-->
ಮಾತಿನ ಚತುರೆ : ಮನಸ್ವಿ ಕುಲಾಲ್

ಮಾತಿನ ಚತುರೆ : ಮನಸ್ವಿ ಕುಲಾಲ್

ಮನಸ್ವೀ ಕುಲಾಲ್
5ನೇ ತರಗತಿ
ಸ.ಹಿ.ಪ್ರಾ.ಶಾಲೆ ಕಲಂಬಾಡಿ 
ಪದವು ನಿಟ್ಟೆ 
ತಾಲೂಕು:ಕಾರ್ಕಳ
ಜಿಲ್ಲೆ: ಉಡುಪಿ


              ಮಾತಿನ ಚತುರೆ : ಮನಸ್ವಿ ಕುಲಾಲ್
           ಹುಟ್ಟಿದ ಪ್ರತಿಯೊಂದು ಮಗುವಿನಲ್ಲೂ ವಿಭಿನ್ನ ಪ್ರತಿಭೆಯಿರುವುದು ಸತ್ಯ. ಯಾವುದೋ ಒಂದು ಸನ್ನಿವೇಶದಲ್ಲಿ ಪ್ರಕಟವಾಗುವ ಮೂಲಕ ಜಗತ್ತಿಗೆ ಅದು ಗೋಚರಿಸುತ್ತದೆ. ಇಲ್ಲಿ ಮುಖ್ಯವಾಗುವುದು ಕಾಣುವ ಕಣ್ಣುಗಳು ಮತ್ತು ಚಪ್ಪಾಳೆ ತಟ್ಟುವ ಕೈಗಳು. ಪ್ರೋತ್ಸಾಹ ನೀಡುವ ಮನಸ್ಸುಗಳಿದ್ದರೆ ಅಂತರ್ಗತವಾಗಿರುವ ಯಾವುದೇ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸಬಹುದೆನ್ನುವ ಸಾಧ್ಯತೆಗೆ ಪುಟಾಣಿಯೊಬ್ಬಳು ಸಾಕ್ಷಿಯಾಗಿದ್ದಾಳೆ.
          ಇವಳು..... ಅರಳು ಹುರಿದಂತೆ ಮಾತನಾಡುತ್ತಾಳೆ. ನಿರರ್ಗಳವಾಗಿ ಸ್ವರಗಳ ಏರಿಳಿತದೊಂದಿಗೆ ಸ್ಪಷ್ಟವಾಗಿ ಮಾತನ್ನು ಒಪ್ಪಿಸುತ್ತಾಳೆ... ಪ್ರಸ್ತುತ ಪಡಿಸುವ ಯಾವುದೇ ವಿಷಯವಿರಲಿ ಮನಮುಟ್ಟುವಂತೆ ಸಾದರ ಪಡಿಸುವ ಚಾಕ-ಚಕ್ಯತೆ ಈಕೆಗಿದೆ. ತನ್ನ ವಿಶಿಷ್ಠ ಛಾಪಿನಿಂದ ಕೇಳುಗರನ್ನು ಮಂತ್ರ ಮುಗ್ಧಗೊಳಿಸುವ ಪುಟಾಣಿ.... ಇವಳೇ ಮನಸ್ವಿ ಕುಲಾಲ್. 





           ಮನಸ್ವಿ ಕುಲಾಲ್ ಉಡುಪಿ ಜಿಲ್ಲೆ , ಕಾರ್ಕಳ ತಾಲೂಕಿನ ಕಲಂಬಾಡಿ ಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿನಿ. ಪದವು ಕಾರ್ಕಳದ ಸಂತೋಷ್ ಕುಲಾಲ್ ಮತ್ತು ಮಂಜುಳಾ ಕುಲಾಲ್ ಅವರ ಪುತ್ರಿ. 
         ಮನಸ್ವಿ ಪುಟ್ಟ ಮಗುವಿರುವಾಗಲೇ ಸದಾ ಚಟುವಟಿಕೆಯಿಂದ ಇರುತ್ತಿದ್ದಳು. ಮೂರು ವರ್ಷ ಪ್ರಾಯದಲ್ಲಿರುವಾಗ ದೂರದರ್ಶನದಲ್ಲಿ ಬರುವ ಪದಗಳಿಗೆ ಹಜ್ಜೆ ಹಾಕಿ ಕುಣಿಯುವ ಅವಳ ಆಸಕ್ತಿಯನ್ನು ಕಂಡು ಭರತನಾಟ್ಯ ತರಗತಿಗೆ ಸೇರಿಸಲಾಯಿತು. ನಾಟ್ಯ ಶಿಕ್ಷಕಿ ಇವಳ ಆಸಕ್ತಿಯನ್ನು ಕಂಡು ಎಲ್ಲರೊಂದಿಗೆ ಪ್ರೀತಿಯಿಂದ ಕಲಿಸುತ್ತಿದ್ದರು. ಹೆಜ್ಜೆಗಳನ್ನು ‌ಬಲು ಬೇಗನೆ ಗ್ರಹಿಸಿ ಮನೆಯಲ್ಲಿ ಅಭ್ಯಸಿಸಿ ಮೆಚ್ಚುಗೆಗಳಿಸಿದ್ದಳು. 
ಗುರುಗಳಾದ ಸುನಿಲ್ ಇವರು ಇವಳ ಆಸಕ್ತಿಗನುಗುಣವಾಗಿ‌ ಹಿರಿಯ ನೃತ್ಯಪಟುಗಳ ಜತೆ ಅವಕಾಶ ನೀಡಿ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು‌ ಗಳಿಸಲು ಸಾಧ್ಯವಾಯಿತು. ಸಂಗೀತ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದು ಸಂಗೀತ ತರಬೇತಿಯನ್ನು ಶ್ರೀಮತಿ‌ ಅನುರಾಧ ಇವರಿಂದ ಪಡೆಯುತ್ತಿದ್ದಾಳೆ. ಯಕ್ಷಗಾನದಲ್ಲಿಯೂ ವಿಶೇಷ ಆಸಕ್ತಿ ಇದೆ.
        ಹೀಗೆ ತನ್ನ ಪ್ರತಿಭೆಯನ್ನು ಸಾದರಪಡಿಸುತ್ತಾ ಮಾತನಾಡುವ ಕೌಶಲ್ಯವನ್ನು ಬೆಳೆಸಿಕೊಂಡಳು. ತಂದೆಯ ಪ್ರೋತ್ಸಾಹ ತಾಯಿಯ ಸಹಕಾರದಿಂದ ಮಾತಿನ ಶೈಲಿಯನ್ನು ಅಂತರ್ಗತ ಗೊಳಿಸುತ್ತಾ ಸ್ಪಷ್ಟವಾಗಿ ಸ್ಫುಟವಾಗಿ ಮಾತನಾಡುವ ಜಾಣೆ ಯಾದಳು ಮನಸ್ವಿ . 
        3 ನೇ ತರಗತಿಯಲ್ಲಿರುವಾಗ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆ ಭಾಷಣವನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ತನ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಇಲ್ಲಿ ಪ್ರಸ್ತುತ ಪಡಿಸಿದಳು. ಈ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಯಾಗಿ ಮೊದಲ ಬಾರಿಗೆ ಎಲ್ಲರ ಮೆಚ್ವುಗೆಗೆ ಪಾತ್ರಳಾದಳು. ಈ ಅವಕಾಶ ಮನಸ್ವಿಗೆ ಇನ್ನೂ ಹೆಚ್ಚಿನ ಸ್ಪೂರ್ತಿಯ ಜೊತೆ ಅವಕಾಶವನ್ನು ತಂದುಕೊಟ್ಟಿತು. ಕಾರ್ಕಳ ರೋಟರಿ ಕ್ಲಬ್ ನಿಟ್ಟೆ ಇವರ ಆಶ್ರಯದಲ್ಲಿ ನಡೆದ 'ತ್ಯಾಜ್ಯ ವಸ್ತು ನಿರ್ವಹಣೆ ' ಬಗ್ಗೆ ಮಾತನಾಡಿ ಪ್ರಥಮ ಬಹುಮಾನ, ವಿ.ಹಿಂ.ಪ. ಕಾರ್ಕಳ ಪ್ರಖಂಡ ಇವರ "ಶ್ರೀರಾಮ ನನಗೇಕೆ ಆದರ್ಶ" ಎಂಬ ಕುರಿತ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು. ಇಲ್ಲಿ ಆಡಿದ ಮಾತುಗಳು ದೇಶ, ವಿದೇಶದಾದ್ಯಂತ ಬಹಳ ಸುದ್ದಿಯಾಗಿ ಈ ಪುಟಾಣಿಯ ಮಾತಿನ ಧಾಟಿಯನ್ನು ಪ್ರಶಂಸಿಸಿ ಹಲವಾರು ಜನ ಫೋನ್ ಮೂಲಕ ಅಭಿನಂದಿಸಿದ ರೀತಿ ನಿಜಕ್ಕೂ ಪ್ರತಿಭೆಯನ್ನು ಗೌರವಿಸುವ ಸಂಪ್ರದಾಯಕ್ಕೊಂದು ಸಾಕ್ಷಿಯಾಗಿತ್ತು.     
   ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ನಡೆಸಿದ ಕನ್ನಡ ರಾಜ್ಯೋತ್ಸವ ಭಾಷಣ ಸ್ಪರ್ಧೆಯಲ್ಲಿ 5 ರಾಷ್ಟ್ರಗಳು, ದೇಶದ 6 ರಾಜ್ಯಗಳು ಹಾಗೂ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ 2210 ವಿಧ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಮನಸ್ವಿ ಮೆಚ್ಚುಗೆ ಬಹುಮಾನ ಗಳಿಸಿರುವುದು ಅಭಿಮಾನದ ಸಂಗತಿ. ಈ ಮೂಲಕ ಅತಿ ಕಿರಿಯ ಸ್ಪರ್ಧಾಳು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವುದು ಈಕೆಯ ಪ್ರತಿಭೆಯ ಉನ್ನತಿಗೆ ಸಾಕ್ಷಿಯಾಗಿದೆ. ಹೀಗೆ ಸಾಕಷ್ಟು ಬಹುಮಾನಗಳನ್ನು ಬಾಚುತ್ತಿರುವ ಈಕೆ ಸ್ಥಳೀಯ ಅನೇಕ ಸಂಘ-ಸಂಸ್ಥೆಗಳು ನಡೆಸಿರುವ ಭಾಷಣ ಸ್ಪರ್ಧೆಯಲ್ಲಿ ಈಗಾಗಲೇ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾಳೆ.
ವಿವೇಕ ಶಿಕ್ಷಣ ವಾಹಿನಿ‌ ಇವರು ನಡೆಸಿದ" ಮಕ್ಕಳಿಗೆ ಮೌಲ್ಯ ಶಿಕ್ಷಣದ ಅವಶ್ಯಕತೆ "ಕುರಿತ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಟ್ಟಿತು. 
ಶಾಲೆಯ ಕಲಿಕೆಯಲ್ಲೂ ಪ್ರತಿಭಾನ್ವಿತೆಯಾಗಿದ್ದು ...... ತಂಗಿ ಸ್ವೀಕೃತಿ ಕುಲಾಲ್ ಗೆ ತನ್ನ ಹವ್ಯಾಸಗಳನ್ನು ಬೆಳೆಸುತ್ತಾ ವೈವಿಧ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವುದೆಂದರೆ ತುಂಬಾನೇ ಆಸಕ್ತಿ. ಜೊತೆಗೆ ಛದ್ಮವೇಷ , ಚಿತ್ರ ಬಿಡಿಸುವುದು ಇಷ್ಟದ ವಿಷಯವಾಗಿದೆ. ಶಾಲಾ ಶಿಕ್ಷಕರು ಕೂಡಾ ವಿಶೇಷವಾದ ಪ್ರೋತ್ಸಾಹ ನೀಡುತ್ತಿದ್ದರು. ಚಿತ್ರ ಬಿಡಿಸುವ ಪರಿಕರಗಳನ್ನು ಉಡುಗೊರೆ ರೂಪದಲ್ಲಿ ನೀಡಿ ಹುರಿದುಂಬಿಸುತ್ತಿದ್ದರು. ಮಕ್ಕಳ ಜಗಲಿಯಲ್ಲಿ ಚಿತ್ರಗಳನ್ನು ರಚಿಸುತ್ತಾ ಭಾಗವಹಿಸುತ್ತಿರುವುದು ಮನಸ್ವಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. 
         "ಬಚ್ಚಿಟ್ಟ ಪ್ರತಿಭೆ ಕೊಳೆಯುತ್ತದೆ , ಬಿಚ್ಚಿಟ್ಟ ಪ್ರತಿಭೆ ಹೊಳೆಯುತ್ತದೆ" ಎನ್ನುವ ಮಾತಿನಂತೆ ತನ್ನ ಮಗಳ ಪ್ರತಿಭೆಯನ್ನು ಬೆಳಗಿಸಿದ ಕೀರ್ತಿ ತಂದೆ-ತಾಯಿಗೆ ಸಲ್ಲುತ್ತದೆ. ಅವಕಾಶಗಳನ್ನು ಸೃಷ್ಟಿಸಿ ಕೊಡುವುದು ಪ್ರತಿಭೆಗಳನ್ನು ಪ್ರೋತ್ಸಾಹಿಸಲಿರುವ ಒಂದು ಮಾರ್ಗ. ಅದು ಯಾವುದೇ ರೀತಿಯಲ್ಲಿರಲಿ ಮಕ್ಕಳ ಮಾನಸಿಕ ಸಾಮರ್ಥ್ಯ ಮತ್ತು ಅವರ ಆಸಕ್ತಿಯ ಕ್ಷೇತ್ರವನ್ನು ಅರ್ಥೈಸಿ ಬೆಳೆಸುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶಕ್ಕೆ ಸಂಪನ್ಮೂಲ ಕೊಡುಗೆಳಾಗಲು ಪೋಷಕರು ಮತ್ತು ಶಿಕ್ಷಕರು ಕಾರಣರಾಗಬೇಕಾಗಿದೆ.....
............................ ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ದಕ್ಷಿಣ ಕನ್ನಡ ಜಿಲ್ಲೆ
9844820979
********************************************





Ads on article

Advertise in articles 1

advertising articles 2

Advertise under the article