-->
ಹಕ್ಕಿ ಕಥೆ : ಸಂಚಿಕೆ - 24

ಹಕ್ಕಿ ಕಥೆ : ಸಂಚಿಕೆ - 24

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                          ಹಕ್ಕಿ ಕಥೆ - 24        
     ಮಕ್ಕಳೇ ನಮಸ್ತೇ,
ಈ ಹಕ್ಕಿಯನ್ನು ನೀವು ನಿಮ್ಮ ಮನೆಯ ಆಸುಪಾಸಿನಲ್ಲಿ ನೋಡಿರುತ್ತೀರಿ... ಈ ಹಕ್ಕಿಯ ತಲೆ ನೋಡ್ಲಿಕ್ಕೆ ಕಾಗೆಯ ಹಾಗೆ ಇದೆ, ದೇಹದ ಬಣ್ಣ ಸ್ವಲ್ಪ ತಿಳಿ ಕಂದು, ರೆಕ್ಕೆಯ ಮೇಲೆ ಕೂಡ ಕಪ್ಪು ಬಣ್ಣ ಇದೆ. ಅದೆಲ್ಲಕ್ಕಿಂತ ಭಿನ್ನವಾಗಿ ಸುಮಾರು ಒಂದು ಅಡಿ ಉದ್ದದ ಬಿಳಿ ಬಣ್ಣದ ಬಾಲ. ಬಾಲದ ತುದಿಯನ್ನು ಮಾತ್ರ ಕಪ್ಪು ಬಣ್ಣದಲ್ಲಿ ಅದ್ದಿದಂತೆ ಕಾಣುತ್ತದೆ. ತಕ್ಷಣ ನೋಡುವಾಗ ಬಾಲದಲ್ಲಿ ಎರಡೋ ಮೂರೋ ಗರಿಗಳು ಮಾತ್ರ ಇರುವಂತೆ ಕಾಣುತ್ತವೆ.. 
       ಈ ಹಕ್ಕಿ ಕಾಗೆಯ ಕುಟುಂಬದ ದೂರದ ಸಂಬಂಧಿ.. ಕಾಗೆಯ ಹಾಗೆಯೇ ಈ ಹಕ್ಕಿಯೂ ಹಣ್ಣುಗಳು, ಕೀಟಗಳು, ಹಲ್ಲಿ, ಕಪ್ಪೆ ಹೀಗೆ ಎಲ್ಲವನ್ನೂ ತಿನ್ನುವ ಸರ್ವಭಕ್ಷಕ.. ಇಷ್ಟುಮಾತ್ರ ಅಲ್ಲದೆ, ಗೂಡಿನಲ್ಲಿ ಅಪ್ಪ ಅಮ್ಮ ಇಲ್ಲದೇ ಇದ್ದರೆ ಇತರ ಹಕ್ಕಿಗಳ ಗೂಡಿನಿಂದ ಮೊಟ್ಟೆಗಳನ್ನು ಮತ್ತು ಮರಿಗಳನ್ನೂ ತಿನ್ನುತ್ತದೆಯಂತೆ.. ಹಾಗಾಗಿಯೇ ಇವುಗಳನ್ನು ಮಿಶ್ರಾಹಾರಿ ಅಥವಾ ಸರ್ವಭಕ್ಷಕ ವಿಭಾಗಕ್ಕೆ ಸೇರಿಸುತ್ತಾರೆ.. ಕೀಟಗಳನ್ನು ಹಿಡಿದು ತಿನ್ನುವ ಈ ಹಕ್ಕಿ ಪ್ರಕೃತಿಯಲ್ಲಿ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಕೃತಿಯಲ್ಲಿ ಕೇವಲ ಒಂದೇ ಜಾತಿಯ ಕೀಟಗಳು, ಹಲ್ಲಿಗಳು ಅಥವಾ ಇತರೆ ಜೀವಿಗಳು ಹೆಚ್ಚಾದರೆ ಅಸಮತೋಲನ ಉಂಟಾಗುತ್ತದೆ. ಹಾಗಾಗಿಯೇ ಒಂದು ಜೀವಿಯನ್ನು ಇನ್ನೊಂದು ಜೀವಿ ತಿಂದು ಬದುಕುವ ವ್ಯವಸ್ಥೆಯನ್ನು ಪ್ರಕೃತಿಯೇ ಉಂಟುಮಾಡಿದೆ. 
           ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಮಯನ್ಮಾರ್ ದೇಶಗಳಲ್ಲಿ ಕಾಣಸಿಗುವ ಈ ಹಕ್ಕಿ ಮಾರ್ಚ್ ತಿಂಗಳಿನಿಂದ ಮೇ ತಿಂಗಳ ನಡುವೆ ಗೂಡು ಮಾಡುತ್ತದೆ. ಕಾಗೆಗಳಂತೆಯೇ ಕಡ್ಡಿಗಳನ್ನು ಸುಂದರವಾಗಿ ಜೋಡಿಸಿ ಮರಗಳ ಮೇಲೆ ಗೂಡುಕಟ್ಟುತ್ತವೆ. ನಮ್ಮ ಮನೆಯ ತೆಂಗಿನಮರ, ಬಾಳೆಗಿಡ, ಪಪ್ಪಾಯಿಗಿಡ ಎಲ್ಲದರ ಬಳಿಯೂ ಈ ಹಕ್ಕಿ ಪ್ರತಿದಿನ ಕಾಣಲು ಸಿಗುತ್ತದೆ.. ಒಂದಕ್ಕಿಂತ ಹೆಚ್ಚು ಹಕ್ಕಿಗಳು ಇದ್ದಾಗಲಂತೂ ಅರಚುತ್ತಾ ತುಂಬ ಗಲಾಟೆ ಮಾಡುತ್ತವೆ.. ಇವುಗಳ ಕರ್ರ್ ಕರ್ರ್ ಎಂಬ ಗಲಾಟೆ ಸದ್ದು ಕೇಳಿದರೆ ಇವುಗಳು ನಮ್ಮ ಮನೆಮರಗಳಲ್ಲಿ ಬಂತು ಎಂದೇ ಅರ್ಥ.
       ವಿಶೇಷ ಅಂದ್ರೆ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಕೆಲವೊಮ್ಮೆ ಇವು ಕೊಟ್ರೋಣಿ ಕೊಟ್ರೋಣಿ ಎಂದು ಕೂಗುವುದನ್ನು ಕೇಳಿದ್ದೇವೆ. ಅದಕ್ಕೇ ಈ ಹಕ್ಕಿಯನ್ನು ತುಳು ಭಾಷೆಯಲ್ಲಿ ಕೊಟ್ರೋಣಿ ಎಂದು ಕರೆಯುತ್ತಾರೆ. ಇತರ ಹಕ್ಕಿಗಳ ಗೂಡಿನಿಂದ ಮೊಟ್ಟೆ ಮತ್ತು ಎಳೆಯ ಮರಿಗಳನ್ನು ಕದ್ದು ತಿನ್ನುವುದರಿಂದ ಕನ್ನಡದಲ್ಲಿ ಕುದುಗನ ಹಕ್ಕಿ ಎನ್ನುತ್ತಾರೆ. ಕನ್ನಡದಲ್ಲಿ ಮಟಪಕ್ಷಿ ಎಂಬ ಇನ್ನೊಂದು ಹೆಸರೂ ಈ ಹಕ್ಕಿಗೆ ಇದೆ.. 
ಹಳ್ಳಿಗಾಡುಗಳಲ್ಲಿ ಮಾತ್ರವಲ್ಲ ಪೇಟೆ ಪಟ್ಟಣಗಳಲ್ಲೂ ಸುಲಭವಾಗಿ ನೀವು ಈ ಹಕ್ಕಿಯನ್ನು ನೋಡಲು ಸಾಧ್ಯ. ಈ ಹಕ್ಕಿ ನಿಮ್ಮ ಮನೆಯ ಆಸುಪಾಸಿನಲ್ಲೂ ಕಾಣಲು ಸಿಗುತ್ತಾ ?.. ಈ ಹಕ್ಕಿ ಬಗ್ಗೆ ನಿಮ್ಮ ಅನುಭವ ಅಥವಾ ನೆನಪಾಗುವ ಘಟನೆಗಳನ್ನು ನಮಗೆ ಹೇಳ್ತೀರಲ್ಲ.. ಮತ್ತೆ ಸಿಗೋಣ....... 
ಕನ್ನಡ ಹೆಸರು: ಕುದುಗನ ಹಕ್ಕಿ, ಮಟಪಕ್ಷಿ
ಇಂಗ್ಲೀಷ್ ಹೆಸರು: Rufous Treepie
ವೈಜ್ಞಾನಿಕ ಹೆಸರು: Dendrocitta vagabunda
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*********************************************



Ads on article

Advertise in articles 1

advertising articles 2

Advertise under the article