
ಜೀವನ ಸಂಭ್ರಮ : ಸಂಚಿಕೆ -13
Monday, December 6, 2021
Edit
ಪಿತೃಪಕ್ಷ ಹಬ್ಬ
-------------------------
ನಮ್ಮ ಮಂಡ್ಯ ಜಿಲ್ಲೆಯಲ್ಲಿ ಪಿತೃಪಕ್ಷ ಹಬ್ಬವನ್ನು ಮಹಾಲಯ ಅಮಾವಾಸ್ಯೆಯಿಂದ ಪ್ರಾರಂಭಿಸಿ ವಿಜಯದಶಮಿಯವರೆಗೆ ವಿವಿಧ ದಿನಗಳಲ್ಲಿ ಆಚರಿಸುತ್ತಾರೆ. ಈ ಹಬ್ಬದ ವಿಶೇಷವೇನೆಂದರೆ ಸತ್ತವರಿಗೆ ಎಡೆ ಹಾಕುವುದು ಸಂಪ್ರದಾಯ. ಸಂಬಂಧಿಕರು ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮ ಪಡಬೇಕೆಂದು ವಿವಿಧ ದಿನಗಳಲ್ಲಿ ಆಚರಿಸುತ್ತಾರೆ. ಕೆಲವು ಊರಿನಲ್ಲಿ ಅಮಾವಾಸ್ಯೆಯಂದು ಇನ್ನು ಕೆಲವರು ಆಯುಧ ಪೂಜೆಯೆಂದು ಮತ್ತೆ ಕೆಲವರು ವಿಜಯದಶಮಿಯಂದು ಆಚರಣೆ ಮಾಡುತ್ತಾರೆ. ಹೀಗೆ ಬೇರೆ ಬೇರೆ ದಿನ ಹಬ್ಬಆಚರಣೆ ಮಾಡುವುದರಿಂದ ಸಂಬಂದಿಗಳೆಲ್ಲರೂ ಸಂಭ್ರಮದಿಂದ ಭಾಗವಹಿಸುತ್ತಾರೆ.
ನಮ್ಮೂರಿನಲ್ಲಿ ಅಮಾವಾಸ್ಯೆಯಾದ 9ನೇ ದಿನಕ್ಕೆ ಆಚರಣೆ ಮಾಡುತ್ತಾರೆ. ಮಾರನೆಯ ದಿನ ಆಯುಧ ಪೂಜೆ ಹಬ್ಬ ಇರುತ್ತದೆ. ಆಯುಧ ಪೂಜೆಯಂದು ಮನೆಯಲ್ಲಿರುವ ಎಲ್ಲಾ ಆಯುಧಗಳನ್ನು ತೊಳೆದು ಕ್ರಮವಾಗಿ ಜೋಡಿಸಿ ಇಡುತ್ತಾರೆ. ಮನೆಯ ಮುಂದೆ ವಾಹನಗಳನ್ನು ತೊಳೆದು ಅಲಂಕಾರ ಮಾಡುತ್ತಾರೆ. ನಂತರ ಎಲ್ಲಾ ಆಯುಧ ಮತ್ತು ವಾಹನಗಳಿಗೆ ಹೂವಿನಿಂದ ಅಲಂಕಾರ ಮಾಡಿ , ವಾಹನದ ಚಕ್ರಗಳಿಗೆ ನಿಂಬೆಹಣ್ಣು ಇಟ್ಟು , ಕುಂಬಳಕಾಯಿಗೆ ರಂದ್ರ ಮಾಡಿ ಅದರಲ್ಲಿ ಅರಿಶಿಣ ಕುಂಕುಮ ತುಂಬಿ, ಚಿಲ್ಲರೆ ಕಾಸನ್ನು ತುಂಬಿ, ವಾಹನಗಳಿಗೆ ಇಳಿ ತೆಗೆದು ಜನರ ದೃಷ್ಟಿ ಬೀಳದಿರಲೆಂದು ನೆಲದ ಮೇಲಿರುವ ಕಲ್ಲಿನ ಮೇಲೆ ಹೊಡೆಯುವವರು . ನಂತರ ಸಿಹಿ ಬೋಂದಿ, ಕಡ್ಲೆ ಸಕ್ಕರೆ ಸೇರಿದಂತೆ ಸಿಹಿತಿಂಡಿಯನ್ನು ಪೂಜೆ ಸಮಯದಲ್ಲಿ ಹಾಜರಿದ್ದವರಿಗೆ , ನೆರೆಮನೆಯವರಿಗೆ , ಹಾದಿಯಲ್ಲಿ ಹೋಗುವವರಿಗೆ ನೀಡಿ ಸಂತೋಷ ಪಡುವರು. ಕೆಲವರು ಜಮೀನಿನಲ್ಲಿ ಪಂಪ್ ಸೆಟ್ ಹೊಂದಿದ್ದಲ್ಲಿ ಅದಕ್ಕೂ ಕೂಡ ಪೂಜೆಮಾಡಿ ಬರುವರು.
ಈಗ ಪಿತೃಪಕ್ಷ ಹಬ್ಬದ ಬಗ್ಗೆ ತಿಳಿದುಕೊಳ್ಳುವ. ಈ ಹಬ್ಬಕ್ಕೆ ಮುನ್ನ ಮನೆಗೆ ಸುಣ್ಣ ಬಣ್ಣದಿಂದ ಅಲಂಕಾರ ಮಾಡುತ್ತಾರೆ. ಎಲ್ಲರಿಗೂ ಹೊಸ ಬಟ್ಟೆ ಖರೀದಿ ಮಾಡುತ್ತಾರೆ. ಹಬ್ಬದಲ್ಲಿ ಎಡೆ ಇಡಲು, ಬಂದವರಿಗೆ ನೀಡಲು ಕಜ್ಜಾಯ, ಚಕ್ಕುಲಿ, ನಿಪ್ಪಟ್ಟು, ವಡೆ, ಸಿಕ್ಕಿನುಂಡೆ, ಕರ್ಜಿಕಾಯಿ ಮತ್ತು ರವೆ ಉಂಡೆ ಸೇರಿದಂತೆ ಹಲವಾರು ತಿಂಡಿಗಳನ್ನು ಮಾಡಿರುತ್ತಾರೆ. ಹಬ್ಬದಂದು ಸಂಬಂಧಿಕರು , ಬಂಧು-ಬಳಗ, ಮತ್ತು ಸ್ನೇಹಿತರು ಎಲ್ಲರೂ ಹಾಜರಾಗುತ್ತಾರೆ. ನಮ್ಮ ಮನೆಗೆ ಕನಿಷ್ಟ ಅಂದರೂ ಅರವತ್ತು ಮಂದಿ ಇರುತ್ತಿದ್ದರು. ಇಲ್ಲಿ ಬಡವ ಶ್ರೀಮಂತ ಎಂಬ ಯಾವ ತಾರತಮ್ಯ ಇರುತ್ತಿರಲಿಲ್ಲ. ಹೊರಗಡೆ ಒಂದು ಬಕೆಟ್ಟಿನಲ್ಲಿ ನೀರು ಚೊಂಬು ಇಟ್ಟಿರುವರು. ಬಂದವರು ಕೈ-ಕಾಲು ತೊಳೆದು ಒಳಬರಬೇಕು. ಬಂದವರಿಗೆ ಕುಡಿಯಲು ನೀರು ನೀಡುವುದೆಂದರೆ ನಮಗೆ ಬಾಲ್ಯದಲ್ಲಿ ಒಂದು ಸಂಭ್ರಮ. ಆ ದಿನ ಮನೆಯಲ್ಲಿ ಮಹಿಳೆಯರು ಬಗೆ ಬಗೆಯ ಅಡುಗೆ ಮಾಡುವರು. ಕೆಲವರು ಸಿಹಿ ಅಡಿಗೆ ಮಾಡಿದರೆ ಮತ್ತೆ ಕೆಲವರು ಬಗೆ ಬಗೆಯ ಮಾಂಸಾಹಾರದ ಅಡುಗೆ ಮಾಡಿ ಬಂದವರಿಗೆ, ಸ್ನೇಹಿತರಿಗೆ ಊಟ ಬಡಿಸಿ ಸಂಭ್ರಮ ಪಡುತ್ತಾರೆ. ಊಟ ಮಾಡಿದ ನಂತರ ಹೊರಗಡೆ ಪಡಸಾಲೆಯಲ್ಲಿ ಕುಳಿತು , ಎಲೆ ಅಡಿಕೆ ಹಾಕಿಕೊಂಡು , ಎಲ್ಲರೂ ಒಟ್ಟಿಗೆ ಕುಳಿತು, ಕೃಷಿಗೆ ಸಂಬಂಧಿಸಿದ ವಿಚಾರ , ಹಳೆಯ ಸವಿ ನೆನಪುಗಳು, ಕಷ್ಟ-ಸುಖ ಹಂಚಿಕೊಂಡು ಸಂಭ್ರಮ ಪಡುತ್ತಾರೆ. ಕೆಲವರು ಊಟ ಮಾಡಿ ಅಂದೇ ತಮ್ಮ ಊರಿಗೆ ತೆರಳಿದರೆ, ಇನ್ನು ಕೆಲವರು ಅಲ್ಲೇ ಉಳಿದುಕೊಳ್ಳುತ್ತಾರೆ. ಮನೆಯ ಎಲ್ಲಾ ಮಂದಿಗೂ ಹಬ್ಬಕ್ಕೆ ಬರಲು ಸಾಧ್ಯವಿರುತ್ತಿರಲಿಲ್ಲ. ಏಕೆಂದರೆ ಪ್ರತಿಯೊಂದು ಮನೆಯಲ್ಲೂ ಹಸು, ಹೆಮ್ಮೆ, ಕರು ,ಕುರಿ ಮತ್ತು ಮೇಕೆ ಸಾಕಿರುತ್ತಾರೆ. ಅವುಗಳ ಯೋಗಕ್ಷೇಮ ನೋಡಿಕೊಳ್ಳಲು ಮತ್ತು ಮನೆ ಕಾಯ್ದುಕೊಂಡು ಕೆಲವರು ಮನೆಯಲ್ಲಿರುತ್ತಾರೆ.
ನಮ್ಮದು ಅವಿಭಕ್ತ ಕುಟುಂಬ. ನಾವು ನಾಲ್ಕು ಜನ ಮಕ್ಕಳು. ನಾವೆಲ್ಲ ಒಟ್ಟು ಸೇರಿ ಬಂಧು-ಬಳಗದೊಂದಿಗೆ ಹಬ್ಬ ಆಚರಿಸುವುದೆ ಒಂದು ಸಂಭ್ರಮ. ಇತ್ತೀಚಿನ ದಿನಗಳಲ್ಲಿ ಇದು ಪ್ರತಿಷ್ಠೆಯ ಸಂಕೇತವಾಗಿದೆ. ಎಷ್ಟು ಜನ ಊಟ ಮಾಡಿದರು ಅನ್ನುವುದು ಮುಖ್ಯವೇ ಹೊರತು, ಕುಳಿತು ಹರಟೆ ಹೊಡೆಯುವುದು ಈಗ ಕಂಡು ಬರುತ್ತಿಲ್ಲ. ಹಿಂದೆ ಈ ರೀತಿ ಹಬ್ಬ ಮಾಡುತ್ತಿದ್ದ ಉದ್ದೇಶ ಸಂಬಂಧ ಗಟ್ಟಿಗೊಳ್ಳಬೇಕು ಎನ್ನುವುದಾಗಿತ್ತು. ಈಗ ಸಂಬಂಧ ಗಟ್ಟಿ ಆಗುವುದಕ್ಕಿಂತ ಪ್ರತಿಷ್ಠೆ ಹೆಚ್ಚಾಗಿದ್ದು ನಿಜವಾದ ಒಳ್ಳೆಯ ಬೆಳವಣಿಗೆಯಲ್ಲ. ನಾನು ಕಂಡಂತೆ ಈ ಹಿಂದೆ ಬಡವ ಬಲ್ಲಿದ ಎನ್ನದೇ ಎಲ್ಲರನ್ನು ಸಮಾನವಾಗಿ ಕಂಡು ಹಬ್ಬಕ್ಕೆ ಹೋಗುತ್ತಿದ್ದುದು , ಹಬ್ಬಕ್ಕೆ ಆಹ್ವಾನ ಮಾಡುತ್ತಿದ್ದುದು ಎಷ್ಟು ಅರ್ಥಪೂರ್ಣವಾಗಿತ್ತು .ಇಂತಹ ಹಬ್ಬಗಳು ಸಮಾಜದ ಎಲ್ಲರನ್ನೂ ಒಟ್ಟು ಮಾಡಿದರೆ ಎಷ್ಟು ಚಂದ?.
..........................................ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************