-->
ಹಕ್ಕಿ ಕಥೆ - 26

ಹಕ್ಕಿ ಕಥೆ - 26

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                          ಹಕ್ಕಿ ಕಥೆ - 26
                   -----------------------
     ಮಕ್ಕಳೇ ನಮಸ್ತೇ. ಈ ಬಾರಿಯ ಹಕ್ಕಿಕಥೆಯಲ್ಲಿ ನಿಮಗೆ ಭಾರತದಲ್ಲಿ ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ಹಕ್ಕಿಯ ಪರಿಚಯ ಮಾಡೋಣ ಎಂದುಕೊಂಡಿದ್ದೇನೆ.
            ಜೋರಾಗಿ ರೆಚ್ಚೆಹಿಡಿದು ಅಳುವ ಮಕ್ಕಳಂತೆ ಕೂಗುವ ಈ ಹಕ್ಕಿಯನ್ನು ಹಲವು ಜನ ನೋಡಿರಬಹುದು. ಇದರ ಉದ್ದವಾದ ಕೊಕ್ಕಿನ ಕಾರಣಕ್ಕೆ ಇದನ್ನು ಸುಲಭವಾಗಿ ಗುರುತಿಸಬಹುದು. ಇದೇ ಕಾರಣದಿಂದ ಇದಕ್ಕೆ Horn bill ಎಂಬ ಹೆಸರು ಬಂದಿದೆ. ಮಲೆನಾಡಿನ ಜನ ಇದನ್ನು ಮಂಗಟ್ಟೆ ಹಕ್ಕಿ ಎಂದು ಕರೆಯುತ್ತಾರೆ. ಗಿಡುಗ ಅಥವಾ ಹದ್ದಿನ ಗಾತ್ರದ ಈ ಹಕ್ಕಿಯ ಮೈಪೂರ್ತಿ ಬೂದುಬಣ್ಣ. ಈ ಹಕ್ಕಿ ಹಾರುವಾಗ ಇದರ ರೆಕ್ಕೆ ಮತ್ತು ಬಾಲದ ತುದಿಗಳಲ್ಲಿ ಬಿಳೀ ಬಣ್ಣವನ್ನು ನೋಡಬಹುದು. ಹಳದಿ ಅಧವಾ ಕೇಸರಿ ಬಣ್ಣದ ಕೊಕ್ಕು ಹೊಂದಿರುವ ಈ ಹಕ್ಕಿಯ ಜೀವನ ಕ್ರಮ ಬಹಳ ವಿಶಿಷ್ಟವಾದದ್ದು. ಈ ಹಕ್ಕಿಯ ಸಂತಾನೋತ್ಪತ್ತಿ ಕಾಲ ಜನವರಿಯಿಂದ ಎಪ್ರಿಲ್‌ ತಿಂಗಳು. ಇದು ಗೂಡು ಮಾಡಲು ಎತ್ತರವಾದ ಮರದ ಪೊಟರೆಗಳು ಬೇಕು. ಅಂತಹ ಪೊಟರೆಗಳನ್ನು ಹುಡುಕಿ ಗಂಡು ಮತ್ತು ಹೆಣ್ಣು ಹಕ್ಕಿ ಸಂಸಾರ ಆರಂಭ ಮಾಡುತ್ತವೆ. ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಅವುಗಳಿಗೆ ಕಾವು ಕೊಡುತ್ತವೆ. ಕಾವು ಕೊಡುವ ಸಂದರ್ಭದಲ್ಲಿ ಪೊಟರೆಯ ಬಾಗಿಲನ್ನು ಸುರಕ್ಷತೆಯ ಕಾರಣಕ್ಕಾಗಿ ಗಂಡು ಮತ್ತು ಹೆಣ್ಣು ಸೇರಿ ಮುಚ್ಚಿ ಬಿಡುತ್ತವೆ. ಕಾವು ಕೊಡುವ ಹೆಣ್ಣು ಹಕ್ಕಿ ಪೊಟರೆಯ ಒಳಗೇ ಉಳಿದುಕೊಳ್ಳುತ್ತದೆ. ಮೊಟ್ಟೆಗಳು ಒಡೆದು ಮರಿಗಳು ಹೊರಬಂದು ಅವುಗಳಿಗೆ ಗರಿಗಳು ಬರುವ ವರೆಗೂ ಹೆಣ್ಣು ಹಕ್ಕಿ ಗೂಡಿನ ಒಳಗೇ ಇರುತ್ತದೆ. ಆಗ ಹೆಣ್ಣು ಹಕ್ಕಿಗೆ ಹಸಿವಾಗುವುದಿಲ್ಲವೇ ಎಂದು ನೀವು ಕೇಳಬಹುದು. ತನ್ನ ಸಂಗಾತಿ ಗೂಡಿನಲ್ಲಿ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವಾಗ ಗಂಡು ಹಕ್ಕಿಯೇ ಆಹಾರ ಹುಡುಕಿ ತಂದು ಹೆಣ್ಣು ಹಕ್ಕಿಗೆ ಕೊಡುತ್ತದೆ. ಗೂಡಿನ ಬಾಗಿಲನ್ನು ಮುಚ್ಚಿದರೆ ಆಹಾರ ಕೊಡುವುದು ಹೇಗೆ ಎಂದು ನೀವು ಯೋಚಿಸಬಹುದು ಅಲ್ಲವೇ. ಆಹಾರ ಕೊಡಲು ಸಾಧ್ಯಾಗುವಷ್ಟು ಮಾತ್ರ ಸಣ್ಣ ಜಾಗವನ್ನು ತೆರೆದು ಇಟ್ಟಿರುತ್ತವೆ. ಆಹಾರ ತಂದ ಗಂಡು ಹೆಚ್ಚು ಸದ್ದು ಮಾಡದೆ ತನ್ನ ಸಂಗಾತಿಗೆ ಕೊಕ್ಕಿನಲ್ಲೇ ಆಹಾರ ಕೊಟ್ಟು ಹಾರಿ ಹೋಗುತ್ತದೆ. 
            ಹೀಗೆ ಎತ್ತರವಾದ ಮರದ ಮೇಲೆ ಗೂಡು ಮಾಡುವುದರಿಂದ ಮತ್ತು ಗೂಡಿನ ಬಾಗಿಲನ್ನು ಮುಚ್ಚುವುದರಿಂದ ದೊಡ್ಡ ಬೇಟೆಗಾರ ಹಕ್ಕಿಗಳು, ಮರ ಹತ್ತಿ ಬಂದು ಮೊಟ್ಟೆ ಅಥವಾ ಮರಿಗಳನ್ನು ತಿನ್ನಬಹುದಾದ ಪ್ರಾಣಿಗಳಿಂದ, ಹಾವುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಮೊಟ್ಟೆ ಒಡೆದು ಮರಿಗಳು ಹೊರಬಂದು ಹಾರಲು ತಯಾರಾದಾಗಾಗ ಮುಚ್ಚಿದ ಬಾಗಿಲನ್ನು ಒಡೆದು ಹೆಣ್ಣು ಮತ್ತು ಮರಿಗಳು ಹೊರಬರುತ್ತವೆ.  ಎಪ್ರಿಲ್‌ ನಿಂದ ಜುಲೈ ತಿಂಗಳವರೆಗೆ ಹಲವು ಬಗೆಯ ಹಣ್ಣುಗಳು ಸಿಗುವ ಸಮಯ. ಕಾಡು ಹಣ್ಣುಗಳೇ ಈ ಹಕ್ಕಿಯ ಮುಖ್ಯ ಆಹಾರ. ಅದೇ ಸಮಯಕ್ಕೆ ಮರಿಗಳು ಬೆಳದು ಹಾರಲು ತಯಾರಾದರೆ ಇದರ ಮರಿಗಳಿಗೆ ಬೇಕಾದಷ್ಟು ಆಹಾರ ಸಿಗುತ್ತದೆ. ಹಲವು ಬಗೆಯ ಕಾಡು ಹಣ್ಣುಗಳನ್ನು, ಕೀಟಗಳನ್ನು ಮತ್ತು ಸಣ್ಣಪುಟ್ಟ ಜೀವಿಗಳನ್ನು ಇದು ಹಿಡಿದು ತಿನ್ನುತ್ತದೆ.    ಬೈನೆ ಮರ ಅಥವಾ ಈಂದಿನ ಮರದಂತಹ ಸಸ್ಯಗಳ ಬೀಜ ಪ್ರಸಾರವಾಗಲು ಈ ಹಕ್ಕಿಗಳೇ ಕಾರಣವಂತೆ. ಅವುಗಳ ಹಣ್ಣನ್ನು ಇಡಿಯಾಗಿ ತಿಂದು, ಹೊಟ್ಟೆಯಲ್ಲಿ ತಿರುಳು ಜೀರ್ಣವಾಗಿ, ಹಿಕ್ಕೆ ಎಂಬ ಗೊಬ್ಬರದ ಜೊತೆ ಬೇರೆಲ್ಲೋ ಬೀಜಹಾಕುವ ಮೂಲಕ ಮರದ ಸಂತತಿ ಉಳಿಯಲು ಈ ಹಕ್ಕಿಗಳು ಸಹಕಾರಿಯಾಗುತ್ತವೆ. ಬದಲಾಗಿ ಮರವು ಈ ಹಕ್ಕಿಗಾಗಿ ರುಚಿಯಾದ ಆಹಾರ ಕೊಡುತ್ತದೆ.
             ಹೀಗೊಂದು ಸುಂದರವಾದ ಸಹಜೀವನ ಕಾಡು ಎಂಬ ಪರಿಸರ ವ್ಯವಸ್ಥೆಯಲ್ಲಿ ಇರುತ್ತದೆ. ಹಾಗಾಗಿ ಕಾಡು ಉಳಿಸಲು ನಾವೇನೂ ಮಾಡಬೇಕಾಗಿಲ್ಲ. ಕಾಡನ್ನು ಕಡಿದು ಈ ಸಹಜೀವನಕ್ಕೆ ತೊಂದೆಯಾಗದಂತೆ ಎಚ್ಚರಿಕೆ ವಹಿಸಿದರೆ ಸಾಕು. ಕಾಡು ತಾನಾಗಿ ಬೆಳೆಯುತ್ತದೆ. ಕಾಡು ತಾನಾಗಿ ತನ್ನನ್ನು ಉಳಿಸಿಕೊಳ್ಳುತ್ತದೆ. ಪರಿಸರ ವ್ಯವಸ್ಥೆಯಲ್ಲಿ ಯಾವ ಪ್ರಾಣಿ, ಪಕ್ಷಿ ಅಥವಾ ಗಿಡವೂ ಅನುಪಯುಕ್ತ ಅಲ್ಲವೇ ಅಲ್ಲ.. ಎಲ್ಲದಕ್ಕೂ ಅದರದೇ ಆದ ಸ್ಥಾನ ಇದೆ. 
            ನೀವು ಪಶ್ಚಿಮ ಘಟ್ಟದ ಆಸುಪಾಸಿನ ಪ್ರದೇಶದಲ್ಲಿ ವಾಸ ಮಾಡುವವರಾದರೆ ನೀವು ಈ ಹಕ್ಕಿಯನ್ನು ಖಂಡಿತಾ ನೋಡಬಹುದು. ಇದರ ಕೆಲವು ಸೋದರ ಸಂಬಂಧಿಗಳು ಭಾರತದ ಹಲವು ಕಡೆಗಳಲ್ಲಿ ನೋಡಲು ಸಿಗುತ್ತವೆ. ಅವುಗಳ ಜೀವನ ಕ್ರಮವೂ ಹೀಗೇ ವಿಶಿಷ್ಟವಾಗಿವೆ.. 
ಮುಂದಿನವಾರ ಇನ್ನೊಂದು ಹಕ್ಕಿಯ ಪರಿಚಯದೊಂದಿಗೆ ಮತ್ತೆ ಸಿಗೋಣ 
ಕನ್ನಡ ಹೆಸರು: ಮಂಗಟ್ಟೆ ಹಕ್ಕಿ
ಇಂಗ್ಲೀಷ್‌ ಹೆಸರು: Malbar Grey Hornbill
ವೈಜ್ಞಾನಿಕ ಹೆಸರು: Ocyceros griseus
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
****************************************
******
Ads on article

Advertise in articles 1

advertising articles 2

Advertise under the article