ಬದಲಾಗೋಣವೇ ಪ್ಲೀಸ್ : ಸಂಚಿಕೆ - 25
Wednesday, December 22, 2021
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್ - 25
-------------------------------------
ಸದಾ ಪುಟಿಯುತಿರುವ ಚುರುಕು ಕಣ್ಣಿನ 22 ವರುಷ ಹರೆಯದ ಪ್ರತಿಭಾಶಾಲಿ ಯುವಕನೊರ್ವ ತನ್ನ ಅಪರೂಪದ ಕನಸಿನ ನೌಕರಿಯನ್ನು ಪಡೆಯಲು ಕಳೆದ ಸುಮಾರು ವರುಷಗಳಿಂದ ಸತತ ಪರಿಶ್ರಮ ಪ್ರಯತ್ನಗಳನ್ನು ಮಾಡಿದ್ದನು. ತನಗೆದುರಾದ ಹಲವಾರು ಅಡ್ಡಿ ಆತಂಕಗಳನ್ನು ಮೀರಿ , ಬದುಕಿನ ವೈಯಕ್ತಿಕ ಸುಖಗಳನ್ನು ಬದಿಗಿಟ್ಟು , ಹಲವಾರು ತ್ಯಾಗಗಳನ್ನು ಮಾಡುವ ಮೂಲಕ ಹಗಲಿರುಳು ಇಷ್ಟಪಟ್ಟು ನೌಕರಿಗಾಗಿ ಸಂಪೂರ್ಣ ತಯಾರಿಗಳನ್ನು ಮಾಡಿದ್ದನು. ತಂದೆ ತಾಯಿಗಳ ಆಶೀರ್ವಾದ , ಗುರುಹಿರಿಯರ ಮಾರ್ಗದರ್ಶನ, ಸ್ನೇಹಿತರ ಪ್ರೋತ್ಸಾಹದಿಂದ ಕನಸಿನ ನೌಕರಿಯ ಪರೀಕ್ಷೆಯಲ್ಲಿ ಪಾಸಾಗಿ ನೌಕರಿ ಪಡೆಯುವ ಪೂರ್ಣ ಭರವಸೆ ಹೊಂದಿದ್ದನು. ಸಂಪೂರ್ಣ ಆತ್ಮವಿಶ್ವಾಸದಿಂದ ಬೀಗುತ್ತಿದ್ದ. ಆತ ಪರೀಕ್ಷೆಗೆ ಹಾಜರಾಗಲು ಮುಂಜಾನೆ 6:00 ಗಂಟೆಗೆ ಹೊರಡುವ ರೈಲಿನ ಟಿಕೆಟ್ ಕೂಡಾ ಮುಂಗಡವಾಗಿ ಕಾದಿರಿಸಿದನು.
ಅಂತೂ ಇಂತೂ ಅವನ ಕಾತರದ ನಿರೀಕ್ಷೆಯ ದಿನ ಬಂದೇ ಬಿಟ್ಟಿತು. ನಾಳೆ ನಡೆಯುವ ಪರೀಕ್ಷೆಗೆ ಎಲ್ಲಾ ತಯಾರಿಯೊಂದಿಗೆ 3 ಗಂಟೆ ಮುಂಚಿತವಾಗಿ ರೈಲು ನಿಲ್ದಾಣ ತಲುಪಿದ. "ರೈಲು ಬರಲು ಇನ್ನೂ 3 ಗಂಟೆ ಇದೆಯಲ್ಲ... ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯೋಣ" ಎಂದು ವಿಶ್ರಾಂತಿ ಕೊಠಡಿಯೊಳಗೆ ಹೋಗಿ ಕೂತನು. ಆ ನಿರ್ಜನ ರಾತ್ರಿಯ ಮಬ್ಬು ಹಾಗೂ ಚಳಿಗಾಳಿಗೆ ನಿದ್ದೆಯ ಮಂಪರಿನೊಳಗೆ ಜಾರಿ ಬಿದ್ದ. ಅವನಿಗೆ ಎಚ್ಚರವಾದಾಗ ಅವನು ಪ್ರಯಾಣಿಸಬೇಕಾಗಿದ್ದ ರೈಲು ಅವನಿರುವ ನಿಲ್ದಾಣದಿಂದ ಬಹುದೂರ ಸಾಗಿತ್ತು. ಅವನ ಹತ್ತಾರು ವರುಷಗಳ ಸಾವಿರಾರು ದಿನಗಳ ಅವಿರತ ಶ್ರಮವು ವ್ಯರ್ಥವಾಗಿ ಬಿಟ್ಟಿತು. ಕನಸಿನ ನೌಕರಿ ಕನಸಾಗಿಯೇ ಉಳಿಯಿತು.
ಹೌದಲ್ವ ಗೆಳೆಯರೇ... ಎಚ್ಚರವಿರಬೇಕಾದ ಸಂದರ್ಭದಲ್ಲಿ ಮೈಮರೆತರೆ ಬದುಕ ಕನಸು ನನಸಾಗುವುದಾದರೂ ಹೇಗೆ...?. ಹತ್ತಾರು ವರುಷಗಳಿಂದ ಮಾಡಿದ ಪ್ರಯತ್ನಗಳು ಒಂದು ಕ್ಷಣದ ಮೈಮರೆವಿನಿಂದ ನಿಶ್ಛಲ ಸ್ಥಿತಿಗೆ ಬಂದಿರುತ್ತದೆ. ಬೆಟ್ಟದಷ್ಟು ಆಶೆಗಳ ಹೊತ್ತ ಕನಸಿನ ಗೋಪುರ ಕುಸಿದು ಬಿದ್ದಿರುತ್ತದೆ. ಸಿಹಿ ನಿರೀಕ್ಷೆಗಳು ಕಹಿಯಾಗಿರುತ್ತದೆ. ಕನಸಿನ ನೌಕರಿ ಕೈಗೆಟುಕದ ದೂರದ ನಕ್ಷತ್ರವಾಗಿ ಬಿಡುತ್ತದೆ. ಕನಸು ನನಸಾಗುವ ಸಾಮೀಪ್ಯಕ್ಕೆ ಬಂದಾಗ ನಮ್ಮದೇ ನಿರ್ಲಕ್ಷ್ಯದ ಸಣ್ಣ ಸಣ್ಣ ತಪ್ಪುಗಳಿಂದ ಎಡವಿ ಬೀಳುತ್ತೇವೆ. ಕನಸು ಕನಸಾಗಿಯೇ ಉಳಿಯುತ್ತದೆ....!
ತಂದೆ - ತಾಯಿ , ಗುರು-ಹಿರಿಯರು , ಬಂಧು ಬಳಗದ ಸ್ಫೂರ್ತಿಯುತ ಪ್ರೋತ್ಸಾಹದಿಂದಲೂ ಅಥವಾ ತನ್ನದೇ ಆದ ವೈಯಕ್ತಿಕ ಹಠದಿಂದಲೂ ಒಂದು ನಿರ್ದಿಷ್ಟ ಹಂತದವರೆಗೆ ಬದುಕಿನ ಬಂಡಿ ಸಮರ್ಪಕ ದಾರಿಯಲ್ಲಿ ನಡೆಯುತ್ತಿರುತ್ತದೆ. ಆದರೆ ಯಾವುದೇ ಒಂದು ಹಂತದಲ್ಲಿ ಮೂಡುವ ಗೊಂದಲ ಅಥವಾ ಮೈಮರೆವಿನಿಂದಾಗಿ ಬದುಕಿನ ದಾರಿತಪ್ಪಿ ಅಗೋಚರ ಕತ್ತಲ ಗವಿಯತ್ತ ಗಮಿಸಿ ಋಣಾತ್ಮಕ ದಾರಿಯತ್ತ ಬಾಳು ಮುಖ ಮಾಡಿರುತ್ತದೆ. ಅದರಲ್ಲೂ ಅತೀ ಮುಖ್ಯ ಹಂತಗಳಾದ ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳ ದಾಸ್ಯತ್ವಕ್ಕೆ , ಯೌವ್ವನದ ಕಾಲದಲ್ಲಿ ನಿರುಪಯೋಗಿ ಶೋಕಿ ಜೀವನದ ಖಯಾಲಿಗೆ , ಮಧ್ಯಮ ವಯಸ್ಸಿನಲ್ಲಿ ಎಲ್ಲಾ ಇದ್ದು ಏನೂ ಇಲ್ಲದ ಶೂನ್ಯ ಭಾವತ್ವಕ್ಕೆ , ವೃದ್ಧಾಪ್ಯ ಕಾಲದಲ್ಲಿ ಸಾರರಹಿತ ನಿಸ್ಪ್ರಯೋಜಕ ಬಾಳ್ವೆಯತ್ತ ಗುರಿರಹಿತ ಪಯಣ ಸಾಗುತಿರುತ್ತದೆ. ಇದಕ್ಕೆಲ್ಲ ಅವಶ್ಯಕ ಸಂದರ್ಭಗಳಲ್ಲಿ ನಾವು ಮಾಡುವ ತಪ್ಪು ನಿರ್ಧಾರಗಳೇ ಕಾರಣವಾಗಿರುತ್ತದೆ. ಆ ತಪ್ಪು ನಿರ್ಧಾರಗಳು ಇಡೀ ಬದುಕಿನ ಬಂಡಿಯನ್ನು ಯಾಂತ್ರಿಕವನ್ನಾಗಿಸುತ್ತದೆ. ಕೊರಗುಗಳಿಂದ ನರಳುವಂತೆ ಮಾಡುತ್ತದೆ. ಹಾಗಾಗಿ ಸರಿಯಾದ ಸಮಯದಲ್ಲಿ ಸಮರ್ಪಕ ನಿರ್ಧಾರ ಮಾಡುವುದನ್ನು ನಾವು ಕಲಿಯಲೇಬೇಕು. ಆಗಲೇ ಬದುಕು ಸುಖಮಯವಾಗುವುದು.
ಅವಕಾಶಗಳೆಂಬ ರೈಲುಗಳಿಗೆ ಸಂಪೂರ್ಣ ಸಜ್ಜಾಗಿ ನಾವು ಕಾಯುತ್ತಿರುತ್ತೇವೆ. ಆದರೆ ಯಾವುದೋ ಸಣ್ಣ ತಪ್ಪಿನಿಂದ ಅವಕಾಶ ಹೀನರಾಗುತ್ತೇವೆ. ತಪ್ಪಿದ ಅವಕಾಶ ಮತ್ತೆ ಬಾರದು, ಆದರೆ ಪ್ರಯತ್ನಿಸಿದರೆ ಮತ್ತೊಂದು ಅವಕಾಶ ಸೃಷ್ಟಿಸಬಹುದು. ನಾವು ಮಾಡಿದ ಮೊದಲ ತಪ್ಪಿನಿಂದ ಪಾಠ ಕಲಿತು ಇನ್ನೊಂದು ಅವಕಾಶ ಸಿಕ್ಕಾಗ ಅತ್ಯಂತ ಎಚ್ಚರ ವಹಿಸಿ ಬದುಕುವುದನ್ನು ಕಲಿಯಬೇಕು. ಹಡಗು ಎಷ್ಟೇ ಭಾರವಿದ್ದರೂ ಕಡಲ ಮೇಲೆ ತೇಲಲೇಬೇಕು. ಮನಸ್ಸು ಎಷ್ಟೇ ಭಾರವಾದರೂ ಬದುಕಿನ ಜತೆ ಸಾಗಲೇಬೇಕು. ಬೆಂಕಿಯಲ್ಲಿ ಅರಳಿದ ಹೂವಿನಂತೆ ಹಠದಿಂದ ತನ್ನ ಕನಸನ್ನು ನನಸಾಗಿಸಬೇಕು. ತುಳಿದಲ್ಲೇ ಬೆಳೆದು ನಿಲ್ಲಬೇಕು. ಚಿವುಟಿದಲ್ಲೇ ಮತ್ತೇ ಚಿಗುರಬೇಕು. ಮೈ ಮರೆತಲ್ಲೇ ಮೈಕೊಡವಿ ಎದ್ದೇಳಬೇಕು. ನಿಂದಿಸಿದಲ್ಲೇ ನಗು ಬೀರಿ ತೋರಿಸಬೇಕು. ಸೋತಲ್ಲೇ ಸಾಧಿಸಿ ತೋರಿಸಬೇಕು. ಕೊರಗುವಲ್ಲಿಂದಲ್ಲೇ ಕೊನರಬೇಕು. ಆ ಒಂದು ಗೆಲುವಿಗಾಗಿ ಬದಲಾಗೋಣ. ಕನಸು ನನಾಸಾಗಿಸುವ ಪ್ರಕ್ರಿಯೆಯಲ್ಲಿ ಸದಾ ಪ್ರಯತ್ನಶೀಲರಾಗೋಣ. ನಾವು ಇಷ್ಟಪಡೋರು ನಮ್ಮ ಜತೆಗೆ ಇದ್ದರೆ ಸ್ಟರ್ಗ. ಆ ಇಷ್ಟಗಳು ವ್ಯಕ್ತಿ ಅಥವಾ ವಸ್ತು ಅಥವಾ ಭಾವನೆಗಳಾಗಿರಬಹುದು. ಆ ಇಷ್ಟಪಡೋರ ಪಟ್ಟಿಯಲ್ಲಿ ನಮ್ಮದೊಂದು ಹೆಸರು ಇರಲಿ. ನಮ್ಮ ಪಟ್ಟಿಯಲ್ಲಿ ಎಲ್ಲರ ಹೆಸರಿರಲಿ. ಈ ಗೆಲುವಿಗಾಗಿ ನಾವು ಬದಲಾಗೋಣವೇ ..... ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ .... ಬದಲಾಗೋಣವೇ ಪ್ಲೀಸ್..! ಏನಂತೀರಿ...?
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
**********************************************