗೆದ ಬೆಕ್ಕು ಒಂದೇ ಏಟಿಗೆ ಹಕ್ಕಿಯನ್ನು ಸಾಯಿಸಿ, ತಿಂದು ಮುಗಿಸಿತು.
     ಎಲ್ಲೋ ಇದ್ದ ಉತ್ತರ ಧ್ರುವದ ಹಕ್ಕಿ ಊರಿಗೆ ಬಂದು ಬೆಕ್ಕಿನ‌ ಕೈಗೆ ಸಿಕ್ಕಿ ಪ್ರಾಣ ಕಳೆದುಕೊಂಡಿತು. ಎಲ್ಲವೂ ಮೇಲ್ನೋಟಕ್ಕೆ ಸಣ್ಣ ಎಡವಟ್ಟುಗಳೇ....!!
      ಈ ಪುಟ್ಟ ಕಥೆಯನ್ನು ಓದಿದ ನಿಮಗೆ ಏನನ್ನಿಸಿತು.....? ಹಠ ಮಾಡಿದ ಪುಟ್ಟ ಹಕ್ಕಿಯ ತಪ್ಪೇ......? ಪುಟ್ಟ ಹಕ್ಕಿಯನ್ನು ಬಿಟ್ಟು ಹಾರಿಹೋದ ಹಿರಿಯ ಹಕ್ಕಿಗಳ ತಪ್ಪೇ..? ಪುಟ್ಟ ಹಕ್ಕಿಯನ್ನು ತಿಂದ ಬೆಕ್ಕಿನ ತಪ್ಪೇ....? ಒಟ್ಟಾಗಿ ಇಲ್ಲಿ ನೀವು ತಿಳಿದುಕೊಂಡ ಸಂದೇಶವೇನು.....? ನಾವು ಕಲಿಯುವ ಒಂದಲ್ಲ.. ಹಲವಾರು ಪಾಠಗಳಿವೆ.. ಈ ಕಥೆಯಲ್ಲಿ......!! ಬರೆದು ಕಳಿಸ್ತೀರಲ್ಲಾ...?
      ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ನನ್ನ ನಿಮ್ಮ ಭೇಟಿ. ಅಲ್ಲಿಯವರೆಗೆ ಅಕ್ಕನ ನಮನಗಳು.
...................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************



Ads on article

Advertise in articles 1

advertising articles 2

Advertise under the article