-->
ಬದಲಾಗೋಣವೇ ಪ್ಲೀಸ್ : ಸಂಚಿಕೆ - 26

ಬದಲಾಗೋಣವೇ ಪ್ಲೀಸ್ : ಸಂಚಿಕೆ - 26

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು


        ಬದಲಾಗೋಣವೇ ಪ್ಲೀಸ್ - 26

                ಜಾಸ್ತಿ ಕಸ ಮಾಡ್ಬೇಡಿ.... 
                ಕಸವಾಗಿ ಹೋಗ್ತಿರಾ...!!
     ನಮ್ಮ ಕಾಲದಲ್ಲಿ ಎಲ್ಲರೂ ಇಷ್ಟ ಪಡುತ್ತಿದ್ದ ಪ್ರವಾಸಿ ತಾಣ ಎಂದರೆ ಅಜ್ಜಿ ಮನೆ. ಬೇಸಿಗೆ ರಜಾಕಾಲ ಬಂತೆಂದರೆ ಎಲ್ಲರು ಅಜ್ಜಿ ಮನೆಗೆ ಹೋಗಿ ತಿಂಗಳುಗಟ್ಟಲೆ ರಜೆಯ ಮಜಾ ಪಡುತ್ತಿದ್ದ ಖುಷಿಯ ತಾಣವದು. ಅಲ್ಲಿ ದೂರದರ್ಶನ (TV) ಇರಲಿಲ್ಲ , ಆದರೆ ಇಡೀ ಜಗತ್ತನ್ನೇ ಕಣ್ಣಿಗೆ ತೋರಿಸಿ ಕಲ್ಪಿಸಿಕೊಡುತ್ತಿದ್ದ ಅಜ್ಜಿ ಇದ್ದಳು. ಅಲ್ಲಿ ಎ.ಸಿ ( ವಾತಾನುಕೂಲಿ) ಇರಲಿಲ್ಲ ಆದರೆ ಸದಾ ಶುದ್ಧ ತಂಗಾಳಿಯ ಪರಿಸರವಿತ್ತು. ಅಲ್ಲಿ ಆಡಂಬರವಿರಲಿಲ್ಲ ಆದರೆ ಆತ್ಮೀಯತೆ ಇತ್ತು. ಅಲ್ಲಿ ಕೃತಕ ಜೀವನ ಇರಲಿಲ್ಲ ಆದರೆ ನಿಸರ್ಗದತ್ತ ಬದುಕು ಇತ್ತು. ಪಂಚಭೂತಗಳ ಆಕರ್ಷಣೆ ಇತ್ತು. ಅಲ್ಲಿ ಕಂಪ್ಯೂಟರ್ ಇರಲಿಲ್ಲ ಆದರೆ ಕಲಿಕೆ ಹಾಗೂ ಮನೋರಂಜನಗೆ ಮನೆಯಂಗಳ ಇತ್ತು. ಆ ಅಂಗಳದಲ್ಲಿ ಒಂದು ದಿನ ನಾವು ಹತ್ತಾರು ಮಂದಿ ಕುಳಿತು ಅನಗತ್ಯ ವಿಚಾರಗಳ ಬಗ್ಗೆ ಹರಟೆ ಹೊಡೆಯುತ್ತಿದ್ದೆವು. ಆಗ ಅಜ್ಜಿ ನಮ್ಮ ಬಳಿ ಬಂದು "ಮಕ್ಕಳೇ ಜಾಸ್ತಿ ಕಸ ಮಾಡ್ಬೇಡಿ. ಕಸದ ಬುಟ್ಟಿಯಾಗಿ ಹೋಗುತ್ತೀರಾ. ಆಚೆ ಹೋಗಿ ಆಟವಾಡಿ" ಎಂದರು. ಆಗ ಅದು ಅರ್ಥವಾಗಲಿಲ್ಲ. ಈಗ ಕಸದ ಮಹತ್ವ ಗೊತ್ತಾಗುತ್ತಿದೆ.
           ಕಸದ ಬುಟ್ಟಿ ಮನೆಯಲ್ಲಿರಬೇಕಾದ ಅತಿ ಮುಖ್ಯ ವಸ್ತು. ಕಸದ ಬುಟ್ಟಿಯಿಲ್ಲದ ಮನೆಯಿಲ್ಲ. ಇಡೀ ಮನೆಯು ಸ್ವಚ್ಛವಾಗಿ ಲವಲವಿಕೆಯಿಂದ ಸ್ಫೂರ್ತಿಯುತ ವಾತಾವರಣದಲ್ಲಿ ಪವಡಿಸಬೇಕಾದರೆ ಕಸದ ಬುಟ್ಟಿ ಬೇಕೇ ಬೇಕು. ಬೆಳಗ್ಗೆ ಎದ್ದ ಕೂಡಲೇ ಮನೆಯೊಳಗೆ ಮತ್ತು ಹೊರಗೆ ಒಂದು ಬಾರಿ ಕಸಬರಿಕೆಯಿಂದ ಗುಡಿಸಿ ಕಸವನ್ನು ಕಸದ ಬುಟ್ಟಿಗೆ ಹಾಕಿ ವಿಲೇವಾರಿ ಮಾಡಿದರೆ ದಿನವಿಡೀ ಸ್ವಚ್ಚಂದವಾಗಿ ವಿಹರಿಸಬಹುದು. ಕಸದ ವಿಲೇವಾರಿಯಿಲ್ಲದೆ ಸಹ್ಯ ಬದುಕು ಕಷ್ಟ. ಬೇಡವಾದದ್ದೆಲ್ಲ ಹೋದರೆ ತಾನೆ ಬೇಕಾದುದು ಸ್ವೀಕರಿಸಲು ಸಾಧ್ಯ. ಎಲ್ಲವೂ ಕಸದ ಬುದ್ಧಿಯಾದರೆ ಮನೆಯೇ ಮಸಣವಾಗುವುದು.
           ನಮ್ಮ ಬದುಕಿಗೂ ಕಸದ ಬುಟ್ಟಿಯ ಅಗತ್ಯವಿದೆ. ಆದರೆ ಎಲ್ಲವನ್ನು ಕಸದ ಬುಟ್ಟಿಯನ್ನಾಗಿಸುವುದು ಅಪಾಯಕಾರಿ. ನಾವಿಂದು ನಮ್ಮ ತನು-ಮನಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಬದುಕೇ ಕಸದ ಬುಟ್ಟಿಯಾಗುವ ಸಂಭವವಿದೆ. ನಾಲಗೆಯ ರುಚಿಗೋಸ್ಕರ ಹೊಟ್ಟೆಗೆ ಬೇಕಾದ್ದು - ಬೇಡವಾದ್ದು ಎಲ್ಲವನ್ನು ತುರುಕಿ ಕಸದ ಬುಟ್ಟಿ ಮಾಡುವವರಿದ್ದಾರೆ. ಹೊಟ್ಟೆಯೊಳಗೆ ಕಸ ಬಿಸಾಡುವ ಅಭ್ಯಾಸವಿದ್ದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಅದಕ್ಕಾಗಿ ಕಸ ಹಾಕುವ ಮುನ್ನವೇ ಆಲೋಚಿಸಬೇಕು. ಈ ಬಗ್ಗೆ ಎಚ್ಚರವಿರಲಿ
            ಇತ್ತೀಚೆಗಿನ ಆಧುನಿಕ ಜೀವನ ಶೈಲಿಯಲ್ಲಿ ದಿನವಿಡೀ ಮನೆಯೊಳಗೆ ಇರುವ ಸಂದರ್ಭವೇ ಹೆಚ್ಚಾಗುತ್ತಿದೆ. ಮಕ್ಕಳಿಗೆ ಆಟದ ಮೈದಾನವಿಲ್ಲ. ಮನೆಯಲ್ಲಿನ TV ಮೊಬೈಲ್ ಗಳೇ ಆಟದ ಮೈದಾನವಾಗುತ್ತಿದೆ. ದೊಡ್ಡವರಿಗೆ ಮನೆಯ ಸುತ್ತ ಸುತ್ತಲು ಪುರುಸೊತ್ತಿಲ್ಲ. ಮನೆಯ ಸೋಫಾವೇ ಆಶ್ರಯ ತಾಣವಾಗಿರುತ್ತದೆ. ಇಂಥಹ ಸಂದರ್ಭದಲ್ಲಿ ಮಕ್ಕಳಾದಿ ಎಲ್ಲರೂ ದಿನವಿಡೀ ಬೇಡದ ಅನುಪಯುಕ್ತ ಹಾಳು ಹರಟೆ , ಟೀಕೆ , ಕೊಂಕು ಮಾತುಗಳು ಇದರ ಜತೆ ಸಮೂಹ ಮಾಧ್ಯಮಗಳಾದ ಟಿ.ವಿ , ಪೇಪರ್, ಮೊಬೈಲ್ ಹಾಗೂ ಯೂಟ್ಯೂಬ್ ಗಳಲ್ಲಿ ಬರುವ ಕಸದಂತಿರುವ (ಅಪವಾದಗಳನ್ನು ಹೊರತು ಪಡಿಸಿ) ನಕರಾತ್ಮಕ ನಿರುಪಯುಕ್ತವಾದ ಕೆಲವು ಕಾರ್ಯಕ್ರಮಗಳನ್ನು ನೋಡಿ ತಮ್ಮ ಮನಸನ್ನು ಅರಳಿಸುವ ಬದಲು ಮುದುಡಿಸುತ್ತಿದ್ದಾರೆ. ಕೆರಳಿಸುವ ಬದಲು ಕೆಡಿಸುತ್ತಿದ್ದಾರೆ. ಹೃದಯ ವೈಶಾಲ್ಯರಾಗುವ ಬದಲು ಹೃದಯ ಹೀನರಾಗುತ್ತಿದ್ದಾರೆ. ಇದರಿಂದ ನಮ್ಮ ಮನಸ್ಸು ಕಸದ ಬುಟ್ಟಿಯೇ ಆಗುತ್ತಿದೆ. ಈ ಬಗ್ಗೆ ಎಚ್ಚರವಿರಲಿ..........!!!!
           ಕಸದ ಬುಟ್ಟಿಯನ್ನು ಯಾರೂ ಕೂಡಾ ಪ್ರವೇಶ ಬಾಗಿಲು, ಪಡಸಾಲೆ ಅಥವಾ ಕೋಣೆಯ ಮಧ್ಯದಲ್ಲಿ ಇಡುವುದಿಲ್ಲ. ಅದಕ್ಕಾಗಿ ಕೋಣೆಯ ಮೂಲೆಯಲ್ಲಿ ಜಾಗವಿರುತ್ತದೆ. ಹಾಗೆ ಬದುಕಿನ ಕಸ ಅಥವಾ ಬದುಕನ್ನೇ ಕಸವನ್ನಾಗಿಸುತ್ತಿರುವ ಅನಗತ್ಯ ಒತ್ತಡಗಳು, ಕಿರಿಕಿರಿ ವಿಚಾರಗಳು, ಬೇಡದ ಕೆಟ್ಟ ಯೋಚನೆಗಳು, ನೇತ್ಯಾತ್ಮಕ ಆಲೋಚನೆಗಳಿಗೆ ಬದುಕಿನ ಮನೆಯ ಪ್ರಮುಖ ಸ್ಥಾನದಲ್ಲಿ ಪ್ರಾಶಸ್ತ್ಯ ನೀಡದೆ ಬದುಕಿನ ಮೂಲೆಯಲ್ಲಿನ ಕಸದ ಬುಟ್ಟಿಯಲ್ಲಿ ಹಾಕಬೇಕು. ಹಾಗೂ ಪ್ರತಿ ದಿನ ವಿಲೇವಾರಿ ಮಾಡಬೇಕು. ಅಲ್ಪಕಸ ತುಂಬಿದ್ದರೂ ಅದನ್ನು ಅಲ್ಲೇ ಹತ್ತಾರು ದಿನ ಕೊಳೆಯಲು ಬಿಟ್ಟರೆ ಅದರ ಕೆಟ್ಟವಾಸನೆಯಿಂದ ಎಲ್ಲರೂ ಮೂಗು ಮುಚ್ಚಿ ಹೋಗುವಂತೆ , ದೈಹಿಕ ಮತ್ತು ಮಾನಸಿಕ ಕಸ ಗಳು ಹೆಚ್ಚಾದರೆ ಎಲ್ಲರೂ ನಮ್ಮನ್ನು ಬಿಟ್ಟು ಹೊರಡುವರು. ಹಾಗಾಗಿ ಕಸ ವಿಲೇವಾರಿ ಅತೀ ಅಗತ್ಯ. ಇದಕ್ಕಾಗಿ ತನು-ಮನಗಳನ್ನು ಧನಾತ್ಮಕ ಚಿಂತನೆ, ಪ್ರೀತಿ , ಸದ್ವಿಚಾರ, ಸತ್ಕರ್ಮಗಳ ಮೂಲಕ ನಿರ್ಮಲವಾಗಿಸಲು ಪ್ರಯತ್ನಿಸಬೇಕು. ಕೆಲವರು ಕಸದಿಂದ ರಸ ಮಾಡುವರಿದ್ದಾರೆ. ಆ ಕೌಶಲ ಇದ್ದವರಿಗೆ ಎಂದೂ ದುಃಖಬಾರದು. ಸದಾ ಸಂತೃಪ್ತ ಜೀವನ ನಡೆಸಬಲ್ಲರು. ಆ ಕೌಶಲವನ್ನು ಕಲಿಯೋಣ. ಅದು ಕಷ್ಟವಾದರೆ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಲಾದರೂ ಕಲಿಯೋಣ..... ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ .... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
******************************************




Ads on article

Advertise in articles 1

advertising articles 2

Advertise under the article